ಸೋಮವಾರ, ಮೇ 23, 2022
30 °C
ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದ ಹಗರಣ

ಡಿಸಿ ಸೂಚನೆ ಮೇರೆಗೆ ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: `ಆರ್‌ಸಿಯುಡಿಎ ಠೇವಣಿ ಹಣ 2012ರ ಫೆಬ್ರುವರಿಯಿಂದ ಸೆಪ್ಟೆಂಬರ್ ವರೆಗೆ ಮಂಡ್ಯದ ಇಂಡಿಯನ್ ಬ್ಯಾಂಕಿಗೆ ವರ್ಗಾವಣೆಯಾಗಿರುವ ದಾಖಲಾತಿಗಳು ಇವೆ. ಆದರೆ ಇಂಡಿಯನ್ ಬ್ಯಾಂಕಿನವರು ಪ್ರಾಧಿಕಾರದ ಯಾವುದೇ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಅವರು ಸೂಚಿಸಿದ್ದರು' ಎಂದು ದೂರು ದಾಖಲಿಸಿರುವ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ವೈಶಾಲಿ ಅವರು ತಿಳಿಸಿದರು.ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಅವರು, `ಪ್ರಾಧಿಕಾರದವರು ಜಿಲ್ಲಾಡಳಿತ ಅಥವಾ ಸರ್ಕಾರದ ಗಮನಕ್ಕೆ ತಾರದೆ ಒಂದು ಬ್ಯಾಂಕಿನ ಖಾತೆಯ ದೊಡ್ಡ ಮೊತ್ತವನ್ನು ಇನ್ನೊಂದು ಬ್ಯಾಂಕಿನ ಖಾತೆಗೆ ವರ್ಗಾಯಿಸಿದ್ದಾರೆ. ಇದನ್ನು ಪ್ರಾಧಿಕಾರದ ಆಯುಕ್ತರು ಮಾಡಿದ್ದಾರೋ ಅಥವಾ ಪ್ರಾಧಿಕಾರದ ಮಂಡಳಿ ಮಾಡಿದೆಯೋ ಗೊತ್ತಿಲ್ಲ. ಇಂಡಿಯನ್ ಬ್ಯಾಂಕಿನ ಮಂಡ್ಯ ಶಾಖೆಯವರು ತಮ್ಮಲ್ಲಿ ಪ್ರಾಧಿಕಾರದ ಯಾವುದೇ ಅಕೌಂಟ್ ಮತ್ತು ಠೇವಣಿ ಮೊತ್ತ ಇಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ ಇಷ್ಟು ದೊಡ್ಡ ಮೊತ್ತ ಎಲ್ಲಿಗೆ ಹೋಯಿತು ? ಇದನ್ನು ದುರಪಯೋಗ ಪಡಿಸಿಕೊಂಡವರು ಯಾರು ? ಎಂಬುದನ್ನು ತಿಳಿದುಕೊಂಡು ಸಾರ್ವಜನಿಕರ ಹಣವನ್ನು ವಾಪಸು ತರುವ ಉದ್ದೇಶದಿಂದ ಪ್ರಕರಣ ದಾಖಲಿಸುವಂತೆ ನಾನೆ ಸೂಚಿಸಿದೆ' ಎಂದು ಹೇಳಿದರು.ವ್ಯವಸ್ಥಿತ ಜಾಲ?

`ಪ್ರಾಧಿಕಾರದ ಹಣ ವಿನಾಕಾರಣ ಬ್ಯಾಂಕಿನಲ್ಲಿ ಇಡುವ ಬದಲಿಗೆ ತಾತ್ಕಾಲಿಕವಾಗಿ ನನಗೆ ಕೊಟ್ಟರೆ ಅಧಿಕ ಬಡ್ಡಿ ಅಥವಾ ಕಮಿಷನ್ ನೀಡುವುದಾಗಿ ಆಮಿಷ ಒಡ್ಡಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರು ಅಥವಾ ಮುಖ್ಯಸ್ಥರನ್ನು ಬುಟ್ಟಿಗೆ ಹಾಕಿಕೊಂಡು ವಾಮಾ ಮಾರ್ಗದ ಮೂಲಕ ಸಾರ್ವಜನಿಕರ ಹಣ ಪಡೆಯುವವರ ವ್ಯವಸ್ಥಿತ ಜಾಲವೇ ಕಾರ್ಯ ನಿರ್ವಹಿಸುತ್ತಿದ್ದು, ಅದರ ಬಗ್ಗೆ ತನಿಖೆ ನಡೆಸಲಾಗುವುದು' ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.ರಾಮನಗರ ಮತ್ತು ಮಂಡ್ಯಕ್ಕೆ ಸೀಮಿತವಾಗದೆ ಈ ಜಾಲದ ಕಬಂದ ಬಾಹುಗಳು ಇನ್ನಷ್ಟು ನಗರ ಪಟ್ಟಣಗಳನ್ನು ವ್ಯಾಪಿಸಿದೆ. ಪ್ರಾದಿಕಾರಗಳು ತನ್ನ ವ್ಯಾಪ್ತಿಯಲ್ಲಿ ಕೈಗೊಳ್ಳುವ ವಿವಿಧ ಅಭಿವೃದ್ದಿ ಕಾರ್ಯ ಮತ್ತು ಬಡಾವಣೆಗಳಲ್ಲಿ ಕೈಗೊಳ್ಳಬೇಕಾದ ಕೆಲಸ ಕಾರ್ಯಗಳಿಗೆಂದು ನಿಗದಿತ ಮೊತ್ತವನ್ನು ನಿಶ್ಚಿತ ಠೇವಣಿ ರೂಪದಲ್ಲಿ ಬ್ಯಾಂಕ್‌ಗಳಲ್ಲಿ ಇಟ್ಟಿರುತ್ತವೆ. ಬ್ಯಾಂಕಿನಲ್ಲಿ ಬರುವ ಬಡ್ಡಿಗಿಂತ ಅಧಿಕ ಬಡ್ಡಿ ಆಸೆ ತೋರಿಸಿ ಅಥವಾ ಕಮಿಷನ್ ನೀಡುವ ಆಮಿಷ ಒಡ್ಡಿ ಕೆಲವರು ಈ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ.ಇದಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳ ನಕಲಿ ಲೆಟರ್‌ಹೆಡ್‌ಗಳು ಬಳಕೆಯಾಗುತ್ತಿವೆ. ಈ ಪತ್ರಗಳ ಮೂಲಕ ಪ್ರಾಧಿಕಾರಕ್ಕೆ ಪತ್ರ ಬರೆದು ಹೆಚ್ಚು ಬಡ್ಡಿ ನೀಡುವುದಾಗಿ ಹೇಳಿ, ಬ್ಯಾಂಕಿನ ಖಾತೆಯ ಮೊತ್ತವನ್ನು ವರ್ಗಾಯಿಸುವಂತೆ ಮಾಡಲಾಗುತ್ತಿದೆ. ಇದರ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.