ಶನಿವಾರ, ಫೆಬ್ರವರಿ 27, 2021
25 °C
ಹೊಸನಗರ: ಗ್ರಾಮಸ್ಥರ ಮತ್ತು ವಿದ್ಯಾರ್ಥಿಗಳ ಸಂಕಷ್ಟ

ಜೀವ ತೆಗೆಯುವ ಕಾಲುಸಂಕಕ್ಕೆ ಮುಕ್ತಿ ಎಂದು?

ಪಿ.ಎನ್. ನರಸಿಂಹಮೂರ್ತಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೀವ ತೆಗೆಯುವ ಕಾಲುಸಂಕಕ್ಕೆ ಮುಕ್ತಿ ಎಂದು?

ಹೊಸನಗರ: ಮಳೆಗಾಲದಲ್ಲಿ ಕಿರು ತೊರೆ, ಹಳ್ಳಗಳನ್ನು ದಾಟುವ ಅಪಾಯಕಾರಿ ಕಾಲುಸಂಕಗಳ ಮೂಲಕ ವಿದ್ಯಾರ್ಥಿಗಳು, ಗ್ರಾಮಸ್ಥರು ಜೀವ ಬಿಗಿ ಹಿಡಿದು ನಡೆದಾಡು ಪರಿಸ್ಥಿತಿ ಈಗಲೂ ಇದೆ ಎಂಬುದು ಅತ್ಯಂತ ನೋವಿನ ಸಂಗತಿ.ಹೊಸನಗರ ತಾಲ್ಲೂಕಿನ ಮುಂಬಾರು ಗ್ರಾಮ ಪಂಚಾಯ್ತಿಯ ಬೇಹಳ್ಳಿ ಗ್ರಾಮದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಲೂ ಅಡಿಕೆ ಮರದ ಕಾಲುಸಂಕದ ಮೂಲಕ ಇಲ್ಲವೇ ಪೋಷಕರ ಸಹಾಯದಿಂದ ಹೊಳೆಗೆ ಇಳಿದು ಬಟ್ಟೆ, ಪುಸ್ತಕ ಒದ್ದೆ ಮಾಡಿಕೊಂಡು ದಿನ ನಿತ್ಯ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ.ಬೇಹಳ್ಳಿ, ಶೇಣಿಗೆ, ಬಲಗ ಮಜರೆ ಹಳ್ಳಿಗಳಲ್ಲಿ ದೊಡ್ಡ ಮಳೆ ಬಂದರೆ ಮಕ್ಕಳು ಶಾಲೆಗೆ ಚಕ್ಕರ್ ಹಾಕುತ್ತಾರೆ. ಹಳ್ಳ ದಾಟಿ ಹೋಗಲು ಕಷ್ಟಸಾಧ್ಯ. ಈ ಕಷ್ಟ ನಿವಾರಿಸಲು ಸಿಮೆಂಟಿನ ಶಾಶ್ವತ ಕಾಲುಸಂಕ ನಿರ್ಮಿಸಿ ಎಂಬ 4 ದಶಕದ ಕೂಗು ಇನ್ನೂ ಜನಪ್ರತಿನಿಧಿಗಳು, ಅಧಿಕಾರಿಗಳ ಕಿವಿಗೆ ತಲುಪಿಲ್ಲ ಎಂಬುದು ಗ್ರಾಮಸ್ಥರ ದೂರು.ಕಳೆದ ವರ್ಷ ಗ್ರಾಮ ಪಂಚಾಯ್ತಿ  ಅಂದಾಜು ಹಣ, ಎಂಜಿನಿಯರ್ ನೀಲನಕ್ಷೆ ಇಲ್ಲದೆ ಕಾಟಾಚಾರಕ್ಕೆ  ಕಾಲುಸಂಕ ನಿರ್ಮಿಸಿ ಕೈತೊಳೆದುಕೊಂಡಿದ್ದಾರೆ. ಇಷ್ಟು ಸಾಲದು ಎಂಬಂತೆ ಸರಿಯಾಗಿ ಇದ್ದ ಹಳ್ಳಿ ರಸ್ತೆಗೆ ಒಂದಷ್ಟು ಮಣ್ಣು ಹಾಕಿಸಿದ ಪರಿಣಾಮ ಕೆಸರಿನ ರಾಡಿಯಾಗಿದೆ. ಹಳ್ಳಿಗೆ ಯಾವ ಉಪಯೋಗ ಆಗದಿದ್ದರೂ ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗಿದೆ ಎನುತ್ತಾರೆ ಗ್ರಾಮಸ್ಥರು. ಪೊಳ್ಳು ಭರವಸೆ:  2 ವರ್ಷದ ಹಿಂದೆಯಷ್ಟೆ ಇಲ್ಲಿಗೆ ಸಮೀಪದ ಚಿಕ್ಕಜೇನಿ ಎಂಬಲ್ಲಿ ಶಾಲೆಗೆ ಹೊರಟ ಶರಾವತಿ ಎಂಬ ಬಾಲಕಿ ಕಾಲುಸಂಕ ದಾಟುವಾಗ `ಶರಾವತಿ ನದಿ'ಯ ಪಾಲಾಗಿದ್ದಳು. ಆಗ  ಸಾಂತ್ವನ ಹೇಳಲು ಬಂದ ಎಲ್ಲಾ ಹಂತದ ಜನಪ್ರತಿನಿಧಿಗಳು ಮಲೆನಾಡಿನಲ್ಲಿ ಶಾಶ್ವತ ಕಾಲುಸಂಕ ನಿರ್ಮಿಸುವುದಾಗಿ ನೀಡಿದ್ದ ಭರವಸೆ ಈಗ ಹುಸಿಯಾಗಿದೆ.ಮಲೆನಾಡಿನ ಸಣ್ಣ ಗುಡ್ಡ, ಬೆಟ್ಟ, ಗದ್ದೆಗಳ ಮಧ್ಯೆ ಹೊಳೆ, ತೊರೆ ಹರಿಯುವುದು ಸ್ವಾಭಾವಿಕ ಅಲ್ಲಿಗೊಂದು ಮರದ ದಿಮ್ಮಿಯೋ, ಅಡಿಕೆ ಮರದ ಕಾಲುಸಂಕ ನಿರ್ಮಿಸಿಕೊಳ್ಳುತ್ತಿದ್ದರು. ಈಗ ಏರುತ್ತಿರುವ ಹಳ್ಳಿಯ ಜನಸಂಖ್ಯೆಯ ಕಾರಣ ತಾತ್ಕಾಲಿಕ ಕಾಲುಸಂಕದ ಬದಲಿಗೆ ಸಿಮೆಂಟ್ ಹಾಗೂ ಕಬ್ಬಿಣ ಬಳಸಿದ ಶಾಶ್ವತ ಕಾಲುಸಂಕ ನಿರ್ಮಿಸಿ ಎಂಬುದು ಹಳ್ಳಿ ಮಕ್ಕಳ ಒತ್ತಾಯವಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.