ಗುರುವಾರ , ಮೇ 13, 2021
22 °C

ಜೈನರಿಗೆ ಮುಳುವಾದ ಉಳುವವನೇ ಒಡೆಯ ಕಾಯ್ದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ಬಂದ `ಉಳುವವನೇ ಭೂಮಿಯ ಒಡೆಯ~ (ಟೆನೆನ್ಸಿ) ಕಾಯ್ದೆ ರಾಜ್ಯದಲ್ಲಿ ಜೈನ ಧರ್ಮೀಯರಿಗೆ ಮರಣ ಶಾಸನವಾಯಿತು ಎಂದು ವರೂರು ನವಗ್ರಹ ಕ್ಷೇತ್ರದ ಗುಣಧರನಂದಿ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರದಲ್ಲಿ ಪಂಚ ಕಲ್ಯಾಣ ಪ್ರತಿಷ್ಠಾ ಮಹೋತ್ಸವ ಹಾಗೂ ದಿಗಂಬರ ಜೈನ ಬೋರ್ಡಿಂಗ್‌ನ ಶತಮಾನೋತ್ಸವದ ಅಂಗವಾಗಿ ಗುರುವಾರ ನಡೆದ `ಮೋಕ್ಷ ಕಲ್ಯಾಣ~ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ದೇವರಾಜು ಅರಸು ಟೆನೆನ್ಸಿ ಕಾಯ್ದೆಯಿಂದ ಜೈನ ಧರ್ಮೀಯರ ಒಂದು ಲಕ್ಷ ಎಕರೆ ಭೂಮಿ ಕಿತ್ತುಕೊಂಡರು. ಪ್ರತಿಯಾಗಿ ನಮಗೆ ಏನು ಕೊಟ್ಟರು ಎಂದು ಪ್ರಶ್ನಿಸಿದ ಸ್ವಾಮೀಜಿ, ಅಂದು ಸಮಾಜದಲ್ಲಿದ್ದ ಒಡಕಿನಿಂದಾಗಿ ಅರಸು ವಿರುದ್ಧ ಜೋರಾಗಿ ಧ್ವನಿ ಎತ್ತಲು ಅಥವಾ ಪ್ರತಿಭಟನೆ ನಡೆಸಲು ಸಾಧ್ಯವಾಗಲಿಲ್ಲ ಎಂದರು.ಸ್ವಾತಂತ್ರ್ಯ ಪೂರ್ವಕ್ಕೂ ಮುನ್ನ ಜೈನಮಠಗಳು ಅತ್ಯಂತ ಶ್ರೀಮಂತ ಎನಿಸಿದ್ದವು. ಭಕ್ತರ ನೆರವಿನ ಅಗತ್ಯವೇ ಇರಲಿಲ್ಲ. ಟೆನೆನ್ಸಿ ಕಾಯ್ದೆಯಿಂದಾಗಿ ಮೂಡುಬಿದಿರೆ ಜೈನ ಮಠಕ್ಕೆ ಸೇರಿದ 10 ಸಾವಿರ ಎಕರೆಯಷ್ಟು ಜಮೀನು ಸರ್ಕಾರದ ವಶಕ್ಕೆ ಪಡೆಯಲಾಯಿತು. ಅಂದು ಒಡಕಿನಿಂದಾಗಿ ಹಾಳಾಗಿದ್ದೇವೆ. ಇಂದು ಮಠಗಳಿಗೆ ಸಮಾಜದವರ ನೆರವು ಬೇಕಿದೆ. ನಿಮ್ಮ ನೆರವು ಇಲ್ಲದೆ ಸಂಸ್ಥಾನಗಳು ನಡೆಯುವುದಾದರೂ ಹೇಗೆ ಎಂದು  ಪ್ರಶ್ನಿಸಿದರು.ಇಂದು ಮಠಗಳ ಸಿಬ್ಬಂದಿಗೆ ವೇತನ ನೀಡುವುದು ಕಷ್ಟಕರವಾಗಿದೆ. ಮಠಗಳಲ್ಲಿಯೂ ಹೆಚ್ಚಿನ ಸಮಸ್ಯೆಗಳಿವೆ. ಕ್ಲಬ್ಬು, ಮದ್ಯ ಎಂದು ನಿತ್ಯ ಸಾವಿರಾರು ರೂಪಾಯಿ ಖರ್ಚು ಮಾಡುತ್ತೀರಿ. ಅದರ ಬದಲಿಗೆ ಸಮಾಜದ ಪ್ರತಿ ಸದಸ್ಯರು ಒಂದು ರೂಪಾಯಿ ಕೊಟ್ಟರೂ ಮಠಗಳು ಸ್ವರ್ಣಮಂದಿರಗಳಾಗಿ ಬದಲಾಗುತ್ತವೆ. ಆ ನಿಟ್ಟಿನಲ್ಲಿ ಜಾಗೃತಿ ಮೂಡಬೇಕಿದೆ ಎಂದರು.ಧರ್ಮದಲ್ಲಿ ರಾಜನೀತಿ ಅವತರಿಸುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಜೈನ ಸಮುದಾಯದವರು ಒಬ್ಬರಿಗೊಬ್ಬರು ಕೆಸರು ಎರಚುವ, ಕಾಲು ಎಳೆಯುವ ಕೆಲಸ ಬಿಡುವಂತೆ ಸಲಹೆ ನೀಡಿದ ಸ್ವಾಮೀಜಿ, ಸದಾ ವ್ಯವಹಾರದ ಚಿಂತನೆಯಲ್ಲಿ ತೊಡಗುವುದು ಬಿಟ್ಟು ಧರ್ಮದ ಬಗ್ಗೆಯೂ ಆಲೋಚಿಸುವಂತೆ ಹೇಳಿದರು.ಮುಸ್ಲಿಂ ಯುಗದಲ್ಲಿ ದಾಳಿಕೋರರು ಹಲವು ತಿಂಗಳು ಕಾಲ ಜೈನ ಸಾಹಿತ್ಯವನ್ನು ಸುಟ್ಟು ಹಾಕಿದರೂ ಧರ್ಮ ಉಳಿದುಕೊಂಡು ಬಂದಿದೆ. ದೆಹಲಿ ಅಕ್ಬರನ ಆಳ್ವಿಕೆಯಲ್ಲಿದ್ದಾಗ ಜೈನರನ್ನು ಮತಾಂತರಗೊಳಿಸಲು ಮುಂದಾದ ಮುಸ್ಲಿಮರು ಮುಂದೆ ಜೈನಧರ್ಮದ ಪ್ರಭಾವಕ್ಕೆ ಒಳಗಾದರು. ಆಗಿನಿಂದಲೂ ಸುಮಾರು 700 ವರ್ಷ ಕಾಲ ಜೈನ ಸಮಾಜವನ್ನು ಕಾಪಾಡಿಕೊಂಡು ಬಂದಿರುವ ಭಟ್ಟಾರಕ ಸ್ವಾಮಿಗಳು, ಯತಿಗಳ ಋಣವನ್ನು ಸಮಾಜ ತೀರಿಸಬೇಕಿದೆ ಎಂದರು.ಪ್ರಪಂಚದ ಅತ್ಯಂತ ಹಳೆಯದು ಎನ್ನಲಾದ ವೈದಿಕ ಸಂಸ್ಕೃತಿಯ ಯಜುರ್ವೇದದಲ್ಲಿ ಜೈನ ತೀರ್ಥಂಕರ ಆದಿನಾಥರ ಉಲ್ಲೇಖವಿದೆ. ಆದ್ದರಿಂದ ಹಿಂದೂ, ಕ್ರೈಸ್ತ, ಮುಸ್ಲಿಂ, ಲಿಂಗಾಯತ ಹೀಗೆ ಎಲ್ಲಾ ಧರ್ಮಗಳಿಗಿಂತ ಜೈನ ಧರ್ಮ ಅತ್ಯಂತ ಪ್ರಾಚೀನವಾದುದು ಎಂಬ ಹೆಗ್ಗಳಿಕೆ ಹೊಂದಿದೆ ಎಂದು ಹೇಳಿದರು.ಮುನಿಶ್ರೀ ಪುಣ್ಯಸಾಗರ ಸ್ವಾಮೀಜಿ ಮಾತನಾಡಿ, ದಿನದ 24 ಗಂಟೆಯೂ ಧರ್ಮದ ಸಾಂಗತ್ಯದಲ್ಲಿ ಇದ್ದರೆ ಕರ್ಮಕ್ಷಯಗಳನ್ನು ನಿರಂತರವಾಗಿ ತೊಳೆದುಕೊಳ್ಳಬಹುದು ಎಂದು ಸಲಹೆ ನೀಡಿದರು.ಕುಂಬಾರ ಮಡಿಕೆ ಮಾಡುವಾಗ ಮಣ್ಣನ್ನು ಹದಗೊಳಿಸುವಂತೆ ಗುರುಗಳು, ಧಾರ್ಮಿಕ ಮುಖಂಡರು ಶಿಷ್ಯರನ್ನು ತಿದ್ದುವ ಕೆಲಸ ಮಾಡಬೇಕಿದೆ ಎಂದರು.ಸಮಾರಂಭದಲ್ಲಿ ಹೊಂಬುಜ ಜೈನ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಅಮ್ಮಿನಬಾವಿ-ವರೂರಿನ ಧರ್ಮದೇನ ಭಟ್ಟಾರಕ ಸ್ವಾಮೀಜಿ, ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ಡಿ.ಎ. ಪಾಟೀಲ, ದಿಗಂಬರ ಜೈನ್ ಬೋರ್ಡಿಂಗ್ ಅಧ್ಯಕ್ಷ ದತ್ತಾ ಡೋರ್ಲೆ, ಉದ್ಯಮಿಗಳಾದ ವಿನಯ ಜೆ. ಜವಳಿ, ವಿನಯಕುಮಾರ ಗೋಟಡಕಿ, ಅನಂತರಾಜ್ ಅಪ್ಪಾರಾವ್ ಚಿವಟೆ, ಜೀವಂದರ್ ಚೌಗಲೆ, ಡಿ.ಆರ್. ಖೊಬ್ರೆ, ಉಪನ್ಯಾಸಕಿ ಸುಜಾತಾ ಸುಭಾಷ ಶಾಸ್ತ್ರಿ ಮತ್ತಿತರರು ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.