ಶುಕ್ರವಾರ, ಮೇ 14, 2021
29 °C

ತಂದೆಯ ಹೆಸರು ಕಡ್ಡಾಯವೇಕೆ?

ಸುಮಂಗಲಾ Updated:

ಅಕ್ಷರ ಗಾತ್ರ : | |

ತಂದೆಯ ಹೆಸರು ಕಡ್ಡಾಯವೇಕೆ?

ಗ 8-9 ವರ್ಷಗಳ ಹಿಂದೆ ನಾನು ಮಗನನ್ನು ತೋರಿಸಲು ಬೆಂಗಳೂರಿನ `ನಿಮ್ಹೋನ್ಸ್'ಗೆ ಹೋಗಿದ್ದೆ. ಎಲ್ಲಿ ನೋಂದಣಿ ಮಾಡಿಸಿಕೊಳ್ಳುತ್ತಾರೆ ಎಂದು ಕೇಳಿಕೊಂಡು, ಉದ್ದನೆಯ ಸಾಲಿನಲ್ಲಿ ಅವನ ಕೈಹಿಡಿದು ಪಕ್ಕದಲ್ಲಿ ನಿಲ್ಲಿಸಿಕೊಂಡು ನಿಂತಿದ್ದಾಯಿತು.

ಕಬ್ಬಿಣದ ಜಾಲರಿಗಳಿಂದ ಸುತ್ತುವರಿದಿದ್ದ ರಿಸೆಪ್ಷನ್ ಮೇಜಿನಲ್ಲಿ ಕುಳಿತಿದ್ದ ಹೆಂಗಸು, ಮೊದಲಿಗೆ ಚಿಕ್ಕ ಅರ್ಜಿಯಲ್ಲಿ ಮಗನ ಹೆಸರು, ವಯಸ್ಸು, ಎಲ್ಲಿಂದ ಬಂದಿದ್ದೀರಿ ಇತ್ಯಾದಿ ಕೇಳಿ ಬರೆದುಕೊಂಡರು. ನಂತರ ತಂದೆಯ ಹೆಸರು ಕೇಳಿದರು. `ಇಲ್ಲಿ ತಂದೆಯ ಹೆಸರಿನ ಅಗತ್ಯವೇನಿದೆಯಪ್ಪ' ಎಂದು ನನಗೆ ಎಂದಿನ ಅರೆಕ್ಷಣದ ಅಚ್ಚರಿ. ನಾನು `ತಾಯಿ ಹೆಸರು ಬರೆದುಕೊಳ್ಳಿ' ಎಂದು ಹೇಳುತ್ತ ಇನ್ನೂ ಬಾಯಿಮುಚ್ಚಿಲ್ಲ, ಅಷ್ಟರಲ್ಲಿಯೇ ಆಕೆ `ಇಲ್ಲಿ ತಂದೆ ಹೆಸ್ರೇ ಬರ‌್ಕೋಬೇಕ್ರಿ' ಎಂದರು.

ನಾನು ಆಕೆಗಷ್ಟೇ ಕೇಳುವಂತೆ, `ವಿ ಹ್ಯಾವ್ ಸೆಪರೇಟೆಡ್, ಸೋ...' ಎಂದು ಇನ್ನೂ ನನ್ನ ಮಾತು ಮುಗಿಸಿಲ್ಲ, ಅವರು ಮತ್ತೆ ನಡುವೆ ಬಾಯಿ ಹಾಕಿ, `ಸೆಪರೇಟ್ ಆದ್ರೂ ಪರವಾಗಿಲ್ಲ, ತಂದೆ ಹೆಸ್ರು ಹೇಳಿ. ಬೇಗ ಹೇಳಿ ಮೇಡಂ, ಇಲ್ಲಿ ಸುಮ್ನೆ ಇರುತ್ತೆ ಅಷ್ಟೆ' ಎಂದರು. ನನ್ನ ಹಿಂದೆ ಇನ್ನೂ ತುಂಬ ಜನ ಕಾಯ್ತಿದ್ರು. ಅದು ವಾದಕ್ಕೆ ನಿಲ್ಲುವ ಸಮಯ ಅಲ್ಲವಾಗಿತ್ತು. ಹೆಸರು ಹೇಳಿ, ಅವರು ಕೊಟ್ಟ ಕಾರ್ಡ್ ಹಿಡಿದು, ಅವರು ನಿರ್ದೇಶಿಸಿದ ಇನ್ನೊಂದು ಕಟ್ಟಡಕ್ಕೆ ಹೋದೆ.ಅಲ್ಲಿಯೂ ಇದೇ ಪ್ರಕ್ರಿಯೆಯ ಪುನರಾವರ್ತನೆ. ಅಲ್ಲಿ ಕೆಲವು ಮುಖ್ಯ ವಿವರಗಳನ್ನು ಬರೆದ ಇನ್ನೊಂದು ಕಾರ್ಡ್ ಕೊಟ್ಟರು, ನಂತರ ನಮಗೆ ಬೇಕಿದ್ದ ವೈದ್ಯರನ್ನು ನೋಡಿದ್ದಾಯ್ತು. ನಿಮ್ಹೋನ್ಸ್‌ನಲ್ಲಿ ನನ್ನ ಮಗನಿಗೆ ಅತ್ಯುತ್ತಮ ಚಿಕಿತ್ಸೆ ದೊರೆಯಿತು. ಅಲ್ಲಿಯವರೆಗೆ ಯಾವ ವೈದ್ಯರೂ ಡಯಗ್ನೈಸ್ ಮಾಡಿರದಿದ್ದನ್ನು ನಿಮ್ಹಾನ್ಸ್‌ನ ನುರಿತ ವೈದ್ಯರು ಪತ್ತೆ ಮಾಡಿ, `ಡಿಸ್‌ಲೆಕ್ಸಿಯಾ' ಸಮಸ್ಯೆಯಿರುವ ಅವನು `ವಿಶೇಷ ಸಾಮರ್ಥ್ಯದ ಮಗು' ಎಂದು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿದರು.

ಅದನ್ನು ನಾನು ಈಗಲೂ ಅಭಿಮಾನದಿಂದ ನೆನೆಯುತ್ತೇನೆ. ಆದರೆ ನನಗೆ ಅಲ್ಲಿ ತುಂಬ ಕಿರಿಕಿರಿ ಎನಿಸುತ್ತಿದ್ದದ್ದು ಒಂದೇ ಕಾರಣಕ್ಕೆ. ಅದು ಸುಮಾರು ಎರಡು ವರ್ಷಗಳವರೆಗೆ ನಡೆದ ಸಮಾಲೋಚನಾ ಚಿಕಿತ್ಸೆ. ನಾನು ಪ್ರತಿ ಬಾರಿ ಅಲ್ಲಿಯ ಮಕ್ಕಳ ಚಿಕಿತ್ಸಾ ಘಟಕದ ಕೌಂಟರಿನಲ್ಲಿ ಮಗನ ಆರೋಗ್ಯಕ್ಕೆ ಸಂಬಂಧಿಸಿದ ದಾಖಲೆ ತೆಗೆದುಕೊಳ್ಳುತ್ತಿದ್ದೆ.

ಆ ದಾಖಲೆಯಲ್ಲಿ ತಂದೆ ಎಂದು ನಮೂದಿತವಾಗಿದ್ದ ವ್ಯಕ್ತಿ ಒಂದೇ ಒಂದು ದಿನವೂ ಮಗನ ಕೈ ಹಿಡಿದು ಅಲ್ಲಿ ನಡೆಯದಿದ್ದರೂ, ನಾವಿಬ್ಬರು ಮಾತ್ರ ಅಷ್ಟೂ ದಿನಗಳಲ್ಲಿ ಆ ದಾಖಲೆಯಲ್ಲಿದ್ದ ತಂದೆಯ ಹೆಸರಿನ ಭಾರವನ್ನು ಹೊತ್ತುಕೊಂಡೇ ಕೈ ಕೈ ಹಿಡಿದು ಓಡಾಡಿದೆವು.

ನನಗೆ ಅಂದಿನಿಂದ ಈ ಪ್ರಶ್ನೆ ಉಳಿದೇ ಬಿಟ್ಟಿದೆ- ಯಾಕೆ ಹೀಗೆ ಕೆಲವು ಕಡೆಗಳಲ್ಲಿ ತಂದೆಯ ಹೆಸರು ಕಡ್ಡಾಯ ಮಾಡಿದ್ದಾರೆ? ತಂದೆ ಅಥವಾ ತಾಯಿ, ಇಬ್ಬರಲ್ಲಿ ಯಾರ ಹೆಸರಾದರೂ ಸರಿ, ಅದು ಐಚ್ಛಿಕ ಎಂದು ಏಕಿಲ್ಲ? ಯಾರಿಗೆ ಯಾರ ಹೆಸರು ಹಾಕಿಕೊಳ್ಳುವುದು ಇಷ್ಟವೋ ಅದನ್ನು ಹಾಕಿಕೊಳ್ಳಲಿ.

ಇತ್ತೀಚೆಗೆ ಮತ್ತೆ ನನಗೆ ಇದೇ ಪ್ರಶ್ನೆ ಎದುರಾಯಿತು.

ಚಿತ್ರದುರ್ಗದ ಹಳ್ಳಿಯೊಂದರ ಸರ್ಕಾರಿ ಶಾಲೆಯ ಒಂಬತ್ತು ವರ್ಷದ ಹುಡುಗಿಯೊಬ್ಬಳಿಗೆ ನಾವು ಕೆಲವರು ಸೇರಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಅಗತ್ಯವಿದ್ದ ಶಸ್ತ್ರಚಿಕಿತ್ಸೆ ಮಾಡಿಸಿದ್ದೆವು. ಮೂರು ಹಂತದಲ್ಲಿ ನಡೆಯಬೇಕಿದ್ದ ಸಂಕೀರ್ಣ ಶಸ್ತ್ರಚಿಕಿತ್ಸೆ. ಮೊದಲ ಬಾರಿ ಹುಡುಗಿಯ ತಾಯಿ ತನ್ನ ಅಕ್ಕನ ಗಂಡನನ್ನು ಕರೆದುಕೊಂಡು ಬಂದಿದ್ದರು. ಆಸ್ಪತ್ರೆಗೆ ದಾಖಲಾಗುವಾಗ ತಂದೆಯ ಹೆಸರು ಕೇಳಿ ಅರ್ಜಿ ಭರ್ತಿ ಮಾಡಿದ್ದಾಯ್ತು.

ಕುಡಿತದ ಚಟವಿರುವ ಆತನಿಗೆ ಹೆಂಡತಿ, ಮಗಳ ಬಗ್ಗೆ ಕಾಳಜಿ ಇಲ್ಲ. ಒಮ್ಮೆ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಮಗಳಿಗೆ ಚಿಕಿತ್ಸೆ ಕೊಡಿಸುವಾಗ ಆಕೆಯ ಚಿಕಿತ್ಸೆಗಾಗಿ ಅಲ್ಲಿ-ಇಲ್ಲಿ ದುಡ್ಡು ಎತ್ತಿದ್ದ ಆ ಭೂಪ ಆ ಹಣವನ್ನೂ ಕುಡಿತಕ್ಕೆ ಬಳಸಿದ್ದ ಎಂದು ನನಗೆ ಆಮೇಲೆ ಗೊತ್ತಾಯಿತು. ಮೂರು ಹಂತದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಪ್ರತಿಸಲ ದಾಖಲು ಮಾಡಿಸಲು, ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಲು ನಾನು ಹೋಗುತ್ತಿದ್ದೆ.

ಎರಡು ಮೂರು ಗಂಟೆ ಕಾಲ ಹಿಡಿಯುತ್ತಿದ್ದ ದಾಖಲು ಮತ್ತು ಬಿಡುಗಡೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಓಡಾಡುತ್ತಿದ್ದವರು ಇಬ್ಬರು ತಾಯಂದಿರಾಗಿದ್ದರೇ ಹೊರತು ತಂದೆಯಾಗಿರಲಿಲ್ಲ. ಆ ಹುಡುಗಿ ಮೂರನೆಯ ಹಂತದ ಶಸ್ತ್ರಚಿಕಿತ್ಸೆಗೆ ದಾಖಲಾದ ವಾರದ ನಂತರವೂ ತಂದೆ ಎನಿಸಿಕೊಂಡವನು ನೋಡಲಿಕ್ಕೂ ಬರಲಿಲ್ಲ. ಪ್ರತಿಸಲ ನಾವು ಕಾಯ್ದಿರಿಸಿದ ಅಂಬ್ಯುಲೆನ್ಸ್‌ನಲ್ಲಿ ಬಂದು, ವಾರಗಟ್ಟಲೆ ಸರಿಯಾಗಿ ಸ್ನಾನ, ನಿದ್ದೆ ಇಲ್ಲದೆ ಮಗಳನ್ನು ಕಣ್ಣಲ್ಲಿ ಕಣ್ಣಾಗಿ ನೋಡಿಕೊಂಡವಳು, ತಿಂಗಳಲ್ಲಿ ಎರಡು ಬಾರಿ ತಪಾಸಣೆಗೆ ಕರೆದುಕೊಂಡು ಬಂದವಳು ತಾಯಿ. ಆದರೆ ಆಸ್ಪತ್ರೆಯ ಅರ್ಜಿಯಲ್ಲಿ ಮಾತ್ರ ತಂದೆಯ ಹೆಸರೇ ಬೇಕು!ಹೌದಲ್ಲ... ನಮಗೆ ಎಷ್ಟೆಲ್ಲ ಕಡೆಗಳಲ್ಲಿ ತಂದೆಯ ಹೆಸರೇ ಬೇಕು. ಪ್ಯಾನ್ ಕಾರ್ಡ್‌ಗೆ, ಭವಿಷ್ಯ ನಿಧಿ ಅರ್ಜಿ ತುಂಬಲಿಕ್ಕೆ ತಂದೆಯ ಹೆಸರು ಅಥವಾ ಗಂಡನ ಹೆಸರೇ ಬೇಕು. ಪ್ಯಾನ್ ಕಾರ್ಡ್‌ನಲ್ಲಿ ತಂದೆಯ ಹೆಸರು ಎಷ್ಟರಮಟ್ಟಿಗೆ ಕಡ್ಡಾಯ ಎಂದರೆ Even married women should fill in father's name only…ಎನ್ನುತ್ತದೆ ಅರ್ಜಿ ನಮೂನೆ. ನೋಡಿ, ನಮ್ಮ ಪ್ಯಾನ್‌ಕಾರ್ಡ್ ನೀಡುವ ಸಚಿವಾಲಯ ಎಷ್ಟರಮಟ್ಟಿಗೆ ಪಿತೃಪ್ರಧಾನವಿದೆ! ಭವಿಷ್ಯ ನಿಧಿ ಅರ್ಜಿಯಲ್ಲಿ ಅಪ್ಪನ ಹೆಸರು ಅಥವಾ ಮದುವೆಯಾದ ಮಹಿಳೆಯರಾದರೆ ಗಂಡನ ಹೆಸರು ತುಂಬಬೇಕು [Father's name (or Husband's name in case of married women)]. ಶ್ರಿ. ಇಲ್ಲೂ ಅಪ್ಪ ಅಥವಾ ಗಂಡನ ಹೆಸರೇ ಕಡ್ಡಾಯವೇ ಹೊರತು ತಾಯಿಯ ಹೆಸರು ಅಥವಾ ಮದುವೆಯಾದ ಪುರುಷರು ಹೆಂಡತಿಯ ಹೆಸರು ತುಂಬಬಹುದು ಎಂದಿಲ್ಲ.

ಪಾಸ್‌ಪೋರ್ಟ್ ಅರ್ಜಿಯಲ್ಲಿಯೂ ಮೊದಲಿಗೆ ತಂದೆ ಅಥವಾ ಗಂಡನ ಹೆಸರೇ ಕಡ್ಡಾಯವಿತ್ತು. ಆದರೆ 2011ರಲ್ಲಿ ವಿಚ್ಛೇದಿತ ಮಹಿಳೆಯೊಬ್ಬರು ತಮ್ಮ ಇಬ್ಬರು ಹೆಣ್ಣುಮಕ್ಕಳ ಪಾಸ್‌ಪೋರ್ಟ್‌ನಲ್ಲಿ ತಂದೆಯ ಹೆಸರನ್ನು ಉಲ್ಲೇಖಿಸದೆಯೇ, ತಾಯಿಯ ಹೆಸರನ್ನು ಮಾತ್ರ ಉಲ್ಲೇಖಿಸಲು ಆಸ್ಪದ ನೀಡಬೇಕೆಂದು ದೆಹಲಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು. ಆ ಸಂದರ್ಭದಲ್ಲಿ, ವಿಚ್ಛೇದನ ಹಾಗೂ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಪಾಸ್‌ಪೋರ್ಟ್‌ಗೆ ತಂದೆಯ ಹೆಸರನ್ನು ಕಡ್ಡಾಯಗೊಳಿಸಬಾರದು ಎಂದು ನ್ಯಾಯಾಲಯವು ಪಾಸ್‌ಪೋರ್ಟ್ ಪ್ರಾದೇಶಿಕ ಕಚೇರಿಗೆ ನಿರ್ದೇಶನ ನೀಡಿದೆ.

ಈಗ ಪಾಸ್‌ಪೋರ್ಟ್ ಅರ್ಜಿಗೆ `ಕುಟುಂಬದ ವಿವರಗಳು' ವಿಭಾಗ ಕಡ್ಡಾಯವಲ್ಲ. ತಂದೆ, ತಾಯಿ ಅಥವಾ ಕಾನೂನಾತ್ಮಕ ಪೋಷಕರ ಹೆಸರನ್ನು ತುಂಬಬಹುದು ಅಥವಾ ಬಿಡಬಹುದು.ಸರ್ಕಾರಿ ಕ್ಷೇತ್ರದಲ್ಲಿ ಮಾತ್ರವಲ್ಲ, ಖಾಸಗಿ ಕ್ಷೇತ್ರದಲ್ಲಿಯೂ ದಾಖಲೆಗಳಲ್ಲಿ, ಅರ್ಜಿಗಳಲ್ಲಿ ಮೊದಲ ಆದ್ಯತೆ ತಂದೆಯ ಹೆಸರೇ ಹೊರತು ತಾಯಿ ಹೆಸರಲ್ಲ. ಬಹುತೇಕ ಆಸ್ಪತ್ರೆಗಳಲ್ಲಿ ತಂದೆಯ ಹೆಸರಿಗೆ ಮಾತ್ರ ಒಂದು ಕಾಲಂ ಇರುತ್ತದೆ, ತಾಯಿಯ ಹೆಸರು ಅಗತ್ಯವೇ ಇಲ್ಲ.ಸದ್ಯ, ಇತ್ತೀಚೆಗೆ ಶಾಲೆಗಳಲ್ಲಿ ತಂದೆಯ ಹೆಸರನ್ನು ಕಡ್ಡಾಯ ಮಾಡಿಲ್ಲ. ಹೀಗಾಗಿ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯಲ್ಲಿ ತಂದೆ ಅಥವಾ ತಾಯಿ, ಇಬ್ಬರಲ್ಲಿ ಒಬ್ಬರ ಹೆಸರು ಅಥವಾ ಬೇಕೆಂದರೆ ಇಬ್ಬರ ಹೆಸರನ್ನೂ ನಮೂದಿಸಲು ಆಸ್ಪದವಿದೆ.ಹೆಚ್ಚಿನ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯೂ ಖಾತೆ ತೆರೆಯಲು ಅರ್ಜಿ ಭರ್ತಿ ಮಾಡುವಾಗ ತಂದೆ/ಗಂಡನ ಹೆಸರು ಎಂದಿದೆ. ತಂದೆ/ತಾಯಿ/ಗಂಡನ ಹೆಸರು ಎಂದು ಬೆರಳೆಣಿಕೆಯ ಬ್ಯಾಂಕಿನ (ಉದಾ: ಸಿಂಡಿಕೇಟ್ ಬ್ಯಾಂಕ್) ಅರ್ಜಿಗಳಲ್ಲಿ ಆಯ್ಕೆಯ ಅವಕಾಶವನ್ನು ಕೊಟ್ಟಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶಕ್ಕೆ ಕಾಲಿರಿಸಿದ ವಾಣಿಜ್ಯ ಬ್ಯಾಂಕುಗಳಲ್ಲಿ ಪ್ಯಾನ್‌ಕಾರ್ಡ್ ಸಂಖ್ಯೆ ಕಡ್ಡಾಯ ಮಾಡಿದ್ದಾರೆ. ಅದರ ಅರ್ಜಿಯಲ್ಲಿ ತಂದೆ ಹೆಸರು ಕಡ್ಡಾಯ, ತಾಯಿಯ ಹೆಸರು ಎಂಬ ಕಾಲಂ ಇದ್ದರೂ, ಅದನ್ನು ಬೇರೆಯದೇ ಉದ್ದೇಶಕ್ಕಾಗಿ ಇಟ್ಟುಕೊಂಡಿರುತ್ತಾರೆ.ನನಗೆ ಇನ್ನೂ ನೆನಪಿಟ್ಟುಕೊಳ್ಳುವ ಒಳ್ಳೆಯ ಅಪ್ಪನೇ ಸಿಕ್ಕಿದ್ದಾರೆ.

ನನ್ನ ಪ್ಯಾನ್‌ಕಾರ್ಡ್‌ನಲ್ಲಿ ಅವರ ಹೆಸರನ್ನು ಹೊತ್ತು ಓಡಾಡುವುದು ನನಗೆ ಭಾರವೇನಲ್ಲ. ಆದರೆ ಅಪ್ಪಂದಿರ ನೆನಪನ್ನು ಸದಾಕಾಲ ಜೇಬಿನಲ್ಲಿ ಇಟ್ಟುಕೊಂಡು ಓಡಾಡುವುದು ಭಾರವಾಗುವ ಎಷ್ಟೋ ಮಕ್ಕಳು ನಮ್ಮ ನಡುವೆ ಇದ್ದಾರೆ ಎಂಬುದನ್ನು ನಾವು ಮರೆಯುವುದು ಬೇಡ.

ಒಂದು ಮೊಕದ್ದಮೆಯ ಕಥೆ

ತೊಂಬತ್ತರ ದಶಕದ ಕೊನೆಯಲ್ಲಿ ನಡೆದ ಪ್ರಸಂಗ ಇದು. ಕಾದಂಬರಿಗಾರ್ತಿ ಗೀತಾ ಹರಿಹರನ್ ತಮ್ಮ 11 ವರ್ಷದ ಮಗನ ಹೆಸರಿನಲ್ಲಿ `ಪರಿಹಾರ ಬಾಂಡ್' ತೆಗೆದುಕೊಳ್ಳಲು ರಿಸರ್ವ್ ಬ್ಯಾಂಕಿಗೆ ಅರ್ಜಿ ಹಾಕಿದರು. ತಂದೆಯಾದ ಹರಿಹರನ್ ಅವರೇ ಸಹಿ ಮಾಡಬೇಕೆಂದು ಬ್ಯಾಂಕಿನಿಂದ ಉತ್ತರ ಬಂದಿತು.`ತಾಯಿಯಾದ ನಾನೂ ಪೋಷಕಳಾಗಿರುತ್ತೇನೆ ಎಂದು ನಾವಿಬ್ಬರೂ ಸೇರಿಯೇ ತೀರ್ಮಾನಿಸಿದ್ದೇವೆ, ಹೀಗಾಗಿ ಪೋಷಕರ ಜಾಗದಲ್ಲಿ ನನ್ನ ಹೆಸರು ಇರಲಿ' ಎಂದು ಗೀತಾ ಕೇಳಿಕೊಂಡಾಗ `ರಿಸರ್ವ್ ಬ್ಯಾಂಕಿ'ನಿಂದ ಬಂದ ಉತ್ತರ ಏನು ಗೊತ್ತೆ?- `ಹಾಗಿದ್ದರೆ ಹರಿಹರನ್ ಮಗುವಿನ ತಂದೆಯಾಗಿಯೂ ಅಸಮರ್ಥರು.

ಅವರು ಸತ್ತಿದ್ದಾರೆ ಅಥವಾ ಅವರು ವಾನಪ್ರಸ್ಥ ತೆಗೆದುಕೊಂಡಿದ್ದಾರೆ ಎಂದು ಪ್ರಮಾಣಪತ್ರ ತೆಗೆದುಕೊಂಡು ಬನ್ನಿ'. ಗೀತಾ ಮತ್ತು ಹರಿಹರನ್ ಇಬ್ಬರೂ ಸೇರಿ ಸುಪ್ರೀಂಕೋರ್ಟ್‌ನಲ್ಲಿ ಈ ಕುರಿತು ಮೊಕದ್ದಮೆ ಹೂಡಿದರು. ಸುಪ್ರೀಂಕೋರ್ಟ್ 1999ರ ಫೆಬ್ರುವರಿಯಲ್ಲಿ ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ಸಮಾನ ಮತ್ತು ಸ್ವಾಭಾವಿಕ ಪೋಷಕರು ಎಂದು ತೀರ್ಪು ನೀಡಿತು.ಆದರೆ ಈ ತೀರ್ಪು ಇನ್ನೂ ತೆರಿಗೆ ನಿರ್ದೇಶನಾಲಯವನ್ನು ತಲುಪಿಲ್ಲ. 2003ರಲ್ಲಿ ದೆಹಲಿಯ ಸಂಜೀವ್ ಕುಮಾರ್ ಎನ್ನುವವರಿಗೆ ಪ್ಯಾನ್‌ಕಾರ್ಡ್ ಪಡೆಯುವ ಸರಳ ಪ್ರಕ್ರಿಯೆ ಅಷ್ಟು ಸಲೀಸಾಗಿ ಮುಗಿಯಲಿಲ್ಲ. ಪ್ಯಾನ್‌ಕಾರ್ಡ್‌ನಲ್ಲಿ ತಾಯಿಯ ಹೆಸರು ಬೇಕೆಂದು ಅವರು ಕೋರಿಕೊಂಡಿದ್ದರು. ಅವರಿಗೆ ಬರಿಯ `ಪ್ಯಾನ್' ನಂಬರ್ ಮಾತ್ರ ನೀಡಿ, `ಕಾರ್ಡ್' ನೀಡದೇ ತೆರಿಗೆ ನಿರ್ದೇಶನಾಲಯ ಕೈತೊಳೆದುಕೊಂಡಿದೆ.

ಏಕೆಂದರೆ ಮುದ್ರಿತ  ಕಾರ್ಡಿನಲ್ಲಿ ತಾಯಿಯ ಹೆಸರಿಗೆ ಆಸ್ಪದವೇ ಇಲ್ಲ, ತಂದೆಯ ಹೆಸರನ್ನು ಮಾತ್ರವೇ ಅದರಲ್ಲಿ ನಮೂದಿಸಬೇಕು. ನೀವು ಏನು ಎಂಬುದು ಮುಖ್ಯವಲ್ಲ, ನೀವು ಹೀಗೊಬ್ಬ ತಂದೆಯ ಮಗ/ಮಗಳು ಎಂಬುದಷ್ಟೇ ತೆರಿಗೆ ನಿರ್ದೇಶನಾಲಯಕ್ಕೆ ಮುಖ್ಯ. ಅಮ್ಮನ ಹೆಸರಿರುವ ಕಾರ್ಡ್ ಬರುವವರೆಗೆ ಆ `ಪ್ಯಾನ್' ನಂಬರ್ ಬಳಸಲು ಸಂಜೀವ್ ನಿರಾಕರಿಸಿದ್ದಾರೆ. ಇವರ ವಿಚಾರಣಾ ಪತ್ರಗಳಿಗೆ ಉತ್ತರಿಸದ ತೆರಿಗೆ ನಿರ್ದೇಶನಾಲಯ ಜಾಣಮೌನಕ್ಕೆ ಶರಣಾಗಿದೆ.

ಬೇರೆ ದೇಶಗಳಲ್ಲಿ...

ಹೆಚ್ಚಿನ ಪಾಶ್ಚಾತ್ಯ ದೇಶಗಳು, ಮದುವೆಯಾಗದೇ ಮಕ್ಕಳಾಗುವ ಸಂದರ್ಭಗಳು ಮತ್ತು ಬಲಾತ್ಕಾರಕ್ಕೊಳಗಾಗಿ ಮಗು ಹುಟ್ಟಿದ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ತಾಯಿಯ ಹೆಸರಿಗೂ ಆಸ್ಪದ ಕಲ್ಪಿಸಿವೆ. ತಂದೆಯ ಹೆಸರು ನಮೂದಿಸುವುದನ್ನು ಅವರಿಷ್ಟಕ್ಕೆ ಬಿಡಲಾಗಿದೆ.

ನಾರ್ವೆಯಲ್ಲಿ ಯಾವುದೇ ಸರ್ಕಾರಿ ದಾಖಲೆಗಳಿಗಾಗಿ ತಂದೆಯ ಅಥವಾ ತಾಯಿಯ ಹೆಸರನ್ನು ಆಯ್ಕೆ ಮಾಡಿಕೊಳ್ಳಬಹುದು. ಸರ್ಕಾರಿ ದಾಖಲೆಗಳಲ್ಲಿ ತಾಯಿಯ ಹೆಸರನ್ನು ಶಾಶ್ವತವಾಗಿ ಬಳಸಲೂಬಹುದು.

ಮದುವೆಯ ನಂತರ ಗಂಡನ ಮನೆತನದ ಹೆಸರು ಅಥವಾ ಕುಲನಾಮ ಇಟ್ಟುಕೊಳ್ಳುವುದು ಕೂಡ ಅಲ್ಲಿ ಕಡ್ಡಾಯವಲ್ಲ. ಸ್ವಿಟ್ಜರ್ಲೆಂಡ್‌ನಲ್ಲಿಯೂ ಯಾವುದೇ ಅಧಿಕೃತ ದಾಖಲೆಗಳಲ್ಲಿ ತಂದೆಯ ಹೆಸರನ್ನು ಕಡ್ಡಾಯ ಮಾಡಿಲ್ಲ. ನಮ್ಮಲ್ಲಿ ಪ್ಯಾನ್ ನಂಬರ್ ಇದ್ದಂತೆ ಅಮೆರಿಕದಲ್ಲಿ `ಸೋಶಿಯಲ್ ಸೆಕ್ಯುರಿಟಿ ನಂಬರ್' ನೀಡುತ್ತಾರೆ.

18ನೇ ವಯಸ್ಸಿನ ಕೆಳಗಿನ ಮಕ್ಕಳಿಗೆ ಸೋಶಿಯಲ್ ಸೆಕ್ಯುರಿಟಿ ನಂಬರ್ ತೆಗೆದುಕೊಳ್ಳುವ ಅರ್ಜಿಯಲ್ಲಿ ತಾಯಿಯ ಮತ್ತು ತಂದೆಯ ಸೋಶಿಯಲ್ ಸೆಕ್ಯುರಿಟಿ ನಂಬರ್ ನೀಡಬೇಕು, ಆದರೆ ಇದೂ ಕಡ್ಡಾಯವೇನಲ್ಲ. ಅಲ್ಲಿ ಜನ್ಮ ದಾಖಲೆಯಲ್ಲಿಯೂ ತಂದೆಯ ಹೆಸರು ನಮೂದಿಸಲೇಬೇಕು ಎಂದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.