ಭಾನುವಾರ, ಮೇ 16, 2021
22 °C

ಡಯಾಬಿಟಿಸ್ ಮತ್ತು ಸಮಾರಾಧನೆ ಎಂಬ ಹಿಂಸೆ

ಎಸ್.ಆರ್.ರಾಮಕೃಷ್ಣ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಕನ್ನಡಿಗರ ಸಮುದಾಯದಲ್ಲಿ ಸಮಾರಾಧನೆಗಳು ಹೆಚ್ಚು. ಹಬ್ಬ ಹರಿದಿನಗಳ ಸಂಭ್ರಮ ಬಿಡಿ. ಬೇರೆ ದಿನಗಳಲ್ಲೂ ಒಂದಲ್ಲ ಒಂದು ಕಾರಣಕ್ಕೆ ಬಂಧು ಬಳಗವನ್ನು ಔತಣಕ್ಕೆ ಕರೆಯುವುದು ನಮ್ಮಲ್ಲಿ ಸಾಮಾನ್ಯ.ಮದುವೆ, ಮುಂಜಿ, ಸೀಮಂತ, ನಾಮಕರಣ, ಚೌಲ, ಶಷ್ಟ್ಯಬ್ಧಿ ಪೂರ್ತಿ, ವೈಕುಂಠ ಸಮಾರಾಧನೆ... ಇವ್ಯಾವುದೂ ಇಲ್ಲದಿದ್ದಾಗ ಸತ್ಯನಾರಾಯಣ ಪೂಜೆಗೆ ಮಧ್ಯಮ ವರ್ಗದ ಕುಟುಂಬಗಳಿಂದ ಆಹ್ವಾನ ಬರುತ್ತಲೇ ಇರುತ್ತದೆ. ಇಂಥ ಸಮಾರಂಭಗಳಲ್ಲಿ ಆತಿಥ್ಯ ಚೆನ್ನಾಗಿ ಮಾಡಬೇಕು ಎಂಬ ಆಯಾ ಮನೆಯವರ ಉಮೇದು ಗಮನಿಸಿರುತ್ತೀರಿ.ಆದರೆ ಇನ್ನೊಂದು ಸಂಗತಿ ಗಮನಿಸಿದ್ದೀರಾ? ಇಂಥ ಸಮಾರಂಭಕ್ಕೆ ಬರುವ ಐದು ಹಿರಿಯರಲ್ಲಿ ಒಬ್ಬರಿಗಾದರೂ ಸಿಹಿ ತಿನಿಸುಗಳನ್ನು ತಿನ್ನಲಾರದ ಕಷ್ಟ ಇರುತ್ತದೆ. ಬೇಕಾದವರು ಕರೆದಿದ್ದಾರೆ ಎಂದು ಹೋಗಿ, ಭಕ್ಷ್ಯಗಳನ್ನು ತಿನ್ನದಿರಲು ಪ್ರಯತ್ನಿಸುತ್ತಿರುತ್ತಾರೆ. ಅತಿಥೇಯರು ಬಿಡುವುದಿಲ್ಲ.`ಬೇಡ~ ಎಂದು ಅತಿಥಿಗಳು ಹೇಳಿದರೆ `ಯಾಕೆ ಬೇಡ?~ ಎಂದು ಕೇಳಿ, ಸಾರ್ವಜನಿಕವಾಗಿ ಅವರ ಆರೋಗ್ಯದ ಸಂಕಟಗಳನ್ನು ಚರ್ಚೆ ಮಾಡಲು ಶುರು ಮಾಡುತ್ತಾರೆ. ಇಂಥ ಔಷಧ ತೊಗೊಳ್ಳಿ, ಅಂಥ ಡಾಕ್ಟರ್ ಹತ್ತಿರ ಹೋಗಿ ಎಂದು ಸಲಹೆ ಕೊಡಲು ಮುಂದಾಗುತ್ತಾರೆ.

 

ಈ ಮುಜುಗರ ಸಾಲದು ಎಂಬಂತೆ `ಒಂದು ಲಾಡು ತಿಂದುಬಿಡಿ, ಏನಾಗಲ್ಲ...~, `ಪ್ರಸಾದ ಬೇಡ ಅನ್ನಬಾರದು~ ಅನ್ನುವಂಥ ಅಕ್ಕರೆ ತೋರಿಸುವ, ತೀರ ಬೇಜವಾಬ್ದಾರಿಯ ಮಾತು ಆಡುತ್ತಾರೆ. ಊಟದಲ್ಲಿ ಮಿತಿ ಪ್ರಯೋಗಿಸುವವರೆಲ್ಲ ಸಂಕೋಚ ಪಡುತ್ತಿದ್ದಾರೆ ಎಂದು ಅಪಾರ್ಥ ಮಾಡಿಕೊಂಡು ಬಲವಂತ ಮಾಡುತ್ತಾರೆ.ಈ ಹರಟೆ ಸಾಕುಮಾಡುವುದು ಹೇಗೆ ಎಂದು ತೋರದೆ, ಭಕ್ಷ್ಯಗಳನ್ನು ತಿನ್ನಬೇಕಾದ ಅನಿವಾರ್ಯ ಅತಿಥಿಗಳಿಗೆ ಒದಗಿಬರುತ್ತದೆ. ಕೆಲವರು ಈ ಹಿಂಸೆ ತಾಳಲಾರದೆ ಏನೋ ಸಬೂಬು ಹೇಳಿ ಸಮಾರಾಧನೆಗಳಿಗೆ ಹೋಗುವುದನ್ನೇ ತಪ್ಪಿಸಿಕೊಳ್ಳುತ್ತಾರೆ. ಒತ್ತಾಯಕ್ಕೆ ಒಬ್ಬಟ್ಟು, ಚಿರೋಟಿ, ಜಿಲೇಬಿ ತಿನ್ನುವವರು ಎಂಥೆಂಥ ಕಷ್ಟ ಅನುಭವಿಸುತ್ತಾರೆ ಎಂದು ಬಲವಂತ ಮಾಡಿ ತಿನಿಸಿದವರ ಗಮನಕ್ಕೆ ಬರುವುದೇ ಇಲ್ಲ.ಕೆಲವು ಡಯಾಬಿಟಿಸ್ ಪೀಡಿತರು ಸಿಹಿ ತಿಂಡಿ ತಿನ್ನಲು ಸಮಾರಾಧನೆಯ ನೆಪಕ್ಕಾಗಿ ಕಾಯುವುದು ನಿಜ. ಆದರೆ ಅತಿಥಿಗಳ ವೈದ್ಯಕೀಯ ಸಂಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ, ಇರಿಸುಮುರುಸು ಮಾಡದ ಸೂಕ್ಷ್ಮ ಸಮಾರಾಧನೆ ಮಾಡುವವರಿಗೆ ಇರಬೇಡವೇ?ಬೆಂಗಳೂರಿನ ಎಷ್ಟೋ ಜನ ಒಂದಲ್ಲ ಒಂದು ಕಾರಣಕ್ಕೆ ಆಹಾರದಲ್ಲಿ ಏನೋ ಕಟ್ಟುನಿಟ್ಟು ಪಾಲಿಸಲು ಪ್ರಯತ್ನಿಸುತ್ತಿರುತ್ತಾರೆ. ಅದನ್ನು ಗೌರವಿಸುವುದು ಅಗತ್ಯವಲ್ಲವೇ? `ಕೊಲ್ಲು ಹುಡುಗಿ ಒಮ್ಮೆ ನನ್ನ, ಹಾಗೇ ಸುಮ್ಮನೆ~ ಅನ್ನುವ ಸಿನಿಮಾ ಹಾಡು ಕೇಳಿರುತ್ತೀರಿ. ಸಿಹಿ, ಅನ್ನ, ಮತ್ತು ಇತರ ಕಾರ್ಬೋಹೈಡ್ರೇಟ್ ಐಟಂಗಳನ್ನು ತಿನ್ನಿಸಿ ಹಾಗೆ ಸುಮ್ಮನೆ ಕೊಲ್ಲುವ ಜನ ನಮ್ಮ ನಡುವೆ ವಿಪರೀತ ಇದ್ದಾರೆ!ಭಾರತ ವಿಶ್ವದ ಡಯಾಬಿಟಿಸ್ ರಾಜಧಾನಿ ಎಂದು ಕರೆಸಿಕೊಳ್ಳುತ್ತದೆ. ಇಲ್ಲಿ ನಾಲ್ಕು ಕೋಟಿ (ಹೌದು, ನಾಲ್ಕು ಕೋಟಿ!) ಜನರನ್ನು ಮಧುಮೇಹ ಬಾಧಿಸುತ್ತದಂತೆ. ಬೆಂಗಳೂರಿನ ವಯಸ್ಕರಲ್ಲಿ ಶೇಕಡಾ 15ರಷ್ಟು ಜನರಿಗೆ ಈ ತೊಂದರೆ ಇದೆ. ಇದು ಎಷ್ಟು ದೊಡ್ಡ ಸಮಸ್ಯೆ ಎಂದು ನಮಗೆ ಸಾಮಾಜಿಕ ಮಟ್ಟದಲ್ಲಿ ಅರಿವಾದಂತಿಲ್ಲ.

 

ಬೆಂಗಳೂರಿನ ಜೀವನದ ಒತ್ತಡ, ಆಹಾರದ ಕಲಬೆರಕೆ, ಅಹೋರಾತ್ರಿ ಕೆಲಸ ಮಾಡುವ ಅಭ್ಯಾಸ, ಸಂಬಂಧಗಳ ಗೋಜಲು, ಹುಚ್ಚು ಹಿಡಿಸುವ ಟ್ರಾಫಿಕ್, ವ್ಯಾಯಾಮದ ಕೊರತೆ... ಇವೆಲ್ಲ ಸೇರಿ ಡಯಾಬಿಟಿಸ್ ನಮ್ಮೂರಿನಲ್ಲಿ ರಾರಾಜಿಸುವಂತೆ ಮಾಡಿವೆ ಎಂದು ವೈದ್ಯರ ಅಂದಾಜು.ವೈದ್ಯರು ಆಹಾರದ ಬಗ್ಗೆ ಹೇಳಬಲ್ಲರೇ ಹೊರತು ಸಮಾರಾಧನೆಯಲ್ಲಿ ಅತಿಥೇಯರು ಹೇಗೆ ನಡೆದುಕೊಳ್ಳಬೇಕು ಎಂದು ಹೇಳಲಾರರು. ಡಯಾಬಿಟಿಸ್ ಎಂಬ ಭಯಂಕರ ರಾಕ್ಷಸ ಅಟ್ಟಹಾಸದಿಂದ ನಮ್ಮೆದುರೇ ಕೇಕೆ ಹಾಕುತ್ತಿದ್ದರೂ ಬಂಧು ಬಳಗಕ್ಕೆ ಬಲವಂತವಾಗಿ ಲಾಡು ತಿನ್ನಿಸುವ ನಮ್ಮ ಉತ್ಸಾಹವನ್ನು ನಾವೇ ಹತ್ತಿಕ್ಕಿಕೊಳ್ಳಬೇಕು!ಕನ್ನಡದಲ್ಲಿ ಮತ್ತೆ ಶೇಕ್ಸ್‌ಪಿಯರ್

ನೀನಾಸಂ ತಂಡ ಹೋದ ಬುಧವಾರ ಬೆಂಗಳೂರಿಗೆ ಬಂದು `ಶಿಶಿರ ವಸಂತ~ ಎಂಬ ನಾಟಕವನ್ನು ಆಡಿತು. ಇದು ಶೇಕ್ಸ್‌ಪಿಯರ್‌ನ `ವಿಂಟರ್ಸ್‌ ಟೇಲ್~ ನಾಟಕದ ಅನುವಾದ. ಕೆ.ವಿ.ಅಕ್ಷರ ಅವರ ಅನುಭವಸ್ಥ ನಿರ್ದೇಶನದಲ್ಲಿ ಹೆಗ್ಗೋಡಿನ ಸ್ಥಳೀಯರೇ ಆಡಿದ ಈ ಆಟ ಪಳಗಿದ ವೃತ್ತಿಪರರು ಆಡಿದಷ್ಟು ಸರಾಗವಾಗಿ ಸಾಗಿತು. ಇಂಥ ದೊಡ್ಡ ಪ್ರಮಾಣದ ಪ್ರಯೋಗ ನೋಡುವುದೇ ಈಚೆಗೆ ಅಪರೂಪವಾಗಿದೆ. ತಂಡವನ್ನು ಇಲ್ಲಿ ಕರೆಸಿದವರು ಬೆಂಗಳೂರಿನ ಸಂಚಯ ನಾಟಕ ವೃಂದದವರು.ಮೈಕ್ ಸಹಕರಿಸದ ಕಾರಣ ಮೊದಲ ಅರ್ಧ ಕೆಲವು ಪ್ರೇಕ್ಷಕರಿಗೆ ಕಷ್ಟವಾಯಿತು. ಮಧ್ಯಂತರದ ನಂತರ ನಾಟಕ ಚುರುಕಾಗಿ, ಹಾಡು ಕುಣಿತದಿಂದ ರಂಜಿಸಿತು. ಶೇಕ್ಸ್‌ಪಿಯರ್‌ನ ಮಹಾನ್ ದುರಂತ ನಾಟಕಗಳಾದ ಹ್ಯಾಮ್ಲೆಟ್, ಮ್ಯೋಕ್‌ಬೆತ್‌ಗೆ ಹೋಲಿಸಿದರೆ ಇದು ಪ್ರಸಿದ್ಧವಲ್ಲದ ನಾಟಕ.ಆದರೆ ಇದರಲ್ಲಿ ಕಾಳಿದಾಸನ ಶಾಕುಂತಲ ನಾಟಕದ ಮಾದರಿಯ, ಘರ್ಷಣೆಯನ್ನು ಸಾಮರಸ್ಯದಲ್ಲಿ ಅಂತ್ಯಗೊಳಿಸುವ ಭಾರತೀಯ ನಾಟ್ಯಶಾಸ್ತ್ರದ ಆಶಯವನ್ನು ಕಂಡೆ ಎಂದು ಅಕ್ಷರ ಹೇಳಿಕೊಂಡಿದ್ದಾರೆ. `ನಾಟಕವನ್ನು ಹೊಸದಾಗಿ ಅರ್ಥೈಸುವುದಕ್ಕೆ ಹೋಗದೆ ಕಥೆಯನ್ನು ಮಾತ್ರ ಹೇಳಿದ್ದೇನೆ~ ಎಂದಿದ್ದಾರೆ.

 

ನನಗನ್ನಿಸಿದ್ದು: ನಾಟಕ ಆ ಕಾರಣಕ್ಕೆ ಸ್ವಲ್ಪ ಕುಂಟಿತೋ ಏನೋ? `ಶೇಕ್ಸ್‌ಪಿಯರ್ ಇನ್ ಲವ್~ ಎಂಬ 1990ರ ದಶಕದ ಸಿನಿಮಾ ಆ ಮಹಾನ್ ನಾಟಕಕಾರನ ಜೀವನವನ್ನು ಈ ಕಾಲದ ಯುವ ಪ್ರಣಯದ ಚಿತ್ರದಂತೆ, ಎಗ್ಗಿಲ್ಲದೆ ಬಿಂಬಿಸಿದೆ. ಶೇಕ್ಸ್‌ಪಿಯರ್‌ನಂಥ ಜನಪ್ರಿಯ ಬರಹಗಾರನ ರಂಜನೀಯ ಗುಣ ಮತ್ತು ಸಮಕಾಲೀನ ಅರ್ಥಸಾಧ್ಯತೆಗಳನ್ನು ಸ್ವಲ್ಪ ಸಾರಿಯೇ ಹೇಳುವುದು ತಪ್ಪಾಗಲಾರದೇನೋ?ಕ್ರಿಕೆಟ್ ಜಾತ್ರೆಯ ತಮಾಷೆಗಳು

ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ನೋಡಲು ಬಿಟ್ಟಿ ಟಿಕೆಟ್ ಸಿಗಲಿಲ್ಲ ಎಂದು ಉಪ ಮೇಯರ್ ಮತ್ತು ನಮ್ಮ ಘನ ಕೌನ್ಸಿಲರ್‌ಗಳು ಮುನಿಸಿಕೊಂಡಿದ್ದಾರೆ. ಅದೊಂದು ಪ್ರೈವೇಟ್ ವ್ಯಾಪಾರ, ಹಾಗೆಲ್ಲ ತಮ್ಮ ಹಕ್ಕು ಎಂಬಂತೆ ವಸೂಲಿಬಾಜಿ ಮಾಡಬಾರದು ಎನ್ನುವ ಸಂಕೋಚ ನಮ್ಮ ಪ್ರತಿನಿಧಿಗಳಲ್ಲಿ ಕಾಣುತ್ತಿಲ್ಲ.ಪಂದ್ಯ ನಡೆದಾಗ ಬಂದೋಬಸ್ತ್ ಮಾಡುವುದಕ್ಕೆ 1,200 ಪೊಲೀಸರು ತೊಡಗಿರುತ್ತಾರಂತೆ. ಪೊಲೀಸ್ ಇಲಾಖೆ ಇಂಥ ಖಾಸಗಿ ಇವೆಂಟ್‌ಗೆ ಸಮಯ ವ್ಯಯ ಮಾಡುತ್ತಿರುವುದರಿಂದ ವ್ಯವಸ್ಥಾಪಕರನ್ನು ಶುಲ್ಕ ಕೇಳುವುದು ತಪ್ಪಲ್ಲ.ಅದಿರಲಿ. ಈ ಸರ್ತಿ, ಕೊಲ್ಕತ್ತಾ ನೈಟ್ ರೈಡರ್ಸ್‌ನ ಚಿಯರ್ ಗರ್ಲ್ಸ್ (ಪತ್ರಕರ್ತ-ಮಿತ್ರ ಕರಿಸ್ವಾಮಿ ಅವರ ಅನುವಾದ: ಹುರಿದುಂಬಿಗಳು) ಚಡ್ಡಿ ಟಾಪ್ ಬಿಟ್ಟು ಸಾರಿ ಉಡುತ್ತಾರೆ. ಒಂದು ಪ್ರಶ್ನೆ- ಹಾಗಾದರೆ ಅವರ ಘೋಷ ಗೀತೆ `ಸಾರಿ ಜಹಾಂ ಸೆ ಅಚ್ಛಾ~ ಆಗುತ್ತಾ?

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.