ತಾಳಗುಪ್ಪ ಜೋಗ ರಸ್ತೆಯಲ್ಲಿ ತಾಳಗುಪ್ಪ ಪೊಲೀಸ್ ಸ್ಟೇಷನ್ ಚೌಕದಿಂದ ಕೊಂಚ ದೂರ ಹೋದರೆ ಒಂದು ದೊಡ್ಡ ನೇರಳೇ ಹಣ್ಣಿನ ಮರವಿತ್ತು. ಈ ಮರದ ಕೆಳಗೆ ಕೆಲ ಕಲ್ಲಿನ ವಿಗ್ರಹಗಳು, ಒಂದು ಪ್ರಭಾವಳಿ ಇತ್ಯಾದಿ ಇತ್ತು (ಈಗ ಇದನ್ನು ಊರ ಗ್ರಾಮ ಪಂಚಾಯತಿ ಕಚೇರಿ ಮುಂದೆ ತಂದು ಇರಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ). ಈ ಮರದ ಕೆಳೆಗೇನೆ ಒಂದು ಮೋರಿ. ಇದು ನಾನು ಮತ್ತು ಅಜ್ಜಿ ಜೋಗಕ್ಕೆ ಹೋಗುವ ಲಾರಿಗಳಿಗಾಗಿ ಕಾಯುತ್ತಿದ್ದ ಜಾಗ.

ತಾಳಗುಪ್ಪ ರೈಲು ನಿಲ್ದಾಣದ ಬಳಿ ಸಿಮೆಂಟನ್ನೋ ಮತ್ತೊಂದನ್ನೋ ತುಂಬಿಕೊಂಡ ಲಾರಿಗಳು ಜನರನ್ನು ಹತ್ತಿಸಿಕೊಳ್ಳುತ್ತಿದ್ದುದು ಈ ಮೋರಿಯ ಬಳಿ. ನಾನು, ಅಜ್ಜಿ ರೈಲು ಇಳಿದವರು ತಾಳಗುಪ್ಪದ ನನ್ನ ಮತ್ತೊಬ್ಬ ಅಜ್ಜಿಯ ಮನೆಯಲ್ಲಿ ಊಟ ಮುಗಿಸಿ ಇಲ್ಲಿಗೆ ಬಂದರೆ ನಮಗೆ ಕೂಡಲೇ ಲಾರಿ ಸಿಗುತ್ತಿತ್ತು. ಕಾಸು ಖರ್ಚಿಲ್ಲದೇ ನಾವು ಜೋಗ ಸೇರುತ್ತಿದ್ದೆವು.

ಏಳು ಎಂಟು ವರ್ಷಕ್ಕೆ ನಾನು ಜೋಗ ನೋಡಿದ್ದೆ. ಮಹಾತ್ಮಗಾಂಧಿ ವಿದ್ಯುದಾಗಾರದ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಆಗ. ಸಾಗರದಲ್ಲಿ ಪ್ಲೇಗು ಕಾಲರಾ ಇರುತ್ತಿದ್ದುದರಿಂದ ಜೋಗಕ್ಕೆ ಮೂರು ಮೈಲಿ ದೂರದ ಕಾರ್ಗಲ್ ಅಣೆಕಟ್ಟಿನಲ್ಲಿ ಒಂದು ಸೈನೋಗ್ಯಾಸ್ ಸ್ಟೇಷನ್ ಇರಿಸಿದ್ದರು (ಈಗ ಅದು ಚೈನಾ ಗೇಟ್ ಆಗಿದೆ). ಈ ಸೈನೋ ಗ್ಯಾಸ್ ಸ್ಟೇಷನ್ನಲ್ಲಿ ಹಾಸಿಗೆ ಪೆಟ್ಟಿಗೆಗಳನ್ನು ಒಂದು ಕೋಣೆಯಲ್ಲಿ ಹಾಕಿ ಸೈನೋಗ್ಯಾಸ್ ಹೊಡೆಯುತ್ತಿದ್ದರು. ತರಕಾರಿಯನ್ನು ಪೊಟ್ಯಾಸಿಯಂ ಪರಮಾಂಗನೇಟ್ ನೀರಿನಲ್ಲಿ ಅದ್ದುತ್ತಿದ್ದರು. ಹೊಸಬರಿಗೆ ಇನಾಕ್ಯುಲೇಷನ್ ಚುಚ್ಚುತ್ತಿದ್ದರು. ಭಿಕ್ಷುಕರನ್ನು ಒಳಗೆ ಬಿಡುತ್ತಿರಲಿಲ್ಲ.

ಈ ಪರೀಕ್ಷೆ ದಾಟಿ ಒಳಹೋದರೆ ಜೋಗ ಎದುರಾಗುತ್ತಿತ್ತು. ಜೋಗ ಜಲಪಾತ ಇಂಥಲ್ಲಿ ಬೀಳುತ್ತಿದೆ ಎಂಬುದನ್ನು ಹಸಿರು ಗುಡ್ಡಗಳ ನಡುವೆ ಮೂಡಿ ಮೇಲೇರುತ್ತಿದ್ದ ಒಂದು ಬಿಳಿ ಮುಗಿಲು ಹೇಳುತ್ತಿತ್ತು. ಈ ಬಿಳಿ ಮುಗಿಲು ಕೆಲ ಬಾರಿ ವಿಸ್ತಾರಗೊಂಡು ಇಡೀ ಜೋಗವನ್ನು ತೆಳುವಾಗಿ ತುಂಬಿಕೊಳ್ಳುತ್ತಿತ್ತು. ಜೋಗದ ಕಣಿವೆಗಳಲ್ಲೆಲ್ಲ ಮಂಜು ಆವರಿಸಿಕೊಂಡು ಊರಿಗೆ ಬೇರೊಂದು ಸೊಬಗನ್ನು ತಂದುಕೊಡುತ್ತಿತ್ತು.

ಮಹಾತ್ಮಾಗಾಂಧಿ ವಿದ್ಯುದಾಗಾರವಿದ್ದ ಸ್ಥಳ ನಮಗೆಲ್ಲ `ಬಾಟಮ್' ಎಂದೇ ಪರಿಚಯವಾಗಿತ್ತು. ಟ್ರಾಲಿಯಲ್ಲಿ ಕುಳಿತೇ ಇಲ್ಲಿಗೆ ಇಳಿಯಬೇಕು. ಭಾರಿ ಯಂತ್ರಗಳನ್ನು ಸಾಗಿಸಲು ಬೇರೊಂದು ದಾರಿ. ಅಲ್ಲಿ ಡಗ್ಲಾಸ್ ಎಂಬ ಓರ್ವ ಮಿಲಿಟರಿ ಮನುಷ್ಯ ಯಂತ್ರಗಳನ್ನು ಸಾಗಿಸುವ ಸಾಹಸದ ಕೆಲಸ ಮಾಡುತ್ತಿದ್ದ. ಈತನ ಒಂದು ಕೈ ಮೊಂಡಾಗಿತ್ತು ಆದರೆ, ಆತ ಅಪ್ರತಿಮ ಕೆಲಸಗಾರ. ಪೈಪುಗಳನ್ನು ತಯಾರಿಸುವ ಒಂದು ಕಂಪನಿ ಹಗಲು ರಾತ್ರಿ ಕೆಲಸ ಮಾಡುತ್ತಿತ್ತು. ರಾತ್ರಿಯ ಹೊತ್ತು ಈ ಕಂಪನಿಯಿಂದ ಹೊರಬೀಳುತ್ತಿದ್ದ ವೆಲ್ಡಿಂಗ್ ಬೆಳಕು ಜೋಗವನ್ನು ಬೆಳಗುತ್ತಿತ್ತು. ಈ ಪೈಪುಗಳನ್ನು ಕೆಳಗೆ ಸಾಗಿಸಲು ಬೇರೆಯೇ ಒಂದು ಟ್ರಾಲಿ ಇತ್ತು.

ಒಂದು ಗುಡ್ಡದ ಮೇಲೆ ಆಸ್ಪತ್ರೆ (ಈಗ ಅದು ಕ್ಲಬ್ಬು!) ಮತ್ತೊಂದು ಗುಡ್ಡದ ಮೇಲೆ ಇಗರ್ಜಿ. ಮೂರನೇ ಗುಡ್ಡದ ಮೇಲೆ ಅಧಿಕಾರಿ ನೌಕರರ ಮನೆಗಳು. ನಾಲ್ಕನೆಯದರ ಮೇಲೆ ಲೇಬರ್ ಕ್ಯಾಂಪ್. ಹೀಗೆ ಜೋಗದಲ್ಲಿ ಬರೀ ಗುಡ್ಡಗಳು, ಕಣಿವೆ. ಅಲ್ಲಲ್ಲಿ ಜಲಪಾತಗಳು, ರಾಜಾಸೀಟು. ಮೈಸೂರಿನ ಮಹಾರಾಜರು ಅಲ್ಲಿ ಕಟ್ಟಿಸಿದ್ದ ಸಿದ್ದಲಿಂಗಶಾಸ್ತ್ರಿಗಳಿಂದ ಮಾಡಿಸಿದ ಚಾಮುಂಡೇಶ್ವರಿ ಪ್ರತಿಮೆ... ಹೀಗೆ, ಜೋಗ ವಿಶೇಷವಾಗಿತ್ತು.

ಜೋಗ ಜಲಪಾತ ಎಂದೂ ಬತ್ತುತ್ತಿರಲಿಲ್ಲ. ಇದನ್ನು ನೋಡಲು ಹಲವು ಪ್ಲಾಟ್ಫಾರಂಗಳು. ಲೇಡಿ ವಿಂಬಲ್ಡನ್ ಸೀಟು, ಕರ್ಜನ್ ಸೀಟು, ವಾಣಿವಿಲಾಸ ಪ್ಲಾಟ್ಫಾರಂ, ಲೇಡಿ ಸೀಟು, ರಾಜಾ ಸೀಟು ಇನ್ನೂ ಹಲವು ವೇದಿಕೆಗಳು. ಅಲ್ಲಿಂದೆಲ್ಲ ಬೇರೆ ಬೇರೆ ರೀತಿಯಲ್ಲಿಯೇ ಕಾಣುತ್ತಿತ್ತು ಜಲಪಾತ. ಮಳೆಗಾಲದಲ್ಲಂತೂ ರಭಸಕ್ಕೆ ಮೈಸೂರು ಬಂಗಲೆಯ ಬಾಗಿಲುಗಳು ಧಡ್ ಧಡನೆ ಬಡಿದುಕೊಳ್ಳುತ್ತಿದ್ದವು. ವಿಶೇಷ ಸಂದರ್ಭಗಳಲ್ಲಿ ಜಲಪಾತದಲ್ಲಿ ಅಗ್ನಿವೃಷ್ಟಿಯಾಗುತ್ತಿತ್ತು.

ಬಣ್ಣದ ಮತಾಪು, ನಕ್ಷತ್ರ ಕಡ್ಡಿ, ಗರ್ನಾಲುಗಳನ್ನು ಹಚ್ಚಿ ಜಲಪಾತಕ್ಕೆ ಬೇರೊಂದು ಶೋಭೆ ತಂದುಕೊಡುತ್ತಿದ್ದರು. ರಾಜಾ ಜಲಪಾತದ ನೆತ್ತಿಯ ಮೇಲಿಂದ ಹುಲ್ಲಿನ ಕಂತೆಗಳನ್ನು ಬೆಂಕಿ ಹಚ್ಚಿ ಬಿಡಲಾಗುತ್ತಿತ್ತು. ಗಾಡಿ ಗಾಡಿ ಸೌದೆ ಉರಿಸಿ ಬೆಂಕಿಯ ಕೆಂಡಗಳನ್ನು ಜಲಪಾತಕ್ಕೆ ತಳ್ಳುತ್ತಿದ್ದರು. ಈ ಕೆಂಡಗಳು ಹಗುರವಾಗಿ ಕೆಳಗಿಳಿಯುವ ದೃಶ್ಯ ಅದ್ಭುತವಾಗಿರುತ್ತಿತ್ತು.

ಈ ಜಲಪಾತ ನೋಡಲು 1905 ರಲ್ಲಿ ಲಾರ್ಡ್ ಕರ್ಜನ್ ಬಂದಿದ್ದರು. ನಂತರ ಮೈಸೂರು ಮಹಾರಾಜರು, ದಿವಾನರು ಬಂದರು. ವಿಶ್ವೇಶ್ವರಯ್ಯನವರು ಜಲಪಾತದ ಎದುರು ನಿಂತು ‘What a great loss to our country man’ಎಂದು ಉದ್ಘರಿಸಿದರು.

ಇಲ್ಲಿ ವಿದ್ಯುತ್ ಉತ್ಪಾದಿಸಲು ಕೆಲ ಬ್ರಿಟಿಷ್ ಕಂಪೆನಿಗಳು ಮುಂದೆ ಬಂದಾಗ ಕರ್ಜನ್ `ಅನುಮತಿ ಕೊಡಬೇಡಿ, ಕೊಟ್ಟರೆ ಜೋಗ ಜಲಪಾತ ನಾಶವಾಗುತ್ತೆ' ಎಂಬ ಎಚ್ಚರಿಕೆಯ ಮಾತನ್ನು ಹೇಳಿದ. 1956ರಲ್ಲಿ ವಿನೋಬಾ ಜೋಗಕ್ಕೆ ಬಂದರು. ಜಲಪಾತಗಳಿಗೆ ರಾಜಾ, ರೋರರ್, ರಾಕೆಟ್, ಲೇಡಿಯ ಬದಲು ರಾಮ, ಹನುಮ, ಲಕ್ಷ್ಮಣ, ಸೀತೆ ಎಂದು ಹೆಸರಿಟ್ಟರು.

ಆದರೆ, ಹಳೆಯ ಹೆಸರೇ ಉಳಿಯಿತು. ಇಂದಿರಾಗಾಂಧಿ, ನೆಹರೂ, ರಾಜೇಂದ್ರಪ್ರಸಾದ್ ಹೀಗೆ ಎಲ್ಲರೂ ಬಂದರು ಜೋಗಕ್ಕೆ. 1964ರಲ್ಲಿ ಶಾಸ್ತ್ರಿಗಳು ಬಂದರು. ಅಲ್ಲಿ ಲಿಂಗನಮಕ್ಕಿ ಎದ್ದು ನಿಂತಿತು. 300 ಇಂಚು ಬೀಳುತ್ತಿದ್ದ ಮಳೆ 75 ಇಂಚಿಗೆ ಇಳಿಯಿತು. ಜೋಗ ಜಲಪಾತ ನೆಲಪಾತವಾಯಿತು. ಬ್ರಿಟಿಷರು ಹೆಸರಿಟ್ಟು ಅಭಿವೃದ್ಧಿಪಡಿಸಿದ ಜಲಪಾತ ಅವರ ನಿರ್ಗಮನದ ನಂತರ ಬರಿದಾಯಿತು. ಈಗ ಜೋಗದಲ್ಲಿ ಎಲ್ಲ ಇದೆ, ಜಲಪಾತವೊಂದನ್ನು ಬಿಟ್ಟು.

1964ರಲ್ಲಿ ಇಲ್ಲಿಗೆ ಬಂದ ಚೆಸ್ಟರ್ ಬೌಲ್ಸ್ಗೆ ರುಮಾಲೆಯವರು ಒಂದು ಚಿತ್ರ ನೀಡಿದರು. ಸೂರ್ಯ ನಡು ನೆತ್ತಿಗೆ ಏರಿದಾಗ ಒಂದು ಕಾಮನಬಿಲ್ಲು ರಾಜನ ಪಾದದಿಂದ ರಾಣಿಯ ಪಾದದವರೆಗೆ ಕಮಾನಿನ ಆಕಾರದಲ್ಲಿ ಮೂಡುತ್ತದೆ. ಈ ಚಿತ್ರವನ್ನು ರುಮಾಲೆಯವರು ಜಲಪಾತದ ಕಣಿವೆಯಲ್ಲಿ ಕುಳಿತು ಬರೆದಿರುತ್ತಾರೆ. ಹೀಗೆ ಅಲ್ಲಲ್ಲಿ ಮೂಡುವ ಎಲ್ಲ ಕಾಮನಬಿಲ್ಲುಗಳನ್ನೂ ಅವರು ಸೆರೆ ಹಿಡಿದಿದ್ದರು. ಈ ಚಿತ್ರಗಳು ಈಗ ಎಲ್ಲಿವೆಯೋ ಗೊತ್ತಿಲ್ಲ. ಜೋಗ ಜಲಪಾತ ಕೂಡ ಎಲ್ಲಿದೆ ಎಂಬುದನ್ನು ಈಗ ಹುಡುಕಬೇಕು.

ಜೋಗದ ಹೊರ ಪಾರ್ಶ್ವದಲ್ಲಿ ಈಶ್ವರ ಗುಡಿಯ ಮಗ್ಗುಲಲ್ಲಿ ಒಂದು ಹಳ್ಳ. ಅಲ್ಲೊಂದು ನೇರಳೇ ಹಣ್ಣಿನ ಮರ. ಈ ನೇರಳೇ ಹಣ್ಣು ಆರಿಸಲು ಒಮ್ಮೆ ಸ್ನೇಹಿತರ ಜೊತೆ ಹೋದ ನಾನು ಹುಲಿ ನೋಡಿ ಓಡಿ ಬಂದಿದ್ದೆ. ಪೈಪು ಕಂಪನಿ ಎದುರು ನಿಲ್ಲಿಸಿದ ಟ್ರಾಲಿಯ ಹಗ್ಗಬಿಚ್ಚಿ ಟ್ರಾಲಿ ಹೋಗಿ ಬಾಟಮಿಗೆ ಬೀಳಲು ಕೂಡ ನಾವು ಸ್ನೇಹಿತರು ಕಾರಣವಾಗಿದ್ದೆವು.

ಮೊದಲು ಅಜ್ಜಿಯ ಜೊತೆ ಜೋಗಕ್ಕೆ ಹೋದ ನಾನು ಅಣ್ಣನಿಗೆ ಅಲ್ಲಿ ಕೆಲಸ ಸಿಕ್ಕಿದ್ದರಿಂದ ಮೂರು ವರ್ಷ ಅಲ್ಲಿದ್ದೆ. ಮತ್ತೆ 1959ರಿಂದ ನನಗೆ ಕಾರ್ಗಲ್ಲಿನಲ್ಲಿ ಕೆಲಸ ದೊರಕಿದ್ದರಿಂದ ನಾನು ಮತ್ತೆ ಜೋಗದವನಾದೆ. ಹೀಗಾಗಿ ಜೋಗದ ಬಗ್ಗೆ ಪತ್ರಿಕೆಗಳಿಗೆ ಅಸಂಖ್ಯಾತ ಲೇಖನಗಳನ್ನು ಬರೆದೆ. ಹಲವು ಕತೆಗಳಿಗೆ, ಒಂದು ಕಾದಂಬರಿಗೆ (ಜಲಪಾತದ ಸುತ್ತ) ಈ ಜಲಪಾತ ಸ್ಫೂರ್ತಿ ನೀಡಿತು.

ನನ್ನ ಕಾದಂಬರಿ `ಕಾಡಿನ ಬೆಂಕಿ' ಚಲನಚಿತ್ರವಾಗುವ ಸಂದರ್ಭದಲ್ಲಿ ನಾನು ಸುರೇಶ ಹೆಬ್ಳೀಕರ್ ಅವರಿಗೆ ಜೋಗದ ಕೆಲ ಲೊಕೇಷನ್ ತೋರಿಸಿದ್ದರಿಂದ ಈ ಚಿತ್ರದಲ್ಲಿ ಜೋಗದ ಕೆಲ ದೃಶ್ಯಗಳು ಸೇರ್ಪಡೆಯಾದವು. ಆಗಲೇ ಈ ಚಿತ್ರದಲ್ಲಿ ಪಾತ್ರ ವಹಿಸಿದ ಎಂ.ಪಿ. ಪ್ರಕಾಶ್ ಅವರ ಮುಂದೆ ಜೋಗದಲ್ಲಿ ಏನೆಲ್ಲ ಮಾಡಬಹುದು ಎಂಬ ಬಗ್ಗೆ ಪತ್ರಿಕೆಯ ಮೂಲಕ ಒಂದು ಪ್ರಸ್ತಾವನೆ ಕೂಡ ಇರಿಸಿದೆ. ಆದರೂ ಈವರೆಗೆ ಜೋಗದಲ್ಲಿ ಏನೂ ಆಗಲಿಲ್ಲ (ವಾಹನಗಳಿಂದ ಹಣ ವಸೂಲಿ ಮಾಡುವುದು ಬಿಟ್ಟು!).

ಆದರೆ, ಈಗ ಕಾಗೋಡು ತಿಮ್ಮಪ್ಪನವರು ಜೋಗ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿದ್ದಾರೆ. ಈಗಲೂ ಏನಾದರೂ ಆದೀತು ಎಂಬ ಬಗ್ಗೆ ನನಗೆ ಅನುಮಾನವಿದೆ. ಏಕೆಂದರೆ ಇಂದಿನ ಯಾವ ಅಧಿಕಾರಿಗಳಿಗೂ ಮುಂದಾಲೋಚನೆ, ಕಲ್ಪನೆ, ಮಹತ್ವಾಕಾಂಕ್ಷೆ ಇರುವುದಿಲ್ಲ. ಆದರೂ ಕಾದು ನೋಡೋಣ. ಐವತ್ತು ವರ್ಷಗಳ ಹಿಂದಿನ ಜಲಪಾತ ಮತ್ತೆ ಕಾಣಬಹುದು.

ಹೀಗೆ ಜೋಗ ಎಂದಾಕ್ಷಣ ಹಲವು ಘಟನೆಗಳು ನೆನಪಿಗೆ ಬರುತ್ತವೆ. ಕೆಲವನ್ನು ನಾನು ನನ್ನ ಮಕ್ಕಳ ಕೃತಿ `ಬೆಳಕಿನೊಡನೆ ಬಂತು ನೆನಪು' (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ) ಕೃತಿಯಲ್ಲಿ ಹೇಳಿದ್ದೇನೆ.

ಒಂದು ಘಟನೆ ಹೇಳಬಹುದು.ಜೋಗದಲ್ಲಿ ಈಗ ಬಸ್ ನಿಲ್ದಾಣ ಇರುವಲ್ಲಿ ಹಿಂದೆ ಒಂದು ಗ್ಯಾರೇಜ್ ಇತ್ತು. ಲಾರಿಗಳು ನಿಲ್ಲುತ್ತಿದ್ದ ಉದ್ದವಾದ ತಗಡಿನ ಶೆಡ್ಡು. ಅದರಲ್ಲಿ ಜೋಗದ ಹವ್ಯಾಸಿ ಕಲಾವಿದರು ನಾಟಕವಾಡುತ್ತಿದ್ದರು. ಒಂದು ನಾಟಕ `ಹರಿಶ್ಚಂದ್ರ'. ನಾಟಕ ನಡೆಯುತ್ತಿರುವಾಗ ನನಗೆ ಹೊರಗೆ ಹೋಗಬೇಕೆನಿಸಿತು. ಎದ್ದು ಹೊರಟೆ. ನನ್ನ ಗಮನ ರಂಗದ ಮೇಲೆ. ಕೆಳಗೆ ಅಡ್ಡಲಾಗಿ ಕಟ್ಟಿದ ಹಗ್ಗವನ್ನು ನಾನು ನೋಡಲಿಲ್ಲ. ಹಗ್ಗ ಕಾಲಿಗೆ ತೊಡರಿ ನಾನು ಬಿದ್ದೆ. ಮುಖ ನೆಲಕ್ಕೆ ಅಪ್ಪಳಿಸಿತು. ಎರಡೂ ತುಟಿಗಳು ಒಡೆದುಕೊಂಡವು. ಹದಿನೈದು ದಿನ ಬಾಳೆಕಾಯಿ ಗಾತ್ರಕ್ಕೆ ಊದಿಕೊಂಡ ತುಟಿಗಳನ್ನು ಹೊತ್ತುಕೊಂಡು ತಿರುಗಾಡಿದೆ. ಅಷ್ಟೂ ದಿನ ನನ್ನ ಓರಗೆಯವರು ನನ್ನನ್ನು ಹನುಮಂತ ಎಂದೇ ಕರೆದರು. ಈಗ ಅತ್ತ ಹೋದಾಗಲೆಲ್ಲ ಈ ಘಟನೆ ನೆನಪಿಗೆ ಬರುತ್ತದೆ. ನೆನಪು ಕಹಿ ಅಲ್ಲ, ಸಿಹಿ ಸಿಹಿ.

ಬೆಂಗಳೂರಿನ `ಹೇಮಂತ ಸಾಹಿತ್ಯ' ಪ್ರಕಟಿಸಿರುವ `ಬುತ್ತಿ' - ಡಾ. ನಾ. ಡಿಸೋಜಾರ ಬದುಕಿನ ಒಳನೋಟಗಳು ಕೃತಿಯಿಂದ ಆಯ್ದ ಬರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.