ಭಾನುವಾರ, ಜೂನ್ 13, 2021
20 °C

ಟಾಟಾ ಉಕ್ಕು ಕಾರ್ಖಾನೆ ಭೂಸ್ವಾಧೀನಕ್ಕೆ ವಿರೋಧ: ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಟಾಟಾ ಮೆಟಾಲಿಕ್ ಉಕ್ಕು ಕಾರ್ಖಾನೆ ಸ್ಥಾಪಿಸಲು 2,500 ಎಕರೆ ಭೂಮಿ ವಶಪಡಿಸಿಕೊಳ್ಳುತ್ತಿರುವ ಪ್ರಕ್ರಿಯೆ ಕೈಬಿಡಬೇಕೆಂದು ಒತ್ತಾಯಿಸಿ ತಾಲ್ಲೂಕಿನ ಅಗಡಿ ಹಾಗೂ ಬೂದಗಟ್ಟಿ ಗ್ರಾಮಸ್ಥರು ಗುರುವಾರ ಚಕ್ಕಡಿಗಳ ಮೆರವಣಿಗೆ, ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.ಅಗಡಿ ಗ್ರಾಮದಿಂದ ಸುಮಾರು 35ಕ್ಕೂ ಚಕ್ಕಡಿಗಳೊಂದಿಗೆ ಹಾವೇರಿ ನಗರದವರೆಗೆ ಮೆರವಣಿಗೆ ನಡೆಸಿದ ರೈತರು, ನಗರದ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಚಕ್ಕಡಿ, ಎತ್ತುಗಳನ್ನು ನಿಲ್ಲಿಸಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆತಡೆ ನಡೆಸಿದರು. ಭೂಮಿ ಕಸಿದುಕೊಳ್ಳುತ್ತಿರುವ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ನಂತರ ರಸ್ತೆ ಮಧ್ಯದಲ್ಲಿಯೇ ಕುಳಿತು ತಾವು ತಂದ ಬುತ್ತಿಯನ್ನು ಬಿಚ್ಚಿ ಊಟ ಮಾಡುವ ಮೂಲಕ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಕೈಬಿಡದಿದ್ದರೆ, ಎಂತಹದೇ ಹೋರಾಟಕ್ಕೂ ಸಜ್ಜು ಎಂಬುದನ್ನು ಸೂಚ್ಯವಾಗಿ ತಿಳಿಸಿಕೊಟ್ಟರು.`ತಲೆತಲಾಂತರಗಳಿಂದ ಅಗಡಿ ಹಾಗೂ ಬೂದಗಟ್ಟಿಯ ನೂರಾರು ರೈತ ಕುಟುಂಬಗಳು ಕೃಷಿಯನ್ನೇ ನಂಬಿಕೊಂಡಿವೆ. ಈ ಭಾಗದ ರೈತರು ಪಿತ್ರಾರ್ಜಿತ ಆಸ್ತಿ ಹೊಂದಿರುವುದರಿಂದ ಅದರ ಮೇಲೆ ಆ ಎಲ್ಲ ಕುಟುಂಬಗಳು ಭಾವನಾತ್ಮಕ ಸಂಬಂಧ  ಹೊಂದಿವೆ. ಅಷ್ಟೇ ಅಲ್ಲದೇ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಫಲವತ್ತೆಯನ್ನು ಹೊಂದಿದ ಜಮೀನು ಈ ಭಾಗದ್ದಾಗಿದೆ. ಇಂತಹ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ನಾವು ಸಿದ್ಧರಿಲ್ಲ~ ಎಂದು  ಮಾಜಿ ಸಚಿವ ಬಸವರಾಜ ಶಿವಣ್ಣನವರ ಸ್ಪಷ್ಟಪಡಿಸಿದರು.ಜಮೀನಿನಲ್ಲಿ ದುಡಿಯಲಾರದ ಕೆಲವೇ ಕೆಲವು ಜನರು ಭೂಮಿ ನೀಡಲು ಮುಂದೆ ಬಂದಿದ್ದಾರೆಯೇ ಹೊರತು, ದುಡಿಯುವ ರೈತರಲ್ಲ. ಇವರಿಗೆ ಕೃಷಿ ಬಿಟ್ಟು ಬೇರೆ ಕೆಲಸ ಮಾಡಲು ಬರುವುದಿಲ್ಲ. ಟಾಟಾ ಮೆಟಾಲಿಕ್ ಕಂಪೆನಿ ಬರುವುದರಿಂದ ಜಿಲ್ಲೆಯಲ್ಲಿ 10,000 ಜನರಿಗೆ ಉದ್ಯೋಗ ಅವಕಾಶ ಸಿಗಲಿದೆ ಎಂದು ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಕೃಷಿಯಲ್ಲಿ ತೊಡಗಿರುವ 35,000ಕ್ಕೂ ಹೆಚ್ಚು ಜನರು ನಿರುದ್ಯೋಗಿಗಳಾಗುತ್ತಾರೆ ಎಂಬುದರ ಬಗ್ಗೆ ಚಿಂತೆ ಮಾಡುತ್ತಿಲ್ಲ ಎಂದರು.ಜಿ.ಪಂ. ಮಾಜಿ ಅಧ್ಯಕ್ಷ ಹಾಗೂ ಅಗಡಿಯ ಪ್ರಗತಿಪರ ರೈತ ಕೊಟ್ರೇಶ ಬಸೇಗಣ್ಣಿ, ನಿಜಲಿಂಗಪ್ಪ ಬಸೇಗಣ್ಣಿ, ಎಸ್‌ಎಫ್‌ಐ ರಾಜ್ಯ ಘಟಕದ ಉಪಾಧ್ಯಕ್ಷ ನಾರಾಯಣ ಕಾಳೆ, ಯಲ್ಲಪ್ಪ ಮಣ್ಣೂರ ಸೇರಿದಂತೆ 200ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.