ಸೋಮವಾರ, ಮೇ 23, 2022
30 °C
ಕಾವ್ಯ ಕಾರಣ

ಜೀವಜಗತ್ತಿನ ನಿಶ್ಚಲ, ಚಲನೆಯ ರೂಪಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನುಭಾವೀ ಅನುಭವ ಸೂಕ್ಷ್ಮತೆಗೆ ಶಕ್ತ ಉದಾಹರಣೆ `ಆಳಬಾವಿಯ ನೀರಾಮೆ'. ಒಂದು ಘೋಷಿತ ತತ್ವ  ಭಾಷಿಕ ಶರೀರದಲ್ಲಿ ಬಿಟ್ಟುಕೊಡುವ ವಿವರಣೆಗಳಿಗೆ ಕವನದ ಒಳಗೆ ಮೂರು ಸ್ತರದ ಅಸ್ತಿತ್ವವಿದೆ. ಅದು ಬಾವಿ, ನೀರು, ಆಮೆಯ ರೂಪಕಗಳಲ್ಲಿ ಪರಸ್ಪರ ಅನ್ವಯಾತ್ಮಕವಾಗಿ ಕಾಣಿಸಿಕೊಳ್ಳುತ್ತದೆ. ಈ ನಿರ್ದಿಷ್ಟ ಸ್ತರ ಪ್ರಜ್ಞಾಪೂರ್ವಕವಾಗಿ ನಿಯೋಜಿಸಿದ್ದು ಎಂದು ಅನ್ನಿಸದ ಅರ್ಥ ಸಾಧ್ಯತೆ ಅವಕ್ಕಿದೆ ಎಂದೆನಿಸುವುದು ಅವುಗಳ ಇರುವಿಕೆಯ ಕಾಣ್ಕೆಯಲ್ಲಿ. ಅದರ ಇಂದ್ರಿಯಾರ್ಥವಾದ ಸಂಯೋಜನೆಯಿಂದ.

ಬಾವಿ, ನೀರು, ಆಮೆಯ ಅಸ್ತಿತ್ವದಲ್ಲಿ ಒಂದು ಅವಿನಾ ಸಂಬಂಧವಿದೆ. ಇದರಿಂದಾಗಿಯೆ ನನ್ನಾಳವನ್ನು ನೀರು ನುಂಗಿದೆಯೆಂದು ಬಾವಿಯೂ; ನನ್ನನ್ನು ಆಳದ ಸೆರೆಗಟ್ಟಿದೆ ಎಂದು ನೀರೂ ದೂರಿಕೊಳ್ಳುತ್ತದೆ. ನೀರು-ಆಳಗಳೆರಡನ್ನೂ ಸಮಚಿತ್ತದ ತೂಕದಲ್ಲಿ ನಿಭಾಯಿಸುವ ಆಮೆ ನಿಶ್ಚಲ ಚಲನೆಯಲ್ಲಿ ಈಸುತ್ತಿದೆ. `ನಿಶ್ಚಲ ಚಲನೆ'ಯೆಂಬ ಚಿತ್ರವೇ ಇಲ್ಲಿನ ವಿವರವನ್ನು ಸಾಂದ್ರಗೊಳಿಸುವುದು. ನಿಶ್ಚಲವಾಗಿರುವಂತೆ ತೋರಿದರೂ ಚಲಿಸುತ್ತಿರುವ ಬಾವಿ (ಭೂಮಿ), ನಿಶ್ಚಲದಂತೆ ಕಂಡರೂ ಹರಿವ ನೀರು - ಆಳದ ಒಳಗೆ ವಿಸ್ತಾರವನ್ನು ಬೆಸೆಯುವ ಚಲನ ಮುಖಿ ಆಮೆ.

ಈ ಪ್ರತಿಮೆಗಳು ಅವುಗಳ ಇರುವಿಕೆಯ ಒಳಗೆ ಆಗುವಿಕೆಯ ಬಂಡಾಯವನ್ನು ಸ್ಫೋಟಿಸುತ್ತವೆ. ಹೀಗಾಗಿ ಇರುವಿಕೆ ಮತ್ತು ಆಗುವಿಕೆಯನ್ನು ಬಿಡಿಸಿದರೂ ಒಗಟು. ಬಿಡಿಸದೆ ಹೋದರೂ ಒಗಟು. ಅವುಗಳದೇ ಅನುಭವ ರೂಢಿಗೆ ಬದ್ಧವಾಗಿದ್ದರೂ ಅದಕ್ಕೆ ಹೊರತಾಗಿರುವ ಕಾಣ್ಕೆ ಇದೆ. ಅದರ ವಿಸ್ತರಣೆಯೇ ಇಲ್ಲಿ ಮುಖ್ಯ.`ನೀರು-ಆಳ-ಆಮೆಗಳೆಲ್ಲವೂ ಒಂದೇ ಸಮಬಿಂದುವಿನಲ್ಲಿ ನಿಂತಿವೆ  ಅಸಮ ವಿನ್ಯಾಸದ ಗಾರುಡಿಯ್ಲ್ಲಲಿ'. ಈ ಪರಿಭಾವನೆಯೆ ಒಂದು ಕಾಲ ಮುಕ್ತವಾದ ಸ್ಥಿತಿ. ಕಾಲವೆಂದರೆ ಏನು ಇದೆಯೋ ಅದರಿಂದ `ಏನು ಇರಬೇಕೋ' ಅದರತ್ತ ಚಲಿಸುವುದು ಎಂದರ್ಥ. ಎಷ್ಟೇ ಕ್ರಿಯಾಶೀಲವಾಗಿದ್ದರೂ ಆಮೆ ಬದ್ಧತೆಯ ಸಂಕುಚಿತದೊಳಗೆ ಇರುತ್ತದೆ. ಎಚ್ಚರವುಳ್ಳ ಗಮನದ ತೀವ್ರತೆ ಇದ್ದಾಗ ಮಾತ್ರ ಅದನ್ನು ಮೀರಬಹುದೇನೊ, ಆಗ ಅಸಮ ವಿನ್ಯಾಸದ ಗಾರುಡಿ ಇಡೀ ಜೀವ ಸಂಕುಲದ ಬದುಕನ್ನು ಮಾತ್ರವಲ್ಲ ವಿಶ್ವವನ್ನು ಆವರಿಸಿಕೊಂಡಿರುವುದು ಅರಿವಿಗೆ ಬರುತ್ತದೆ. ಅದು ಇರುವ ಮತ್ತು ಆಗುವ ಆಚೆಗಿನ ಅರಿವು.ಬಾವಿ-ನೀರು-ಆಮೆಯ ಪ್ರತಿಮೆಗಳ ಭೌತಿಕಾರ್ಥವು ಪದಗಳ ಭೌತಿಕ ಸಹಯೋಗಗಳ ಹಂತದಲ್ಲೇ ಸಿಗುತ್ತದೆ. ಅದು ಆಳದೊಳಗಿನ ವಿಸ್ತಾರ, ಸೀಮೆಯೊಳಗಿನ ಅಸೀಮ, ಸ್ಥಿರದೊಳಗಿನ ಚರಕ್ಕೆ ಸಂಬಂಧಿಸಿದ್ದು. ಕವನದ ಒಳಗೆ ಬಳಕೆಯಾಗಿರುವ ಪದಗಳು ಸಂಪೂರ್ಣವಾಗಿ ಕ್ರಿಯಾ ಸನ್ನಿವೇಶಕ್ಕೆ ಸಂಬಂಧಿಸಿದ್ದು. ಹೀಗಾಗಿ ಅದರ ಅನುಭವ-ಆಲೋಚನೆ-ಅನ್ವೇಷಣೆಯ ಒಳನೋಟಗಳು ಸುಪ್ತ ಸತ್ವದ ಕಡೆಗೆ ಜಗ್ಗುತ್ತವೆ. ಇಲ್ಲಿ `ತೇಲುವ ಆಮೆ ನಿರಾತಂಕ-ನನ್ನ ಮನವದರ ಸರೀಕ'ವೆಂಬ ಮುಕ್ತಾಯವೆ ನಿಶ್ಚಲ ಚಲನೆಯ ಶುದ್ಧವಾದ ಪ್ರತೀಕ. ನೀರು-ಆಮೆ ಇವೆರಡು ಫ್ಯಾಲಿಕ್ ಸಂಕೇತಗಳಲ್ಲ. ಅವುಗಳಿಗೆ ಸ್ಥಾಪಿಸಿಕೊಳ್ಳುವ ಗುಣಗಳಿಲ್ಲ.

ಆದರೆ ಬಾವಿಗೆ ಒಂದು ಕೇಂದ್ರರೂಪಿ ಆಳದ ಅಧಿಕಾರವಿದೆ. ಇದನ್ನು ಒಡೆಯುವಲ್ಲಿಯೇ, `ಬಾವಿ ಆಳವಲ್ಲ; ನೀರು ನಿಶ್ಚಯವಲ್ಲ; ಆಮೆ ಅಸೀಮವಲ್ಲ' ಎಂದು ಅವನ್ನು ಮರುಸ್ಥಾಪಿಸುವ ಒಗಟಿದೆ. ತಾತ್ವಿಕ ಪ್ರಮೇಯವನ್ನು ಗಮನಿಸಿದರೆ ಪರಸ್ಪರ ಒಳಗೊಳ್ಳುತ್ತಲೆ ಪರಕೀಯವಾಗುವ ಮನಸ್ಸು -ಆಲೋಚನೆಯ ಪ್ರತಿಪಾದನೆಯ ಮೇಲೆ ಮಾತ್ರ ಈ ಜಗತ್ತು ನಿಂತಿದೆ ಎಂಬುದನ್ನು ಕವನವು ಸಂಕೇತಿಸುತ್ತದೆ. ಬಾವಿಯನ್ನು ವ್ಯಕ್ತಿಗಳ ಮನಸ್ಸು, ನೀರು ಆಲೋಚನೆ, ಆಮೆ ಸಂಸ್ಕಾರವೆಂಬ ಸಂಕೇತದಲ್ಲಿ ಗ್ರಹಿಸಿದರೆ, ಗುಣದಾನ ಮಾಡುವ ರೂಪದಾನ ಮಾಡುವ ಮನಸ್ಸಿನ ಸಾಮರ್ಥ್ಯಕ್ಕೆ ಒಂದು `ನಿಶ್ಚಲ ಚಲನೆಯಿದೆ'.

ಅಂಥ ಚಲನೆಯನ್ನು ಕಳೆದುಕೊಂಡು ಮನಸ್ಸು ಸಂಪೂರ್ಣವಾಗಿ ನಿಶ್ಚಲವಾಗಬೇಕು, ಮೌನಿಯಾಗಬೇಕು. ಆದರೆ ಹೀಗೆ ಆಗುವುದಿಲ್ಲ. ಅದು ಆಮೆಯಂತೆ. ಎಲ್ಲ ಬಗೆಯ ಆಲೋಚನೆಗಳೂ, ಸಂಸ್ಕಾರಗಳೂ ಕೇಂದ್ರ ವಿಮುಖವಾಗಿರುತ್ತವೆ. `ತೇಲುವ ಆಮೆ ನಿರಾತಂಕ; ನನ್ನ ಮನವದರ ಸರೀಕ' ಕವನದ ಮುಕ್ತಾಯದಲ್ಲಿ ಮನಸ್ಸಿನ ಈ ಹಂಬಲ ಮತ್ತು ಬಿಡುಗಡೆಯ ಸ್ಥಿತಿಯೇ ಅಂತಿಮವಾದ ಅದ್ವಯದ ಸ್ಥಿತಿ. `ಆಳ ಬಾವಿಯ ನೀರಾಮೆ'ಯಾಗಿ ಭ್ರಮಿತಗೊಂಡ ಮನಸ್ಸಿಗೆ ಸೀಮೆಯೂ ಇಲ್ಲ.

ನಿಸೀಮೆಯೂ ಇಲ್ಲ. ಅದು ಮನಸ್ಸಿನ ರಚನೆಯ ರಂಜನೆಯ ಲೀಲೆ. ಅನುಭಾವಿ ಸಂವೇದನೆಯಲ್ಲಿ ರಚನೆಯ ರಂಜನೆಯ ಲೀಲೆಯೇ ಮೂಲವರ್ಣದ ನೆರಳು. ಅದಕ್ಕೆ ಉದ್ದೇಶಗಳಿಲ್ಲ. ಸ್ವ-ಕೇಂದ್ರಿತವಾದ ಚಲನೆಗಳಿಲ್ಲ. ಏನೋ ಆಗಬೇಕೆಂಬ ಅಥವಾ ಏನೋ ಆಗಬಾರದೆಂಬ ಯಾವ ಉದ್ದೇಶವೂ ಇಲ್ಲದ ಪರಿಪೂರ್ಣ ಗಮನ ಮಾತ್ರ ಅಲ್ಲಿರುತ್ತದೆ.

= ಕವಿತಾ ರೈ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.