ಸೋಮವಾರ, ಜೂಲೈ 6, 2020
28 °C

ತಪ್ಪದ ಬೆಂಕಿ: ನಿಲ್ಲದ ರೋದನೆ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಪ್ಪದ ಬೆಂಕಿ: ನಿಲ್ಲದ ರೋದನೆ !

ಬಾಗೇಪಲ್ಲಿ: ಅಂತರ್ಜಲ ಕುಸಿತ ಮತ್ತು ನೀರಿನ ಮೂಲ ಇಲ್ಲದ ಕಾರಣ ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿರುವ ಬಾಗೇಪಲ್ಲಿ ತಾಲ್ಲೂಕು ಇತ್ತೀಚಿನ ದಿನಗಳಲ್ಲಿ ಇನ್ನೊಂದು ರೀತಿಯ ಸಮಸ್ಯೆ ಎದುರಿಸುತ್ತಿದೆ. ಸುತ್ತಮುತ್ತಲ ಹಸಿರು ಪರಿಸರ ಮತ್ತು ಅರಣ್ಯಪ್ರದೇಶ ಅಗ್ನಿಗೆ ಆಹುತಿಯಾಗುತ್ತಿದ್ದು, ಅಮೂಲ್ಯವಾದ ಔಷಧೀಯ ಸಸ್ಯಗಳು, ಗಿಡಮೂಲಿಕೆಗಳು ಸುಟ್ಟು ಹೋಗುತ್ತಿವೆ. ಹಣದಾಸೆ ಮತ್ತು ಇದ್ದಿಲು ತಯಾರಿಸಿಕೊಳ್ಳುವ ಉದ್ದೇಶದಿಂದ ಕೆಲ ಕಿಡಿಗೇಡಿಗಳು ಇತ್ತೀಚೆಗೆ ಬೆಂಕಿ ಹೊತ್ತಿಸಿದ ಕಾರಣ ದೇವರಗುಡಿಪಲ್ಲಿ ಬೆಟ್ಟದ ಅರಣ್ಯಸಂಪತ್ತು ಅಗ್ನಿಗೆ ಆಹುತಿಯಾಯಿತು.ಬಾಗೇಪಲ್ಲಿ ತಾಲ್ಲೂಕಿನಲ್ಲಿ ಸುಮಾರು 32 ಹೆಕ್ಟರ್‌ಗೂ ಹೆಚ್ಚು ಪ್ರದೇಶ ಬೆಟ್ಟಗುಡ್ಡ ಹಾಗೂ ಅರಣ್ಯ ಪ್ರದೇಶಗಳಿಂದ ಆವರಿಸಿಕೊಂಡಿದೆ. ಬಿಸಿಲಿನ ಬೇಗೆಗೆ ಹಚ್ಚ ಹಸಿರಿನ ಗಿಡ ಹಾಗೂ ಹುಲ್ಲುಗಳು ಒಣಗುತ್ತವೆ. ಸಣ್ಣದಾಗಿ ಹೊತ್ತಿಕೊಳ್ಳುವ ಬೆಂಕಿಯ ಕಿಡಿಯಿಂದ ಅರಣ್ಯ ಸಂಪತ್ತು ನಾಶವಾಗುತ್ತಿದ್ದು, ಅರಣ್ಯ ಇಲಾಖೆಗೆ ಚಿಂತೆಗೀಡು ಮಾಡಿದೆ.ಬೆಟ್ಟದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಬೆಂಕಿಯನ್ನು ಶಮನಗೊಳಿಸಲು ದೀರ್ಘ ಕಾಲ ಬೇಕಾಯಿತು. ಸಂಜೆ 6ರ ಸುಮಾರಿಗೆ ಹೊತ್ತಿಕೊಂಡ ಬೆಂಕಿ ಮಧ್ಯರಾತ್ರಿಯಾದರೂ ಶಮನಗೊಳ್ಳಲಿಲ್ಲ. ಜೋರಾಗಿ ಗಾಳಿ ಬೀಸುವುದರ ಜೊತೆಗೆ ಭಾರಿ ಪ್ರಮಾಣದ ಬೆಂಕಿಯ ಜ್ವಾಲೆಗಳು ಏಳುತ್ತಿದ್ದ ಕಾರಣ ಅಗ್ನಿಯೂ ಇಡೀ ಬೆಟ್ಟವನ್ನು ಆವರಿಸಿಕೊಂಡಿತು.

ಅನಿರೀಕ್ಷಿತವಾಗಿ ಕಾಣಿಸಿಕೊಂಡ ಬೆಂಕಿಗೆ ಪಕ್ಷಿಗಳು ಜೀವ ಕಳೆದುಕೊಂಡವು. ಗೂಡುಗಳಲ್ಲಿ ಅವಿತು ಕುಳಿತಿದ್ದ ಹಕ್ಕಿಮರಿಗಳು ಸುಟ್ಟು ಕರಕಲಾದವು.

ಇವುಗಳಷ್ಟೇ ಅಲ್ಲ, ಹಾವು, ಮೊಲ, ಜಿಂಕೆ ಸೇರಿದಂತೆ ವಿವಿಧ ಬಗೆಯ ಪ್ರಾಣಿಪಕ್ಷಿಗಳು ಬೆಂಕಿಗೆ ತುತ್ತಾದವು. ಕೆಲವು ಅಲ್ಲಿಂದ ಪಾರಾಗಲು ಯತ್ನಿಸಿದರೂ ಸುಟ್ಟ ಗಾಯಗಳಿಂದಬದುಕುಳಿಯಲು ಆಗಲಿಲ್ಲ.


‘ಬೇಸಿಗೆಯ ಸಂಧರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಎತ್ತು ಹಾಗೂ ಕುರಿಗಳನ್ನು ಮೇಯಿಸಿಕೊಂಡು ಬೆಟ್ಟಕ್ಕೆ ಬರುತ್ತಾರೆ. ಮೋಜಿಗಾಗಿ ಕೆಲವರು ಬೆಂಕಿ ಹಚ್ಚುತ್ತಾರೆ.

ಇನ್ನೂ ಕೆಲವರು ಗಿಡಗಂಟಿಗಳ ಇದ್ದಿಲನ್ನು ಸಂಗ್ರಹಿಸುವ ಉದ್ದೇಶದಿಂದ ಈ ರೀತಿಯ ಕೃತ್ಯ ಮಾಡುತ್ತಾರೆ’ ಎಂದು ಸಾರ್ವಜನಿಕರು ಹೇಳುತ್ತಾರೆ.ಅರಣ್ಯ ಇಲಾಖೆ ನಿರ್ಲಕ್ಷ್ಯ? : ‘ಅರಣ್ಯ ಮತ್ತು ಬೆಟ್ಟಕ್ಕೆ ಬೆಂಕಿ ಹೊತ್ತಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿದ್ದು, ಅರಣ್ಯ ಇಲಾಖೆಯವರು ಇದರ ಬಗ್ಗೆ ಗಮನಹರಿಸುತ್ತಿಲ್ಲ.

 ಅರಣ್ಯ ರಕ್ಷಣೆ ಅರಣ್ಯಾಧಿಕಾರಿಗಳ ಕರ್ತವ್ಯವಾಗಿದ್ದರೂ ತುರ್ತು ಕ್ರಮ ಕೈಗೊಳ್ಳುತ್ತಿಲ್ಲ.ಅರಣ್ಯಕ್ಕೆ ಬೆಂಕಿ ಹೊತ್ತಿಕೊಳ್ಳುವುದಕ್ಕೆ ಏನು ಕಾರಣ? ತಪ್ಪಿತಸ್ಥರು ಯಾರು ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿಲ್ಲ’ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

‘ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಅರಣ್ಯ ಇಲಾಖೆ ವಿಶೇಷ ಜಾಗೃತ ದಳವನ್ನು ರಚಿಸಬೇಕು. ಹಗಲು-ರಾತ್ರಿ ನಿಗಾ ವಹಿಸಬೇಕು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಇದರ ಬಗ್ಗೆ ಜನಜಾಗೃತಿ ಮೂಡಿಸಬೇಕು’ ಎಂದು ಅವರು ಆಗ್ರಹಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.