ಗುರುವಾರ , ಮೇ 13, 2021
16 °C

ಡೆಂಗೆ: ಆರೋಗ್ಯ ಇಲಾಖೆ ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಯಕೊಂಡ: ಹೋಬಳಿಯ ದೊಡ್ಡ ಮಾಗಡಿಯಲ್ಲಿ ಬಾಲಕಿ ಶ್ರೀನಿಧಿ ಡೆಂಗೆ ಜ್ವರಕ್ಕೆ ಬಲಿಯಾದ ಘಟನೆಯಿಂದ ಆರೋಗ್ಯ ಇಲಾಖೆ ಎಚ್ಚೆತ್ತು, ಸಮೀಕ್ಷೆ ಕಾರ್ಯ ಚುರುಕುಗೊಳಿಸಿದೆ. ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿನುತಾ ಮಾರ್ಗದರ್ಶನದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿ ಸಮೀಕ್ಷೆ ನಡೆಸುತ್ತಿದ್ದಾರೆ.  ಮೇ 28ರಂದು ಗ್ರಾಮದ ಬಾಲಕಿ ಶ್ರೀನಿಧಿಗೆ ಡೆಂಗೆ ಸೋಂಕು ತಗುಲಿರುವುದು ಖಚಿತವಾಗುತ್ತಲೇ ಇಲಾಖೆ ಸಮೀಕ್ಷಾ ತಂಡಗಳ ಸಂಖ್ಯೆ ಹೆಚ್ಚಿಸಿದೆ. ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಮತ್ತು ಕ್ಷೇತ್ರಾರೋಗ್ಯ ಶಿಕ್ಷಣಾಧಿಕಾರಿ ಉಸ್ತುವಾರಿಯಲ್ಲಿ ತಂಡ ರಚಿಸಿ ಲಾರ್ವಾ ಸಮೀಕ್ಷೆ ಕಾಯಾಚರಣೆ ಚುರುಕುಗೊಳಿಸಿತು. ಕೇವಲ ಇಬ್ಬರೇ ಆಶಾ ಕಾರ್ಯಕರ್ತೆಯರಿಂದ ನಡೆಯುತ್ತಿದ್ದ ಲಾರ್ವಾ ಸಮೀಕ್ಷೆ  ಇಲಾಖೆಯ 7 ಸಿಬ್ಬಂದಿಯಿಂದ ನಡೆಯುತ್ತಿದೆ.ಮೇ 28ರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದ ಪ್ರತೀ ಮನೆಗೆ ತರಳಿ ನೀರು ಸಂಗ್ರಹಿಸಿರುವ ತೊಟ್ಟಿ, ಕೊಳಗ, ಡ್ರಮ್ ಇತ್ಯಾದಿ ಪರೀಕ್ಷಿಸುತ್ತಿದ್ದಾರೆ. ಲಾರ್ವಾ ಇರುವ ತೊಟ್ಟಿ ಡ್ರಮ್ ನೀರನ್ನು ಖಾಲಿ ಮಾಡಿಸಿ ಹೊಸ ನೀರು ತುಂಬಿಸಿ ಬಳಸಲು ಸಲಹೆ ಮಾಡುತ್ತಿದ್ದಾರೆ. ನೀರು ಸಂಗ್ರಾಹಕಗಳನ್ನು ತೊಳೆದು ಚೆನ್ನಾಗಿ ಒಣಗಿಸಿ ಸುಣ್ಣ ಬಳಿಯುವಂತೆ ತಿಳಿವಳಿಕೆ ನೀಡುತ್ತಿದ್ದಾರೆ. ಹೆಚ್ಚು ದಿನ ನೀರು ಸಂಗ್ರಹಿಸಿ ಬಳಸದೆ, ಒಂದೆರಡು ದಿನದಲ್ಲಿ ಬಳಸುವಂತೆ ತಿಳಿಸಲಾಗುತ್ತಿದೆ. ಗ್ರಾಮದ ತಿಪ್ಪೆ, ಚರಂಡಿ ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯ್ತಿಗೆ ಸೂಚಿಸಿದೆ.  ಮಾಗಡಿಯಲ್ಲಿ 176 ಮನೆಗಳಿದ್ದು ಪ್ರತೀ ಮನೆಗೂ 2ಸಾರಿ ಭೇಟಿ ನೀಡಿ ಸೂಕ್ತ ತಿಳಿವಳಿಕೆ ನೀಡಿದ್ದೇವೆ. ನೀರಿನ ಕೊರತೆಯೇನೂ ಕಂಡು ಬರುತ್ತಿಲ್ಲವಾದರೂ ಗ್ರಾಮಸ್ಥರಿಗೆ ಡೆಂಗೆ ಹರಡುವಿಕೆ ಕುರಿತು ಮಾಹಿತಿ ಇಲ್ಲದ ಕಾರಣ ಕೆಲವೆಡೆ ಲಾರ್ವಾ ಕಂಡು ಬಂದಿದೆ. ಹೆಚ್ಚು ಗಂಭೀರವಾಗಿ ಪರಿಗಣಿಸಿ ಸಮೀಕ್ಷಾ ಕಾರ್ಯನಡೆಸಿ ಡೆಂಘೆ ಹರಡದಂತೆ ತಡೆಯುವ ಪ್ರಯತ್ನ ನಡೆದಿದೆ ಎನ್ನುತ್ತಾರೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.