ಗುರುವಾರ , ಮೇ 13, 2021
39 °C
ಸ್ಪಾಟ್ ಫಿಕ್ಸಿಂಗ್: ಬುಕ್ಕಿಗಳ ಆರೋಪ

`ತಪ್ಪೊಪ್ಪಿಕೊಳ್ಳುವಂತೆ ಪೊಲೀಸರಿಂದ ಚಿತ್ರಹಿಂಸೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೆಹಲಿ ಪೊಲೀಸರು ಬಲವಂತವಾಗಿ ತಮ್ಮ ತಪ್ಪೊಪ್ಪಿಗೆಗಳನ್ನು ಪಡೆದಿದ್ದಾರೆ ಎಂದು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಬುಕ್ಕಿಗಳು ದೆಹಲಿ ನ್ಯಾಯಾಲಯದಲ್ಲಿ ಮಂಗಳವಾರ ಆರೋಪಿಸಿದ್ದಾರೆ.`ಚಿತ್ರಹಿಂಸೆ ಹಾಗೂ ದಬ್ಬಾಳಿಕೆ' ನಡೆಸಿ ತನಿಖಾ ದಳ ಬಲವಂತದಿಂದ ತಮ್ಮ ತಪ್ಪೊಪ್ಪಿಗೆಗಳನ್ನು ಪಡೆದಿದೆ ಎಂದು ಬುಕ್ಕಿಗಳಾದ ಸುನಿಲ್ ಭಾಟಿಯಾ, ರಮೇಶ್ ವ್ಯಾಸ್ ಹಾಗೂ ಫಿರೋಜ್ ಅನ್ಸಾರಿ ಹೇಳಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಜೂನ್ 22ರ ಒಳಗೆ ವಿವರಣೆ ಸಲ್ಲಿಸುವಂತೆ ಪೊಲೀಸರಿಗೆ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಅಜಯ್ ಕುಮಾರ್ ಜೈನ್ ಸೂಚಿಸಿದ್ದಾರೆ.ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ರಾಜಸ್ತಾನ್ ರಾಯಲ್ಸ್ ಮಾಲೀಕ ರಾಜ್ ಕುಂದ್ರಾ ಅವರ ಹೆಸರು ಹೇಳುವಂತೆ ದೆಹಲಿ ಪೊಲೀಸರು ತಮ್ಮ ಮೇಲೆ ಒತ್ತಡ ಹೇರಿದರು ಎಂದು ಉದ್ಯಮಿ ಉಮೇಶ್ ಗೋಯೆಂಕಾ ನ್ಯಾಯಾಲಯದ ಎದುರು ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೆ ಬುಕ್ಕಿಗಳು ಮಾಡಿರುವ ಆರೋಪಗಳು ಮಹತ್ವ ಪಡೆದಿವೆ.ವಿಚಾರಣೆ ವೇಳೆ ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಕಳುಹಿಸುವಂತೆ ಕೋರಿ ಪೊಲೀಸರು ಸಲ್ಲಿಸಿದ್ದ ಮನವಿಗೆ ನ್ಯಾಯಾಲಯ ಸ್ಪಂದಿಸಿತು. ದೀಪಕ್ ಕುಮಾರ್ ಹಾಗೂ ಮಾಜಿ ರಣಜಿ ಆಟಗಾರ ಬಾಬುರಾವ್ ಯಾದವ್ ಸೇರಿದಂತೆ ಮೂವರು ಬುಕ್ಕಿಗಳು ಹಾಗೂ ಇತರ ಇಬ್ಬರನ್ನು ಜುಲೈ ಎರಡರವರೆಗೂ ನ್ಯಾಯಾಂಗ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿತು.ಅಲ್ಲದೇ, ಬುಕ್ಕಿ ಅಶ್ವನಿ ಅಗರವಾಲ್ ಅವರನ್ನು ಹಾಜರುಪಡಿಸಲು ಹೊಸ ವಾರೆಂಟ್ ಜಾರಿಗೊಳಿಸುವಂತೆ ಕೋರಿ ಪೊಲೀಸರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಬುಕ್ಕಿ ಅಗರವಾಲ್ ಸದ್ಯ ಮುಂಬೈನಲ್ಲಿರುವ ಕಾರಣ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರಲಿಲ್ಲ.ಭಾಟಿಯಾ, ವ್ಯಾಸ್, ಯಾದವ್ ಹಾಗೂ ಕುಮಾರ್ ಅವರ ನ್ಯಾಯಾಂಗ ಬಂಧನ ಅವಧಿ ಹಾಗೂ ಅನ್ಸಾರಿ ಅವರ ಪೊಲೀಸ್ ಕಸ್ಟಡಿಯ ಅವಧಿ ಮುಗಿದಿದ್ದರಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.