ಮಂಗಳವಾರ, ಮೇ 17, 2022
27 °C

ಜುಲೈ 25ಕ್ಕೆ ಯುವ ನೀತಿ ಕರಡು ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಪ್ರಥಮ `ಯುವ ನೀತಿ~ಯ ಕರಡನ್ನು ಸರ್ಕಾರ ಜುಲೈ 25ರಂದು ಅನಾವರಣ ಮಾಡಲಿದೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಪ್ರಕಟಿಸಿದರು.ಗೃಹ ಕಚೇರಿ `ಕೃಷ್ಣಾ~ದಲ್ಲಿ ಯುವ ನೀತಿಯ ವೆಬ್‌ಸೈಟ್‌ಗೆ ಸೋಮವಾರ ಚಾಲನೆ ನೀಡಿದ ನಂತರ ಮಾತನಾಡಿದ ಅವರು, `ಈ ನೀತಿಯ ಕುರಿತು ಯುವಕರು, ತಜ್ಞರು, ಅಧಿಕಾರಿಗಳ ವಲಯದಲ್ಲಿ ಸಾಕಷ್ಟು ಚರ್ಚೆ ನಡೆಯಬೇಕು~ ಎಂದರು.ಯುವ ನೀತಿಯ ಅನುಷ್ಠಾನಕ್ಕಾಗಿಯೇ ಈ ಬಾರಿಯ ಮುಂಗಡ ಪತ್ರದಲ್ಲಿ 25 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಸರ್ಕಾರ ಯುವಕರಿಗೆ ಎಲ್ಲ ಕ್ಷೇತ್ರಗಳಲ್ಲಿ ಆದ್ಯತೆ ನೀಡಲಿದೆ. ಯುವ ಸಮುದಾಯದ ಸಲಹೆ ಪಡೆದು ಹೊಸ ನೀತಿ ರೂಪಿಸಲಾಗುವುದು.ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದರು. ಯುವಜನ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಆರ್. ಪೆರುಮಾಳ್ ಮಾತನಾಡಿ, `ದೇಶದಲ್ಲಿ ಯಾವುದೇ ಸರ್ಕಾರ ನೀಡದಷ್ಟು ಅನುದಾನವನ್ನು ಕರ್ನಾಟಕ ಸರ್ಕಾರ ಯುವಜನ ಸೇವಾ ಇಲಾಖೆಗೆ ನೀಡುತ್ತಿದೆ. ಇಲಾಖೆಯಲ್ಲಿ ಖಾಲಿ ಇರುವ ಸ್ಥಾನಗಳಿಗೆ ಅರ್ಹರನ್ನು ನೇಮಕ ಮಾಡುವ ಕಾರ್ಯಕ್ಕೂ ಸರ್ಕಾರ ಮುಂದಾಗಬೇಕು~ ಎಂದು ಒತ್ತಾಯಿಸಿದರು.ಇದೇ ವೇಳೆ ಮುಖ್ಯಮಂತ್ರಿಗಳು ಉಡುಪಿ, ಚಾಮರಾಜನಗರ, ಚಿತ್ರದುರ್ಗ ಹಾಗೂ ಧಾರವಾಡ ಜಿಲ್ಲೆಗಳ ಯುವ ಸಮುದಾಯದ ಆಯ್ದ ಪ್ರತಿನಿಧಿಗಳ ಜೊತೆ ಸಂವಾದ ನಡೆಸಿದರು. ಕರಡು ಸಿದ್ಧವಾಗುವುದು ಹೇಗೆ?: `ಕೇಂದ್ರ ಸರ್ಕಾರ ಕೆಲವು ತಿಂಗಳ ಹಿಂದೆ ರಾಷ್ಟ್ರೀಯ ಯುವ ನೀತಿಯನ್ನು ಸಿದ್ಧಪಡಿಸಿ, ಸಾರ್ವಜನಿಕ ಚರ್ಚೆಗೆ ಅವಕಾಶ ಕಲ್ಪಿಸಿದೆ. ಅದರ ಪ್ರತಿಯನ್ನು ನಾವು ಪಡೆದುಕೊಂಡಿದ್ದೇವೆ.

 

ಅದೇ ರೀತಿಯಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಐರೋಪ್ಯ ಒಕ್ಕೂಟ, ನೆರೆಯ ಮಹಾರಾಷ್ಟ್ರ, ಜಾರ್ಖಂಡ್, ಮೇಘಾಲಯ ರಾಜ್ಯಗಳಲ್ಲಿ ಜಾರಿಯಲ್ಲಿರುವ ಯುವ ನೀತಿಯ ಕರಡನ್ನೂ ಪರಿಶೀಲಿಸುತ್ತಿದ್ದೇವೆ~ ಎಂದು ಕರ್ನಾಟಕ ಜ್ಞಾನ ಆಯೋಗದ ಸದಸ್ಯ ಕಾರ್ಯದರ್ಶಿ ಪ್ರೊ.ಎಂ.ಕೆ. ಶ್ರೀಧರ್ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಯುವ ಮುದಾಯದ ಜೊತೆಯೂ ಈ ನೀತಿಯಲ್ಲಿ ಅಳವಡಿಸಬೇಕಾದ ಅಂಶಗಳ ಬಗ್ಗೆ ಸಂವಾದ ನಡೆಸಲಾಗುವುದು. ಸಾರ್ವಜನಿಕ ನೀತಿಗಳ  ಪರಿಣಿತರ ಜೊತೆ ಚರ್ಚಿಸಲಾಗುವುದು.ಎಲ್ಲ ವರ್ಗಗಳ ಜೊತೆಗಿನ ಸಂವಾದದ ನಂತರ ಸಿದ್ಧಪಡಿಸುವ ಯುವ ನೀತಿಯ ಕರಡಿನ ಬಗ್ಗೆ ಸಾರ್ವಜನಿಕರಿಂದ ಜುಲೈ 25ರ ನಂತರ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುವುದು ಎಂದರು. ಚಾಲನಾ ಸಮಿತಿ ರಚನೆ

ರಾಜ್ಯದ ಪ್ರಥಮ ಯುವ ನೀತಿಯ ಕರಡು ಪರಿಶೀಲನೆ, ಅನುಮೋದನೆ ಕಾರ್ಯಕ್ಕೆ ಚಾಲನಾ ಸಮಿತಿ ರಚಿಸಲಾಗಿದೆ. ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್, ಕ್ರೀಡಾಪಟು ಅಶ್ವಿನಿ ನಾಚಪ್ಪ, ವಿವೇಕಾನಂದ ಯೂತ್ ಮೂಮೆಂಟ್‌ನ ಸ್ಥಾಪಕ ಡಾ.ಆರ್. ಬಾಲಸುಬ್ರಹ್ಮಣ್ಯಂ, ಜೈನ್ ವಿಶ್ವವಿದ್ಯಾಲಯದ ಸಹಕುಲಪತಿ ಪ್ರೊ. ಸಂದೀಪ್ ಶಾಸ್ತ್ರಿ, ಯುವಜನ ಸೇವಾ ಇಲಾಖೆಯ ನಿರ್ದೇಶಕ ಎಂ.ಕೆ. ಬಲದೇವಕೃಷ್ಣ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್. ಮಹೇಶಪ್ಪ ಮತ್ತಿತರರು ಸಮಿತಿಯ ಸದಸ್ಯರು ಎಂದು ಪ್ರೊ. ಶ್ರೀಧರ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.