ಶುಕ್ರವಾರ, ಮೇ 7, 2021
25 °C

ಜುಗಲ್‌ಬಂದಿಯ ನಾದಲೀಲೆ

-ರೂಪಶ್ರೀ ಕಲ್ಲಿಗನೂರ್ . Updated:

ಅಕ್ಷರ ಗಾತ್ರ : | |

ಜುಗಲ್‌ಬಂದಿಯ ನಾದಲೀಲೆ

ಸಂತೂರ್ ವಾದ್ಯದ ಜೀವಂತ ದಂತಕತೆ ಪಂಡಿತ್ ಶಿವಕುಮಾರ್ ಶರ್ಮಾ ವೇದಿಕೆಯ ಮೇಲೆ ಆಗಮಿಸಿದಾಗ, ಅವರ ಆಗಮನದ ನಿರೀಕ್ಷೆಯಲ್ಲಿದ ಹಲವು ಶ್ರೋತೃಗಳು, ಅವರನ್ನು ಕಂಡು ಪುಳಕಗೊಂಡಿದ್ದರು. ಪರ್ಷಿಯಾ ಮೂಲದ ಸಂತೂರ್ ವಾದ್ಯಕ್ಕೆ ಭಾರತದಲ್ಲಿ ಶತತಂತ್ರಿ ವೀಣೆಯೆಂಬ ಹೆಸರಿತ್ತು.ಜಮ್ಮು ಕಾಶ್ಮೀರದ ಸೂಫಿಯಾನಾ ಮ್ಯೂಸಿಕಿ ಎಂಬ ಜನಪದ ಸಂಗೀತ ಪ್ರಕಾರಕಷ್ಟೇ ಸೀಮಿತವಾಗಿದ್ದ ಶತತಂತ್ರಿ ವೀಣೆಯನ್ನು ಸಂತೂರನ್ನಾಗಿ ಮಾರ್ಪಡಿಸಿದವರಲ್ಲಿ ಶಿವಕುಮಾರ್ ಶರ್ಮಾರ ತಂದೆ ಉಮಾದತ್ತ ಶರ್ಮಾ ಮೊದಲಿಗರು.ವಾದ್ಯವನ್ನು ಹೊಂದಿಸಿಕೊಂಡ ಶರ್ಮರು `ಇಷ್ಟು ಹೊತ್ತು ಕಾದ ನಿಮ್ಮ ತಾಳ್ಮೆಗೆ ನನ್ನ ನಮಸ್ಕಾರಗಳು. ಕೆಲ ಪ್ರದೇಶದ ಜನಗಳಿಗೆ ಟ್ಯೂನಿಂಗ್ ಹಾಗೂ ವಾದನದ ವ್ಯತ್ಯಾಸ ಅಷ್ಟು ತಿಳಿಯುವುದಿಲ್ಲ. ಆದರೆ ಬೆಂಗಳೂರಿಗರು ಹಾಗಲ್ಲ. ಅವೆರಡರ ವ್ಯತ್ಯಾಸವನ್ನು ಬಲ್ಲ  ಶ್ರೋತೃಗಳು. ಈ ಕಾಲಕ್ಕೆ ಹೊಂದುವ ಮೇಘ ರಾಗ (ಕಾಫಿ ಥಾಟ್)ವನ್ನು ಇಂದು ನುಡಿಸುತ್ತೇನೆ' ಎಂದು ವಾದನವನ್ನು ಆರಂಭಿಸಿದರು.ಐದಾರು ನಿಮಿಷಗಳ ಕಾಲ ಆಲಾಪ್ ವಾದನ ನಡೆಯಿತು. ಸಂತೋಷ- ಸಂಭ್ರಮದ ಭಾವಗಳನ್ನು ಸಂತೂರ್ ವಾದ್ಯದಲ್ಲಿ ಪ್ರಸ್ತುತಪಡಿಸಿದಾಗ ಅದಕ್ಕೊಂದು ಪರಿಪೂರ್ಣತೆ ಲಭ್ಯವಾಯಿತು. ಆಲಾಪ್ ನುಡಿಸಾಣಿಕೆಯ ನಂತರ ಸಂತೂರ್ ನಾದಕ್ಕೆ ಭವಾನಿ ಶಂಕರ್ ಕಥಕ್ ಅವರ ಪಖವಾಜದ ನಿಧಾನಗತಿಯ ವಾದನ ಜೊತೆಯಾಯಿತು. ತದನಂತರ ತಬಲಾ ವಾದನದಲ್ಲಿ ಯೋಗೇಶ್ ಸಂಶಿ ಅವರ ಜಪ್ ತಾಳದ ಸಾಥಿಯೂ ಆರಂಭಗೊಂಡಿತು.

ವಿಲಂಬಿತ್ ತಾಳದಲ್ಲಿ ಆರಂಭಗೊಂಡ ವಾದನ ಹಂತ ಹಂತವಾಗಿ ತೀವ್ರತೆಯನ್ನು ಪಡೆದುಕೊಳ್ಳಲಾರಂಭಿಸಿದಾಗ, ಸಂತೂರ್ ತಂತಿಗಳ ವಾದನದಲ್ಲಿ ಮೋಡ ಕರಗಿ ವರ್ಷಧಾರೆಯ ಪರಿಕಲ್ಪನೆ ಮೂಡತೊಡಗಿತ್ತು. ಸಂತೂರ್‌ನ ನಾದದ ಸೌಂದರ್ಯ ಮೇಘ ರಾಗವನ್ನು ಎಷ್ಟು ವಿಸ್ತಾರಗೊಳಿಸಿತ್ತೆಂದರೆ, ಮಳೆಯ ಆಗಮನದಿಂದ ಸಂತಸಗೊಂಡ ನವಿಲೊಂದು ಹರ್ಷ ಪಡುತ್ತಿರುವಂತೆ ಭಾಸವಾಯಿತು.

ಆದರೆ ಎಷ್ಟೇ ತೀವ್ರತೆ ಪಡೆದರೂ ಸಂಭ್ರಮದ ಉತ್ತುಂಗವನ್ನು ಮುಟ್ಟುವುದರಲ್ಲಿ ಸ್ವಲ್ಪ ವಿಫಲತೆ ಕಂಡುಬಂದಿತು. ಯೋಗೇಶ್ ಸಂಶಿಯವರ ಸೂಕ್ಷ್ಮಮತಿಯ ಹಾಗೂ ಕ್ರಿಯಾತ್ಮಕ ತಬಲಾ ವಾದನಕ್ಕೆ ಕೇಳುಗರ ಚಪ್ಪಾಳೆ ಲಭಿಸದಿರಲಿಲ್ಲ.25 ವಸಂತಗಳನ್ನು ಪೂರೈಸಿರುವ ಪುರುವಂಕರ ಸಂಸ್ಥೆ ತನ್ನ ಎಂಟನೇ ಆವೃತ್ತಿಯ ಪ್ರೇಮಾಂಜಲಿ ಉತ್ಸವದ ನಿಮಿತ್ತ `ಡಿವೈನ್ ರಿನೋಸೆನ್ಸ್' ಎಂಬ ಶಿರ್ಷಿಕೆಯಡಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಭಾಗವಿದು.

ಕಳೆದ ಎಂಟು ವರ್ಷಗಳಿಂದ ನಡೆಸುತ್ತಿರುವ ಪ್ರೇಮಾಂಜಲಿ ಉತ್ಸವದಲ್ಲಿ ಹಲವಾರು ಖ್ಯಾತನಾಮ ಕಲಾವಿದರುಗಳ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿದ್ದ ಸಂಸ್ಥೆ, ಈ ವರ್ಷ ಶಿವಕುಮಾರ್ ಶರ್ಮಾ ಅವರ ಸಂತೂರ್ ವಾದನವಷ್ಟೇ ಅಲ್ಲದೇ, ಶೆಹನಾಯ್- ಸಾರಂಗಿ ಹಾಗೂ ಮ್ಯೋಂಡೋಲಿನ್- ಸಿತಾರ್‌ನ ಸಂಯೋಗದ ಅಪರೂಪದ ಎರಡು ವಾದ್ಯ ಜುಗಲ್‌ಬಂದಿಗಳ ಕಾರ್ಯಕ್ರಮವನ್ನೂ ಹಮ್ಮಿಕೊಂಡಿತ್ತು.ಮೊದಲ ಜುಗಲ್‌ಬಂದಿ ಕಾರ್ಯಕ್ರಮದಲ್ಲಿ ವಾರಣಾಸಿ ಮೂಲದ ಶೆಹನಾಯ್ ವಾದಕ ಪಂ. ರಾಜೇಂದ್ರ ಪ್ರಸಾದ್ ಹಾಗೂ ಮಧ್ಯಪ್ರದೇಶ ಮೂಲದ ಸಾರಂಗಿ ವಾದಕ ಉಸ್ತಾದ್ ಸರ್ವಾರ್ ಹುಸೇನ್‌ರ ವಾದನ ನಡೆಯಿತು. ಜುಗಲ್‌ಬಂದಿ ಕಾರ್ಯಕ್ರಮ ಮಧುವಂತಿ ರಾಗ (ಕಲ್ಯಾಣ ಥಾಟ್) ದೊಂದಿಗೆ ಆರಂಭಗೊಂಡಿತು. ತೀನ್ ತಾಳದಲ್ಲಿದ್ದ ಸಂಯೋಜನೆಯಲ್ಲಿ ಸಾರಂಗಿ ಹಾಗೂ ಶೆಹನಾಯ್ ವಾದನ ಅಷ್ಟೇನೂ ಸರಾಗವಾಗಿ ಚಲಿಸಲಿಲ್ಲ.

ಶೆಹನಾಯ್ ಹಾಗೂ ಸಾರಂಗಿ ಪ್ರತ್ಯೇಕತೆಯಲ್ಲಿ ರಂಜಿಸಿದಷ್ಟು ಜೋಡಿ ನುಡಿಸಾಣೆಕೆಯಲ್ಲಿ ಅಷ್ಟಾಗಿ ಬೆರೆಯಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಪೂರ್ವಿ ರಾಗದಲ್ಲಿ ನುಡಿಸಿದ ಧುನ್ ಶ್ರೋತೃಗಳಲ್ಲಿ ಸಮಾಧಾನ ತಂದಿತು. ತಬಲಾದಲ್ಲಿ ರವಿಕಿರಣ್ ನಾಕೋಡ್ ಹಾಗೂ ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿರುವ ದುಕ್ಕಡ್ ವಾದ್ಯದಲ್ಲಿ ಮಂಗಲ್ ಪ್ರಸಾದ್ ಸಾಥಿ ಉತ್ತಮವಾಗಿತ್ತು.ಎರಡನೆಯದಾಗಿ ಮುಂಬೈನ ಉಸ್ತಾದ್ ಶಾಹಿದ್ ಫರ್ವೇಜರ ಸಿತಾರ್ ಹಾಗೂ ಆಂಧ್ರ ಪ್ರದೇಶ ಮೂಲದ ಯು.ಶ್ರೀನಿವಾಸರ ಮ್ಯೋಂಡೋಲಿನ್ ವಾದ್ಯ ಗಳ ಜುಗಲ್‌ಬಂದಿ ಕಾರ್ಯಕ್ರಮ ಆರಂಭವಾಯಿತು. ಬೆಂಗಳೂರಿನಲ್ಲಿ ಈ ಎರಡು ವಾದ್ಯಗಳ ಜುಗಲ್‌ಬಂದಿ ಮೊಟ್ಟ ಮೊದಲ ಪ್ರಯತ್ನವಾಗಿತ್ತು. ಇದು ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ವಾದ್ಯಗಳ ಸಮ್ಮಿಳಿತವಾಗಿದ್ದರಿಂದ ಇಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಚಾರುಕೇಶಿ ರಾಗವನ್ನು ಆರಿಸಿಕೊಳ್ಳಲಾಗಿತ್ತು. ತೀನ್ ತಾಳದಲ್ಲಿ ಅರಳತೊಡಗಿದ್ದ ರಾಗ ಒಮ್ಮೆ ಸಿತಾರ್‌ನಲ್ಲಿ, ಮತ್ತೊಮ್ಮೆ ಮ್ಯೋಂಡೋಲಿನ್ ತಂತಿಗಳಿಂದ ಹೊಮ್ಮತ್ತಿತ್ತು.

ಆಲಾಪ್ ವಾದನದ ನಂತರ ಮ್ಯೋಂಡೋಲಿನ್ ವಾದ್ಯಕ್ಕೆ ತಬಲಾ ಹಾಗೂ ಸಿತಾರ್ ವಾದ್ಯಕ್ಕೆ ಮೃದಂಗ ಸಾಥ್ ನೀಡಿದವು. ಕ್ರಿಯಾತ್ಮಕವಾಗಿದ್ದ ಮ್ಯೋಂಡೋಲಿನ್‌ಗೆ ನೀಡಿದ ತಬಲಾ ಸಾಥಿ, ಸವಾಲ್ ಜವಾಬ್‌ಗಳು ಹೆಚ್ಚು ಆಕರ್ಷಣೀಯವಾಗಿದ್ದವು. ಕಲಾವಿದರಲ್ಲಿ ಏಳುತ್ತಿದ್ದ ಕೆಲ ಗೊಂದಲಗಳಿಂದ ಕಾರ್ಯಕ್ರಮ ಇಡಿಯಾಗಿ ಒಂದು ಕಾರ್ಯಕ್ರಮವಾಗಿ ರೂಪುಗೊಳ್ಳದೇ ಬಿಡಿ ಬಿಡಿಯಾದ ತುಣುಕುಗಳಾಗಿ ಮಾರ್ಪಟ್ಟಿದ್ದರಿಂದ ಶ್ರೋತೃಗಳಲ್ಲಿ ಅಸಮಾಧಾನವನ್ನು ಮೂಡಿಸಿತು.

ಈ ಜುಗಲ್‌ಬಂದಿಗೆ ತಬಲಾ ವಾದನದಲ್ಲಿ ಪಂ. ರವೀಂದ್ರ ಯಾವಗಲ್ ಹಾಗೂ ಮೃದಂಗದಲ್ಲಿ ಎಸ್. ಸ್ವಾಮಿನಾಥನ್ ಅವರ ಸಾಥ್ ಪೇಲವವಾಗುವ ಹಾದಿಯಲ್ಲಿದ್ದ ಕಾರ್ಯಕ್ರಮಕ್ಕೆ ಸಾತ್ವಿಕ ಅಂಶಗಳಾದವು. ತನಿ ಸಂದರ್ಭದಲ್ಲಿನ ನುಡಿಸಾಣಿಕೆಯಂತೂ, ಕಾರ್ಯಕ್ರಮದ ಸಾಫಲ್ಯಕ್ಕೆ ನೆರವಾಯಿತು.

-ರೂಪಶ್ರೀ ಕಲ್ಲಿಗನೂರ್ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.