ಗುರುವಾರ , ಮೇ 19, 2022
24 °C

ತಪಾಸಣೆ ನೆಪದಲ್ಲಿ ಕಿರುಕುಳ- ಮೀನುಗಾರರ ಅಳಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಜಾತಿ ಭೇದ ಮರೆತು ಸುಮಾರು 18 ವರ್ಷಗಳಿಂದ ಉಳ್ಳಾಲ ಕಡಲ ತೀರ ಪ್ರದೇಶದಲ್ಲಿ ಸುಮಾರು 500 ಮಂದಿಯನ್ನು ರಕ್ಷಿಸಿದ್ದೇವೆ. ಆದರೆ ನಮಗೇ ರಕ್ಷಣೆ ಇಲ್ಲ... ಕೆಲವು ಸಂದರ್ಭ ವ್ಯಾಪಾರಿ ಹಡಗುಗಳು, ಕರಾವಳಿ ರಕ್ಷಣಾ ಪಡೆಗಳಿಂದ ಮೀನುಗಾರಿಕಾ ದೋಣಿಗಳಿಗೆ, ಮೀನುಗಾರಿಕಾ ಬಲೆಗಳಿಗೆ ಹಾನಿಯಾಗುತ್ತಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ತಪಾಸಣೆ ನೆಪದಲ್ಲಿ ಅಧಿಕಾರಿಗಳು ಕಿರುಕುಳ ನೀಡುತ್ತಾರೆ.ಇದರ ಬಗ್ಗೆ ಕ್ರಮ ಕೈಗೊಳ್ಳಿ...

ಇದು ಕರಾವಳಿ ರಕ್ಷಣಾ ಪಡೆ ಉಳ್ಳಾಲ ಕಡಲ ತೀರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ `ಮೀನುಗಾರರೊಂದಿಗೆ ಸಂವಾದ~ದಲ್ಲಿ ಮೀನುಗಾರರು ಅಧಿಕಾರಿಗಳಲ್ಲಿ ಮಾಡಿಕೊಂಡ ಮನವಿ.ಮೀನುಗಾರರ ಮುಖಂಡ ಗಣಪತಿ ಕೋಟ್ಯಾನ್ ಮಾತನಾಡಿ, ಜೀವರಕ್ಷಕ ಮೀನುಗಾರರ ಸಂಘ, ಶಿವಾಜಿ ಮಿತ್ರಮಂಡಳಿ ಎಂಬ ಎರಡು ಜೀವರಕ್ಷಕ ತಂಡಗಳು ಉಳ್ಳಾಲದಲ್ಲಿ ಇವೆ. ಎರಡೂ ತಂಡಗಳಲ್ಲಿ ಸುಮಾರು 150 ಜೀವರಕ್ಷಕರು ಇದ್ದಾರೆ. ಯಾವುದೇ ಸಂದರ್ಭದಲ್ಲೂ ಅಪಾಯದಿಂದ ಪಾರು ಮಾಡಲು ಸಿದ್ಧರಾಗಿರುತ್ತಾರೆ. ಆದರೆ ಅವರಿಗೆ ಸರ್ಕಾರ ಯಾವುದೇ ಸವಲತ್ತು ನೀಡುತ್ತಿಲ್ಲ. ಜೀವರಕ್ಷಣೆ ಮಾಡುತ್ತಿರುವ ಅವರು ವೈಯಕ್ತಿಕ ಬದುಕಿನ ಬಗ್ಗೆ ಇದುವರೆಗೆ ಚಿಂತೆ ಮಾಡಿಲ್ಲ. ಆದ್ದರಿಂದ ಅವರ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಸಹಾಯ ನೀಡಬೇಕು ಎಂದು ಮನವಿ ಮಾಡಿಕೊಂಡರು.ಮನವಿಗೆ ಉತ್ತರಿಸಿದ ಮೀನುಗಾರಿಕೆ ಇಲಾಖೆ ಸಹ ನಿರ್ದೇಶಕ ವಿಜಯಕುಮಾರ್, ಮೀನುಗಾರಿಕೆ ಸಂದರ್ಭ ಅವಘಡ ಸಂಭವಿಸಿದರೆ ಮಾತ್ರ ಇಲಾಖೆ ತುರ್ತು ಸಂಕಷ್ಟ ಪರಿಹಾರ ನಿಧಿಯಾಗಿ ರೂ. 50 ಸಾವಿರ ಹಾಗೂ ಬಳಿಕ ರೂ. ಒಂದು ಲಕ್ಷ ನೀಡುತ್ತದೆ ಎಂದರು.ಮೀನುಗಾರಿಕೆ ನಿಷೇಧ ಋತುವಿನಲ್ಲಿ `ಸ್ಪೀಡ್ ಬೋಟ್~ಗಳ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅದನ್ನು ಉಲ್ಲಂಘಿಸುವವರಿಗೆ ಸರ್ಕಾರಿ ಸವಲತ್ತುಗಳನ್ನು ನಿರ್ಬಂಧಿಸಲಾಗುವುದು ಎಂದರು.ಪ್ರತ್ಯೇಕ ಬಣ್ಣ

ಆಯಾ ರಾಜ್ಯಗಳ ಮೀನುಗಾರಿಕಾ ಬೋಟ್‌ಗಳನ್ನು ಪತ್ತೆ ಮಾಡಲು ಪ್ರತ್ಯೇಕ ಬಣ್ಣ ನೀಡಲಾಗುವುದು. ಕರ್ನಾಟಕದ ಬೋಟ್‌ಗಳಿಗೆ ನೀಲಿ, ಬಿಳಿ ಹಾಗೂ ಕಪ್ಪು ಬಣ್ಣ ನೀಡಲು ಸರ್ಕಾರ ನಿರ್ಧರಿಸಿದೆ. ಇದನ್ನು ಎಲ್ಲ ಮೀನುಗಾರರು ಅನುಸರಿಸಬೇಕು ಎಂದರು.ಕರಾವಳಿ ರಕ್ಷಣಾ ಪಡೆಯ ಕಮಾಂಡರ್ ಆರ್.ಕೆ.ಶರ್ಮಾ ಮಾತನಾಡಿ, ಮೀನುಗಾರಿಕೆ ವೇಳೆ ಯಾವುದೇ ತೊಂದರೆ ಉಂಟಾದಾಗ ಕಿರುಕುಳ ನೀಡಿದ ಬೋಟ್‌ಗಳ ಸಂಖ್ಯೆ ತಿಳಿಸಬೇಕು. ಯಾವುದೇ ಅವಘಡ ಸಂಭವಿಸಿದಾಗ ಶುಲ್ಕರಹಿತ ದೂರವಾಣಿ ಸಂಖ್ಯೆ 1554 ಸಂಪರ್ಕಿಸಬೇಕು. ಮೀನುಗಾರಿಕೆ ವೇಳೆ ದಿಕ್ಸೂಚಿ ಹಾಗೂ ಎಲ್ಲ ಮುನ್ನೆಚ್ಚರಿಕೆ ಉಪಕರಣಗಳನ್ನು ಬಳಸಿಕೊಳ್ಳಬೇಕು. ರಾತ್ರಿ ವೇಳೆ ದೀಪ ಉರಿಸಿಕೊಂಡಿರಬೇಕು. ದೀಪ ಇಲ್ಲದೆ ಇದ್ದಾಗ ಬೃಹತ್ ವ್ಯಾಪಾರಿ ಹಡಗುಗಳಿಗೆ ಮೀನುಗಾರಿಕಾ ಬೋಟ್‌ಗಳು ಗೋಚರಿಸುವುದಿಲ್ಲ. ಇದು ಕೂಡ ಅವಘಡಕ್ಕೆ ಕಾರಣವಾಗಬಹುದು ಎಂದರು.ಕಮಾಂಡರ್ ಕೆ.ಎಲ್.ಅರುಣ್ ಮಾತನಾಡಿ, ಮೀನುಗಾರರೇ ಕರಾವಳಿ ರಕ್ಷಣಾ ಪಡೆಗೆ ಮಾಹಿತಿದಾರರು. ಆದ್ದರಿಂದ ಎರಡೂ ವಿಭಾಗಗಳು ಉತ್ತಮ ಬಾಂಧವ್ಯ ಹೊಂದಿರಬೇಕು ಎಂದರು.ಕರಾವಳಿಯಲ್ಲಿ ಅನುಮಾನಾಸ್ಪದ ಬೋಟ್‌ಗಳು, ಸಲಕರಣೆಗಳು ಕಂಡುಬಂದರೆ ಕೂಡಲೇ ಕರಾವಳಿ ರಕ್ಷಣಾ ಪಡೆಗೆ ಮಾಹಿತಿ ನೀಡಬೇಕು. ಎನ್‌ಐಟಿಕೆ ಸಮುದ್ರದಲ್ಲಿ ಅಳವಡಿಸಿರುವ ಸಾಧನಗಳಿಗೆ ಹಾನಿಯಾದರೆ ಅದನ್ನೂ ತಿಳಿಸಬೇಕು. ಇಲ್ಲಿನ ಯುವಕರು ರಕ್ಷಣಾ ಪಡೆಗೆ ಆಸ್ತಿ ಇದ್ದಂತೆ. ಅವರ ಸಹಕಾರ ಅಗತ್ಯ. ಸಂಪರ್ಕದ ಕೊರತೆ ಉಂಟಾಗಬಾರದು. ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಮೀನುಗಾರಿಕೆಗೆ ತೆರಳಬಾರದು. ಜೀವರಕ್ಷಣೆ ಹಾಗೂ ಮೀನು ವೃದ್ಧಿಯ ದೃಷ್ಟಿಯಿಂದ ಇದು ಕಡ್ಡಾಯ. ಈ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.ರಾಷ್ಟ್ರೀಯ ಭದ್ರತೆ ಹಿನ್ನೆಲೆಯಲ್ಲಿ ರಾಡಾರ್ ಕೇಂದ್ರಗಳು ರಾಜ್ಯದ ಕರಾವಳಿಯಲ್ಲೂ ಆರಂಭವಾಗಲಿವೆ. ಎಲ್ಲ ಮೀನುಗಾರರು ಇಸ್ರೊ ಸಿದ್ಧಪಡಿಸಿರುವ `ಡಿಸ್ಟ್ರೆಸ್ ಅಲರ್ಟ್ ಟ್ರಾನ್ಸ್‌ಮಿಟರ್~ (ಡಿಎಟಿ) ಉಪಕರಣ ಕೊಂಡೊಯ್ಯಬೇಕು. ಯಾವುದೇ ಅವಘಡ ಸಂದರ್ಭ ಇದು ಅತ್ಯಂತ ಸಹಕಾರಿಯಾಗಿದೆ ಎಂದರು.

ಕರಾವಳಿ ರಕ್ಷಣಾ ಪಡೆ ಅಧಿಕಾರಿ ವೈ.ಎಸ್.ದೋಗ್ರ ಜೀವ ರಕ್ಷಕ ಸಾಧನಗಳ ಬಗ್ಗೆ ಮಾಹಿತಿ ನೀಡಿದರು.`ಸ್ಮಾರ್ಟ್ ಕಾರ್ಡ್~ ನೀಡುತ್ತೇವೆ ಎಂದು ಹೇಳಿ ಎರಡು ವರ್ಷಗಳ ಹಿಂದೆ ಭಾವಚಿತ್ರ, ಸಹಿ ತೆಗೆದುಕೊಂಡು ಹೋಗಿದ್ದಾರೆ. ಆದರೆ ಅದನ್ನು ಇದುವರೆಗೆ ನೀಡಿಲ್ಲ. ಆಧಾರ್ ಕಾರ್ಡ್ ಕೂಡ ಸಿಕ್ಕಿಲ್ಲ. ತಪಾಸಣೆ ವೇಳೆ ಎಲ್ಲ ದಾಖಲೆಗಳು ಇರಬೇಕು ಎನ್ನುತ್ತಾರೆ. ಅದಕ್ಕಿಂತ ಮಿಗಿಲಾಗಿ ಈ ಕಾರ್ಡ್‌ಗಳನ್ನು ನೀಡಿದರೆ ಅನುಕೂಲ~ ಎಂದು ಮೀನುಗಾರರು ಒತ್ತಾಯಿಸಿದರು. ಕರಾವಳಿ ಕಾವಲು ಪಡೆಯ ವೈ.ಎಸ್.ಉಪಾಧ್ಯಾಯ, ಸ್ಥಳೀಯರಾದ ಲಕ್ಷ್ಮಣ ಅಮೀನ್  ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.