ಬುಧವಾರ, ಮೇ 12, 2021
24 °C
ನೋಟ ನವನವೀನ

ತತ್ತಾಪಾನಿ ಸಂಜೀವಿನಿ

-ವಿ.ಎಲ್. ಪ್ರಕಾಶ Updated:

ಅಕ್ಷರ ಗಾತ್ರ : | |

ಶಿಮ್ಲೋಕ್ಕೆ ಪ್ರವೇಶ ಪಡೆಯುವ ಮುನ್ನವೇ `ಶಿಮ್ಲೋದ ಸುತ್ತಮುತ್ತಲಿನ ಆಕರ್ಷಣೆಗಳನ್ನು ತೋರಿಸುತ್ತೇವೆ' ಎಂದು ಪ್ರವಾಸಿಗರಿಗೆ ಟ್ಯಾಕ್ಸಿ ಡ್ರೈವರ್‌ಗಳು, ಟ್ರಾವೆಲ್ ಏಜೆಂಟರು ದುಂಬಾಲು ಬೀಳುತ್ತಾರೆ. ಶಿಮ್ಲೋದ ಒಳಗಡೆ ಹೋಗಿಬರುತ್ತೇವೆ ಎಂದರೂ ಬಿಡುವುದಿಲ್ಲ. ಬಹಳ ಬೇಗನೆ, ಕಡಿಮೆ ಹಣದಲ್ಲಿ ನಿಮಗೆ ಬಿಸಿನೀರಿನ ಬುಗ್ಗೆಗಳನ್ನು ತೋರಿಸಿ ವಾಪಸ್ ಕರೆತರುವುದಾಗಿ ಆಸೆ ಹುಟ್ಟಿಸುತ್ತಾರೆ.

ಅವರು ಹೇಳಿದ್ದೆಲ್ಲ ತೋರಿಸಲು ಸಾಧ್ಯವಾಗದಿದ್ದರೂ ಬಿಸಿನೀರಿನ ಬುಗ್ಗೆಗಳು ನೋಡುಗರಲ್ಲಿ ಅಚ್ಚರಿ, ಖುಷಿ ತರುವುದಂತೂ ಸುಳ್ಳಲ್ಲ.

ಅದು ತತ್ತಾಪಾನಿ. ಹಿಮಾಲಯದಾದ್ಯಂತ ಹರಿಯುವ ನದಿಗಳು ಕೆಲವೆಡೆ ಬಿಸಿನೀರಿನ ಬುಗ್ಗೆಗಳಾಗಿರುತ್ತವೆ. ಸದಾ ಬಿಸಿನೀರನ್ನು ಹರಿಸುವ ಈ ಬುಗ್ಗೆಗಳೆಂದರೆ ಸರ್ವರೋಗಗಳಿಗೂ ಔಷಧ ಎನ್ನುವುದು ಬಹಳ ಹಳೆಯ ನಂಬಿಕೆ. ಗಂಧಕದ ಅಂಶದ ಕಾರಣ ಇವುಗಳಲ್ಲಿ ಸ್ನಾನ ಮಾಡಿದಿರೆಂದರೆ ಹಿಮಾಲಯದಲ್ಲಿ ಸುತ್ತಾಡಿದ ಆಯಾಸ ಮಾಯವಾಗುವುದಂತೂ ಖಂಡಿತ.ತತ್ತಾಪಾನಿ- ಶಿಮ್ಲೋದಿಂದ ಐವತ್ತೊಂದು ಕಿಲೋಮೀಟರ್ ದೂರದಲ್ಲಿದೆ. 2149 ಅಡಿ ಎತ್ತರವಿರುವ ಇದು ಶಿಮ್ಲೋದ ಬಳಿಯ ಪ್ರಮುಖ ಪ್ರವಾಸಿ ಆಕರ್ಷಣೆ. ಸಟ್ಲೆಜ್ ನದಿಯ ಆಸುಪಾಸಿನಲ್ಲಿ ಈಗ ರ‌್ಯಾಫ್ಟಿಂಗ್, ಟ್ರಕ್ಕಿಂಗ್, ಕ್ಯಾಂಪಿಂಗ್ ಮತ್ತು ಫಿಷಿಂಗ್ ಇತ್ಯಾದಿ ಸಾಹಸಕ್ರೀಡೆಗಳ ಕಾರುಬಾರು. ಅಲ್ಲಿನ ಸ್ಥಳೀಯರಿಗೆ ಇದು ಬಹುದೊಡ್ಡ ಹಣಕಾಸು ವಹಿವಾಟು. ಇದಕ್ಕೆ ಪೂರಕವಾದುದು ತತ್ತಾಪಾನಿ.ಔಷಧೀಯ ಗುಣಗಳಿರುವ ಈ ನೀರಿನಲ್ಲಿ ಸ್ನಾನ ಮಾಡಿದರೆ ಕೆಮ್ಮು, ಚರ್ಮರೋಗಗಳು, ಸ್ನಾಯುಗಳ ನೋವು ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ಇದು ನರಗಳಲ್ಲಿ ರಕ್ತಸ್ರಾವ ಉತ್ತಮಗೊಳಿಸಿ ದೇಹಕ್ಕೆ ಚೈತನ್ಯ ನೀಡುತ್ತದೆ ಎಂದು ತಜ್ಞರು ಒಪ್ಪಿಕೊಳ್ಳುತ್ತಾರೆ. ಹಿಮಾಲಯದ ಪರ್ವತಶ್ರೇಣಿಯಲ್ಲಿ ಹರಿಯುವ ಗಿಡಮೂಲಿಕೆಗಳ ನೀರೂ ಇದಕ್ಕೆ ಕಾರಣವಾಗಿರಬಹುದು.ತತ್ತಾಪಾನಿ ಇರುವ ಇದೇ ಸ್ಥಳದಲ್ಲಿ ಜಮದಗ್ನಿ ಋಷಿ ತನ್ನ ಮಗ ಪರಶುರಾಮನಿಗೆ ಬಿಸಿ ಹಾಗೂ ಪರಿಶುದ್ಧವಾದ ನೀರನ್ನು ಗೌರವ ಮತ್ತು ಪರಾಕ್ರಮದ ಗುರುತಾಗಿ ನೀಡಿದನಂತೆ. ಅದೇ ಗುಣಗಳು ಸಾವಿರಾರು ವರ್ಷಗಳ ಕಾಲ ಮುಂದಿನ ತಲೆಮಾರಿಗೆ ವರ್ಗಾವಣೆಯಾಗುತ್ತಿವೆ ಎಂಬ ನಂಬಿಕೆಯಿದೆ.ತತ್ತಾಪಾನಿಯಿಂದ ಹರಿಯುವ ನೀರನ್ನು ಖಾಸಗಿಯವರು ಸಂಗ್ರಹಿಸಿ ಅಲ್ಲಿ ಬಳಸಲು ಅವಕಾಶವನ್ನೂ ಕಲ್ಪಿಸಿದ್ದಾರೆ. ಈ ಪ್ರದೇಶದ ಸುತ್ತಮುತ್ತಲಿನಲ್ಲಿ ವೈಟ್‌ವಾಟರ್ ರ‌್ಯಾಫ್ಟಿಂಗ್, ಸಟ್ಲೆಜ್ ನದಿಯಲ್ಲಿ ಸಿಗುವ ದುಂಡಗಿನ ಬಣ್ಣ ಬಣ್ಣಗಳ ಕಲ್ಲುಗಳ ಸಂಗ್ರಹವೂ ಒಂದು ಚಟುವಟಿಕೆ. ಮೌಂಟೇನ್ ಬೈಕಿಂಗ್ ಕೂಡಾ ಇಲ್ಲಿ ಸಾಹಸಪ್ರಿಯರಿಗೆ ಅಚ್ಚುಮೆಚ್ಚು.

-ವಿ.ಎಲ್. ಪ್ರಕಾಶ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.