ಗುರುವಾರ , ಮೇ 19, 2022
24 °C

ಜೈಲಿನಲ್ಲಿ ಸಂಪಂಗಿ ಭೇಟಿಯಾದ ಸಚಿವ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಂಚ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಶಾಸಕ ವೈ.ಸಂಪಂಗಿ ಅವರನ್ನು ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಹಾಗೂ ನೆಲಮಂಗಲ ಶಾಸಕ ಎಂ.ವಿ.ನಾಗರಾಜ್ ಶನಿವಾರ ಸಂಜೆ ಭೇಟಿಯಾಗಿದ್ದಾರೆ.`ಕಾರಾಗೃಹದ ಅಧೀಕ್ಷಕರ ಕಚೇರಿಯ ಕೊಠಡಿಯಲ್ಲಿ ಸಂಪಂಗಿ ಅವರೊಂದಿಗೆ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಲಾಯಿತು. ಮಾನಸಿಕವಾಗಿ ಕುಗ್ಗಿಹೋಗಿರುವ ಅವರಿಗೆ ಧೈರ್ಯ ತುಂಬಲು ಅವರನ್ನು ಭೇಟಿ ಮಾಡಿದ್ದೆವು. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ದೂರವಾಣಿ ಮೂಲಕ ಸಂಪಂಗಿ ಅವರೊಂದಿಗೆ ಮಾತನಾಡಿ ಅವರಿಗೆ ಮಾನಸಿಕವಾಗಿ ಧೈರ್ಯ ನೀಡಿದ್ದಾರೆ. ಬಂಧನವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಈಶ್ವರಪ್ಪ ಅವರು ದೂರವಾಣಿ ಮೂಲಕ ಭರವಸೆ ನೀಡಿದ್ದಾರೆ~ ಎಂದು ನೆಲಮಂಗಲ ಶಾಸಕ ಎಂ.ವಿ.ನಾಗರಾಜ್ `ಪ್ರಜಾವಾಣಿ~ಗೆ ತಿಳಿಸಿದರು.`ಕಾನೂನು ಹೋರಾಟದ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಪಕ್ಷ ಸಿದ್ಧವಿದೆ. ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಸಂಪಂಗಿ ಅವರಿಗೆ ಸಾಂತ್ವನ ಹೇಳಿದ್ದಾರೆ. ಸುಮಾರು ಐದಾರು ನಿಮಿಷಗಳ ಕಾಲ ಮುಖ್ಯಮಂತ್ರಿಯವರು ಸಂಪಂಗಿ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು~ ಎಂದು ಅವರು ಹೇಳಿದರು.ನಿಯಮ ಉಲ್ಲಂಘನೆ : `ಕಾರಾಗೃಹ ನಿಯಮಾವಳಿಗಳ ಪ್ರಕಾರ ಕೈದಿಗಳನ್ನು ಭೇಟಿ ಮಾಡಲು ಕಾರಾಗೃಹಕ್ಕೆ ಬರುವವರು ಮೊಬೈಲ್‌ಗಳನ್ನು ಕಾರಾಗೃಹ ಪ್ರವೇಶ ದ್ವಾರದ ಬಳಿಯೇ ಇಟ್ಟು ಬರಬೇಕು. ಆದರೆ ಬಾಲಚಂದ್ರ ಜಾರಕಿಹೊಳಿ ಹಾಗೂ ನಾಗರಾಜ್ ಅವರು ಭೇಟಿ ನೀಡಿದ್ದ ವೇಳೆ ಮೊಬೈಲ್‌ಗಳೊಂದಿಗೇ ಕಾರಾಗೃಹ ಪ್ರವೇಶಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅವರ ಮೊಬೈಲ್‌ನಿಂದಲೇ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಸಂಪಂಗಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಕಾರಾಗೃಹದ ಹಿರಿಯ ಅಧಿಕಾರಿಗಳೇ ನಿಯಮ ಉಲ್ಲಂಘನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ~ ಎಂದು ಕಾರಾಗೃಹದ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.