ಶನಿವಾರ, ಮೇ 15, 2021
22 °C

ಜೈಲುವಾಸದಲ್ಲಿ ಹೂ,ಗಿಡ ಪ್ರೇಮ...

ಪ್ರಜಾವಾಣಿ ವಾರ್ತೆ ಎಂ. ನವೀನ್ ಕುಮಾರ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಐಎಡಿಬಿ ಭೂ ಹಗರಣದ ಆರೋಪಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರುವ ಕಟ್ಟಾ ಜಗದೀಶ್, ಜೈಲಿನ ಆವರಣದಲ್ಲಿ ಹೂಗಿಡಗಳನ್ನು ಬೆಳೆಸುತ್ತಿದ್ದಾರೆ. ನಟ ದರ್ಶನ್ ಅವರು ದಿನ ಪತ್ರಿಕೆ, ನಿಯತ ಕಾಲಿಕೆ ಓದುತ್ತ ಕಾಲ ಕಳೆಯುತ್ತಿದ್ದಾರೆ.ಐಷಾರಾಮಿ ಜೀವನ ನಡೆಸುತ್ತಿದ್ದ ನಟ ದರ್ಶನ್ ತೂಗುದೀಪ ಈಗ ಜೈಲಿನ ಊಟ ಮಾಡುತ್ತಿದ್ದಾರೆ. ಪತ್ನಿ ಮತ್ತು ಮೂರು ವರ್ಷದ ಮಗನನ್ನು ಕೊಲೆ ಮಾಡಲು ಯತ್ನಿಸಿದ ಆರೋಪ ಎದುರಿಸುತ್ತಿರುವ ದರ್ಶನ್ ಅವರನ್ನು ನಗರದ ಪರಪ್ಪನ ಅಗ್ರಹಾರ ಜೈಲಿಗೆ ಬುಧವಾರ ವಾಪಸ್ಸು ಕರೆದೊಯ್ಯಲಾಗಿದೆ.ಗುರುವಾರ ಬೆಳಿಗ್ಗೆ ಪುಳಿಯೋಗರೆ ತಿಂದು ಕಾಫಿ ಕುಡಿದ ದರ್ಶನ್, ಮಧ್ಯಾಹ್ನ ಅನ್ನ ಸಾಂಬಾರ್ ಊಟ ಮಾಡಿದ್ದರು. ರಾತ್ರಿ ಅನ್ನ ಸಾಂಬಾರ್ ತಿಂದು ಮಜ್ಜಿಗೆ ಕುಡಿದಿದ್ದಾರೆ. ಕೆಐಎಡಿಬಿ ಭೂ ಹಗರಣ ಪ್ರಕರಣದ ಆರೋಪಿ, ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಪುತ್ರ ಕಟ್ಟಾ ಜಗದೀಶ್ ಮತ್ತು ಇಟಾಸ್ಕ ಕಂಪೆನಿಯ ನಿರ್ದೇಶಕ ಎಸ್.ವಿ. ಶ್ರೀನಿವಾಸ್ ಅವರನ್ನು ಇರಿಸಿರುವ ಅತಿ ಭದ್ರತಾ ಕೊಠಡಿಯಲ್ಲಿ ದರ್ಶನ್ ಅವರನ್ನು ಇರಿಸಲಾಗಿದೆ.ಜಗದೀಶ್ ಮತ್ತು ಶ್ರೀನಿವಾಸ್ ಅವರ ಜತೆಯೂ ದರ್ಶನ್ ಮಾತನಾಡುತ್ತ ಕಾಲ ಕಳೆಯುತ್ತಿದ್ದಾರೆ. ಕಾರಾಗೃಹದಲ್ಲಿ ಇರುವ ಗ್ರಂಥಾಲಯದಿಂದ ಅವರು ಕನ್ನಡ ಮತ್ತು ಇಂಗ್ಲಿಷ್ ನಿಯತಕಾಲಿಕೆಗಳನ್ನು ತರಿಸಿಕೊಂಡಿದ್ದಾರೆ. ಅವುಗಳನ್ನು ಅವರು ಓದುತ್ತ ಕಾಲ ಕಳೆಯುತ್ತಿದ್ದಾರೆ. ಕೆಲ ಪುಸ್ತಕಗಳನ್ನೂ ಅವರು ಪಡೆದಿದ್ದಾರೆ.ಅವರ ಕೊಠಡಿಯಲ್ಲಿ ಕಲರ್ ಟಿ.ವಿ ಇದ್ದು, ಅದಕ್ಕೆ ಕೇಬಲ್ ಸಂಪರ್ಕ ಇದೆ. ಸುದ್ದಿ ವಾಹಿನಿ ಮತ್ತು ಮನರಂಜನಾ ಚಾನಲ್‌ಗಳನ್ನೂ ಅವರು ವೀಕ್ಷಿಸುತ್ತಿದ್ದಾರೆ. ಕೊಠಡಿಯಲ್ಲಿ ಸೊಳ್ಳೆ ಇರುವುದರಿಂದ ಸೊಳ್ಳೆ ನಿಯಂತ್ರಣಕ್ಕೆ `ಲಿಕ್ವಿಡ್ ಮೆಷಿನ್~ ಬಳಸುತ್ತಿದ್ದಾರೆ. ಹಾಸಿಗೆಯನ್ನು ಅವರು ತರಿಸಿಕೊಂಡಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ. ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆಗೆ ಬಂದು ಜಾಮೀನು ಸಿಗುತ್ತದೆ ಎಂಬ ಭರವಸೆಯಲ್ಲಿದ್ದ ದರ್ಶನ್ ಮನೆ ಊಟಕ್ಕೆ ಜೈಲಿನ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿರಲಿಲ್ಲ. ಜಾಮೀನು ಅರ್ಜಿ ವಿಚಾರಣೆಯನ್ನು ಎರಡು ವಾರಗಳ ಕಾಲ ಹೈಕೋರ್ಟ್ ಮುಂದೂಡಿದ ಸುದ್ದಿಯನ್ನು ಟಿ.ವಿಯಲ್ಲಿ ನೋಡಿದ ಅವರು ಸ್ವಲ್ಪ ಅಘಾತಕ್ಕೆ ಒಳಗಾಗಿದ್ದರು ಎಂದು ಮೂಲಗಳು ಹೇಳಿವೆ.ಜೈಲಿನ ಹಿರಿಯ ಅಧಿಕಾರಿಗಳನ್ನು ಕಂಡಾಗ ದರ್ಶನ್ ಮುಗುಳ್ನಗುತ್ತಾರೆ, ಆದರೆ ಹೆಚ್ಚು ಮಾತನಾಡುವುದಿಲ್ಲ. ಅಧಿಕಾರಿಗಳು ಸಹ ಅವರೊಂದಿಗೆ ಹೆಚ್ಚು ಮಾತನಾಡಿಲ್ಲ. `ಯಾವುದೇ ವ್ಯಕ್ತಿ ಜೈಲಿಗೆ ಬಂದಾಗ ಕೊಂಚ ಅಘಾತಕ್ಕೆ ಒಳಗಾಗುತ್ತಾನೆ. ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ಕೆಲ ದಿನ ಬೇಕಾಗುತ್ತದೆ. ದರ್ಶನ್ ಸಹ ಇದಕ್ಕೆ ಹೊರತಲ್ಲ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅವರು ಇಲ್ಲಿಗೆ ಬಂದಿದ್ದಾರೆ. ಅವರ ಜತೆ ಹೆಚ್ಚು ಮಾತನಾಡುವ ಪ್ರಯತ್ನ ಮಾಡಿಲ್ಲ. ವೈಯಕ್ತಿಕ ವಿಷಯಗಳನ್ನು ಕೇಳುವುದು ಸರಿಯಲ್ಲ~ ಎಂದು ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಕಟ್ಟಾ ಜಗದೀಶ್ ಆಗಸ್ಟ್ ಎಂಟರಿಂದ ಜೈಲಿನಲ್ಲಿದ್ದಾರೆ. ಈಗ ಅವರು ಹೂಗಿಡಗಳನ್ನು ಬೆಳೆಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಚೆಂಡು ಹೂ ಮತ್ತು ಮಲ್ಲಿಗೆ ಹೂ ಗಿಡಗಳನ್ನು ಅವರು ಬೆಳೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸುಮಾರು ಹತ್ತು ಗಿಡಗಳನ್ನು ಅವರು ಪಡೆದಿದ್ದರು. ಎಲ್ಲ ಗಿಡಗಳನ್ನು ನೆಟ್ಟು, ಅವುಗಳ ಪೋಷಣೆ ಮಾಡುತ್ತಿದ್ದಾರೆ. ಗಿಡಗಳಿಗೆ ಅವರೇ ನಿತ್ಯ ನೀರೆರೆಯುತ್ತಾರೆ. ಉಳಿದಂತೆ ದಿನ ಪತ್ರಿಕೆ, ನಿಯತಕಾಲಿಕೆ ಓದಿ ಮತ್ತು ಟಿ.ವಿ. ನೋಡುತ್ತ ಕಾಲ ಕಳೆಯುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.