ಮಂಗಳವಾರ, ಮಾರ್ಚ್ 9, 2021
18 °C

ಡೊನಾಲ್ಡ್‌ ಟ್ರಂಪ್‌ ಅಪಾಯಕಾರಿ ಅಮೆರಿಕ ಭದ್ರತಾ ತಜ್ಞರ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೊನಾಲ್ಡ್‌ ಟ್ರಂಪ್‌ ಅಪಾಯಕಾರಿ ಅಮೆರಿಕ ಭದ್ರತಾ ತಜ್ಞರ ಎಚ್ಚರಿಕೆ

ವಾಷಿಂಗ್ಟನ್ (ಪಿಟಿಐ): ಅಮೆರಿಕದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದರೆ ದೇಶದ  ಸುರಕ್ಷತೆಗೆ ಧಕ್ಕೆ ಉಂಟಾಗಲಿದೆ ಎಂದು ಪಕ್ಷದ ಹಿರಿಯ ರಾಷ್ಟ್ರೀಯ ಭದ್ರತಾ ಪರಿಣತರು ಮತ್ತು ರಾಜತಾಂತ್ರಿಕ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.ಸಾರ್ವತ್ರಿಕ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರನ್ನು ಎದುರಿಸಲು  ಸಿದ್ಧತೆ ನಡೆಸಿರುವ ಟ್ರಂಪ್ ಅವರಿಗೆ, ತಮ್ಮದೇ ಪಕ್ಷದ ಆಡಳಿತಾವಧಿಯಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ಅಧಿಕಾರಿಗಳು ತಮ್ಮ ವಿರುದ್ಧ ನಡೆಸಿರುವ ವಾಗ್ದಾಳಿ ತೀವ್ರ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ.ರಿಚರ್ಡ್‌ ನಿಕ್ಸನ್‌ ಅವರಿಂದ ಜಾರ್ಜ್‌ ಬುಷ್‌ ಅವರ ಅವಧಿಯಲ್ಲಿ ರಿಪಬ್ಲಿಕನ್ ಆಡಳಿತದಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ನಿರೂಪಕರಾಗಿ ಸೇವೆ ಸಲ್ಲಿಸಿದ್ದ 50 ಮಂದಿಯ ಗುಂಪು ಟ್ರಂಪ್‌ ವಿರುದ್ಧದ ಬಹಿರಂಗ ಪತ್ರಕ್ಕೆ ಸಹಿ ಹಾಕಿದೆ. ‘ನಮ್ಮಲ್ಲಿ ಯಾರೂ ಟ್ರಂಪ್‌ ಅವರಿಗೆ ಮತ ಹಾಕುವುದಿಲ್ಲ. ವಿದೇಶಾಂಗ ನೀತಿಯ ದೃಷ್ಟಿಯಿಂದ ಟ್ರಂಪ್ ಅವರು ಅಧ್ಯಕ್ಷರಾಗಲು ಮತ್ತು ಆಡಳಿತದ ಮುಖ್ಯಸ್ಥರಾಗಲು ಅರ್ಹತೆ ಪಡೆದಿಲ್ಲ. ಅಲ್ಲದೆ, ಅವರು ಅಪಾಯಕಾರಿ ಅಧ್ಯಕ್ಷರಾಗಲಿದ್ದು, ನಮ್ಮ ದೇಶದ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸಲಿದ್ದಾರೆ. ಅಮೆರಿಕದ ಇತಿಹಾಸದಲ್ಲೇ ಅತಿ ಅಜಾಗರೂಕ ಅಧ್ಯಕ್ಷರಾಗಲಿದ್ದಾರೆ’ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.‘ಮೂಲಭೂತವಾಗಿ ಅಧ್ಯಕ್ಷರಾಗಲು ಅಗತ್ಯವಾದ ಗುಣ, ಮೌಲ್ಯಗಳು ಮತ್ತು ಅನುಭವ ಟ್ರಂಪ್ ಅವರಿಗಿಲ್ಲ. ಅಮೆರಿಕದ ಮುಕ್ತ ಜಗತ್ತಿನ ನಾಯಕತ್ವದ ನೈತಿಕ ಅಧಿಕಾರವನ್ನು ಅವರು ದುರ್ಬಲಗೊಳಿಸುತ್ತಾರೆ’ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.‘ಅತಿಮುಖ್ಯವಾಗಿರುವ   ರಾಷ್ಟ್ರೀಯ ಹಿತಾಸಕ್ತಿಗಳು, ಅದರ ಸಂಕೀರ್ಣ ರಾಜತಾಂತ್ರಿಕ ಸವಾಲುಗಳು, ದೇಶದ ಅತ್ಯಗತ್ಯ ಮೈತ್ರಿಕೂಟಗಳು ಹಾಗೂ ವಿದೇಶಾಂಗ ನೀತಿ ರೂಪುಗೊಳ್ಳುವ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ತಮ್ಮಲ್ಲಿ ಅತ್ಯಲ್ಪ ಜ್ಞಾನ ಇರುವುದನ್ನು ಅವರು ನಿರಂತರವಾಗಿ ಪ್ರದರ್ಶಿಸುತ್ತಾ ಬಂದಿದ್ದಾರೆ.ಟ್ರಂಪ್‌ ಅವರು ತಮ್ಮ ಜ್ಞಾನಮಟ್ಟವನ್ನು ಹೆಚ್ಚಿಸಿಕೊಳ್ಳುವ ಯಾವುದೇ ಆಸಕ್ತಿ ಪ್ರದರ್ಶಿಸಿಲ್ಲ’ ಎಂದು ತಜ್ಞರು ಟೀಕಿಸಿದ್ದಾರೆ. ‘ಅವರಲ್ಲಿ ಸ್ವಯಂ ನಿಯಂತ್ರಣವಿಲ್ಲ ಮತ್ತು ದುಡುಕಿನಿಂದ ವರ್ತಿಸುತ್ತಾರೆ. ವೈಯಕ್ತಿಕ ಟೀಕೆಗಳನ್ನು ಸಹಿಸುವುದಿಲ್ಲ.ತಮ್ಮ ಅಸಂಬದ್ಧ ನಡವಳಿಕೆಯಿಂದ ನಮ್ಮ ಅತಿ ಸಮೀಪದ ಮಿತ್ರದೇಶಗಳಿಗೆ ಎಚ್ಚರಿಕೆ ನೀಡಿದ್ದಾರೆ. ಟ್ರಂಪ್ ಅವರ ಈ ಎಲ್ಲ ಅಂಶಗಳೂ ದೇಶದ ಅಧ್ಯಕ್ಷರಾಗುವ ಮತ್ತು ಆಡಳಿತದ ಮುಖ್ಯಸ್ಥರಾಗುವ ವ್ಯಕ್ತಿಯಲ್ಲಿನ ಅಪಾಯಕಾರಿ ಗುಣಗಳಾಗಿವೆ’ ಎಂದು ಅವರು ವಿಶ್ಲೇಷಿಸಿದ್ದಾರೆ.ಉತ್ತರ  ಹುಡುಕಲಿ: ಟ್ರಂಪ್ ತಿರುಗೇಟು

ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿರುವ ಡೊನಾಲ್ಡ್ ಟ್ರಂಪ್, ‘ಜಗತ್ತು ಕ್ಷೋಭೆಯಿಂದ ಕೂಡಿರುವುದಕ್ಕೆ ವಾಷಿಂಗ್ಟನ್‌ನ  ಗಣ್ಯರು ಉತ್ತರಗಳನ್ನು ಹುಡುಕಲಿ’ ಎಂದು ತೀಕ್ಷ್ಣ ತಿರುಗೇಟು ನೀಡಿದ್ದಾರೆ.

‘ಜಗತ್ತು ಅಸುರಕ್ಷಿತವಾಗುವುದಕ್ಕೆ ಅವರನ್ನು ಹೊಣೆಗಾರರನ್ನಾಗಿಸಬೇಕು. ಇದು ವಾಷಿಂಗ್ಟನ್‌ನ ವಿಫಲ ಗಣ್ಯರು ತಮ್ಮ ಅಧಿಕಾರವನ್ನು ಪಡೆದುಕೊಳ್ಳಲು ಮಾಡುತ್ತಿರುವ ಪ್ರಯತ್ನವಷ್ಟೇ’ ಎಂದು  ಲೇವಡಿ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.