ಗುರುವಾರ , ಏಪ್ರಿಲ್ 15, 2021
23 °C

ಡೇವಿಸ್ ಕಪ್ ಟೆನಿಸ್: ಭಾರತದ ಎದುರಾಳಿ ಸರ್ಬಿಯ.ಯುವ ಆಟಗಾರರಿಗೆ ಅಗ್ನಿಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೋವಿ ಸಾದ್, ಸರ್ಬಿಯ (ಪಿಟಿಐ): ಡೇವಿಸ್ ಕಪ್ ಟೆನಿಸ್ ಟೂರ್ನಿಯ ವಿಶ್ವಗುಂಪಿನ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಶುಕ್ರವಾರದಿಂದ ಸರ್ಬಿಯ ಜೊತೆ ಪೈಪೋಟಿ ನಡೆಸಲಿದೆ. ಸೋಮದೇವ್ ದೇವ್‌ವರ್ಮನ್ ನೇತೃತ್ವದ ಭಾರತ ತಂಡಕ್ಕೆ ಬಲಿಷ್ಠ ಸರ್ಬಿಯ ವಿರುದ್ಧದ ಪಂದ್ಯ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ. ಅನುಭವಿ ಆಟಗಾರರಾದ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಅವರ ಅನುಪಸ್ಥಿತಿಯಲ್ಲಿ ಭಾರತ ಕಣಕ್ಕಿಳಿಯಲಿದೆ.ಗಾಯದ ಕಾರಣ ಪೇಸ್ ಮತ್ತು ಭೂಪತಿ ಅವರು ಈ ಪಂದ್ಯದಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಇದರಿಂದಾಗಿ ಭಾರತ ತಂಡ ಯುವ ಆಟಗಾರರನ್ನೇ ನೆಚ್ಚಿಕೊಳ್ಳಬೇಕಾಗಿದೆ. ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಮತ್ತು ವಿಶ್ವದ ಮೂರನೇರ್ಯಾಂಕಿಂಗ್‌ನ ಆಟಗಾರ ನೊವಾಕ್ ಜೊಕೊವಿಕ್, ವಿಕ್ಟರ್ ಟ್ರಾಯ್ಕಿ, ಜಾಂಕೊ ತಿಪ್ಸವೆರಿಕ್ ಮತ್ತು ನೆನಾದ್ ಜಿಮೋಂಜಿಕ್ ಅವರನ್ನೊಳಗೊಂಡ ಸರ್ಬಿಯ ಗೆಲುವು ಪಡೆಯುವ ನೆಚ್ಚಿನ ತಂಡ ಎನಿಸಿದೆ.ಜೊಕೊವಿಕ್ ಭಾರತದ ವಿರುದ್ಧ ಆಡುವರೇ ಎಂಬುದು ಇನ್ನೂ ಖಚಿತವಾಗಿಲ್ಲ. ಇತ್ತೀಚೆಗೆ ದುಬೈನಲ್ಲಿ ನಡೆದ ಟೂರ್ನಿಯಲ್ಲಿ ಅವರು ಚಾಂಪಿಯನ್ ಆಗಿದ್ದರು. ಅವರ ಅನುಪಸ್ಥಿತಿಯಲ್ಲೂ ಸರ್ಬಿಯಕ್ಕೆ ಗೆಲುವು ಪಡೆಯುವ ಉತ್ತಮ ಅವಕಾಶವಿದೆ.ಭಾರತ ತಂಡದ ಯಶಸ್ಸು ಸೋಮ್‌ದೇವ್ ಅವರನ್ನು ಅವಲಂಬಿಸಿದೆ. ಎದುರಾಳಿ ವಿರುದ್ಧದ ಐದು ಪಂದ್ಯಗಳಲ್ಲಿ (ನಾಲ್ಕು ಸಿಂಗಲ್ಸ್ ಮತ್ತು ಒಂದು ಡಬಲ್ಸ್) ಒಂದರಲ್ಲಿ ಗೆಲುವು ಪಡೆದರೂ ಭಾರತದ ಮಟ್ಟಿಗೆ ಅದು ಬಲುದೊಡ್ಡ ಸಾಧನೆ ಎನಿಸಲಿದೆ.ಡಬಲ್ಸ್ ವಿಭಾಗದ ಪಂದ್ಯದಲ್ಲಿ ಸೋಮ್‌ದೇವ್ ಅಥವಾ ಕರಣ್ ರಸ್ತೋಗಿ ಅವರು ರೋಹನ್ ಬೋಪಣ್ಣ ಅವರಿಗೆ ಸಾಥ್ ನೀಡಲಿದ್ದಾರೆ. ತಂಡದ ನಾಯಕ ಎಸ್.ಪಿ. ಮಿಶ್ರಾ ಮತ್ತು ಕೋಚ್ ನಂದನ್ ಬಾಲ್ ಅವರು ಭಾರತ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಭಾರತ ಮತ್ತು ಸರ್ಬಿಯ ಡೇವಿಸ್ ಕಪ್ ಟೂರ್ನಿಯಲ್ಲಿ ಇದುವರೆಗೆ 1-1 ರಲ್ಲಿ ಸಮಬಲ ಸಾಧಿಸಿವೆ. 1927 ರಲ್ಲಿ ಭಾರತ 3-0 ರಲ್ಲಿ ಅಂದಿನ ಯುಗೋಸ್ಲಾವಿಯ ತಂಡವನ್ನು ಮಣಿಸಿತ್ತು. 1988 ರಲ್ಲಿ ನವದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ 2-3 ರಲ್ಲಿ ಸೋಲು ಅನುಭವಿಸಿತ್ತು.ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಬ್ರೆಜಿಲ್ ತಂಡವನ್ನು 3-2 ರಲ್ಲಿ ಸೋಲಿಸಿ ಭಾರತ ತಂಡ ವಿಶ್ವಗುಂಪಿನಲ್ಲಿ ಆಡುವ ಅರ್ಹತೆ ಪಡೆದಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.