ಸೋಮವಾರ, ಏಪ್ರಿಲ್ 19, 2021
23 °C

ತಂತ್ರಜ್ಞ ಬರೆದ ಶೂಟಿಂಗ್ ಪುಸ್ತಕ

-ರಮೇಶ ಕೆ. Updated:

ಅಕ್ಷರ ಗಾತ್ರ : | |

ತಂತ್ರಜ್ಞ ಬರೆದ ಶೂಟಿಂಗ್ ಪುಸ್ತಕ

ಅಮ್ಮನ ಜೊತೆ ಬಸ್‌ನಲ್ಲಿ ಪ್ರಯಾಣ ಮಾಡುವಾಗ ಕಂಡಕ್ಟರ್ ಕೊಟ್ಟ ಟಿಕೆಟ್ ಹಿಂಭಾಗದ ಖಾಲಿ ಜಾಗದಲ್ಲಿ ಆ ಹುಡುಗ ಬಿಡಿಸಿದ್ದು ಬಂದೂಕಿನ ಚಿತ್ರ. ಪುಟ್ಟ ವಯಸ್ಸಿನಿಂದಲೇ ಗುರಿ ಇಟ್ಟುಕೊಂಡು ಎನ್‌ಸಿಸಿಗೆ ಸೇರುವ ಮೂಲಕ ಅತ್ಯುತ್ತಮ ಶೂಟರ್ ಪ್ರಶಸ್ತಿ ಪಡೆದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಚಾಂಪಿಯನ್‌ಷಿಪ್‌ಗಳಲ್ಲೂ ಅನೇಕ ಪದಕಗಳನ್ನು ಬಾಚಿಕೊಂಡರು. ಇವರು, 2006ರಲ್ಲಿ ಏಕಲವ್ಯ ಪ್ರಶಸ್ತಿ ಪಡೆದು ಗಮನ ಸೆಳೆದ ಕ್ರೀಡಾಪಟು ಆನಂದ್ ಸಿ.ಕೆ. ಶಶಿಧರ್. ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಮಾಡಿರುವ ಶಶಿಧರ್ ಬೆಂಗಳೂರಿನವರೇ. ವೃತ್ತಿಯಲ್ಲಿ `ಟೆಲಿಬ್ರಹ್ಮ' ಮೊಬೈಲ್ ಸೊಲ್ಯೂಷನ್ ಕಂಪೆನಿಯೊಂದರಲ್ಲಿ ನಿರ್ದೇಶಕರಾಗಿದ್ದಾರೆ. ಪ್ರವೃತ್ತಿಯಲ್ಲಿ ಶೂಟರ್. ನಾಲ್ಕು ವರ್ಷಗಳಿಂದ ಬಿಡುವಿನ ವೇಳೆಯಲ್ಲಿ ತಮ್ಮ ಶೂಟಿಂಗ್ ಅನುಭವಗಳನ್ನು ಅವರು ದಾಖಲಿಸುತ್ತಾ ಬಂದರು. ಸಾಕ್ಷ್ಯಚಿತ್ರ ನಿರ್ಮಾಣ ಮಾಡುವ ಉದ್ದೇಶದಿಂದ ದಾಖಲಿಸಿದ ಆ ಅನುಭವಗಳು ಈಗ ಪುಸ್ತಕ ರೂಪ ಪಡೆದುಕೊಂಡಿದೆ. ಭವಿಷ್ಯದ ಶೂಟಿಂಗ್ ಪಟುಗಳಿಗೆ ಕೈಪಿಡಿಯಾಗಿ ಹಾಗೂ ಬಂದೂಕು ಉಪಯೋಗಿಸುವ ಎಲ್ಲರಿಗೆ ಉಪಯುಕ್ತವಾಗುವ ಮಾಹಿತಿ ಒಳಗೊಂಡ `10x' ಕೃತಿ ಅನಾವರಣಗೊಂಡು ಕೆಲವೇ ತಿಂಗಳುಗಳಾಗಿವೆ.`ಪ್ರತಿದಿನ ಬಿಡುವಿನ ವೇಳೆಯಲ್ಲಿ 3ರಿಂದ 4 ಗಂಟೆ ಇದಕ್ಕಾಗಿ ಸಮಯ ಮೀಸಲಿಟ್ಟಿದ್ದೆ. ಟಾರ್ಗೆಟ್ ಒಳಗೆ ಸ್ಕೋರ್ ಇರುತ್ತದೆ. 10ರೊಳಗಿನ ಸೊನ್ನೆಯ ಮಧ್ಯ ಭಾಗಕ್ಕೆ ಗುಂಡು ತಾಗಿದರೆ ಅದಕ್ಕೆ 10xಎನ್ನುತ್ತಾರೆ. ಹಾಗಾಗಿ ಈ ಕೃತಿಗೆ ಅದೇ ಶೀರ್ಷಿಕೆ ಇಟ್ಟೆ' ಎನ್ನುತ್ತಾರೆ ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ವ್ಯವಸ್ಥಾಪಕ ಸಮಿತಿ ಸದಸ್ಯರೂ ಆಗಿರುವ ಆನಂದ್ ಸಿ.ಕೆ. ಶಶಿಧರ್.

ಗನ್ ಹಿಡಿಯುವ, ಮೊಣಕಾಲು ಇಟ್ಟುಕೊಳ್ಳುವ ರೀತಿ, ಟಾರ್ಗೆಟ್ ಪಾಯಿಂಟ್‌ಗೆ ಗುರಿ ಇಡುವ ಬಗೆ, ಶೂಟಿಂಗ್‌ಗೂ ಮುಂಚೆ ಕೈಗೊಳ್ಳಬೇಕಾದ ಕ್ರಮಗಳು, ಸ್ವಯಂ ರಕ್ಷಣೆ ಹಾಗೂ ಧರಿಸಬೇಕಾದ ವಸ್ತ್ರಗಳು ಎಂಥವು ಎಂಬಿತ್ಯಾದಿ ಮಾಹಿತಿಯನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ.`1986ರಲ್ಲಿ ವಿದೇಶಗಳಿಂದ ಬಂದೂಕುಗಳನ್ನು ತರುವಂತಿರಲಿಲ್ಲ. ಬಿಗಿಯಾದ ಕಾನೂನು ಜಾರಿಯಲ್ಲಿತ್ತು. ಆಗ ದೇಶದಲ್ಲಿದ್ದ ಬಂದೂಕುಗಳ ಬೆಲೆ ದುಪ್ಪಟ್ಟಾಯಿತು. ಶೂಟಿಂಗ್‌ಗಾಗಿ ಬಳಸಲು ಯೋಗ್ಯ ಗನ್‌ಗಳ ಕೊರತೆ ಎದುರಾಯಿತು. ಇದರಿಂದ ಇಲ್ಲಿನ ಶೂಟರ್‌ಗಳು ವಿದೇಶಗಳಲ್ಲಿ ಸ್ಪರ್ಧೆ ಎದುರಿಸಲಾಗದ ಸ್ಥಿತಿ ನಿರ್ಮಾಣವಾಯಿತು. ನಂತರ ಕಾನೂನಿನಲ್ಲಿ ಸ್ವಲ್ಪ ಬದಲಾವಣೆಯಾಗಿ ಕ್ರೀಡೆಗಾಗಿ ಬಂದೂಕುಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ದೊರೆಯಿತು.ಸರ್ಕಾರ ಶೂಟಿಂಗ್‌ಗೆ ಪ್ರೋತ್ಸಾಹ ನೀಡಲು ಮುಂದಾಯಿತು' ಎಂದು ಮಾಹಿತಿ ನೀಡುತ್ತಾರೆ ಶಶಿಧರ್.“ಕಳೆದ ಮೂರು ಒಲಿಂಪಿಕ್ಸ್‌ಗಳಿಂದ ಶೂಟಿಂಗ್ ವಿಭಾಗದಲ್ಲಿ ದೇಶಕ್ಕೆ ಪದಕಗಳೂ ಬರುತ್ತಿವೆ. ಈಗ ಪರಿಸ್ಥಿತಿ ಸುಧಾರಿಸಿದೆ. ವಿವಿಧ ಬಗೆಯ ಏರ್ ರೈಫಲ್‌ಗಳು, ಪಿಸ್ತೂಲ್, ಶಾಟ್ ಗನ್‌ಗಳು ಬಂದಿವೆ. ಆದರೆ ಹೇಳಿಕೊಡುವವರು ಕಡಿಮೆಯಾಗಿದ್ದಾರೆ. ಕರ್ನಾಟಕ ರೈಫಲ್ ಅಸೋಸಿಯೇಷನ್‌ನಿಂದ ತರಬೇತಿ ನೀಡಲಾಗುತ್ತಿದೆ.ಇದುವರೆಗೂ 500ರಿಂದ 600 ಮಂದಿಗೆ ಶೂಟಿಂಗ್ ತರಬೇತಿ ನೀಡಿದ್ದೇನೆ. ಸಿನಿಮಾಗಳನ್ನು ನೋಡಿಕೊಂಡು ಬಂದೂಕು ಖರೀದಿಸಲು ಮುಂದೆ ಬರುತ್ತಾರೆ. ಬಂದೂಕು ಪರವಾನಗಿ ಪಡೆಯಲು `ಸಿವಿಲಿಯನ್ ರೈಫಲ್ ಟ್ರೈನಿಂಗ್ ಕೋರ್ಸ್ ಸರ್ಟಿಫಿಕೇಟ್' ತೆಗೆದುಕೊಳ್ಳಬೇಕು. ಪ್ರತಿ ತಿಂಗಳ ಎರಡನೇ ವಾರ ಉಚಿತವಾಗಿ ತರಬೇತಿ ನೀಡುತ್ತೇವೆ. ಬಂದೂಕು ಬಳಕೆ ಬಗೆಗಿನ ತಪ್ಪು ತಿಳುವಳಿಕೆ ಹೋಗಲಾಡಿಸುತ್ತೇವೆ. ಶೂಟಿಂಗ್‌ಗೆ ಸ್ಥಿಮಿತ ಮನಸ್ಸು, ಗುರಿ ನಿರ್ದೇಶನದ ಅಂದಾಜು ಮುಖ್ಯವಾಗಿರುತ್ತದೆ. ಕಣ್ಣಿನ ಗುರಿ, ದೈಹಿಕ ಹಾಗೂ ಮಾನಸಿಕವಾಗಿಯೂ ಸಿದ್ಧರಾಗಬೇಕು” ಎಂದು ಸಲಹೆ ನೀಡುತ್ತಾರೆ ಶಶಿಧರ್.ಕ್ರಿಕೆಟ್ ಸೇರಿದಂತೆ ಇನ್ನಿತರೆ ಆಟಗಳ ಕುರಿತ ಪುಸ್ತಕಗಳು ಬಹಳಷ್ಟಿವೆ. ಆದರೆ ಶೂಟಿಂಗ್‌ಗೆ ಸಂಬಂಧಿಸಿದ ಕೃತಿಗಳು ವಿರಳ. ಹಾಗಾಗಿ ಗನ್‌ಗಳ ಬಗ್ಗೆ ಮಾಹಿತಿ ಮತ್ತು ಶೂಟಿಂಗ್ ತರಬೇತಿ ಪಡೆದುಕೊಳ್ಳುವವರಿಗೆ ಈ ಪುಸ್ತಕ ಸಹಕಾರಿಯಾಗಲಿದೆ. ಸ್ವತಃ ಅವರೇ ಕೃತಿ ಪ್ರಕಟಿಸಿದ್ದು, ಪ್ರತಿಗಳಿಗಾಗಿ  www.Target10x.com.ವೆಬ್‌ಸೈಟ್‌ನಲ್ಲಿ ಆರ್ಡರ್ ಮಾಡಬಹುದು. ಅಂಚೆ ಮೂಲಕ ಪುಸ್ತಕ ಕಳುಹಿಸಿಕೊಡಲಾಗುತ್ತದೆ. ಪುಸ್ತಕದ ಬೆಲೆ ರೂ895.ಹತ್ತು ವರ್ಷಗಳ ಶೂಟಿಂಗ್ ಪಯಣದಲ್ಲಿ 13 ರಾಷ್ಟ್ರೀಯ ಹಾಗೂ 26 ರಾಜ್ಯ ಮಟ್ಟದ ಚಾಂಪಿಯನ್‌ಷಿಪ್‌ಗಳಲ್ಲಿ ತಮ್ಮ ಖಾತೆಗೆ ಪದಕಗಳನ್ನು ಸೇರಿಸಿಕೊಂಡಿರುವ ಶಶಿಧರ್ ಜಿಲ್ಲಾ ಮಟ್ಟದಲ್ಲಿ ಅಸೋಸಿಯೇಷನ್‌ಗಳನ್ನು ಕಟ್ಟುವ ಮೂಲಕ ಶೂಟಿಂಗ್ ಸ್ಪರ್ಧೆಯನ್ನು ಮತ್ತಷ್ಟು ಬೆಳೆಸಬೇಕೆಂಬ ಗುರಿ ಹೊಂದಿದ್ದಾರೆ. ಇಂಗ್ಲಿಷ್ ಭಾಷೆಯಲ್ಲಿರುವ ಈ ಕೃತಿಯನ್ನು ಕನ್ನಡ, ಹಿಂದಿ, ಬೆಂಗಾಲಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲೂ ಅನುವಾದಿಸಬೇಕೆಂಬ ಯೋಜನೆ ಅವರದ್ದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.