ಸೋಮವಾರ, ಜನವರಿ 20, 2020
29 °C

ಟರ್ಫ್ ಇದೆ; ಆದರೆ ಆಟವಿಲ್ಲ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಟರ್ಫ್ ಇದೆ; ಆದರೆ ಆಟವಿಲ್ಲ

ಮೈಸೂರು ವಿಶ್ವವಿದ್ಯಾಲಯದ ವನಿತೆಯರು ಇತ್ತೀಚೆಗೆ ಮಡಿಕೇರಿಯಲ್ಲಿ ದಕ್ಷಿಣ ಭಾರತ ಅಂತರ ವಿವಿ ಹಾಕಿ ಟೂರ್ನಿಯ ಪ್ರಶಸ್ತಿ ಗೆದ್ದು ಬಂದಿದ್ದಾರೆ. ಆದರೆ ಅವರ ಮುಖದ ಮೇಲೆ ಸಂತಸಕ್ಕಿಂತ ದುಗುಡವೇ ಹೆಚ್ಚಾಗಿ ಕಾಣುತ್ತಿದೆ!ಕುರುಕ್ಷೇತ್ರದಲ್ಲಿ ಮುಂದಿನ ತಿಂಗಳು ನಡೆಯಲಿರುವ ಅಖಿಲ ಭಾರತ ಅಂತರ ವಿವಿ ಟೂರ್ನಿಯಲ್ಲಿ ಭಾಗವಹಿಸುವ ಅವಕಾಶವೇ ಅವರಿಗೆ ಆತಂಕ ಒಡ್ಡಿರುವುದು. ಅಲ್ಲಿ ಬಲಾಢ್ಯ ತಂಡಗಳ ವಿರುದ್ಧ ಆಸ್ಟ್ರೋ ಟರ್ಫ್ ಅಂಕಣದಲ್ಲಿ ಆಡಬೇಕಾಗಿದೆ. ಚಾಮುಂಡಿ ವಿಹಾರದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಉದ್ಘಾಟನೆಗೊಂಡಿರುವ ಆಸ್ಟ್ರೋಟರ್ಫ್ ಅಂಕಣ ಲೆಕ್ಕಕ್ಕೆ ಇದೆ. ಆದರೆ ಆಟಕ್ಕಿಲ್ಲ ಎನ್ನುವಂತಾಗಿದೆ.ಸುಮಾರು 2.85 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಟರ್ಫ್ ಈಗ ನೀರಿಲ್ಲದೇ ಒಣಗಿ ನಿಂತಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಅನುದಾನ ನೀಡಿತ್ತು. ಆದರೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (ಡಿವೈಎಸ್‌ಎಸ್‌) ಈ ಅಂತರರಾಷ್ಟ್ರೀಯ ಹಾಕಿ ಅಂಕಣಕ್ಕೆ ವಿದ್ಯುತ್ ಸಂಪರ್ಕ ಪಡೆಯುವಲ್ಲಿ ಮಾಡುತ್ತಿರುವ ವಿಳಂಬವೇ ಈ ಪರಿಸ್ಥಿತಿಗೆ ಕಾರಣ. ದಸರೆ ಮುಗಿದು ಈಗ ಎರಡು ತಿಂಗಳು ಕಳೆಯಿತು. ಆದರೆ ವಿದ್ಯುತ್ ಸಂಪರ್ಕ ಒದಗಿಸುವ ಕಾರ್ಯ ಮಾತ್ರ ಕೈಗೂಡಿಲ್ಲ. ಇದರಿಂದಾಗಿ ಪ್ರತಿದಿನವೂ ಒಂದು ಬಾರಿಯಾದರೂ ನೀರು ಹೀರಬೇಕಾದ ಆಸ್ಟ್ರೋಟರ್ಫ್‌ನ ಸಿಂಥೆಟಿಕ್ ಗರಿಕೆಗಳು ಬಾಯಾರಿ ಬಿರುಸಾಗಿ ನಿಂತಿವೆ. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಟರ್ಫ್ ಸಂಪೂರ್ಣವಾಗಿ ಹಾಳಾಗುವ ಆತಂಕವನ್ನು  ಹಾಕಿ ಆಟಗಾರರು ವ್ಯಕ್ತಪಡಿಸುತ್ತಾರೆ.ನೀರು ಹಾಕದೇ ಈ ಟರ್ಫ್ ಮೇಲೆ ಆಡಲು ಸಾಧ್ಯವಿಲ್ಲ. ಇದರಿಂದಾಗಿ ಇಲ್ಲಿಯ ಕ್ರೀಡಾ ವಸತಿ ನಿಲಯದ ಮಹಿಳಾ ಹಾಕಿ ತಂಡಕ್ಕೆ ಈ ಅಂಕಣದಲ್ಲಿ ಆಡಲಾಗುತ್ತಿಲ್ಲ. ಡಿವೈಎಸ್‌ಎಸ್‌ ಆಟಗಾರ್ತಿಯರು ವಿವಿಯನ್ನು ಪ್ರತಿನಿಧಿಸುತ್ತಿದ್ದಾರೆ. ರಾಷ್ಟ್ರ ತಂಡದ ಶಿಬಿರದಲ್ಲಿ ಭಾಗವಹಿಸಿ ಬಂದಿರುವ ಮುತ್ತಮ್ಮ ಕೂಡ ತಂಡದಲ್ಲಿದ್ದಾರೆ. ವಿವಿಯ ಮಣ್ಣಿನ ಅಂಗಳದಲ್ಲಿಯೇ ಅಭ್ಯಾಸ ಮಾಡಿ, ಮಡಿಕೇರಿಯ ಟರ್ಫ್ ಅಂಗಳದಲ್ಲಿ ಪ್ರಶಸ್ತಿ ಗೆದ್ದು ಬಂದಿದ್ದಾರೆ. ಆದರೆ ಅಂತರರಾಷ್ಟ್ರೀಯ ಆಟಗಾರ್ತಿಯರು ಪ್ರತಿನಿಧಿಸುವ ಕೆಲವು ವಿವಿಗಳ ತಂಡಗಳನ್ನು ಕುರುಕ್ಷೇತ್ರದಲ್ಲಿ ಎದುರಿಸಲು ಟರ್ಫ್ ತರಬೇತಿಯ ಅಗತ್ಯವಿದೆ ಎಂದು ತಂಡದ ಆಟಗಾರ್ತಿಯರು ಹೇಳುತ್ತಾರೆ.ದಸರಾ ಕ್ರೀಡಾಕೂಟ ಆರಂಭವಾಗುವ ದಿನ (ಅ. 5) ಉದ್ಘಾಟನೆಗಾಗಿ ಬಹಳ ವೇಗದಿಂದ ನಡೆದ ಕಾಮಗಾರಿಯಲ್ಲಿ ಟರ್ಫ್ ಅಳವಡಿಕೆಯ ಕಾರ್ಯವೆನೋ ಮುಗಿಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ  ಅಂಕಣ ಉದ್ಘಾಟಿಸಿದರು. ಪ್ರತಿದಿನವೂ ಸುಮಾರು 2 ಸಾವಿರ ರೂಪಾಯಿ ಬಾಡಿಗೆ ಸಂದಾಯ ಮಾಡಿ ಜನರೇಟರ್ ಮೂಲಕ ತಾತ್ಕಾಲಿಕ ವಿದ್ಯುತ್ ವ್ಯವಸ್ಥೆ ಮಾಡಿ ಅಕ್ಟೋಬರ್ 12ರವರೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ 15 ಪಂದ್ಯಗಳನ್ನು ಆಯೋಜಿಸಲಾಗಿತ್ತು. ಆದರೆ ಪ್ರತಿದಿನ ಬಾಡಿಗೆ ತೆರುವ ಪರಿಸ್ಥಿತಿಯಲ್ಲಿ ಇಲಾಖೆ ಇಲ್ಲ!ಮೂಲತಃ ಡಿವೈಎಸ್‌ಎಸ್‌ ವಸತಿ ನಿಲಯದ ಹಾಕಿ ತಂಡದ ಅಭ್ಯಾಸಕ್ಕಾಗಿ ಈ ಅಂಕಣ ನಿರ್ಮಾಣವಾದರೂ, ಭವಿಷ್ಯದಲ್ಲಿ ಇಲ್ಲಿಗೆ ದೊಡ್ಡ ದರ್ಜೆಯ ಟೂರ್ನಿಗಳೂ ಸಿಗುವ ನಿರೀಕ್ಷೆಯೂ ಇದೆ.  ಇದರಿಂದ ಸ್ಥಳೀಯ ಹಾಕಿ ಕ್ರೀಡೆಯ ಬೆಳವಣಿಗೆಗೆ ಅನುಕೂಲವಾಗುತ್ತದೆ. ಆದರೆ ಈ ಅಂಕಣ ಮಾಡಬೇಕು ಎಂಬ ಬೇಡಿಕೆ ಕೇಳಿಬಂದಾಗಿನಿಂದಲೂ ಒಂದಿಲ್ಲೊಂದು ವಿಘ್ನಗಳು ಕಾಡಿವೆ.‘ನಮ್ಮ ಆಟಗಾರ್ತಿಯರಲ್ಲಿ ಪ್ರತಿಭೆ ಇದೆ. ಆದರೆ ಅವರ ಪ್ರದರ್ಶನದ ಗುಣಮಟ್ಟವನ್ನು ಇನ್ನಷ್ಟು ಉತ್ಕೃಷ್ಠಗೊಳಿಸಲು ಟರ್ಫ್ ವ್ಯವಸ್ಥೆ ಅವಶ್ಯಕ. ಮುಂಬರುವ ದಿನಗಳಲ್ಲಿ ರಾಜ್ಯ ಲೀಗ್ ಟೂರ್ನಿ, ಪಿಯು ರಾಜ್ಯ ಚಾಂಪಿಯನ್‌ಷಿಪ್ ಮತ್ತು ಅಂತರ ವಿವಿ ಹಾಕಿ ಟೂರ್ನಿಗಳಿಗೆ ತಂಡಗಳು ಸಿದ್ಧವಾಗಬೇಕು. ಈ ಎಲ್ಲ ಟೂರ್ನಿಗಳೂ ಟರ್ಫ್‌ನಲ್ಲಿ ನಡೆಯುತ್ತವೆ. ಅಖಿಲ ಭಾರತ ಮಟ್ಟದಲ್ಲಿ ಪದಕ ಸಾಧನೆ ಮಾಡಿದರೆ, ಉದ್ಯೋಗಾವಕಾಶಗಳಿಗೆ ಅನುಕೂಲವಾಗುತ್ತದೆ. ಆಗ ತಮಗೆ ಉದ್ಯೋಗ ನೀಡಿದ ಸಂಸ್ಥೆಗಳ ತಂಡದಲ್ಲಿ ಆಡುವ ಅವಕಾಶವೂ ದೊರೆಯುತ್ತದೆ. ಆದಷ್ಟು ಶೀಘ್ರ ಇಲ್ಲಿರುವ ಟರ್ಫ್ ಅಂಕಣ ಅಭ್ಯಾಸಕ್ಕೆ ಸಿಗಬೇಕು’ ಎಂದು ಡಿವೈಎಸ್‌ಎಸ್ ಹಾಕಿ ತರಬೇತುದಾರ ವಿಜಯಕೃಷ್ಣ ಹೇಳುತ್ತಾರೆ.ಆಟಗಾರ್ತಿಯರೇ ಇದೀಗ ಒಂದು ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದು, ಪೈಪ್ ಮೂಲಕ ಮೈದಾನದ ಡಿ ವಲಯಕ್ಕೆ ನೀರುಣಿಸಿ ಅದರಲ್ಲಿಯೇ ಅಭ್ಯಾಸ ಮಾಡುತ್ತಿದ್ದಾರೆ.ಮುಡಾ ಸ್ಪಂದನೆ: ಇದರಿಂದಾಗಿ ತಂಡದ ಆಟಗಾರ್ತಿಯರು ಮುಡಾ ಆಯುಕ್ತರನ್ನು ಭೇಟಿಯಾಗಿ ತಮ್ಮ ಅಹವಾಲು ನೀಡಿದ್ದಾರೆ. ಇದಕ್ಕೆ  ಸ್ಪಂದಿಸಿದ ಆಯುಕ್ತರು ಕೂಡಲೇ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್‌) ವ್ಯವಸ್ಥಾಪಕ ನಿರ್ದೇಶಕರನ್ನು ಸಂಪರ್ಕಿಸಿ, ಸಂಪರ್ಕ ನೀಡಲು ಮಾಡಿದ ಮನವಿ ಫಲ ನೀಡಿದೆ.‘ಡಿವೈಎಸ್‌ಎಸ್‌ ಸುಪರ್ದಿಯಲ್ಲಿರುವ ಕೊಳವೆಬಾವಿಗೆ ವಿದ್ಯುತ್ ಸಂಪರ್ಕಕ್ಕೆ  ಸುಮಾರು ಒಂದು ಲಕ್ಷ ರೂಪಾಯಿ ಠೇವಣಿಯನ್ನು ಸೆಸ್ಕ್‌ಗೆ ಕಟ್ಟಬೇಕು.  ಸಂಪರ್ಕ ವಿಳಂಬದಲ್ಲಿ ಮುಡಾ ಪಾತ್ರವೇನೂ ಇಲ್ಲ. ಕ್ರೀಡೆಯ ಅಭಿವೃದ್ಧಿಗಾಗಿ ಮುಡಾ ಅನುದಾನ ನೀಡಿದೆ. ಕಾಮಗಾರಿಯೂ ಸಂಪೂರ್ಣವಾಗಿದೆ. ಅವರ ಅಧಿಕಾರಿಗಳು ಮಾಡಬೇಕಾಗಿರುವ ವಿದ್ಯುತ್ ಸಂಪರ್ಕದ ಕೆಲಸದ ಬಗ್ಗೆ ನನ್ನ ಗಮನಕ್ಕೆ ಬಂದ ಕೂಡಲೇ ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಸಿ.ಎಂ. ಇಬ್ರಾಹಿಂ ಅವರಿಗೆ ವಿಷಯ ತಿಳಿಸಿದೆ. ಅವರು ಕೂಡಲೆ ಪ್ರತಿಕ್ರಿಯಿಸಿದ್ದು, ಠೇವಣಿ ಕಟ್ಟಿದ ತಕ್ಷಣ 50 ಎಚ್‌ಪಿ ಮೋಟಾರ್‌ಗೆ ಸಂಪರ್ಕ ನೀಡಲಾಗುವುದೆಂದು ತಿಳಿಸಿದ್ದಾರೆ’ ಎಂದು ಮುಡಾ ಆಯುಕ್ತ ಪಾಲಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.ಟರ್ಫ್ ಕಾಮಗಾರಿ ಸಂದರ್ಭದಲ್ಲಿ ಕಾಂಕ್ರಿಟ್ ನೆಲಹಾಸು ಸಿದ್ಧವಾಗಿ, ಟರ್ಫ್ ಸಾಮಗ್ರಿಯು ಬೆಂಗಳೂರಿನ ಸುಂಕ ಇಲಾಖೆಯಲ್ಲಿ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಉಳಿದದ್ದು ಕಾಮಗಾರಿಯ ವಿಳಂಬಕ್ಕೆ ಕಾರಣವಾಗಿತ್ತು. ಆಗ ಕ್ರೀಡಾ ಇಲಾಖೆಯು ಸುಂಕದ ವಿನಾಯಿತಿಗಾಗಿ ಪತ್ರ ಕೊಡುವುದನ್ನು ವಿಳಂಬ ಮಾಡಿದಾಗ ಇಲ್ಲಿಯ ಹಾಕಿಪ್ರೇಮಿಗಳು ಮತ್ತು ಸಂಘಟನೆಗಳು ಆಕ್ರೋಶವ್ಯಕ್ತಪಡಿಸಿದ್ದವು. ನಂತರ ಎಚ್ಚೆತ್ತ ಇಲಾಖೆಯು ಟರ್ಫ್ ಸಾಮಗ್ರಿ ತರಿಸಿತ್ತು. ಇಷ್ಟೆಲ್ಲ ಆದ ಮೇಲೂ ವಿದ್ಯುತ್ ಸಂಪರ್ಕದ ಬಗ್ಗೆ ಚುರುಕಿನ ಕ್ರಮ ಕೈಗೊಳ್ಳದೇ ಆಟಗಾರರು ಅವಕಾಶ ವಂಚಿತರಾಗಿದ್ದಾರೆ.

ಪ್ರತಿಕ್ರಿಯಿಸಿ (+)