ಶುಕ್ರವಾರ, ಮೇ 7, 2021
26 °C

ಡೋಣಿ ಸೇತುವೆ ಮುಳುಗಿ ಸಂಚಾರಕ್ಕೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ರಾಜ್ಯದಲ್ಲಿ ಮಳೆ ಭಾನುವಾರ ತುಂಬ ಕಡಿಮೆಯಾಗಿದೆ. ಆದರೆ, ವಿಜಾಪುರ ಜಿಲ್ಲೆಯಲ್ಲಿ ಶನಿವಾರ ಸರಿದ ಮಳೆಯಿಂದ ತಾಳಿಕೋಟೆ- ಹಡಗಿನಾಳ  ರಸ್ತೆಯಲ್ಲಿರುವ ಡೋಣಿ ಸೇತುವೆ ಮೇಲೆ ಭಾನುವಾರ ನೀರು ತುಂಬಿ ಹರಿದು ವಾಹನ ಸಂಚಾರಕ್ಕೆ ಸುಮಾರು 4 ತಾಸು ಅಡಚಣೆಯಾಯಿತು.ಇದೇ ಸಂದರ್ಭದಲ್ಲಿ ಈ ಮಾರ್ಗದಲ್ಲಿ ದಾವಣಗೆರೆಯಿಂದ ಪಟ್ಟಣಕ್ಕೆ ಆಗಮಿಸುತ್ತಿದ್ದ ಸರಕು ಸಾಗಣೆ ವಾಹನವೊಂದು ಪ್ರವಾಹದ ಸೆಳವಿಗೆ ಸಿಲುಕಿತು. ಚಾಲಕ ಮತ್ತು ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ. ಪ್ರವಾಹ ಕಡಿಮೆಯಾದ ಮೇಲೆ ಜೆಸಿಬಿ ಯಂತ್ರಗಳ ನೆರವಿನಿಂದ ವಾಹನವನ್ನು ಹೊರತೆಗೆಯಲಾಯಿತು.ಉತ್ತರ ಕರ್ನಾಟದ ಭಾಗದಲ್ಲಿ ಭಾನುವಾರ ಮಳೆ ಕ್ಷೀಣಿಸಿದೆ. ಬಾಗಲಕೋಟೆ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ತುಂತುರು ಮಳೆಯಾಗಿದೆ.ಶಿವಮೊಗ್ಗ ಜಿಲ್ಲೆಯಲ್ಲಿ ಸಾಧಾರಣ ಮಳೆ ಆಗುತ್ತಿದ್ದು, ಲಿಂಗನಮಕ್ಕಿ ಮತ್ತು ತುಂಗಾ ಜಲಾಶಯಗಳ ಒಳಹರಿವು ತುಸು ಹೆಚ್ಚಾಗಿದೆ. ಭದ್ರಾ ಜಲಾಶಯದ ಒಳಹರಿವು ಕಡಿಮೆಯಾಗಿದೆ.ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ ಭಾನುವಾರ ಬೆಳಿಗ್ಗೆ 8ಕ್ಕೆ 1,760.30 ಅಡಿ ಇತ್ತು. ಒಳಹರಿವು 6,196 ಕ್ಯೂಸೆಕ್‌ಗೆ ಹೆಚ್ಚಿದೆ. ಶನಿವಾರ ಒಳ ಹರಿವು 4,790 ಕ್ಯೂಸೆಕ್ ಇತ್ತು. ತುಂಗಾ ಜಲಾಯಶಕ್ಕೆ 6,000 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಷ್ಟೆ ಪ್ರಮಾಣದ ನೀರನ್ನು ಜಲಾಶಯದಿಂದ ನದಿಗೆ ಬಿಡಲಾಗುತ್ತಿದೆ.ಭದ್ರಾ ಜಲಾಶಯದ ನೀರಿನಮಟ್ಟ ಶನಿವಾರ ಬೆಳಿಗ್ಗೆ 8ಗಂಟೆಗೆ 124.70 (ಗರಿಷ್ಠ 186) ಅಡಿ ಇತ್ತು. ಒಳಹರಿವು 2,510 ಕ್ಯೂಸೆಕ್‌ಗೆ ಕುಸಿದಿದೆ. ಶನಿವಾರ ಒಳಹರಿವು 7,487ಕ್ಯೂಸೆಕ್ ಇತ್ತು.ಕಬಿನಿ ಜಲಾಶಯ: ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದ ನೀರಿನ ಮಟ್ಟವು 24 ಗಂಟೆಗಳಲ್ಲಿ 3 ಅಡಿ ಹೆಚ್ಚಿ 2,274 ಅಡಿಗೆ ತಲುಪಿದೆ. ಮುಂಗಾರು ಆರಂಭವಾದಂದಿನಿಂದ ಇದುವರೆಗೆ 29 ಅಡಿ ನೀರು ಬಂದಂತಾಗಿದೆ. ಭಾನುವಾರ ಒಳಹರಿವು 10 ಸಾವಿರ ಕ್ಯೂಸೆಕ್ ಇತ್ತು. ಕುಡಿಯುವ ನೀರು ಮತ್ತು ಕೃಷಿಗಾಗಿ  1 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.  2,284 ಅಡಿ. ಗರಿಷ್ಠ ಮಟ್ಟದ ಜಲಾಶಯ ಭರ್ತಿಗೆ ಕೇವಲ 10 ಅಡಿ ಬಾಕಿ ಇದೆ.  ಕೊಡಗು ಜಿಲ್ಲೆಯ ಮಡಿಕೇರಿ, ಸಂಪಾಜೆ, ಭಾಗಮಂಡಲ, ನಾಪೋಕ್ಲು ಸೇರಿದಂತೆ ಅಲ್ಲಲ್ಲಿ ಸಾಧಾರಣವಾಗಿ ಮಳೆಯಾಗಿದೆ.

ಕಾವೇರಿ ಉಗಮಸ್ಥಳವಾಗಿರುವ ತಲಕಾವೇರಿ- ಭಾಗಮಂಡಲ ಸುತ್ತಮುತ್ತ  24 ಗಂಟೆಗಳ ಅವಧಿಯಲ್ಲಿ 27 ಮಿ.ಮೀ. ಮಳೆಯಾಗಿದೆ. ಮಡಿಕೇರಿಯಲ್ಲಿ 47 ಮಿ.ಮೀ. ಸಂಪಾಜೆಯಲ್ಲಿ 34 ಮಿ.ಮೀ. ಮಳೆಯಾಗಿದೆ.ಹಾರಂಗಿ ಜಲಾಶಯ: ಹಾರಂಗಿ ಜಲಾನಯನ ಪ್ರದೇಶದಲ್ಲಿ ಮಳೆ ರಭಸ ಕಡಿಮೆಯಾಗಿದೆ.  ಜಲಾಶಯಕ್ಕೆ 937 ಕ್ಯೂಸೆಕ್  ಒಳಹರಿವು ಇದೆ. ಜಲಾಶಯದಲ್ಲಿ ಈಗ 2,829.62  ಅಡಿ ನೀರು ಸಂಗ್ರಹವಾಗಿದೆ (ಗರಿಷ್ಠ ಮಟ್ಟ 2,859 ಅಡಿ). ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದ ಒಳಹರಿವು ಮತ್ತಷ್ಟು ಕಡಿಮೆಯಾಗಿದೆ. ಅಣೆಕಟ್ಟೆಗೆ ಒಳಹರಿವುಭಾನುವಾರ 4,962 ಕ್ಯೂಸೆಕ್‌ಗೆ ಇಳಿದಿದೆ. ನೀರಿನಮಟ್ಟ 79.70 ಅಡಿಗೆ ತಲುಪಿದೆ. ಕುಡಿಯುವ ನೀರಿಗಾಗಿ 1,188 ಕ್ಯೂಸೆಕ್ ನೀರನ್ನು ಬಳಸಿಕೊಳ್ಳಲಾಗುತ್ತಿದೆ.ಕಳೆದ ವರ್ಷ ಇದೇ ದಿನ ನೀರಿನಮಟ್ಟ 72.95 ಅಡಿ ಇತ್ತು. ಒಳಹರಿವು 8,004 ಕ್ಯೂಸೆಕ್ ಇದ್ದರೆ, ಹೊರಹರಿವು 1,267 ಕ್ಯೂಸೆಕ್ ಇತ್ತು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.ಕಳೆಗಟ್ಟಿದ `ಗಗನಚುಕ್ಕಿ'

ಮಳವಳ್ಳಿ:
ತಾಲ್ಲೂಕಿನ ಪ್ರವಾಸಿ ತಾಣ ತಾಲ್ಲೂಕಿನ ಶಿವನಸಮುದ್ರಂ (ಬ್ಲಫ್) ಬಳಿಯಿರುವ ಗಗನಚುಕ್ಕಿ ಜಲಪಾತ ಮೈದುಂಬಿಕೊಳ್ಳುತ್ತಿದೆ. ಇತ್ತೀಚೆಗೆ ಬಿದ್ದ ಮಳೆಯಿಂದ ಕಾವೇರಿಯಲ್ಲಿ ನೀರು ಹರಿದು ಬರುತ್ತಿರುವುದರಿಂದ ಜಲಪಾತ ಕಳೆಗಟ್ಟುತ್ತಿದೆ.ಕಡಲ್ಕೊರೆತ: 3 ಮನೆಗಳಿಗೆ ಹಾನಿ

ಉಳ್ಳಾಲ:
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಬಳಿ ಸಮುದ್ರ ಕೊರೆತ ಬಿರುಸುಗೊಂಡಿದ್ದು ಭಾನುವಾರ ಮೂರು ಮನೆಗಳಿಗೆ ಹಾನಿ ಸಂಭವಿಸಿದೆ.ಮುಕ್ಕಚ್ಚೇರಿ ನಿವಾಸಿಗಳಾದ ಅಲಿಯಬ್ಬ ಫಕೀರ್, ರೆಹನಾ, ಅಲಿಯಮ್ಮ ಎಂಬುವವರ ಮನೆಗಳು ಹಾನಿಗೊಂಡಿವೆ.  ಸುಭಾಷ ನಗರ ಹಾಗೂ ಹಿಲೇರಿಯಾ ನಗರದಲ್ಲಿ ಕಲ್ಲು ಹಾಕಿ ತಾತ್ಕಾಲಿಕ ಪರಿಹಾರ ಒದಗಿಸಲಾಗಿದೆ. ಸಮೀಪದ ಕೈಕೋ ಹಾಗೂ ಮುಕ್ಕಚ್ಚೇರಿ ಪರಿಸರದಲ್ಲಿ ಕಡಲಿನ ಅಬ್ಬರ ಜಾಸ್ತಿಯಾಗಿ ಮನೆಗಳಿಗೆ ಹಾನಿ ಸಂಭವಿಸಿದೆ. `ನಮಗೆ ಸರ್ಕಾರ ಸಮರ್ಪಕ ಜಾಗದಲ್ಲಿ ಮರುವಸತಿ ಕಲ್ಪಿಸಬೇಕು. ಯಾವುದೋ ಕಾಡು ಅಥವಾ ಜನವಸತಿ ಇಲ್ಲದೇ ಇರುವ ಪ್ರದೇಶಗಳಲ್ಲಿ ಸರ್ಕಾರ ಮನೆ ಅಥವಾ ಜಾಗ ನೀಡಿದರೆ ನಮ್ಮಿಂದ ಬದುಕಲು ಸಾಧ್ಯವಿಲ್ಲ' ಎಂದು ಸಂತ್ರಸ್ತ ಅಲಿಯಬ್ಬ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.