ಕೋಲಾರ: ಕಂಪ್ಯೂಟರ್ ಮತ್ತು ಡಿಟಿಪಿ ಕೇಂದ್ರಗಳು ಬಂದ ಮೇಲೆ ನಮ್ಮ ದುಡಿಮೆ ಅಷ್ಟಕ್ಕಷ್ಟೇ. ಆದರೆ ಅದನ್ನೇ ಆಧರಿಸಿದ್ದೇವೆ. ಬಿಸಿಲು, ಮಳೆ, ಗಾಳಿ ಎನ್ನದೇ ಬಯಲಿನಲ್ಲೇ ಕುಳಿತು ದಿನದ ದುಡಿಮೆ ಮಾಡುತ್ತಿದ್ದೇವೆ. ದಿಢೀರನೆ ಮಳೆ ಬಂತೆಂದರೆ ಟೈಪ್ ರೈಟರ್, ಟೇಬಲ್ ಎತ್ತಿಕೊಂಡು ಎಲ್ಲಿಗಾದರೂ ಓಡಬೇಕು. ಈ ಸನ್ನಿವೇಶದಲ್ಲಿ ಬದಲಾವಣೆಯೇ ಇಲ್ಲ...

--ನಗರದ ತಹಶೀಲ್ದಾರ್ ಕಚೇರಿ ಹೊರಗೆ ದೊಡ್ಡ ಮರದ ಕೆಳಗೆ ಹಾಕಿದ ಟೇಬಲ್ ಮೇಲಿಟ್ಟ ಟೈಪ್ ರೈಟರ್ ಮುಂದೆ ಹಳ್ಳಿಗರೊಬ್ಬರ ಅರ್ಜಿಯನ್ನು ಟೈಪಿಸುತ್ತಾ, ನಗರದ ಗಲ್ಪೇಟೆ ನಿವಾಸಿ ಎಂ.ರಘುಪತಿ ನಿರ್ಲಿಪ್ತರಾಗಿ ನುಡಿದ ಮಾತಿದು.

ಬಿ.ಎಸ್ಸಿ ಪದವೀಧರರಾದ, 42 ವಯಸ್ಸಿನ ರಘುಪತಿಯವರ ಆಸುಪಾಸಿನಲ್ಲೇ ಇನ್ನೂ ಮೂವರು ಟೈಪ್ ರೈಟರ್ಗಳನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದಾರೆ. ತಾಲ್ಲೂಕು ಕಚೇರಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಟೈಪ್ ರೈಟರ್ ವ್ಯವಸ್ಥೆಯೂ ಅಸ್ತಿತ್ವದಲ್ಲಿದೆ. ಆಧುನಿಕ ತಂತ್ರಜ್ಞಾನದಲ್ಲಿ ಏರಿಳಿತ ಕಂಡಂತೆ ಇವರ ಬದುಕಿನಲ್ಲೂ ಏರಿಳಿತಗಳು ಕಾಣಿಸುತ್ತವೆ.

ಹಳ್ಳಿಗಳಿಂದ ಬರುವ ಜನರಲ್ಲಿ ಬಹುತೇಕರು ಕಚೇರಿ ಒಳಕ್ಕೆ ಹೋಗುವ ಮೊದಲು ಇವರ ಬಳಿ ಬಂದು ನಿಲ್ಲುತ್ತಾರೆ. ಜನನ ಮರಣ ಪ್ರಮಾಣ ಪತ್ರ, ಜಮೀನಿಗೆ ಸಂಬಂಧಿಸಿದ ದುರಸ್ತಿ, ಸರ್ವೇ ದಾಖಲೆಗಳು, ಟಿಪ್ಪಣಿ, ಜಮೀನಿನ ಎಡ ಬಲ ನಕಲು, ಜಾತಿ, ಆದಾಯ ಪ್ರಮಾಣಪತ್ರ, ಜೀವಂತ ಸದಸ್ಯರ ದೃಢೀಕರಣ ಪತ್ರ, ಪ್ರಮಾಣಪತ್ರಗಳು, ಖಾತೆ, ಹೆಸರುಗಳಲ್ಲಿ ವ್ಯತ್ಯಾಸ ಸರಿಪಡಿಸುವಿಕೆ... ಹೀಗೆ ಹತ್ತು ಹಲವು ಪ್ರಮಾಣಪತ್ರಗಳನ್ನು ಪಡೆಯಲು ಟೈಪ್ ರೈಟರ್ ಮಂದಿ ಇಲ್ಲದೇ ಹೋದರೆ ಹೆಚ್ಚು ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ.

ನೇರವಾಗಿ ಅಧಿಕಾರಿ ಮತ್ತು ಸಿಬ್ಬಂದಿ ಬಳಿಗೇ ಹೋಗಿ ತಮ್ಮ ಕೆಲಸವನ್ನು ಮಾಡಿಸಿಕೊಳ್ಳುವವರು ಕಡಿಮೆ. ಇನ್ನೊಬ್ಬರನ್ನು ಅವಲಂಬಿಸುವವರೇ ಹೆಚ್ಚು ಇರುವ ಸನ್ನಿವೇಶದಲ್ಲಿ, ಟೈಪ್ ರೈಟರ್ಗಳನ್ನು ಇಟ್ಟುಕೊಂಡು ಕುಳಿತುಕೊಳ್ಳುವ ಮಂದಿ ನೆರವು ನೀಡುವ ಮತ್ತು ದುಡಿಮೆ ಮಾಡುವ ಎರಡೂ ಪಾತ್ರಗಳನ್ನು ನಿರ್ವಹಿಸುತ್ತಾರೆ.

ಅತಂತ್ರ ಪರಿಸ್ಥಿತಿ: ಸ್ಟಾಂಪ್ ವೆಂಡರ್ಸ್ ಮತ್ತು ಪತ್ರ ಬರಹಗಾರರು ಎಂದು ಕರೆಯಲಾಗುವ ಇವರು ನಗರದ ಉಪನೋಂದಣಾಧಿಕಾರಿ ಕಚೇರಿ ಮತ್ತು ತಹಶೀಲ್ದಾರ್ ಕಚೇರಿಯಲ್ಲಿ ಒಟ್ಟಾರೆ ಸುಮಾರು 10 ಮಂದಿ ಇದ್ದಾರೆ. ಡಿಟಿಪಿ ಕೇಂದ್ರಗಳ ಸಿಬ್ಬಂದಿಗೆ ಹೋಲಿಸಿದರೆ ಇವರು ಈಗ ಅಲ್ಪಸಂಖ್ಯಾತರಾಗಿದ್ದಾರೆ. ಹೆಚ್ಚು ಮಂದಿ ಇವರನ್ನು ಅವಲಂಬಿಸುವಂತೆ ತೋರಿದರೂ, ಆದಾಯ ಕಡಿಮೆಯೇ.

ದಿನಕ್ಕೆ ಕನಿಷ್ಠ 150ರಿಂದ 200 ರೂಪಾಯಿ ಸಿಕ್ಕರೆ ದೊಡ್ಡದು ಎನ್ನುತ್ತಾರೆ ರಘುಪತಿ ಅವರ ಸಮೀಪದಲ್ಲೇ ಟೈಪ್ ರೈಟರ್ ಮೇಲೆ ಬೆರಳಾಡಿಸುವ ಸುರೇಶ್. ತಿಂಗಳಿಗೆ ಕನಿಷ್ಠ 5ರಿಂದ 6 ಸಾವಿರ ರೂಪಾಯಿ ದುಡಿಯುತ್ತೇವೆ. ಬದುಕಲಿಕ್ಕೆ ಇದು ಏನೇನು ಸಾಕಾಗುವುದಿಲ್ಲ. ಸ್ಟಾಂಪ್ ಮಾರಾಟವನ್ನು ಸರ್ಕಾರ ನಿಲ್ಲಿಸಿದ ಬಳಿಕ ನಮ್ಮ ಸ್ಥಿತಿ ಅತಂತ್ರವಾಗಿದೆ. ಕಷ್ಟಕ್ಕೆ ಸಿಲುಕಿದೆ ಎನ್ನುತ್ತಾರೆ ಅವರು.

ಆರೋಪ: ಕನಿಷ್ಠ ದರ ಪಡೆದು ಸೇವೆಯನ್ನು ನೀಡಿದರೂ ನಾವು ಜನರಿಂದ ಹೆಚ್ಚು ಹಣ ವಸೂಲಿ ಮಾಡುತ್ತೇವೆ ಎಂಬ ಆರೋಪವೂ ಇದೆ. ಆದರೆ, ನಮ್ಮ ಸುತ್ತಲೇ ಓಡಾಡುವ ಕೆಲವು ಪ್ರಭಾವಿಗಳು, ಪುಢಾರಿಗಳು ಜನರನ್ನು ವಂಚಿಸುವುದು ಮಾಮೂಲಾಗಿದೆ. ಅದು ಕೆಲವೊಮ್ಮೆ ಬೆಳಕಿಗೆ ಬರುತ್ತದೆ. ಬಹುತೇಕ ಸಂದರ್ಭದಲ್ಲಿ ಯಾರಿಗೂ ಗೊತ್ತಾಗುವುದಿಲ್ಲ. ನಾವು ಮಾತ್ರ ಸಣ್ಣ ಸಂಪಾದನೆಯಲ್ಲೇ ಜೀವನ ದೂಡುತ್ತಿದ್ದೇವೆ ಎಂದು ಹೇಳುತ್ತಾರೆ ರಘುಪತಿ.

ಮೂಲ ಸೌಕರ್ಯ: ಹಳ್ಳಿ ಜನರಿಗೆ ಕನಿಷ್ಠ ಮಟ್ಟದಲ್ಲಿ ನೆರವಾಗುವ ನಮಗೆ ಮೂಲಸೌಕರ್ಯಗಳು ಬೇಕು. ನೋಂದಾಣಾಧಿಕಾರಿ ಕಚೇರಿಯಲ್ಲಿ ಒಳ ಆವರಣದಲ್ಲಿ ಟೈಪಿಸ್ಟುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ತಹಶೀಲ್ದಾರ್ ಕಚೇರಿಯಲ್ಲಿ ಈ ಅವಕಾಶ ನಮಗೆ ಇಲ್ಲ. ಮರದ ಕೆಳಗೆ ಧೂಳು, ಬಿಸಿಲಿನ ನಡುವೆ ಕೆಲಸ ಮಾಡುತ್ತಿದ್ದೇವೆ. ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ವಾಹನ ನಿಲುಗಡೆ ಸ್ಥಳದಲ್ಲಿ ನಮಗೆ ಕೊಂಚ ಅವಕಾಶ ಮಾಡಿಕೊಡಬೇಕು ಎಂಬುದು ಅವರ ಕೋರಿಕೆ.

ಟಪ ಟಪ ಸದ್ದಿನೊಡನೆ ತನ್ಮಯರಾಗಿ ಟೈಪಿಸುತ್ತಾ ಕುಳಿತ ಅವರು ಎಲ್ಲರಿಗೂ ಕಂಡರೂ, ಅವರ ಮಹತ್ವ ಯಾರಿಗೂ ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಯಾವುದಾದರೊಂದು ಅರ್ಜಿ ಬರೆಯಬೇಕು ಎಂದು ಕೊಂಡಾಗ ಮಾತ್ರವೇ ನೆನಪಾಗುವವರು ಅವರು.

ಆದರೆ ನಗರದಲ್ಲಿ ಅವರ ಸ್ಥಿತಿಗತಿಗಳ ಕುರಿತು ಗಮನ ಹರಿಸುವವರು ಇಲ್ಲ. ಸಕಾಲ ಸೇವೆ, ಅಟಲ್ ಜೀ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದರೂ ಈ ಟೈಪಿಸ್ಟುಗಳ ಬೇಡಿಕೆ ಕುಸಿದಿಲ್ಲ. ಅಸಂಘಟಿತ ಕಾರ್ಮಿಕರರೆಂದೂ ಇವರನ್ನು ಕರೆಯುವಂತಿಲ್ಲ. ಏಕೆಂದರೆ ಅವರಿಗೆ ಮಾಲೀಕರು ಎಂಬುವವರು ಯಾರೂ ಇಲ್ಲ. ಟೈಪ್ ರೈಟರ್ ಬಿಟ್ಟರೆ ಅವರಿಗೆ ಬೇರೆ ಬದುಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.