ಗುರುವಾರ , ಮೇ 28, 2020
27 °C

ಜೆಡಿಎಸ್,ಕಾಂಗ್ರೆಸ್ ನಡುವೆ ವಾಗ್ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್: ಬೇತಮಂಗಲ ಸಮೀಪದ ವಿದ್ಯುತ್ ಸಬ್ ಸ್ಟೇಷನ್ ಆರಂಭಿಸುವ ಬಗ್ಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಬಹಿರಂಗವಾಗಿ ವಾಕ್ಸಮರ ನಡೆಸಿದ ಘಟನೆ ಗುರುವಾರ ಬೇತಮಂಗಲದಲ್ಲಿ ನಡೆದಿದೆ.ಬೇತಮಂಗಲದ ದೊಡ್ಡಕಾರಿ ಬಳಿ ವಿದ್ಯುತ್ ಸಬ್‌ಸ್ಟೇಷನ್ ಆರಂಭಿಸುವ ಬಗ್ಗೆ ಹಲವು ವರ್ಷಗಳಿಂದ ಬೇಡಿಕೆಗಳನ್ನು ಸಲ್ಲಿಸಲಾಗುತ್ತಿತ್ತು. ಆದರೆ ಇದುವರೆಗೂ ಜಮೀನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಅಧೀನಕ್ಕೆ ಬಾರದ ಕಾರಣ ಕಾಮಗಾರಿ ಆರಂಭಿಸಿರಲಿಲ್ಲ. ಆದರೆ ಬೇತಮಂಗಲ ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಸಬ್ ಸ್ಟೇಷನ್ ಸ್ಥಾಪನೆ ಎಲ್ಲಾ ರಾಜಕೀಯ ಪಕ್ಷಗಳ ಮುಖ್ಯ ಆಶ್ವಾಸನೆಯಾಗಿತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡ ಮುನಿರತ್ನಂ ನಾಯ್ಡು, ಮಾಜಿ ಜಿ.ಪಂ. ಸದಸ್ಯ ವಿಜಯಶಂಕರ್ ಮತ್ತಿತರು ಗುರುವಾರ ಬೆಳಿಗ್ಗೆ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದರು. ಕಚೇರಿಯಲ್ಲಿದ್ದ ವಿಭಾಗದ ಅಧಿಕಾರಿ ಗೀತಾ ಮತ್ತು ಇತರ ಏಳು ಜನರನ್ನು ಹೊರ ಹಾಕಿ ಬೀಗ ಹಾಕಲಾಯಿತು.ಜೆಡಿಎಸ್ ಮುಖಂಡರ ವರ್ತನೆಯಿಂದ ಕುಪಿತಗೊಂಡ ಕಾಂಗ್ರೆಸ್ ಕಾರ್ಯಕರ್ತರು ಜಿ.ಪಂ.ಸದಸ್ಯ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಜಮಾವಣೆಗೊಂಡರು. ಎರಡೂ ಬಣಗಳು ಪರಸ್ಪರ ದೋಷಾರೋಪಣೆ ಮಾಡಲು ಆರಂಭಿಸಿದರು. ಸಬ್ ಸ್ಟೇಷನ್ ಪ್ರಾರಂಭಕ್ಕೆ ತಾವು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದು, ಕಾಂಗ್ರೆಸ್‌ನ ಜಿ.ಪಂ. ಸದಸ್ಯರು ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಮುನಿರತ್ನಂ ನಾಯ್ಡು ಬಣದವರು ದೂರಲಾರಂಭಿಸಿದರು. ಪ್ರತಿಯಾಗಿ ಆರೋಪ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು, ಇಷ್ಟು ವರ್ಷಗಳ ಅಧಿಕಾರದಲ್ಲಿದ್ದ ಮುನಿರತ್ನಂ ನಾಯ್ಡು ಅಧಿಕಾರದಲ್ಲಿದ್ದಾಗಲೇ ಏನೂ ಮಾಡಲಿಲ್ಲ. ಈಗ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ನಾಟಕವಾಡುತ್ತಿದ್ದಾರೆ ಎಂದರು. ಸ್ಥಳಕ್ಕೆ ಆಗಮಿಸಿದ ಬೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರ ಸೈಯದ್ ಹುಸೇನಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.