ಗುರುವಾರ , ಮೇ 19, 2022
21 °C

ಜೂನ್ 11 ವಿಧಾನ ಪರಿಷತ್ ಚುನಾವಣೆ, ಫಲಿತಾಂಶ:ಚುನಾವಣೆ ಅನಿವಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಒಟ್ಟು 12 ಮಂದಿ ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಚುನಾವಣೆ ಅನಿವಾರ್ಯವಾಗಿದೆ. ಇದೇ 11ರಂದು ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.ಬಿಜೆಪಿ ಅಭ್ಯರ್ಥಿಗಳ ಪರ ವಕೀಲರು ತಕರಾರು ಎತ್ತಿದ ಹಿನ್ನೆಲೆಯಲ್ಲಿ ಶನಿವಾರ ಮುಂದೂಡಲಾಗಿದ್ದ ಕಾಂಗ್ರೆಸ್‌ನ ಇಕ್ಬಾಲ್ ಅಹ್ಮದ್ ಸರಡಗಿ, ಕೆ.ಗೋವಿಂದರಾಜು, ಜೆಡಿಎಸ್‌ನ ಸೈಯದ್ ಮುದೀರ್ ಆಗಾ ಮತ್ತು ಪಕ್ಷೇತರ ಅಭ್ಯರ್ಥಿ ಬಿ.ಎಸ್.ಸುರೇಶ್ ಅವರ ನಾಮಪತ್ರಗಳನ್ನು ಸೋಮವಾರ ಪರಿಶೀಲಿಸಿ ಅಂಗೀಕರಿಸಲಾಯಿತು.ನಾಮಪತ್ರಗಳ ಸಲ್ಲಿಕೆ ಸಂದರ್ಭದಲ್ಲಿ ಸರಡಗಿ, ಆಗಾ ಮತ್ತು ಸುರೇಶ್ ಅವರು 50 ರೂಪಾಯಿ ಮೌಲ್ಯದ ಸ್ಟಾಂಪ್ ಪೇಪರ್ ಬದಲು, 20 ರೂಪಾಯಿ ಮೌಲ್ಯದ ಸ್ಟಾಂಪ್‌ಪೇಪರ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಆದ್ದರಿಂದ ಅವರ ನಾಮಪತ್ರಗಳನ್ನು ಅಂಗೀಕರಿಸಬಾರದು ಎಂದು ಬಿಜೆಪಿ ಅಭ್ಯರ್ಥಿಗಳ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದರು.ಇದಕ್ಕೆ ಉತ್ತರ ನೀಡಿದ ಮೂವರು ಅಭ್ಯರ್ಥಿಗಳ ಪರ ವಕೀಲರು, ಕರ್ನಾಟಕ ಸ್ಟಾಂಪ್ ಕಾಯ್ದೆ- 1957ರ ಸೆಕ್ಷನ್ 4ರ ಪ್ರಕಾರ 20 ರೂಪಾಯಿ ಮೌಲ್ಯದ ಸ್ಟಾಂಪ್‌ಪೇಪರ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಲು ಅವಕಾಶವಿದೆ. ಆದ್ದರಿಂದ ಆಕ್ಷೇಪಣೆಗಳನ್ನು ತಿರಸ್ಕರಿಸಿ, ನಾಮಪತ್ರಗಳನ್ನು ಅಂಗೀಕರಿಸಬೇಕು ಎಂದು ಮನವಿ ಮಾಡಿದರು.ಎರಡೂ ಕಡೆಯವರ ವಾದವನ್ನು ಆಲಿಸಿದ ನಂತರ ಚುನಾವಣಾಧಿಕಾರಿ ಓಂಪ್ರಕಾಶ್ ಅವರು ನಾಮಪತ್ರಗಳನ್ನು ಅಂಗೀಕರಿಸಿರುವುದಾಗಿ ಆದೇಶ ಹೊರಡಿಸಿದರು. ಚುನಾವಣಾ ಆಯೋಗದಿಂದ ಯಾವುದೇ ರೀತಿಯ ಸೂಚನೆಗಳು ಇದ್ದರೂ, ರಾಜ್ಯ ಸರ್ಕಾರದ ಮುದ್ರಾಂಕ ಕಾಯ್ದೆ ಪ್ರಕಾರವೇ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ.ಕರ್ನಾಟಕ ಮುದ್ರಾಂಕ ಕಾಯ್ದೆ- 1957ರ ಸೆಕ್ಷನ್ 4ರ ಪ್ರಕಾರ 20 ರೂಪಾಯಿ ಮೌಲ್ಯದ ಸ್ಟಾಂಪ್‌ಪೇಪರ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕು. ಇದನ್ನು ಮೂವರು ಅಭ್ಯರ್ಥಿಗಳು ಪಾಲಿಸಿದ್ದಾರೆ. ಹೀಗಾಗಿ ಅವರ ನಾಮಪತ್ರಗಳನ್ನು ಅಂಗೀಕರಿಸಲಾಗಿದೆ ಎಂದು ಓಂಪ್ರಕಾಶ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.ಗೋವಿಂದರಾಜು ಅವರು ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದು, ಅದು ಲಾಭದಾಯಕ ಹುದ್ದೆ ಆಗಿರುವುದರಿಂದ ಅವರ ನಾಮಪತ್ರವನ್ನು ಅಂಗೀಕರಿಸಬಾರದು ಎಂದು ಬಿಜೆಪಿ ಅಭ್ಯರ್ಥಿ ರಘುನಾಥರಾವ್ ಮಲ್ಕಾಪುರೆ ಆಕ್ಷೇಪಣೆ ಸಲ್ಲಿಸಿದ್ದರು.ಈ ಬಗ್ಗೆ ಪರಿಶೀಲನೆ ನಡೆಸಿದ ಓಂಪ್ರಕಾಶ್, ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್ ಸೊಸೈಟಿಗಳ ನೋಂದಣಿ ಕಾಯ್ದೆಯಡಿ ಬರುತ್ತದೆ. ಅಧ್ಯಕ್ಷ ಸ್ಥಾನ ಲಾಭದಾಯಕ ಹುದ್ದೆ ವ್ಯಾಪ್ತಿಯಲ್ಲಿ ಬರುವುದಿಲ್ಲ. ಅಲ್ಲದೆ ಕರ್ನಾಟಕ ಶಾಸಕಾಂಗ (ಅನರ್ಹತೆ ತಡೆ) ಕಾಯ್ದೆ- 1956ರ ಪ್ರಕಾರವೂ ಲಾಭದಾಯಕ ಹುದ್ದೆ ಅಲ್ಲ. ಹೀಗಾಗಿ ಅವರ ನಾಮಪತ್ರವನ್ನು ತಿರಸ್ಕರಿಸಲು ಬರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.ಮತದಾನ: ಜೂ.11ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 4ರವರೆಗೆ ಮತದಾನ ನಡೆಯಲಿದೆ. ಇದು ರಹಸ್ಯ ಮತದಾನ ಆಗಿರುವುದರಿಂದ ರಾಜಕೀಯ ಪಕ್ಷಗಳು ವಿಪ್ ನೀಡಿದರೂ ಅದಕ್ಕೆ ಮಹತ್ವ ಇಲ್ಲ. ವಿಧಾನ ಸಭೆಯ ಒಟ್ಟು ಸದಸ್ಯರ ಸಂಖ್ಯೆ 225. ಒಬ್ಬ ಅಭ್ಯರ್ಥಿ ಗೆಲುವಿಗೆ ಕನಿಷ್ಠ 19 ಮತಗಳು ಬೇಕು. ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ ಆರು, ಕಾಂಗ್ರೆಸ್ ಮೂರು ಮತ್ತು ಜೆಡಿಎಸ್ ಒಂದು ಸ್ಥಾನವನ್ನು ಸುಲಭವಾಗಿ ಪಡೆಯಲಿವೆ.ಕಾಂಗ್ರೆಸ್ ನಾಲ್ಕನೇ ಅಭ್ಯರ್ಥಿಯನ್ನಾಗಿ ಎಂ.ಆರ್.ಸೀತಾರಾಂ ಅವರನ್ನು ಕಣಕ್ಕೆ ಇಳಿಸಿದೆ. ಜೆಡಿಎಸ್ ಮತ್ತು ಪಕ್ಷೇತರ ಶಾಸಕರ ಬೆಂಬಲದಿಂದ ಬಿ.ಎಸ್. ಸುರೇಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಹತ್ತು ಸ್ಥಾನಗಳ ಗೆಲುವು ಸುಲಭವಾಗಿ ಆಗಲಿದೆ. 11ನೇ ಸ್ಥಾನಕ್ಕೆ ಸುರೇಶ್ ಮತ್ತು ಸೀತಾರಾಂ ನಡುವೆ ಸ್ಪರ್ಧೆ ಏರ್ಪಟ್ಟಿದೆ.ಸದ್ಯ ಸುರೇಶ್ ಅವರಿಗೆ ಜೆಡಿಎಸ್‌ನ 6 ಹೆಚ್ಚುವರಿ ಮತಗಳು ಮತ್ತು ಪಕ್ಷೇತರ ಶಾಸಕರ 5 ಮತಗಳು ದೊರೆಯುವುದು ಬಹುತೇಕ ಖಚಿತವಾಗಿದೆ. ಅವರ ಗೆಲುವಿಗೆ ಇನ್ನೂ ಎಂಟು ಮತಗಳ ಅಗತ್ಯವಿದೆ. ಸೀತಾರಾಂ ಅವರಿಗೆ ಕಾಂಗ್ರೆಸ್‌ನಲ್ಲಿ 11 ಮತಗಳು ಲಭ್ಯವಾಗಲಿವೆ. ಅವರಿಗೂ ಎಂಟು ಮತಗಳ ಕೊರತೆ ಇದೆ.ಸುರೇಶ್ ಮೂಲತಃ ಕಾಂಗ್ರೆಸ್ ಪಕ್ಷದವರಾಗಿದ್ದು, ನಾಮಪತ್ರ ವಾಪಸ್ ಪಡೆಯುವಂತೆ ಸೋಮವಾರ ಮಧ್ಯಾಹ್ನದವರೆಗೂ ಕಾಂಗ್ರೆಸ್ ಮುಖಂಡರು ಅವರ ಮೇಲೆ ಒತ್ತಡ ಹೇರಿದರು. ಆದರೆ ಅವರ ಮನವಿಗೆ ಸುರೇಶ್ ಸ್ಪಂದಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.