ತಂಪು ತಂಬುಳಿ

7
ನಮ್ಮೂರ ಊಟ

ತಂಪು ತಂಬುಳಿ

Published:
Updated:

ಧನಿಯಾ ತಂಬುಳಿ 

ಸಾಮಗ್ರಿ
: ಎರಡು ಲೋಟ ಮಜ್ಜಿಗೆ, ಒಂದುವರೆ ಟೀ ಚಮಚ ಧನಿಯಾ ಅಥವಾ ಕೊತ್ತಂಬರಿ ಬೀಜ, ಕಾಲು ಟೀ ಚಮಚ ಜೀರಿಗೆ, ಎರಡು ಅಥವಾ ಮೂರು ಕಾಳುಮೆಣಸು, ಎರಡು ಟೀ ಚಮಚ ಕಾಯಿತುರಿ, ಒಂದೂವರೆ ಟೀ ಚಮಚ ತುಪ್ಪ, ಒಗ್ಗರಣೆ ಸಾಮಗ್ರಿ, ರುಚಿಗೆ ತಕ್ಕಷ್ಟು ಉಪ್ಪು.ವಿಧಾನ: ಒಂದು ಟೀ ಚಮಚ ತುಪ್ಪವನ್ನು ಬಾಣಲೆಯಲ್ಲಿ ಬಿಸಿಮಾಡಿ ಕಾಳುಮೆಣಸು ಹಾಕಿ ಸಿಡಿದಾಗ ಧನಿಯಾ ಹಾಗು ಜೀರಿಗೆ ಹಾಕಿ ಸ್ವಲ್ಪ ಹುರಿದು ಕೆಳಗಿರಿಸಿ, ಕಾಯಿತುರಿ ಮತ್ತು ಉಪ್ಪು ಸೇರಿಸಿ ಸ್ವಲ್ಪ ಮಜ್ಜಿಗೆ ಹಾಕಿ ರುಬ್ಬಿ ನಂತರ ಉಳಿದ ಮಜ್ಜಿಗೆಯನ್ನು ಸೇರಿಸಿರಿ. ತುಪ್ಪದಲ್ಲಿ ಜೀರಿಗೆ, ಸಾಸಿವೆ, ಮೆಣಸಿನಕಾಯಿ ಸಿಡಿಸಿ ಒಗ್ಗರಣೆ ಕೊಡಿ. ತಂಪಾದ ತಂಬುಳಿ ರೆಡಿ.ಮೆಂತ್ಯೆ ಮೆಣಸಿನಕಾಯಿ ತಂಬುಳಿ

ಸಾಮಗ್ರಿ: ಎರಡು ಲೋಟ ಮಜ್ಜಿಗೆ, ಎರಡು ಕೆಂಪುಮೆಣಸಿನ ಕಾಯಿ, ಒಂದೂವರೆ ಟೀ ಚಮಚ ಮೆಂತ್ಯೆ, ಕಾಲು ಟೀ ಚಮಚ ಜೀರಿಗೆ, ಕಾಲು ಟೀ ಚಮಚ ಸಾಸಿವೆ, ಒಂದು ಟೀ ಚಮಚ ಕಾಯಿತುರಿ, ಒಂದೂವರೆ ಟೀ ಚಮಚ ತುಪ್ಪ, ಒಗ್ಗರಣೆ ಸಾಮಗ್ರಿ, ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ: ಒಂದು ಟೀ ಚಮಚ ತುಪ್ಪವನ್ನು ಬಾಣಲೆಯಲ್ಲಿ ಬಿಸಿಮಾಡಿ ಮೆಂತ್ಯೆ ಹಾಕಿ ಸಿಡಿಸಿ ನಂತರ ಕತ್ತರಿಸಿದ ಕೆಂಪು ಮೆಣಸಿನಕಾಯಿ, ಜೀರಿಗೆ, ಸಾಸಿವೆ ಸೇರಿಸಿ ಹುರಿಯಿರಿ. ಸಾಸಿವೆ ಸಿಡಿದಾಗ ಕೆಳಗಿರಿಸಿ. ಕಾಯಿತುರಿ, ಉಪ್ಪು ಸೇರಿಸಿ ಮಜ್ಜಿಗೆಯೊಂದಿಗೆ ರುಬ್ಬಿ.  ನಂತರ ಉಳಿದ ಮಜ್ಜಿಗೆ ಸೇರಿಸಿರಿ. ತುಪ್ಪದಲ್ಲಿ ಒಗ್ಗರಣೆ ಕೊಡಿ. ಈ ತಂಬುಳಿ ಅಜೀರ್ಣ, ಹೊಟ್ಟೆ ನೋವು ನಿವಾರಿಸಿ ಹಸಿವನ್ನು ವೃದ್ಧಿಸುತ್ತದೆ.ಉದ್ದಿನ ಬೇಳೆ ತಂಬುಳಿ

ಸಾಮಗ್ರಿ
: ಎರಡು ಲೋಟ ಮಜ್ಜಿಗೆ, ಒಂದೂವರೆ ಟೀ ಚಮಚ ಉದ್ದಿನ ಬೇಳೆ, ನಾಲ್ಕು ಕಾಳುಮೆಣಸು, ಎರಡು ಎಸಳು ಬೆಳ್ಳುಳ್ಳಿ, ಒಂದು ಟೀ ಚಮಚ ಕಾಯಿತುರಿ, ಒಂದೂವರೆ ಟೀ ಚಮಚ ತುಪ್ಪ,   ಒಗ್ಗರಣೆ ಸಾಮಗ್ರಿ, ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ: ಬಾಣಲೆಯಲ್ಲಿ ತುಪ್ಪವನ್ನು ಬಿಸಿಮಾಡಿ, ಉದ್ದಿನ ಬೇಳೆ, ಬೆಳ್ಳುಳ್ಳಿ, ಕಾಳುಮೆಣಸುಗಳನ್ನು ಹಾಕಿ ಹುರಿಯಿರಿ, ಉದ್ದಿನ ಬೇಳೆ ಹೊಂಬಣ್ಣ ಬಂದಾಗ ಕೆಳಗಿರಿಸಿ. ಕಾಯಿತುರಿ, ಉಪ್ಪು ಸೇರಿಸಿ ಮಜ್ಜಿಗೆಯೊಂದಿಗೆ ರುಬ್ಬಿ.  ಉಳಿದ ಮಜ್ಜಿಗೆಯನ್ನು ಸೇರಿಸಿ ನಂತರ ತುಪ್ಪದಲ್ಲಿ ಒಗ್ಗರಣೆ ಕೊಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೆರಿಸಿ ರುಚಿ ಹೆಚ್ಚಿಸಿ. ಈ ತಂಬುಳಿ ಊಟಕ್ಕೂ ರುಚಿ ಉದರಕ್ಕೂ ಹಿತ.ಎಳ್ಳಿನ ತಂಬುಳಿ

ಸಾಮಗ್ರಿ
: ಎರಡು ಲೋಟ ಮಜ್ಜಿಗೆ, ಎರಡು ಟೀ ಚಮಚ ಬಿಳಿ ಎಳ್ಳು, ಒಂದು ಕೆಂಪು ಮೆಣಸಿನ ಕಾಯಿ, ಎರಡು ಟೀ ಚಮಚ ಕಾಯಿತುರಿ, ಒಂದುವರೆ ಟೀ ಚಮಚ ತುಪ್ಪ, ಒಗ್ಗರಣೆ ಸಾಮಗ್ರಿ, ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ: ಒಂದು ಟೀ ಚಮಚ ತುಪ್ಪವನ್ನು ಬಾಣಲೆಯಲ್ಲಿ ಬಿಸಿಮಾಡಿ ಎಳ್ಳನ್ನು ಹಾಕಿ ಕೆಂಪು ಮೆಣಸಿನೊಂದಿಗೆ ಹೊಂಬಣ್ಣ ಬರುವವರೆವಿಗೆ ಹುರಿಯಿರಿ. ಆರಿದ ನಂತರ ಕಾಯಿತುರಿ ಮತ್ತು ಉಪ್ಪು ಸೇರಿಸಿ ಸ್ವಲ್ಪ ಮಜ್ಜಿಗೆಯೊಂದಿಗೆ ರುಬ್ಬಿ ನಂತರ ಉಳಿದ ಮಜ್ಜಿಗೆಯನ್ನು ಸೇರಿಸಿರಿ. ತುಪ್ಪದಲ್ಲಿ ಜೀರಿಗೆ, ಸಾಸಿವೆ, ಮೆಣಸಿನಕಾಯಿ ಸಿಡಿಸಿ ಒಗ್ಗರಣೆ ಕೊಡಿ. ರುಚಿಕರ ತಂಬುಳಿ ರೆಡಿ.ಜೀರಿಗೆ ತಂಬುಳಿ

ಸಾಮಗ್ರಿ
: ಎರಡು ಲೋಟ ಮಜ್ಜಿಗೆ, ಒಂದೂವರೆ ಟೀ ಚಮಚ ಜೀರಿಗೆ, ಮೂರು ಕಾಳುಮೆಣಸು, ಎರಡು ಟೀ ಚಮಚ ಕಾಯಿತುರಿ, ಒಂದೂವರೆ ಟೀ ಚಮಚ ತುಪ್ಪ, ಒಗ್ಗರಣೆ ಸಾಮಗ್ರಿ, ರುಚಿಗೆ ತಕ್ಕಷ್ಟು ಉಪ್ಪು.ವಿಧಾನ: ಅರ್ಧ ಟೀ ಚಮಚ ತುಪ್ಪದಲ್ಲಿ ಕಾಳುಮೆಣಸು ಹಾಕಿ, ಸಿಡಿದಾಗ ಜೀರಿಗೆಯನ್ನು ಹಾಕಿ ಸ್ವಲ್ಪ ಹುರಿದು ಕೆಳಗಿರಿಸಿ. ನಂತರ ಕಾಯಿತುರಿ, ಉಪ್ಪು ಸೇರಿಸಿ ನುಣ್ಣಗೆ ಮಜ್ಜಿಗೆಯಲ್ಲಿ ರುಬ್ಬಿ ಉಳಿದ ಮಜ್ಜಿಗೆಯನ್ನು ಸೇರಿಸಿ. ಕೊನೆಯಲ್ಲಿ ತುಪ್ಪದಲ್ಲಿ ಒಗ್ಗರಣೆ ಕೊಡಿ. ಈ ತಂಬುಳಿ ಜೀರ್ಣಕಾರಕ ಹಾಗೂ ಬಾಣಂತಿಯರಿಗೆ ಒಳ್ಳೆಯದು.ಕಡಲೆ ತಂಬುಳಿ

ಸಾಮಗ್ರಿ
: ಎರಡು ಲೋಟ ಮಜ್ಜಿಗೆ, ಮೂರು ಟೀ ಚಮಚ ಇಡಿ ಕಡಲೆ ಅಥವಾ ಕಡಲೆ ಬೇಳೆ, ಅರ್ಧ ಟೀ ಚಮಚ ಮೆಂತ್ಯೆ, ಒಂದು ಟೀ ಚಮಚ ತುಪ್ಪ, ಎರಡು ಟೀ ಚಮಚ ಕಾಯಿತುರಿ, ಒಂದು ಸಂಡಿಗೆ ಮೆಣಸು, ಒಗ್ಗರಣೆ ಸಾಮಗ್ರಿ, ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ: ಕಡಲೆ ಮತ್ತು ಮೆಂತ್ಯೆಯನ್ನು ಒಂದುವರೆ ಗಂಟೆ ನೆನೆಹಾಕಿ ನೀರನ್ನು ಬಸಿದು ತೆಂಗಿನಕಾಯಿ ತುರಿ ಮತ್ತು ಉಪ್ಪು ಸೇರಿಸ ರುಬ್ಬಿ ನಂತರ ಮಜ್ಜಿಗೆ ಸೇರಿಸಿರಿ. ತುಪ್ಪದಲ್ಲಿ ಸಂಡಿಗೆ ಮೆಣಸನ್ನು ಒಗ್ಗರಣೆಯೊಂದಿಗೆ ಹುರಿದು ಸೇರಿಸಿರಿ.  ಈ ತಂಬುಳಿ ತಂಪು ಹಾಗು ಮಲಬದ್ಧತೆ ನಿವಾರಣೆಗೆ ಒಳ್ಳೆಯದು. ಹುರಿಗಡಲೆಯಿಂದಲು ಸಹ ಇದೇ ರೀತಿ ತಂಬುಳಿ ಮಾಡಬಹುದು.ಶುಂಠಿಯ ತಂಬುಳಿ

ಸಾಮಗ್ರಿ
: ಒಂದು ಇಂಚು ಹಸಿ ಶುಂಠಿ, ಕಾಲು ಟೀ ಚಮಚ ಜೀರಿಗೆ, ಅರ್ಧ ಟೀ ಚಮಚ ಕೊತ್ತಂಬರಿ, ಎರಡು ಟೀ ಚಮಚ ಕಾಯಿತುರಿ, ಎರಡು ಟೀ ಚಮಚ ತುಪ್ಪ, ಎರಡು ಲೋಟ ಮಜ್ಜಿಗೆ, ಒಗ್ಗರಣೆ ಸಾಮಗ್ರಿ, ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ: ಬಾಣಲೆಯನ್ನು ಬಿಸಿಗಿಟ್ಟು ಒಂದು ಟೀ ಚಮಚ ತುಪ್ಪ ಹಾಕಿ ಬಿಸಿಯಾದ ನಂತರ ತೆಳ್ಳಗೆ ಗಾಲಿ ಮಾಡಿದ ಶುಂಠಿಯನ್ನು ಹಾಕಿ ಸ್ವಲ್ಪ ಹುರಿಯಿರಿ. ಮತ್ತೆ ಜೀರಿಗೆ, ಕೊತ್ತಂಬರಿ ಸೇರಿಸಿ ಸ್ವಲ್ಪ ಹುರಿದು ಕೆಳಗಿರಿಸಿ. ನಂತರ ಕಾಯಿತುರಿ, ಉಪ್ಪು, ಮಜ್ಜಿಗೆಯೊಂದಿಗೆ ರುಬ್ಬಿ.  ಉಳಿದ ಮಜ್ಜಿಗೆಯನ್ನು ಸೇರಿಸಿ ತುಪ್ಪದಲ್ಲಿ ಒಗ್ಗರಣೆಯನ್ನು ಕೊಡಿ. ಈ ತಂಬುಳಿ ಅಜೀರ್ಣ ಹಾಗೂಹೊಟ್ಟೆ ಉಬ್ಬರ ಕಡಿಮೆ ಮಾಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry