ಶನಿವಾರ, ಮೇ 8, 2021
26 °C
ತೆಕ್ಕಟ್ಟೆ: ನೂತನ ಕಟ್ಟಡಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್ ಶಾಖೆಯ ಸ್ಥಳಾಂತರ

`ಠೇವಣಿ ಸದ್ಬಳಕೆಯಾದಾಗ ಮಾತ್ರ ಸಂಸ್ಥೆಗಳ ಅಭಿವೃದ್ಧಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಠೇವಣಿ ಸದ್ಬಳಕೆಯಾದಾಗ ಮಾತ್ರ ಸಂಸ್ಥೆಗಳ ಅಭಿವೃದ್ಧಿ'

ಕುಂದಾಪುರ: ಸಹಕಾರಿ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಠೇವಣಿ ಕ್ರೋಢೀಕರಣ ಮಾಡುವುದರಿಂದ ಸಂಸ್ಥೆ ಅಭಿವೃದ್ಧಿ ಸಾಧ್ಯವಿಲ್ಲ. ಠೇವಣಿ ಹಣದ ಸದ್ಬಳಕೆಯಾಗಬೇಕು. ಅಪೇಕ್ಷಿತ ಗ್ರಾಹಕರಿಗೆ ಸಾಲ ನೀಡಿ ಅದರ ಕ್ರಮ ಬದ್ಧ ವಸೂಲಾತಿಯಿಂದ ಗ್ರಾಹಕರು ಹಾಗೂ ಬ್ಯಾಂಕ್ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.ಇಲ್ಲಿಗೆ ಸಮೀಪದ ತೆಕ್ಕಟ್ಟೆಯ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಶಾಖೆಯ ಸ್ಥಳಾಂ ತರ ಕಾರ್ಯಕ್ರಮ ವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶತಮಾನೋತ್ಸವದ ಹೊಸ್ತಿಲಲ್ಲಿದೆ. ರಾಜ್ಯದ ಯಶಸ್ವಿ ಹಾಗೂ ಅಭಿವೃದ್ಧಿ ಹೊಂದಿದ ಸಹಕಾರಿ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ಈ ಸಂಸ್ಥೆಯ ಸ್ಥಾಪನೆ ಹಾಗೂ ಅಭಿವೃದ್ಧಿಯ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಹಿರಿಯ ಸಹಕಾರಿಗಳ ಶ್ರಮ ಹಾಗೂ ಮಾರ್ಗದರ್ಶನವಿದೆ.ರಾಜ್ಯದ ಹಲವು ಜಿಲ್ಲೆಗಳಲ್ಲಿ ಅರ್ಥಿಕ ಸ್ವಾವಲಂಬನೆ ಹೊಸ ಮೈಲುಗಲ್ಲು ಸ್ಥಾಪಿಸಿದ ನವೋದಯ ಸ್ವಸಹಾಯ ಗುಂಪುಗಳ ಬೆಳವಣಗೆಯಲ್ಲಿಯೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಸಹಕಾರ ಉಲ್ಲೇಖನೀಯ ಎಂದು ಹೇಳಿದ ಅವರು ಎರಡು ಸಂಸ್ಥೆಗಳ ಸಹಕಾರದಿಂದಾಗಿ ಎರಡು ಜಿಲ್ಲೆಯ ಸಹಕಾರಿ ಕ್ಷೇತ್ರ ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ ಎಂದು ಹೇಳಿದರು.ವಾಣಿಜ್ಯ ಬ್ಯಾಂಕ್‌ಗಳಲ್ಲಿ ದೊರಕುವ ಸೇವೆಗಳು ನಮ್ಮ ಸಂಸ್ಥೆಯ ಗ್ರಾಹಕರಿಗೂ ದೊರಕಬೇಕು ಎನ್ನುವ ಉದ್ದೇಶದಿಂದ ಕಳೆದ ವರ್ಷಗಳಲ್ಲಿ ಹಲವು ವಿನೂತನ ಯೋಜನೆಗಳನ್ನು ಪರಿಚಯಿಸಲಾಗಿದೆ. ಸಂಪೂರ್ಣ ಗಣಕೀಕೃತ ಕೋರ್ ಬ್ಯಾಂಕಿಂಗ್ ಹಾಗೂ ಏಕಗವಾಕ್ಷಿ ಸೌಲಭ್ಯಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಶಾಖೆಗಳಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದ ಅವರು ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ಈ ಸಂಸ್ಥೆಯನ್ನು ಬೆಳೆಸಬೇಕು ಎನ್ನುವ ಉದ್ದೇಶ ಬ್ಯಾಂಕಿನ ಆಡಳಿತ ಮಂಡಳಿಗಿದೆ ಎಂದು ತಿಳಿಸಿದರು.ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಬಿ.ರಘುರಾಮ ಶೆಟ್ಟಿ, ರಾಜು ಎಸ್ ಪೂಜಾರಿ, ಕೆ.ಕಿಶನ್ ಹೆಗ್ಡೆ, ಎಂ.ವಾದಿರಾಜ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.ತೆಕ್ಕಟ್ಟೆ ಶಾಖೆಯ ಪ್ರಬಂಧಕಿ ಸಂಧ್ಯಾ, ಸಹಕಾರಿ ಬ್ಯಾಂಕ್ ವಿವಿಧ ಶಾಖೆಗಳ ಅಧ್ಯಕ್ಷರಾದ ದಯಾನಂದ ಹೆಗ್ಡೆ, ಸಹಕಾರಿ ಕ್ಷೇತ್ರದ ಪ್ರಮುಖರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಗೋಪಾಲ ಪೂಜಾರಿ, ವಾಸುದೇವ ಯಡಿಯಾಳ ಹಾಗೂ ತೆಕ್ಕಟ್ಟೆ ಶಾಖೆಯ ಕಟ್ಟದ ಮಾಲಿಕ ಮುಕುಂದ ಪೈ ಇತರರು ಸಮಾರಂಭದಲ್ಲಿ ಇದ್ದರು.ಬ್ಯಾಂಕ್‌ನ ನಿರ್ದೇಶಕ ರಾಜು ಪೂಜಾರಿ ಸ್ವಾಗತಿಸಿದತು,  ಶಿವರಾಂ ಪೂಜಾರಿ ಯಡ್ತರೆ ನಿರೂಪಿಸಿದರು, ಬ್ಯಾಂಕ್‌ನ ವ್ಯವಸ್ಥಾಪನಾ ನಿರ್ದೇಶಕ ಎಂ.ಗೋಪಾಲಕೃಷ್ಣ ಭಟ್ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.