ಶುಕ್ರವಾರ, ಮೇ 7, 2021
19 °C

ಜೀವ ರಕ್ಷಣೆಯ ಕಾರ್ಯವೇ ಮಮತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ಗರ್ಭಿಣಿ, ತಾಯಿ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣವನ್ನು ಕಡಿಮೆ ಗೊಳಿಸುವುದು ಮತ್ತು ಪ್ರಸವಪೂರ್ವ ಚಿಕಿತ್ಸೆಗೆ ಪ್ರೇರಣೆ ನೀಡುವ ಸಂಕಲ್ಪದೊಂದಿಗೆ ಚಿಕ್ಕೋಡಿ ತಾಲ್ಲೂಕು ಸೇರಿದಂತೆ ಬೆಳಗಾವಿ ಜಿಲ್ಲೆಯ 111 ಗ್ರಾಮಗಳಲ್ಲಿ ಅನುಷ್ಠಾನಗೊಳಿಸಿರುವ `ಮಮತೆ~ ಕಾರ್ಯಕ್ರಮವು ಜನರಲ್ಲಿ ಆರೋಗ್ಯ ಅರಿವು ಮೂಡಿಸುವ ಜೊತೆಗೆ ಗಂಡಾಂತರ ಸ್ಥಿತಿಯಲ್ಲಿದ್ದ ಜೀವಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದೆ.ಕೆಎಲ್‌ಇ ಸಂಸ್ಥೆಯ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಮಹಿಳೆ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕವು ಅಮೆರಿಕೆಯ ಕ್ರಿಶ್ಚಿಯನ್ ಕೇರ್ ಆರೋಗ್ಯ ಸೇವಾ ಸಂಸ್ಥೆ, ಆರ್.ಟಿ.ಐ. ಇಂಟರ್ ನ್ಯಾಷನಲ್, ಮಗವಿನ ಆರೋಗ್ಯ ಮತ್ತು ಮಾನವ ಅಭಿವೃದ್ಧಿ ರಾಷ್ಟ್ರೀಯ ಸಂಸ್ಥೆ ಹಾಗೂ ಬೆಳಗಾವಿ ಜಿಲ್ಲಾ ಪಂಚಾಯಿತಿಗಳ ಸಹಯೋಗದೊಂದಿಗೆ 2009 ರಿಂದ 2011ರ ವರೆಗೆ ಬೆಳಗಾವಿ ಜಿಲ್ಲೆಯಲ್ಲಿ `ಮಮತೆ~ ಎಂಬ ವಿನೂತನ ಕಾರ್ಯಕ್ರಮವನ್ನು ಸಂಶೋಧನಾ ಅಧ್ಯಯನವಾಗಿ ಕೈಗೆತ್ತಿಕೊಂಡಿದೆ.ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಅಂಕಲಿ, ಚಿಂಚಲಿ, ಮಂಗಸೂಳಿ ಸೇರಿದಂತೆ ಜಿಲ್ಲೆಯ ಬೆಳವಡಿ, ಹುಲ್ಲೋಳಿ, ಮುರಗೋಡ, ನಾಗ ನೂರ, ತಿಗಡಿ, ಸುರೇಬಾನ, ಕೊಕಟನೂರ ಸಮು ದಾಯಗಳ ವ್ಯಾಪ್ತಿಯ 111 ಗ್ರಾಮಗಳಲ್ಲಿ ಮಮತೆ ಅನುಷ್ಠಾನಗೊಂಡಿದೆ.ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 667 ಪ್ರಮುಖ ತಂಡಗಳು, ಸಮುದಾಯ ತಂಡಗಳು, ಗ್ರಾಮಮಟ್ಟದಲ್ಲಿ ಗ್ರಾಮ ಸಲಹಾ ಸಮಿತಿಗಳು ಮತ್ತು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮುದಾಯ ಪ್ರೋತ್ಸಾಹಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ವಿವಿಧ ವೈದ್ಯರು, ಗ್ರಾಮ ಸಲಹಾ ಸಮಿತಿ ಸದಸ್ಯರು, ಯೋಜನಾ ತಂಡದ ಸದಸ್ಯರು ಮಮತೆ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಅತಿಯಾದ ಪ್ರಸವಪೂರ್ವ ಆರೋಗ್ಯ ಸೇವೆ ಬಲವರ್ಧನೆ, ಗರ್ಭಿಣಿಯರಿಗೆ ಉಂಟಾಗುವ ಸಂಭವನೀಯ ಗಂಡಾಂತರ ಗುರುತಿಸಿ ಸುಸಜ್ಜಿತ ಆಸ್ಪತ್ರೆಯಲ್ಲಿ ನುರಿತ ಮತ್ತು ಕೌಶಲ್ಯಯುತ ಹೆರಿಗೆ ಪರಿಚಾರಕರಿಂದ ಚಿಕಿತ್ಸೆ ಕೊಡಿಸುವುದು, ಹೆರಿಗೆ ಸಮಯದಲ್ಲಿ ಆರ್ಥಿಕ ನೆರವು, ರಕ್ತದಾನದ ಬಗೆಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮೂಲಕ ತುರ್ತು ಸಂದರ್ಭದಲ್ಲಿ ಸೂಕ್ತ ನೆರವು ನೀಡಿ ತಾಯಿ ಮತ್ತು ಮಗುವಿನ ಜೀವಗಳನ್ನು ರಕ್ಷಿಸುವ ಕಾರ್ಯದಲ್ಲಿ ಅವರು ತೊಡಗಿದ್ದಾರೆ.`ಮಮತೆ~ ರೂಪಿಸಿದ ಜನಜಾಗೃತಿ ಫಲವಾಗಿ ಇಂದು ಗರ್ಭಾವಸ್ಥೆ ನೋಂದಣಿ, ಪ್ರಸವ ಪೂರ್ವ ಆರೈಕೆಯನ್ನು ಪಡೆಯುವ ರೂಢಿ, ರಕ್ತದೊತ್ತಡ ಪರೀಕ್ಷೆ, ರಕ್ತದ ಪರೀಕ್ಷೆಗಳಿಗಾಗಿ ಮಹಿಳೆಯರು ಆರೋಗ್ಯ ಕಾರ್ಯಕರ್ತೆಯರನ್ನು ಒತ್ತಾಯಿ ಸುತ್ತಿದ್ದಾರೆ.ಗರ್ಭಾವಸ್ಥೆ ಅಥವಾ ಹೆರಿಗೆ ಸಮಯದಲ್ಲಿ ತಾಯಿಯ ಜೀವಕ್ಕೆ ಗಂಡಾಂತರ ತರುವಲ್ಲಿ ರಕ್ತ ಸ್ರಾವ, ತಡವಾದ ಹೆರಿಗೆ, ನಂಜು, ಬಾವು, ಪೀಟ್ಸ್, ಹಾಗೂ ಪದೇಪದೇ ಹೆರಿಗೆ ಗಳಿಂದಾಗುವ ರಕ್ತಹೀನತೆ ಮುಂತಾದ ಪ್ರಮುಖ ಕಾರಣಗಳಾಗಿದ್ದು, ಅದೇ ರೀತಿ  ಉಸಿರಾಟದ ತೊಂದರೆ, ಕಡಿಮೆ ಹುಟ್ಟು ತೂಕ, ಪಿಟ್ಸ್ ಹಾಗೂ ಸೋಂಕುಗಳು ಶಿಶುವಿನ ಉಳಿಗೆ ಕಾರಣಗಳಾವೆ.ಇಂತಹ ಸಂದಿಗ್ಧ  ಪರಿಸ್ಥಿತಿಗಳ್ಲ್ಲಲಿ ಮಮತೆ ಕಾರ್ಯಕರ್ತರು ತುರ್ತು ವಾಹನ ವ್ಯವಸ್ಥೆ ಲಭ್ಯವಿದ್ದರೂ ಅದರ ಆಗಮನಕ್ಕಾಗಿ ಕಾಯದೇ ಖಾಸಗಿ ವಾಹನದ ಮೂಲಕ ವಿಳಂಬವಾಗದಂತೆ ಸುಸಜ್ಜಿತ ಆಸ್ಪತ್ರೆಗೆ ಸಾಗಿಸುವುದು, ಅಗತ್ಯವಿದ್ದಲ್ಲಿ ರಕ್ತ ಕೇಂದ್ರದಿಂದ ರಕ್ತ ಪೂರೈಕೆ, ದಾನಿಗಳು ಅಥವಾ ಸಮುದಾಯ ದಿಂದ ಆರ್ಥಿಕ ನೆರವು ನೀಡುವುದು ಮುಂತಾದ ರಚನಾತ್ಮಕ ಕಾರ್ಯ ಮತ್ತು ಸಮಯೋಚಿತ ಸೇವೆಯಿಂದ 139 ತಾಯಂದಿರನ್ನು ಮತ್ತು 180 ಶಿಶುಗಳನ್ನು ಬದುಕುಳಿಸಲು ಶ್ರಮಿಸಿದ್ದಾರೆ ಎಂದು ಸಂಶೋಧಕ ಡಾ.ಶಿವಪ್ರಸಾದ ಗೌಡರ ತಿಳಿಸಿದ್ದಾರೆ. ಸಮುದಾಯದ ಸಹಕಾರ ಮತ್ತು ಮುಂದಾಳತ್ವದಿಂದ ನಡೆಯುತ್ತಿರುವ ಮಮತೆ ಕಾರ್ಯಾಚರಣೆಯಿಂದ ಜಿಲ್ಲೆಯ 13 ತಾಯಂದಿರ ಮತ್ತು ನವಜಾತ ಶಿಶುಗಳ ಮರಣ ಕೇವಲ ಅಂಕಿಸಂಖ್ಯೆಯಾಗಿ ಉಳಿಯದೇ, ಈ ಸಾವುಗಳಿಂದ ಕಲಿತ ಪಾಠಗಳು ಮುಂದಿನ ಸಾವುಗಳನ್ನು ತಪ್ಪಿಸುವಲ್ಲಿ ಮಾರ್ಗದರ್ಶಿಯಾಗಬೇಕು. ಒಂದು ಸಂಶೋಧನಾ ಅಧ್ಯಯನವಾಗಿ ಆರಂಭಗೊಂಡ `ಮಮತೆ~ ಭವಿಷ್ಯದಲ್ಲಿಯೂ ಸಮುದಾಯ, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ವಿಸ್ತಾರಗೊಂಡು ಆರೋಗ್ಯವಂತ ಸಮಾಜ ಸೃಷ್ಟಿಸುವಲ್ಲಿ ಮುನ್ನಡೆಯಬೇಕು ಎಂದು ಸಂಶೋಧಕ ಡಾ.ಶಿವಪ್ರಸಾದ ಗೌಡರ ಅವರ ಆಶಯವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.