ಮಂಗಳವಾರ, ಮೇ 17, 2022
26 °C

ಟ್ಯಾಗೋರ್ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇದು ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಗುರುದೇವ ರವೀಂದ್ರನಾಥ್ ಟ್ಯಾಗೊರ್ ಅವರ 150ನೇ ಜಯಂತಿ ವರ್ಷ.  ಬ್ರಿಟಿಷ್ ಆಳ್ವಿಕೆಯನ್ನು ತಮ್ಮದೇ ಆದ ವಿಧಾನದಲ್ಲಿ ವಿಶಿಷ್ಟವಾಗಿ ವಿರೋಧಿಸಿದವವರು ಟ್ಯಾಗೋರ್. ಸುತ್ತಲಿನ ಆಗು ಹೋಗುಗಳಿಗೆ ತನ್ನದೇ ಶೈಲಿಯಲ್ಲಿ ಪ್ರತಿಕ್ರಿಯಿಸುತ್ತಿದ್ದ ಅವರು, ಜಲಿಯನ್‌ವಾಲಾಬಾಗ್ ಹತ್ಯಾಕಾಂಡ ವಿರೋಧಿಸಿ ಬ್ರಿಟಿಷ್ ಸರ್ಕಾರ ನೀಡಿದ್ದ ‘ನೈಟ್‌ಹುಡ್’ ಪ್ರಶಸ್ತಿ ಹಿಂತಿರುಗಿಸಿದ್ದರು. ಬಂಗಾಲದ ಆಗರ್ಭ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಅವರಿಗೆ ಬಡವರು, ದೀನದಲಿತರ ಬಗ್ಗೆ ಅಪಾರ ಕಾಳಜಿ ಇತ್ತೆಂಬುದು ಅವರ ಅನೇಕ ಕೃತಿಗಳಲ್ಲಿ ಗಾಢವಾಗಿ ವ್ಯಕ್ತವಾಗುತ್ತದೆ.ಕಲಿಕೆಗೆ, ಆಸಕ್ತಿಗೆ ವಯಸ್ಸಿನ ಭೇದವಿಲ್ಲ ಎಂಬುದಕ್ಕೆ ಟ್ಯಾಗೊರ್ ಒಂದು ಸ್ಪಷ್ಟ ನಿದರ್ಶನ. ಏಕೆಂದರೆ ಅವರು ಅನೇಕ ಅಪರೂಪದ ವರ್ಣಚಿತ್ರಗಳನ್ನು ರಚಿಸಿದ್ದು 60 ನೇ ವರ್ಷದ ನಂತರ.ಅವರ ಕೃತಿ ‘ಗೋರಾ’ ಕೂಡ ಭಾರತವನ್ನು ಬಹಳ ಕಾಲದಿಂದ ಕಾಡುತ್ತಿರುವ, ಈಗಲೂ ತಲ್ಲಣಗಳನ್ನು ಸೃಷ್ಟಿಸುತ್ತಿರುವ ಸಂಪ್ರದಾಯವಾದದ ಕುರಿತಾದದ್ದು. ಅದರಲ್ಲಿ ತನ್ನ ಧರ್ಮವನ್ನು ಅತಿಯಾಗಿ ಪ್ರೀತಿಸುತ್ತಿದ್ದ ವ್ವಕ್ತಿಯೊಬ್ಬನಿಗೆ ಬದುಕಿನ ಸತ್ಯ ತಿಳಿದಾಗ ಆಗುವ ಆಘಾತವನ್ನು ಚಿತ್ರಿಸುವ ಮೂಲಕ ಸನಾತನ ನಂಬಿಕೆಗಳ ಹುಸಿತನಕ್ಕೆ ಪೆಟ್ಟು ಕೊಡುತ್ತಾರೆ. ಅನೇಕ ಕವಿತೆಗಳಲ್ಲಿ ಮತ್ತೆ ಮತ್ತೆ ಅವರು ಆತ್ಮವಿಶ್ವಾಸ, ಭರವಸೆಗಳನ್ನು ತುಂಬುತ್ತಾರೆ. ಅವರ ಪ್ರಖ್ಯಾತ ಗೀತಾಂಜಲಿಯ ಕೆಲವು ಸಾಲುಗಳು ‘ಎಲ್ಲಿ ಮನಸ್ಸು ನಿರ್ಭಯವೋ, ಶಿರ ಎತ್ತರಕ್ಕೆ ನಿಮಿರಿ ನಿಂತಿದೆಯೋ... ಆ ಸ್ವಾತಂತ್ರ ಸ್ವರ್ಗಕ್ಕೆ... ಓ ತಂದೆ ಎಚ್ಚರಗೊಳ್ಳಲಿ ನನ್ನ ನಾಡು’ ಈ ಮಾತನ್ನು ಪುಷ್ಟೀಕರಿಸುತ್ತದೆ. ಈ ಸಾಲುಗಳು  ಇಂದಿಗೂ, ಎಂದಿಗೂ ಸರ್ವಕಾಲಕ್ಕೂ ಸಮ್ಮತವೆ. ಈ ಹಿನ್ನೆಲೆಯಲ್ಲಿಯೇ ಸಮುದಾಯ, ಟ್ಯಾಗೋರ್ ಸ್ಮರಣೆಯಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ.

ಇಂದು, ನಾಳೆ ಏನು?

ಸಮುದಾಯ: ಟ್ಯಾಗೋರ್ 150 ಸಮುದಾಯ ರಾಷ್ಟ್ರೀಯ ಉತ್ಸವ. ಶನಿವಾರ ಸಂಜೆ 5.30ಕ್ಕೆ ಉದ್ಘಾಟನೆ: ಡಾ. ಯು.ಆರ್. ಅನಂತಮೂರ್ತಿ. ಅಧ್ಯಕ್ಷತೆ: ಆರ್.ಕೆ. ಹುಡಗಿ. ಅತಿಥಿಗಳು: ಎಸ್.ಜಿ. ಸಿದ್ದರಾಮಯ್ಯ, ಅಗ್ರಹಾರ ಕೃಷ್ಣಮೂರ್ತಿ, ಮನು ಬಳಿಗಾರ್, ಚಂದನ ಸೇನ್, ಸಾರಾ ಅಬೂಬಕರ್ ಮತ್ತು ಬಿ.ವಿ. ರಾಜಾರಾಂ. ರವೀಂದ್ರ ಸಂಗೀತ: ಕೋಲ್ಕತ್ತದ ಶುಭಾಪ್ರಸಾದ್ ನಂದಿ ಮಜುಂದಾರ್ ಮತ್ತು ಪೂಬಾಲಿ ದೇಬನಾಥ್.ಭಾನುವಾರ ಸಂಜೆ 3ಕ್ಕೆ ‘ಟ್ಯಾಗೋರ್ ಮತ್ತು ಗಾಂಧಿ’ ವಿಚಾರ ಸಂಕಿರಣ. ಭಾಗವಹಿಸುವವರು: ಲಿಂಗದೇವರು ಹಳೇಮನೆ, ಪ. ಬಂಗಾಲ ಮಹಿಳಾ ಆಯೋಗದ ಅಧ್ಯಕ್ಷೆ ಮಾಲಿನಿ ಭಟ್ಟಾಚಾರ್ಯ, ಎಂ.ಕೆ. ಭಾಸ್ಕರರಾವ್ ಮತ್ತು ರವಿಕುಮಾರ ಬಾಗಿ.

ಸಂಜೆ 5ಕ್ಕೆ ಟ್ಯಾಗೋರ್ ವರ್ಣ ಮತ್ತು ಛಾಯಾಚಿತ್ರ ಪ್ರದರ್ಶನ. ಅತಿಥಿಗಳು: ಚಂದ್ರಶೇಖರ್ ಮತ್ತು ಎಂ.ಜಿ. ವೆಂಕಟೇಶ್. ಸಂಜೆ 7ಕ್ಕೆ ಸಮುದಾಯ ತಂಡದಿಂದ ‘ರಾಜಾ ರಾಣಿ ಮಂತ್ರಿ ತಂತ್ರಿ’ ನಾಟಕ (ನಿ: ಎಂ.ಎಸ್. ಸತ್ಯು).ಸೋಮವಾರ ಸಂಜೆ 5ಕ್ಕೆ ಕವಿಗೋಷ್ಠಿ. ಭಾಗವಹಿಸುವವರು: ಮೀನಾಕ್ಷಿ ಬಾಳಿ, ರಂಗನಾಥ ಕಂಟನಕುಂಟೆ, ಹುಲಿಕಟ್ಟೆ ಚನ್ನಬಸಪ್ಪ, ಲಕ್ಕೂರ ಸಿ ಆನಂದ್, ಎಸ್. ದೇವೇಂದ್ರಗೌಡ, ಎಸ್. ಮಂಜುನಾಥ್, ರಾಮಕ್ಕ, ಶ್ವೇತಾಮಣಿ, ರವಿಕುಮಾರ ಬಾಗಿ, ಟಿ. ಲಕ್ಷ್ಮಿನಾರಾಯಣ, ಗಂಗಪ್ಪ ತಳವಾರ, ಎಸ್. ನರಸಿಂಹಸ್ವಾಮಿ, ಆರ್.ದೇವರಾಜ್ ಮತ್ತು ಹುಲಿಕುಂಟೆ ಮೂರ್ತಿ.ಸಂಜೆ 7ಕ್ಕೆ ಉ. ಕನ್ನಡದ ಚಿಂತನರಂಗ ಅಧ್ಯಯನ ಕೇಂದ್ರದಿಂದ ‘ಮಕ್ಕಳ ರವೀಂದ್ರ’ ನಾಟಕ (ನಿ: ಶ್ರೀಪಾದ ಭಟ್). ಸ್ಥಳ: ರವೀಂದ್ರ ಕಲಾಕ್ಷೇತ್ರ ಮತ್ತು ಕನ್ನಡ ಭವನ ಆವರಣ, ಜೆ ಸಿ ರಸ್ತೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.