ಭಾನುವಾರ, ಜುಲೈ 25, 2021
22 °C

ಡಿಸಿಎಚ್ ಹತ್ತಿ ಬೀಜಕ್ಕಾಗಿ ನಾಡಕಚೇರಿಗೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಿಸಿಎಚ್ ಹತ್ತಿ ಬೀಜಕ್ಕಾಗಿ ನಾಡಕಚೇರಿಗೆ ಮುತ್ತಿಗೆ

ಸರಗೂರು: ಪಟ್ಟಣದ ಹತ್ತಿ ಬಿತ್ತನೆ ಬೀಜ ಮಾರಾಟಗಾರರು ಡಿಸಿಎಚ್ ಬೀಜದ ಬದಲು ಆರ್‌ಸಿಎಚ್ ಬೀಜವನ್ನು ವಿತರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ನೂರಾರು ರೈತರು ಭಾನುವಾರ ನಾಡಕಚೇರಿಗೆ ಮುತ್ತಿಗೆ ಹಾಕಿದರು.ಶನಿವಾರ ಬಂದ ಡಿಸಿಎಚ್ ಹತ್ತಿ ಬೀಜ ಎಲ್ಲ ಕಡೆ ವಿತರಣೆಯಾಗಿದೆ. ಭಾನುವಾರ ಆರ್‌ಸಿಎಚ್ ಬೀಜ ಬಂದಿದೆ. ಆದರೆ ರೈತರು ಈ ಬೀಜವನ್ನು ಖರೀದಿಸದೇ ಪ್ರತಿಭಟನೆಗೆ ಇಳಿದರು. ರೈತರನ್ನು ಸಂಭಾಳಿಸಲು ಆಗದ ಕಾರಣ ಬಿತ್ತನೆ ಬೀಜ ಮಾರಾಟಗಾರರು ಅಂಗಡಿಗಳಿಗೆ  ಬೀಗ ಹಾಕಿ ಮನೆಯತ್ತ ತೆರಳಿದರು.ಡಿಸಿಎಚ್ ಹತ್ತಿ ಬೀಜ ಮುಗಿದಿದ್ದು, ಆರ್‌ಸಿಎಚ್   ಹತ್ತಿ ಬೀಜ ಮಾತ್ರ ದಾಸ್ತಾನು ಇದೆ. ಆದ್ದರಿಂದ ರೈತರು ಇದನ್ನು ಖರೀದಿಸಬಹುದು ಎಂದು ಜಿಲ್ಲಾ ಕೃಷಿ ಅಧಿಕಾರಿ ಕೃಷ್ಣಪ್ಪ ಮತ್ತು ತಹಶೀಲ್ದಾರ್ ಸಿ.ಎನ್.ಜಗದೀಶ್ ಹೇಳುವ ಮೂಲಕ ಮನವೊಲಿಸುವ ಯತ್ನ ಮಾಡಿದರೂ  ಪ್ರಯೋಜನವಾಗಲಿಲ್ಲ.ಕೃಷಿ ಅಧಿಕಾರಿ ಜಿಲ್ಲಾಧಿಕಾರಿ ಹರ್ಷ ಗುಪ್ತ ಅವರಿಗೆ ಈ ವಿಚಾರವನ್ನು ತಿಳಿಸಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಹರ್ಷಗುಪ್ತ ಅವರು,  ನಾಡಕಚೇರಿ ಮುಂದೆ ಸೇರಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿ ‘ಡಿಸಿಎಚ್ ಹತ್ತಿ ಬೀಜ ಎಷ್ಟು ಬಂದಿದೆಯೋ ಅದನ್ನು ಈಗಾಗಲೇ  ವಿತರಿಸಲಾಗಿದೆ. ಈಗ ಆರ್‌ಸಿಎಚ್ ಹತ್ತಿ ಬೀಜ ಇದೆ. ಅದನ್ನು ತೆಗೆದುಕೊಳ್ಳಿ’ ಎಂದು ಮನವಿ ಮಾಡಿದರು.‘ಈ ಬಾರಿ ಹತ್ತಿ ಬೀಜ ಉತ್ಪಾದನೆ ಕಡಿಮೆಯಾಗಿದೆ. ರಾಜ್ಯದಲ್ಲಿ ಹತ್ತಿ ಬೀಜದ ಸಮಸ್ಯೆ ಆಗಿದೆ. ಆದ್ದರಿಂದ ಆರ್‌ಸಿಎಚ್ ಹತ್ತಿ ಬೀಜ ದಾಸ್ತಾನು ಇದೆ. ಅದನ್ನೇ ನೀವು ತೆಗೆದುಕೊಳ್ಳಿ. ಹುಬ್ಬಳ್ಳಿ, ಧಾರವಾಡ ಭಾಗದಲ್ಲಿ ಆರ್‌ಸಿಎಚ್ ಹತ್ತಿ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ. ಮತ್ತೆ ಡಿಸಿಎಚ್ ಹತ್ತಿ ಬೀಜ ಬರುವ ಗ್ಯಾರಂಟಿ ಇಲ್ಲ’ ಎಂದು ತಿಳಿ ಹೇಳಿದರು.ಜಿಲ್ಲಾಧಿಕಾರಿಯ ಮಾತಿನಿಂದಾಗಿ ರೈತರು ಒಲ್ಲದ ಮನಸ್ಸಿನಿಂದಲೇ ಆರ್‌ಸಿಎಚ್ ಹತ್ತಿ ಬೀಜ ಖರೀದಿಸಲು ಆರಂಭಿಸಿದರು. ಹೀಗಾಗಿ ಬಿಗುವಿನಿಂದ ಕೂಡಿದ ಪರಿಸ್ಥಿತಿಯೂ ತಣ್ಣಗಾಯಿತು. ಇಲ್ಲಿ ಹತ್ತಿ ಬೀಜ ಖರೀದಿಸಲು ಎಚ್.ಡಿ.ಕೋಟೆ, ಹುಣಸೂರು ಮತ್ತು ನಂಜನಗೂಡು  ತಾಲ್ಲೂಕಿನಿಂದ ದೊಡ್ಡ ಸಂಖ್ಯೆಯಲ್ಲಿ ರೈತರು ಬಂದಿದ್ದರು.ತಾಲ್ಲೂಕು ಕೃಷಿ ಅಧಿಕಾರಿ ವೆಂಕಟೇಶ್, ಮೂರ್ತಿ, ಹರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೀಶ್‌ಕರ್ಬಿಕರ್, ನಂಜನಗೂಡು  ಡಿವೈಎಸ್‌ಪಿ ರಾಜಗೋಪಾಲ್, ಸರಗೂರು ಪಿಎಸ್‌ಐ ನವೀನ್, ಬೀಚನಹಳ್ಳಿ ಪಿಎಸ್‌ಐ ನಂಜಪ್ಪ, ನಂಜನಗೂಡು ವೃತ್ತನಿರೀಕ್ಷ ಪ್ರಮೋದ್‌ಕುಮಾರ್,                     ನಂಜನ ಗೂಡು

ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಬಿ.ಜಿ.ರಾಘವೇಂದ್ರ, ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಶಶಿಕುಮಾರ್, ಬೆಟ್ಟದಪುರ ಪೊಲೀಸ್ ಠಾಣೆಯ ಪಿಎಸ್‌ಐ ಕೆ.ಕೆ.ರಘು ಸೇರಿದಂತೆ 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.3 ದಿನಗಳಲ್ಲಿ ಬೀಜ ವಿತರಣೆ: ಹರ್ಷಗುಪ್ತ

ಎಚ್.ಡಿ. ಕೋಟೆ: ‘ತಾಲ್ಲೂಕಿಗೆ 450 ಗ್ರಾಂ ತೂಕದ 90 ಸಾವಿರ ಪ್ಯಾಕೆಟ್ ಹತ್ತಿ ಬೀಜದ ಅವಶ್ಯಕತೆಯಿದ್ದು, ಈಗಾಗಲೇ 53 ಸಾವಿರ  ಪ್ಯಾಕೆಟ್ ವಿತರಿಸಲಾಗಿದೆ. ಇನ್ನುಳಿದ ರೈತರಿಗೆ 2 ರಿಂದ 3 ದಿನಗಳಲ್ಲಿ ಜೀವನ್ನು ಒದಗಿಸಲಾಗವುದು’ ಜಿಲ್ಲಾಧಿಕಾರಿ ಹರ್ಷ ಗುಪ್ತ ಭಾನುವಾರ ಭರವಸೆ ನೀಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರ ಯಾವುದೇ ಹತ್ತಿ ಬೀಜವನ್ನು ಉತ್ಪಾದಿಸಿ   ಕೊಡಲು ಸಾಧ್ಯವಿಲ್ಲ. ಆದ್ದರಿಂದ ಖಾಸಗಿ ಕಂಪೆನಿಗಳು ಉತ್ಪಾದಿಸಿ ಮಾರಾಟ ಮಾಡಲು ಅನುಮತಿ ನೀಡಿದೆ. ಅಂತಹ ಕಂಪೆನಿಗಳು ಮತ್ತು  ಬಿತ್ತನೆ ಬೀಜದ ವರ್ತಕರು ಕಾಳಸಂತೆಯಲ್ಲಿ ಮಾರಾಟ ಮಾಡದಂತೆ ತಡೆಹಿಡಿಯಲಾಗಿದೆ. ಸರಿಯಾದ ರೀತಿಯಲ್ಲಿ ಬೀಜ ತಲುಪಿಸುವಲ್ಲಿ  ಅಧಿಕಾರಿಗಳೊಂದಿಗೆ ಶ್ರಮಿಸಿದ್ದೇವೆ’ ಎಂದು ನುಡಿದರು.‘ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆರ್‌ಸಿಎಚ್ ಹತ್ತಿ ಬೆಳೆಗೆ ಹೆಚ್ಚಿನ ಬೇಡಿಕೆ ಇದ್ದು. ಆ ಬೆಳೆಗೆ ಭವಿಷ್ಯದಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ. ಆದ್ದರಿಂದ ರೈತರು ಡಿಸಿಎಚ್ ತಳಿ ಅವಲಂಬಿಸದೇ ಆರ್‌ಸಿಎಚ್ ತಳಿಯನ್ನು ಬೆಳೆಯಬೇಕು. ಮಹಿಕೋ ಕಂಪೆನಿಯ ಡಿಸಿಎಚ್ ತಳಿಯನ್ನೇ   ಅವಲಂಬಿಸಿ ಕೊಳ್ಳದೇ ಇತರ ಕಂಪೆನಿಗಳಲ್ಲಿ ದಾಸ್ತಾನು ಇರುವ ಹತ್ತಿ ಬೀಜ ಬೆಳೆಯಬೇಕು’ ಎಂದು ಸಲಹೆ ನೀಡಿದರು.ಜಂಟಿ ಕೃಷಿ ನಿರ್ದೇಶಕ ಕೃಷ್ಣಯ್ಯ ಮಾತನಾಡಿ, ಕಳೆದ ವರ್ಷ ತಾಲ್ಲೂಕಿನಲ್ಲಿ 26850 ಹೆಕ್ಟೆರ್ ಹತ್ತಿ ಬೆಳೆ ಬೆಳೆದಿದ್ದು, ಈ ಬಾರಿ 36 ಸಾವಿರ ಹೆಕ್ಟೆರ್ ಹತ್ತಿ ಬೆಳೆಯಲು ರೈತರು ಮುಂದಾಗಿದ್ದಾರೆ. ಕಳೆದ ವರ್ಷ ಹತ್ತಿ ಬೆಳೆಗೆ ಬೆಲೆ ಹೆಚ್ಚು ಲಭಿಸಿದ್ದು, ಈ ವರ್ಷವೂ ಸಹ ಆಂಧ್ರ ಮತ್ತು ಗುಜರಾತ್‌ನಲ್ಲಿ ಉತ್ಪಾದನೆ ಕಡಿಮೆಯಾಗಿರುವುದರಿಂದ ಹೆಚ್ಚಿನ ಬೆಲೆ ಸಿಗುತ್ತದೆ. ಈ ಕಾರಣಕ್ಕಾಗಿಯೇ ಹತ್ತಿ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಿ, ಬೀಜದ ಕೊರತೆಯೂ ದ್ವಿಗುಣವಾಗಿದೆ’ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನಿಷ್‌ಕರ್ಬಿಕರ್, ತಹಶೀಲ್ದಾರ್ ಎನ್.ಸಿ. ಜಗದೀಶ್, ಆರ್.ಐ. ಸಣ್ಣರಾಮಪ್ಪ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.