ಭಾನುವಾರ, ಮೇ 31, 2020
27 °C

ತಕ್ಷಣ ಸೌಲಭ್ಯ ನೀಡಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಜಿಲ್ಲೆಯ ಎಲ್ಲ ತಾಲ್ಲೂಕಿನ ಅಂಗವಿಕಲರಿಗೆ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳುವುದರೊಂದಿಗೆ ಗುರುತಿನ ಕಾರ್ಡ್ ಹಾಗೂ ವೈದ್ಯಕೀಯ ಪ್ರಮಾಣ ಪತ್ರ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಬುಧವಾರ ಜರುಗಿದ ರಾಷ್ಟ್ರೀಯ ದತ್ತಿ ಕಾಯ್ದೆಯಡಿ ವಿವಿಧ ಅಂಗವಿಕಲರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗವಿಕಲರ ಅಭಿವೃದ್ಧಿಗೆ ಸರಕಾರ ನೀಡುತ್ತಿರುವ ಸಹಾಯ ಸೌಲಭ್ಯ ಗಳನ್ನು ಜಿಲ್ಲೆಯ ಎಲ್ಲ ಅಂಗವಿಕಲರಿಗೂ ತಲುಪಿಸಬೇಕು ಎಂದರು.ಜಿಲ್ಲೆಯಲ್ಲಿ ಒಟ್ಟು 16997 ಅಂಗವಿಕಲರಿದ್ದು 1800 ಬುದ್ಧಿಮಾಂದ್ಯ ಅಥವಾ ಮಾನಸಿಕ ಅಸ್ವಸ್ಥರಿದ್ದಾರೆ. 1,143 ಅಂಧರು, 1968 ಶ್ರವಣದೋಷವುಳ್ಳವರು, 131 ಮಾನಸಿಕ ಅಸ್ವಸ್ಥರು, 9837 ದೈಹಿಕ ಅಂಗವಿಕಲರು ಹಾಗೂ 29 ಕುಷ್ಠರೋಗ ನಿವಾರಕ ಅಂಗವಿಕಲರಿದ್ದಾರೆ.ಇಲ್ಲಿಯವರೆಗೆ ಒಟ್ಟು 9978 ಅಂಗವಿಕಲರಿಗೆ ಗುರುತಿನ ಚೀಟಿ ನೀಡಲಾಗಿದ್ದು, 1,381 ಜನರಿಗೆ ವಿವಿಧ ಸಾಧನ ಸಲಕರಣೆ ನೀಡಲಾಗಿದ್ದು, 11866 ಜನರಿಗೆ ಮಾಸಾಶನ ನೀಡಿದೆ. 1,216 ಜನರಿಗೆ ವಿದ್ಯಾರ್ಥಿ ವೇತನ ಹಾಗೂ 3,364 ಜನರಿಗೆ ಬಸ್‌ಪಾಸ್ ವಿತರಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.ಪ್ರತಿ ಗ್ರಾಮ ಪಂಚಾಯಿತಿ ವಿವಿಧ ಯೋಜನೆಗಳಡಿ ಶೇ 5ರಷ್ಟು ಮೀಸಲಾತಿಯನ್ನು ಅಂಗವಿಕಲರಿಗೆ ಮೀಸಲಿಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವಿಜಯ ಮೋಹನರಾಜ್ ತಿಳಿಸಿದರು.ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕಿ ಸಿ.ಎನ್. ಹೊಳೆಹೊಸೂರ, ಜಿಲ್ಲಾ ಪಂಚಾಯಿತಿ ಯೋಜನೆ ನಿರ್ದೇಶಕ ಚಂದಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ರಾಯಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.