ಶುಕ್ರವಾರ, ಜನವರಿ 17, 2020
22 °C

ತಂಡದಲ್ಲಿ ಬಿರುಕಿಗೆ ವೀರೂ ಕಾರಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರ್ತ್ (ಪಿಟಿಐ): ಭಾರತ ಕ್ರಿಕೆಟ್ ತಂಡದೊಳಗೆ ಬಿರುಕು ಮೂಡಿದ್ದು, ಇದಕ್ಕೆ ಕಾರಣ ವೀರೇಂದ್ರ ಸೆಹ್ವಾಗ್...

-ಹೀಗೆಂದು ಆಸ್ಟ್ರೇಲಿಯಾ ಮಾಧ್ಯಮಗಳು ಸುದ್ದಿಯ ಸದ್ದಿನೊಂದಿಗೆ ಅಚ್ಚರಿ ಮೂಡಿಸಿವೆ.ಬಾರ್ಡರ್-ಗಾವಸ್ಕರ್ ಟೆಸ್ಟ್ ಸರಣಿಯಲ್ಲಿ ಸತತ ಎರಡು ಟೆಸ್ಟ್‌ಗಳಲ್ಲಿ ಹೀನಾಯವಾಗಿ ಸೋಲನುಭವಿಸಿದ ಪ್ರವಾಸಿ ತಂಡವು ಒತ್ತಡದಲ್ಲಿ    ಸಿಲುಕಿದೆ. ಇಂಥ ಸಂದರ್ಭದಲ್ಲಿ ತಂಡದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ.

 

`ವೀರೂ~ ಕೆಲವು ಆಟಗಾರರನ್ನು ತಮ್ಮ ಬೆಂಬಲಕ್ಕೆ ಇಟ್ಟುಕೊಂಡು ಗುಂಪುಗಾರಿಕೆ ಹುಟ್ಟುಹಾಕಿದ್ದಾರೆ ಎನ್ನುವ ಅಭಿಪ್ರಾಯವನ್ನೂ ಹರಿಬಿಡಲಾಗಿದೆ.ಡ್ರೆಸಿಂಗ್ ಕೋಣೆಯಲ್ಲಿ ಶಾಂತಯುತ ವಾತಾವರಣ ಇರುವಂತೆ ಮಾಡಲು ಕೋಚ್ ಡಂಕನ್ ಫ್ಲೆಚರ್ ಅವರಿಗೂ ಕಷ್ಟವಾಗುತ್ತಿದೆ. ಸೆಹ್ವಾಗ್ ಗುಂಪು ಬಂಡೆದ್ದಿದೆ ಎಂದು ದಿ ಕೋರಿಯರ್ ಮೇಲ್ ವರದಿ ಮಾಡಿದೆ.`ಭಾರತ ತಂಡದಲ್ಲಿರುವ ಕೆಲವು ಆಟಗಾರರು ಮಹೇಂದ್ರ ಸಿಂಗ್ ದೋನಿ ಬದಲಿಗೆ ವೀರೇಂದ್ರ ಸೆಹ್ವಾಗ್ ನಾಯಕತ್ವ ವಹಿಸಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ತಂಡದ  ಇನಿಂಗ್ಸ್ ಬಲಗೊಳ್ಳುವಂಥ ಯೋಚನೆ ರೂಪಿಸುತ್ತಿಲ್ಲ. ಸ್ವತಃ ಮಹಿ ತಂಡದ ಹಿತವನ್ನು ಪರಿಗಣಿಸದೆಯೇ ಆಡುತ್ತಿದ್ದಾರೆ~ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.ಹಿಂದೆಂದೂ ಕಾಣದಿದ್ದಂಥ ವಾತಾವರಣ ಡ್ರೆಸಿಂಗ್ ಕೋಣೆಯಲ್ಲಿದೆ. ಇದಕ್ಕೆ ಕಾರಣ ತಂಡದಲ್ಲಿನ ವಿಭಿನ್ನ ವ್ಯಕ್ತಿತ್ವದ ಆಟಗಾರರು ಹಾಗೂ ಅವರು ಬೆಳೆದು ಬಂದಿರುವ ಬೇರೆ ಬೇರೆ ಸಂಸ್ಕೃತಿ. ಕ್ರಿಕೆಟಿಗರ ನಡುವೆ ಹೊಂದಾಣಿಕೆ ಸಾಧ್ಯವಾಗುತ್ತಲೇ ಇಲ್ಲವೆನ್ನುವುದು ತಂಡಕ್ಕೆ ಅಪಾಯಕಾರಿ ಎಂದು ಕೂಡ ವಿಶ್ಲೇಷಣೆ ಮಾಡಲಾಗಿದೆ.`ಭಾರತ ತಂಡದಲ್ಲಿ ಇಂಗ್ಲಿಷ್ ಹೊರತಾಗಿ ಬೇರೆ ಐದಾರು ಭಾಷೆ ಮಾತನಾಡುವ ಆಟಗಾರರು ಹಿಂದಿನಿಂದಲೂ ಕಾಣಿಸಿಕೊಂಡಿದ್ದಾರೆ. ಈಗಲೂ ಹಾಗೆಯೇ ಇದೆ. ಆದರೆ ಸದ್ಯಕ್ಕೆ ಅವರ ನಡುವೆ ಸಾಮರಸ್ಯವಿಲ್ಲ~ ಎಂದು ಕೂಡ ಬರೆಯಲಾಗಿದೆ.ಗ್ರೇಗ್ ಚಾಪೆಲ್ ಕೋಚ್ ಆಗಿದ್ದ ಕಾಲದಲ್ಲಿಯೇ ಭಾರತ ತಂಡದಲ್ಲಿ ಹೊಸಬರು ಅಭಿಪ್ರಾಯ ವ್ಯಕ್ತಪಡಿಸಲು ಹೆದರುತ್ತಾರೆಂದು ತಿಳಿಸಿದ್ದರು. ಈ ತಂಡದಲ್ಲಿ ಹಿರಿಯ ಆಟಗಾರರೇ ತಮ್ಮ ಯೋಚನೆಯನ್ನು ಹೇರುತ್ತಾ ಬಂದಿದ್ದಾರೆ. ಈಗಲೂ ಪರಿಸ್ಥಿತಿ ಬದಲಾಗಿಲ್ಲ. ಆದರೆ ಹಿಂದಿಗಿಂತ ಸ್ವಲ್ಪ ಜಟಿಲ ಸಮಸ್ಯೆಯನ್ನು ಪ್ರವಾಸಿ ತಂಡ ಎದುರಿಸುತ್ತಿದೆ ಎನ್ನುವುದು ಮಾಧ್ಯಮಗಳ ಅನಿಸಿಕೆ.

ಪ್ರತಿಕ್ರಿಯಿಸಿ (+)