ಶುಕ್ರವಾರ, ಮೇ 27, 2022
21 °C

ತರಬೇತಿ ಅಭ್ಯರ್ಥಿಗಳಿಗೆ ಅಭಿನಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:`ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವಿನ ಸಂಬಂಧ ಉತ್ತಮವಾಗಿದ್ದರೆ ಸಮರ್ಪಕ ಆಡಳಿತ ನೀಡಲು ಸಾಧ್ಯ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.ನಗರದಲ್ಲಿ ಸೋಮವಾರ ಜೆಎಸ್‌ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ಆಯೋಜಿಸಿದ್ದ ಕೇಂದ್ರೀಯ ನಾಗರಿಕ ಸೇವೆ ಹಾಗೂ ಕರ್ನಾಟಕ ಆಡಳಿತ ಸೇವೆಗಳಿಗೆ ಸಂಸ್ಥೆಯಿಂದ ತರಬೇತಿ ಪಡೆದು ಆಯ್ಕೆಯಾದ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕಾದರೆ ಅಧಿಕಾರಿ ವರ್ಗ ಸಮರ್ಪಕವಾಗಿ ಕೆಲಸ ಮಾಡಬೇಕು. ಸಮರ್ಪಕ ಆಡಳಿತಕ್ಕಾಗಿ ರಾಜ್ಯಾಂಗ ಹಾಗೂ ಕಾರ್ಯಾಂಗಗಳು ಉತ್ತಮ ಸಂಬಂಧ ಹೊಂದಬೇಕಾದ್ದು ಅಗತ್ಯ~ ಎಂದರು.`ರಾಜ್ಯದಲ್ಲಿ ಸಕಾಲ ಯೋಜನೆಯಡಿ ಈ ವರೆಗೆ 17 ಲಕ್ಷ ಅರ್ಜಿಗಳು ಸರ್ಕಾರದ ವಿವಿಧ ಇಲಾಖೆಗಳಿಗೆ ಬಂದಿದ್ದು, ಅವುಗಳಲ್ಲಿ ಸುಮಾರು 16 ಲಕ್ಷ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. ಸಕಾಲ ಯೋಜನೆಯನ್ನು ಕಾರ್ಯದರ್ಶಿ ಮಟ್ಟದವರೆಗೂ ವಿಸ್ತರಿಸಲು ಚಿಂತನೆ ನಡೆಸಿದ್ದು, ವಿಧಾನಸೌಧದಿಂದ ಗ್ರಾಮ ಪಂಚಾಯತಿವರೆಗೂ ಸಕಾಲ ಯೋಜನೆ ಜಾರಿಗೆ ಬಂದರೆ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯವಿದೆ~ ಎಂದರು.`ಪ್ರತಿಭೆ ಇದ್ದರೂ ಹಲವು ಸಂದರ್ಭಗಳಲ್ಲಿ ಸೂಕ್ತ ಅವಕಾಶ ಸಿಗದೇ ಹಲವರು ಸಾಧನೆಯಿಂದ ಹಿಂದುಳಿಯುತ್ತಾರೆ. ಅಂಥ ಸಂದರ್ಭದಲ್ಲಿ ಅಗತ್ಯ ಸಹಕಾರ ಸಿಕ್ಕರೆ ಎಂಥ ಸಾಧನೆಯನ್ನಾದರೂ ಮಾಡಲು ಸಾಧ್ಯವಾಗುತ್ತದೆ. ಪ್ರತಿಭೆಗಳಿಗೆ ಅಗತ್ಯ ಸಹಕಾರ ನೀಡುತ್ತಿರುವ ಜೆಎಸ್‌ಎಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ~ ಎಂದು ಅವರು ಹೇಳಿದರು.`ಅವಕಾಶ ಸಿಕ್ಕರೆ ಇಲ್ಲಿ ಯಾರು ಏನಾದರೂ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ನಾನೇ ಉದಾಹರಣೆ. ಮಂಡೆಕೋಲು ಎಂಬ ಕುಗ್ರಾಮದಿಂದ ಬಂದ ಹುಡುಗ ಇಂದು ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಾದರೆ, ಅವಕಾಶಗಳನ್ನು ಬಳಸಿಕೊಂಡು ಯಾರು ಬೇಕಾದರೂ ಯಾವುದೇ ಸಾಧನೆ ಮಾಡಲು ಸಾಧ್ಯವಿದೆ. ಸರ್ಕಾರದ ವಿವಿಧ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿರುವ ಹೊಸ ಅಧಿಕಾರಿಗಳು ತಮ್ಮ ವೃತ್ತಿಜೀವನದ ಮುಂದಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು~ ಎಂದು ಕರೆ ನೀಡಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, `ಸರ್ಕಾರಿ ಸೇವೆಯಲ್ಲಿ ರಾಜಕೀಯ ಒತ್ತಡಗಳೂ ಸೇರಿದಂತೆ ಅನೇಕ ಸವಾಲುಗಳಿರುತ್ತವೆ. ಆದರೆ ಅಂತಹ ಸವಾಲುಗಳನ್ನು ಎದುರಿಸಲಾಗದೇ ರಾಜ್ಯದಲ್ಲಿ ಅನೇಕ ಪಿಡಿಒ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡರು. ಹೀಗಾಗಿ ಸರ್ಕಾರಿ ಸೇವೆಗೆ ಆಯ್ಕೆಯಾದ ಅಧಿಕಾರಿಗಳು ಮುಖ್ಯವಾಗಿ ಆತ್ಮಸ್ಥೈರ್ಯ ರೂಢಿಸಿಕೊಳ್ಳಬೇಕು~ ಎಂದು ಕರೆ ನೀಡಿದರು.ಸಮಾರಂಭದಲ್ಲಿ ಸಂಸ್ಥೆಯಿಂದ ತರಬೇತಿ ಪಡೆದು ಕೇಂದ್ರೀಯ ನಾಗರಿಕ ಸೇವೆಗಳಿಗೆ ಆಯ್ಕೆಯಾದ 13 ಜನ ಹಾಗೂ ಕರ್ನಾಟಕ ನಾಗರಿಕ ಸೇವೆಗಳಿಗೆ ಆಯ್ಕೆಯಾದ 14 ಜನರನ್ನು ಸನ್ಮಾನಿಲಾಯಿತು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಾಸಕ ಬಿ.ಎನ್.ವಿಜಯಕುಮಾರ್, ಮೇಯರ್ ಡಿ.ವೆಂಕಟೇಶಮೂರ್ತಿ ಇತರರು ಹಾಜರಿದ್ದರು.

`ಕೆಲಸವೇ ಅನುಮಾನ~

`ಅಧಿಕಾರಿಗಳಿಗೆ ಕೆಲಸ ಆದ ನಂತರ ಅಭಿನಂದನೆ ಸಲ್ಲಿಸಬೇಕು. ಆದರೆ ರಾಜಕಾರಣಿಗಳಿಗೆ ಗೆದ್ದಾಗಲೇ ಅಭಿನಂದನೆ ಸಲ್ಲಿಸಬೇಕು. ಏಕೆಂದರೆ ಆ ನಂತರ ಅವರು ಕೆಲಸ ಮಾಡುತ್ತಾರೆ ಎಂಬುದೇ ಅನುಮಾನ~ ಎಂದು ಮುಖ್ಯಮಂತ್ರಿ ಸದಾನಂದಗೌಡ ಕಿಚಾಯಿಸಿದರು.ಸಮಾರಂಭದಲ್ಲಿ ಮಾತನಾಡುತ್ತಾ, `ಅಧಿಕಾರಿಗಳು ಸೇವೆಯಲ್ಲಿದ್ದಾಗ ಮಾಡಿದ ಕೆಲಸ ಅವರು ನಿವೃತ್ತರಾದ ನಂತರವೂ ಉಳಿದುಕೊಳ್ಳುತ್ತದೆ. ಆದರೆ ರಾಜಕಾರಣಿಗಳು ಅಧಿಕಾರ ಬರುವವರೆಗೂ ಕೆಲಸ ಮಾಡುತ್ತಾ, ನಂತರ ತಮ್ಮ ಕರ್ತವ್ಯವನ್ನೇ ಮರೆಯುವುದು ಹೆಚ್ಚು~ ಎಂದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.