ಶನಿವಾರ, ಜೂನ್ 6, 2020
27 °C

ತಂತ್ರಜ್ಞಾನದ ಕುರೂಪ ವಿಶ್ವ ಸುಂದರಗೊಳಿಸಿದ ದ್ರಷ್ಟಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಂತ್ರಜ್ಞಾನದ ಕುರೂಪ ವಿಶ್ವ ಸುಂದರಗೊಳಿಸಿದ ದ್ರಷ್ಟಾರ

`ಸಾಯಲು ಯಾರೊಬ್ಬರೂ ಇಷ್ಟಪಡುವುದಿಲ್ಲ.  ಸ್ವರ್ಗಕ್ಕೆ ಹೋಗಲು ಬಯಸುವವರೂ ಕೂಡ ಅಲ್ಲಿಗೆ  ತೆರಳಲು ಸಾಯಲು ಇಷ್ಟಪಡುವುದಿಲ್ಲ.ಸಾವು ಅಂತಿಮ. ಅದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲರೂ ಅದನ್ನು ಹಂಚಿಕೊಳ್ಳಲೇಬೇಕು. ಅದರಿಂದ ಯಾರೋಬ್ಬರೂ ಪಾರಾಗುವಂತಿಲ್ಲ~- ಜಾಬ್ಸ್
ತಂತ್ರಜ್ಞಾನದ ದೈತ್ಯ ಸಂಸ್ಥೆ ಆ್ಯಪಲ್‌ನ ಸಹ ಸ್ಥಾಪಕ ಸ್ಟೀವ್ ಜಾಬ್ಸ್ (56) ಅವರು ಅಕ್ಟೋಬರ್ 5ರಂದು ನಿಧನಗೊಂಡ ನಂತರ ತಂತ್ರಜ್ಞಾನ ಲೋಕದ ಯುಗವೊಂದು ಅಂತ್ಯಗೊಂಡಂತಾಗಿದೆ.ಅದ್ಭುತ, ಅನನ್ಯ ಸ್ವರೂಪದ ಆವಿಷ್ಕಾರಗಳ ಮೂಲಕ ಅವರು ಆಧುನಿಕ ಜಗತ್ತಿನ ಸಂಪರ್ಕ, ಮನರಂಜನೆ ಮತ್ತಿತರ ಸಾಧನಗಳ ಸಂಶೋಧನೆ, ಬಳಕೆಯ ಸ್ವರೂಪವನ್ನೆ ಬದಲಾಯಿಸಿದ್ದರು.

 

ವೈವಿಧ್ಯಮಯ ಡಿಜಿಟಲ್ ಉತ್ಪನ್ನಗಳ ವಿನ್ಯಾಸಗಳಿಗೆ ಮತ್ತು ಬಳಕೆದಾರರ ಅನುಭವಕ್ಕೆ ಅವರು ಯಾರೊಬ್ಬರೂ ಎಂದಿಗೂ ಮರೆಯದ ಅನನ್ಯ ಕೊಡುಗೆ ನೀಡಿ ಮರೆಯಾಗಿದ್ದಾರೆ.ಪ್ರಯೋಗಾಲಯದಿಂದ ಮನೆಗೆ ಕಂಪ್ಯೂಟರ್ ತಂದ ಹೆಗ್ಗಳಿಕೆಯಿಂದ ಹಿಡಿದು, ಅವರ ಅಂತ್ಯ ಸಮೀಪಿಸಿದ ಸಂದರ್ಭದಲ್ಲಿಯೇ ಆ್ಯಪಲ್ ಇಂಕ್, ಮಾರುಕಟ್ಟೆಗೆ ಹೊರತಂದ ಅತ್ಯಂತ ತ್ವರಿತಗತಿಯ, ಗರಿಷ್ಠ ಸಾಮರ್ಥ್ಯದ ವಿಶ್ವದಾದ್ಯಂತ ಎಲ್ಲೆಡೆ ಸುಲಭವಾಗಿ ಬಳಸಬಹುದಾದ (world phone) ಹೊಸ `ಐಫೋನ್ 4ಎಸ್~ (iPhone 4S) ವರೆಗಿನ ಆಧುನಿಕ ಸಂಪರ್ಕ ಸಾಧನಗಳ ವಿನ್ಯಾಸ, ಕಾರ್ಯನಿರ್ವಹಣೆಯಲ್ಲಿ ಇವರ ಮಾಂತ್ರಿಕ ಸ್ಪರ್ಶ ಅಡಗಿದೆ.ವಿಶ್ವದಲ್ಲಿ  ಇದುವರೆಗೆ ಕಂಡು ಬಂದ ಪ್ರಮುಖ ಪರಿವರ್ತನೆಗೆ ಮೂರು `ಆ್ಯಪಲ್~ಗಳು ಕಾರಣವಾಗಿವೆ. ಮೊದಲನೇಯದು ಈವ್‌ಳ ಮನಸ್ಸು ಸೆಳೆಯಿತು.ಎರಡನೇಯದು ವಿಜ್ಞಾನಿ ನ್ಯೂಟನ್ ಅವರನ್ನು ಜಾಗೃತಗೊಳಿಸಿತು. ಮೂರನೇಯದು ಸ್ಟೀವ್ ಜಾಬ್ ಅವರ ಕೈಯಲ್ಲಿತ್ತು....ಇದು ಸಾಮಾಜಿಕ ಸಂವಹನದ  ಜನಪ್ರಿಯ ತಾಣಗಳಾದ ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲಿ ಅಭಿಮಾನಿಗಳು ಜಾಬ್ಸ್‌ಗೆ ಸಲ್ಲಿಸಿದ ಶ್ರದ್ಧಾಂಜಲಿಯ ಸಾಲುಗಳು.

 

ಈ ನುಡಿನಮನವು ಸ್ಟೀವ್ ಜಾಬ್ಸ್ ಅವರು ಇಡೀ ಜಗತ್ತಿಗೆ ಕೊಟ್ಟು ಹೋಗಿರುವ ಕೊಡುಗೆಗಳ ಮಹತ್ವಕ್ಕೆ ಕನ್ನಡಿ ಹಿಡಿಯುತ್ತವೆ.ಕಂಪ್ಯೂಟರ್,ಸಂಗೀತ ಮತ್ತು ಮೊಬೈಲ್ ಫೋನ್‌ಗಳ ಮೂಲಕ ಇಡೀ ಜಗತ್ತನ್ನು `ಡಿಜಿಟಲ್ ಯುಗ~ವನ್ನಾಗಿ ನಾಟಕೀಯವಾಗಿ ಪರಿವರ್ತಿಸಿದ ಹರಿಕಾರ ಇವರಾಗಿದ್ದರು.ಮಾಹಿತಿ ಮತ್ತು ಮನರಂಜನೆಯನ್ನು ನಾವು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ಹೇಳಿಕೊಟ್ಟ, ಬದಲಾಯಿಸಿದ ಮತ್ತು ನಾಯಕತ್ವಕ್ಕೆ ಹೊಸ ವ್ಯಾಖ್ಯಾನವನ್ನೂ ಬರೆದ ವಿಶಿಷ್ಟ ವ್ಯಕ್ತಿತ್ವವೂ ಇವರದ್ದಾಗಿತ್ತು.ತಮ್ಮ ಬದುಕಿನಲ್ಲಿ ಅವರು ಯಾವತ್ತೂ ಕಂಪ್ಯೂಟರ್‌ನ ವಿನ್ಯಾಸ ರೂಪಿಸಿರದಿದ್ದರೂ, ಇವರ ಮಾಂತ್ರಿಕ ಸ್ಪರ್ಶದಿಂದ ಆ್ಯಪಲ್ ಸಂಸ್ಥೆಯ ಉತ್ಪನ್ನಗಳು ಇತರ ಸಂಸ್ಥೆಗಳು ತಯಾರಿಸುವ ಉತ್ಪನ್ನಗಳಿಗಿಂತ ತುಂಬ ಭಿನ್ನ ಎನ್ನುವ ಭಾವನೆಯನ್ನು ಬಳಕೆದಾರರಲ್ಲಿ ಮೂಡುವಂತೆ ಮಾಡುವಲ್ಲಿ, ಮೋಡಿ ಮಾಡುವಲ್ಲಿ ಯಶಸ್ವಿಯಾಗಿದ್ದವು.

 

ಅವರೊಬ್ಬ ಮೂಲತಃ ಯಂತ್ರತಜ್ಞ. ಬಾಲ್ಯದಿಂದಲೂ ಎಲೆಕ್ಟ್ರಾನಿಕ್ಸ್‌ನಲ್ಲಿ ಆಸಕ್ತಿ ತಳೆದಿದ್ದ ವಿಶಿಷ್ಟ ಮೇಧಾವಿಯಾಗಿದ್ದರು.`ನಿಮ್ಮ ವೇಳೆ ಸೀಮಿತವಾಗಿದೆ. ಇತರರ ಬದುಕಿಗಾಗಿ ಅದನ್ನು ವ್ಯರ್ಥಗೊಳಿಸಬೇಡಿ.ಇತರರ ಅಭಿಪ್ರಾಯಗಳಿಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಒಳ ಮನಸ್ಸಿನ ದನಿಗೆ ಓಗೊಡಿ~ -  ವಿದ್ಯಾರ್ಥಿಗಳಿಗೆ ಹೇಳಿರುವ ಕಿವಿಮಾತನ್ನು ಯುವ ಪೀಳಿಗೆ ಬದುಕಿನಲ್ಲಿ ಗಂಭೀರವಾಗಿ ಅಳವಡಿಸಿಕೊಂಡರೆ, ಜಾಬ್ಸ್‌ಗೆ ಸಲ್ಲಿಸುವ  ಅದಕ್ಕಿಂತ ದೊಡ್ಡ ಶ್ರದ್ಧಾಂಜಲಿ ಯಾವುದೂ ಇರಲಿಕ್ಕಿಲ್ಲ.ಸಣ್ಣ ಪುಟ್ಟ ಆಲೋಚನೆಗಳನ್ನೇ ಬದುಕಿನ ಗತಿಯನ್ನೇ ಬದಲಾಯಿಸುವಂತಹ ಉತ್ಪನ್ನಗಳನ್ನಾಗಿ ಪರಿವರ್ತಿಸುವ ದೂರದೃಷ್ಟಿಯನ್ನು ಜಾಬ್ಸ್ ಕರಗತಮಾಡಿಕೊಂಡಿದ್ದರು.

ಭವಿಷ್ಯದ ಬಗ್ಗೆ ಸುಸ್ಪಷ್ಟ ದೃಷ್ಟಿಕೋನ ತಳೆದಿದ್ದ, ಪರಿಪಕ್ವತೆ ಬಗ್ಗೆ ಸದಾ ತುಡಿಯುತ್ತಿದ್ದ, ಗುಣಮಟ್ಟದ ಜತೆ ರಾಜಿಗೆ ಸಿದ್ಧರಿರಲಿಲ್ಲದ ಸ್ಟೀವ್ ಜಾಬ್ಸ್ ಸಾಧನೆಯು ಭವಿಷ್ಯದ ಪೀಳಿಗೆಗೆ ನಿಜಕ್ಕೂ ಅತಿದೊಡ್ಡ ಆದರ್ಶ.ತಂತ್ರಜ್ಞಾನದ ಮೇಲೆ ಇವರು ಬೀರಿದ್ದ ಪ್ರಭಾವ, ಅದನ್ನು ಮನುಕುಲದ ಒಳಿತಿಗಾಗಿ ಬಳಸಿಕೊಂಡ ವೈಖರಿಯನ್ನು ಇನ್ನೂ ಹಲವಾರು ವರ್ಷಗಳ ಕಾಲ ಇನ್ನೊಬ್ಬರಲ್ಲಿ ಕಾಣಲು ಸಾಧ್ಯವಿಲ್ಲ ಎನ್ನುವ ಬಣ್ಣನೆ ಇವರ ಸಾಧನೆಗೆ ಕನ್ನಡಿ ಹಿಡಿಯುತ್ತದೆ.ಭವಿಷ್ಯದ ದಿನಗಳಲ್ಲಿ ಆ್ಯಪಲ್ ಸಂಸ್ಥೆಯೂ ಸೇರಿದಂತೆ ಇತರ ಸಂಸ್ಥೆಗಳ ನೇತೃತ್ವದಲ್ಲಿ ವಿಶ್ವದಲ್ಲಿ ಇನ್ನಷ್ಟು ಹೊಸತನದ, ಬದುಕಿನ ಹರಿವನ್ನು ಸಾಕಷ್ಟು ಬದಲಿಸುವ ಡಿಜಿಟಲ್ ಸಾಧನಗಳು ತಯಾರಾಗಲಿವೆ. ಆದರೆ, ಅಂತಹ ಪರಿವರ್ತನೆಗೆ ನಾಂದಿ ಹಾಡಿದ ಜಾಬ್ಸ್ ಕೆಲಸ ಮಾತ್ರ ಅಜರಾಮರ ಆಗಿರುತ್ತದೆ.   

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.