ಸೋಮವಾರ, ಏಪ್ರಿಲ್ 12, 2021
29 °C

ಟ್ಯಾಗೋರ್ ವಿಭಿನ್ನ ಕವಿ: ಡಿಸೋಜ ಬಣ್ಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ರವೀಂದ್ರನಾಥ ಟ್ಯಾಗೋರರು ಭಾರತೀಯರ ಮಾನಸಿಕ ದಾಸ್ಯದ ವಿರುದ್ಧ ಹೋರಾಡಿದ ವಿಭಿನ್ನ ಕವಿ ಎಂದು ಸಾಹಿತಿನಾ. ಡಿಸೋಜ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಶಿಕ್ಷಣ ಸಮಿತಿ, ಧಾರವಾಡದ ಗೊಂಬೆಮನೆ ಸಂಯುಕ್ತವಾಗಿ ಕವಿ ರವೀಂದ್ರನಾಥ ಟ್ಯಾಗೋರರ 150ನೇ ವರ್ಷದ ನೆನಪಿನ ಅಂಗವಾಗಿ ಹಮ್ಮಿಕೊಂಡಿದ್ದ ಅಕ್ಷರ ಸಿರಿ ಶೈಕ್ಷಣಿಕ ರಂಗಭೂಮಿ ಅಭಿಯಾನ 2011ರ ತರಬೇತಿ ಶಿಬಿರದ ಮುಕ್ತಾಯ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ಅಂದು ಮಹಾತ್ಮ ಗಾಂಧೀಜಿ ಮತ್ತು ರವೀಂದ್ರನಾಥ ಟ್ಯಾಗೋರರು ವಿಭಿನ್ನ ನೆಲೆಯಲ್ಲಿ ಸ್ವಾತಂತ್ರ್ಯ ಚಳವಳಿಗೆ ಚಾಲನೆ ನೀಡಿದರು. ಗಾಂಧೀಜಿ ದೈಹಿಕ ದಾಸ್ಯ ನಾಶ ಮಾಡಲು ಹೋರಾಟ ಮಾಡಿದರೆ, ರವೀಂದ್ರನಾಥ ಟ್ಯಾಗೋರರು ಮಾನಸಿಕ ದಾಸ್ಯದ ವಿರುದ್ಧ ತಮ್ಮದೇ ನೆಲೆಯಲ್ಲಿ ಹೋರಾಡಿದರು ಎಂದು ಸ್ಮರಿಸಿದರು. ಟ್ಯಾಗೋರರಿಗೆ ಅಂದಿನ ಭಾರತದ ಸ್ಥಿತಿ ಬಗ್ಗೆ ತೃಪ್ತಿ ಇರಲಿಲ್ಲ. ಮಾನಸಿಕ ದಾಸ್ಯದಿಂದ ಹೊರಬರಲು ಪ್ರೌಢ ಹೋರಾಟ, ತುಂಬು ಜೀವನಬೇಕು ಎಂದು ತಮ್ಮ ಸಾಹಿತ್ಯದಲ್ಲಿ ಹೇಳುತ್ತಿದ್ದರು. ಆದರೆ, ಅವರಿಗೆ ಭಾರತದ ಪರಂಪರೆ ಬಗ್ಗೆ ಹೆಮ್ಮೆ ಇತ್ತು ಎಂದು ಹೇಳಿದರು.ಸುಂದರವಾದ ದೇವರನ್ನು ದೂರ ಮಾಡಿ, ಮನುಷ್ಯನನ್ನು ಹತ್ತಿರ ಮಾಡಿಕೊಂಡರು; ಬಡವರ ಪರವಾಗಿ ನಿಂತರು ಎಂಬ ಮಾತುಗಳು ಅವರ ಬಗ್ಗೆ ಇವೆ. ಅದು ನಿಜ ಕೂಡ ಎಂದರು.

ಭವಿಷ್ಯದ ಶಿಕ್ಷಕರಿಗೆ ರವೀಂದ್ರರ ನಾಟಕಗಳನ್ನು ಕಲಿಸುವುದರಿಂದ ಮುಂದಿನ ದಿನಗಳಲ್ಲಿ ಸಾವಿರಾರು ಮಕ್ಕಳಿಗೆ ಅವರ ವಿಚಾರ ತಿಳಿಯಲು ಅನುಕೂಲವಾಗುತ್ತದೆ ಎಂದು ಡಿಸೋಜ ಅಭಿಪ್ರಾಯಪಟ್ಟರು.ಧಾರವಾಡದ ಗೊಂಬೆಮನೆಯ ಪ್ರಕಾಶ ಗರುಡ ಮಾತನಾಡಿ, ಇದು ರಾಜ್ಯದಲ್ಲಿ 10ನೇ ಶಿಬಿರ. ಡಿ.ಇಡಿ, ಬಿ.ಇಡಿ ವಿದ್ಯಾರ್ಥಿಗಳಿಗೆ ರಂಗಭೂಮಿ ಬಗ್ಗೆ ಕಡ್ಡಾಯವಾಗಿ ತರಬೇತಿ ನೀಡುವ ಪ್ರಯತ್ನ ನಡೆದಿದೆ. ಈಗ ವಿದ್ಯಾರ್ಥಿಗಳಿಗೆ ಶಾಲೆಯ ತರಗತಿಗಳಲ್ಲಿ ಭಾವನಾತ್ಮಕ ವಿಚಾರದಲ್ಲಿ ತರಬೇತಿ ಸಿಗುತ್ತಿಲ್ಲ. ಆ ಕೊರತೆಯನ್ನು ಈ ಶಿಬಿರ ನೀಗಿಸುತ್ತದೆ ಎಂದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಕುಲಪತಿ ಎಚ್.ಎಸ್. ಗಣೇಶಮೂರ್ತಿ, ಸಮಿತಿ ಖಜಾಂಚಿ ಟಿ.ಆರ್. ಅಶ್ವಥನಾರಾಯಣ ಶೆಟ್ಟಿ, ಪ್ರಾಂಶುಪಾಲ ಎಚ್.ಎಲ್. ಜನಾರ್ದನ ಉಪಸ್ಥಿತರಿದ್ದರು. ಉಪನ್ಯಾಸಕಿ ರಮಾಮಣಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ನಂತರ, ಶಿಬಿರಾರ್ಥಿಗಳಿಂದ ರವೀಂದ್ರನಾಥ ಠಾಗೋರರ ‘ಗೀತಾಂಜಲಿ’ ಆಧರಿಸಿದ ನೃತ್ಯರೂಪಕ ರಂಗಕರ್ಮಿ ಎಸ್. ಮಾಲತಿ ಅವರ ನಿರ್ದೇಶನದಲ್ಲಿ ಪ್ರದರ್ಶಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.