ಮಂಗಳವಾರ, ಮೇ 24, 2022
25 °C

ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಸಿದ್ಧಗಂಗಾ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಸಿದ್ಧಗಂಗಾ ಸ್ವಾಮೀಜಿ

ಬೆಂಗಳೂರು:  ‘ಸ್ವಾತಂತ್ರ್ಯ ಬಂದು 60 ವರ್ಷಗಳಾದರೂ ಬಡತನ ಜಾಸ್ತಿಯಾಗುತ್ತಲೇ ಇದೆ. ಇದಕ್ಕೆ ಪರಿಹಾರವೆಂದರೆ ಜನರು ಶ್ರಮ ಜೀವಿಗಳಾಗಬೇಕು’ ಎಂದು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.ಅರಮನೆ ಮೈದಾನದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಆರನೇ ದಿನದ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.‘ಬಸವಣ್ಣನವರ ಕಾಯಕ- ದಾಸೋಹದ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಸಮಾಜ ಜಾಗೃತಿಯತ್ತ ಚಿಂತನೆ ನಡೆಸಬೇಕಾದ ಅಗತ್ಯವಿದೆ. ತರಳಬಾಳು ಹುಣ್ಣಿಮೆಯಂಥ ಕಾರ್ಯಕ್ರಮಗಳನ್ನು ವರ್ಷಕ್ಕೊಮ್ಮೆ ಆಯೋಜಿಸುವ ಮೂಲಕ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ನುಡಿದರು.‘ಭಾರತ ಆಧ್ಯಾತ್ಮಿಕ ಕ್ಷೇತ್ರದಲ್ಲಿ 3000 ವರ್ಷಗಳಿಂದ ಅಪಾರ ಸಾಧನೆ ಮಾಡಿದೆ. ಇಂದಿನ ಸಾಮಾಜಿಕ, ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲೂ ಅಧ್ಯಾತ್ಮವನ್ನು ಅಳವಡಿಸಿಕೊಳ್ಳುವ ಬಗ್ಗೆ ಆತ್ಮಾವಲೋಕನ ನಡೆಯಬೇಕು. ಜನರನ್ನು ಶಿಕ್ಷಿತರನ್ನಾಗಿ ಮಾಡುವ ನಿಟ್ಟಿನಲ್ಲಿ ಮಠಗಳು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿರುವುದು ಶ್ಲಾಘನೀಯ’ ಎಂದರು.ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ ‘ಇಂದಿನ ಚುನಾವಣಾ ಪದ್ಧತಿಯಲ್ಲಿ ಬದಲಾವಣೆಗಳನ್ನು ತರಬೇಕು. ಪಕ್ಷದ ರಚನೆಯಲ್ಲಿಯೂ ಬದಲಾವಣೆಗಳಾಗಬೇಕು’ ಎಂದು ಅಭಿಪ್ರಾಯಪಟ್ಟರು.‘ಅಹಿಂಸೆ ಹಾಗೂ ಇನ್ನೊಬ್ಬರಿಗೆ ನೋವಾಗದಂತೆ ನಡೆದುಕೊಳ್ಳುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ತರಳಬಾಳು ಮಠದ ಕಾರ್ಯ ಸ್ತುತ್ಯರ್ಹ’ ಎಂದು ಸಚಿವ ಡಾ.ವಿ.ಎಸ್.ಆಚಾರ್ಯ ಹೇಳಿದರು.ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ‘ಮನುಷ್ಯನ ಆರೋಗ್ಯಕ್ಕಿಂತಲೂ ಸಮುದಾಯದ ಆರೋಗ್ಯ ಬಹಳ ಮುಖ್ಯ’ ಎಂದರು.ಅಂಕಣಕಾರ ಡಾ.ಗುರುರಾಜ ಕರ್ಜಗಿ ಅವರು ‘ಬಾಳಿಗೊಂದು ನಂಬಿಕೆ’ ವಿಷಯವಾಗಿ ಮತ್ತು ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರು ‘ಹೃದಯ ಮತ್ತು ಹೃದಯವಂತಿಕೆ’ ವಿಷಯ ಕುರಿತು ಉಪನ್ಯಾಸ ನೀಡಿದರು.ಮಾಜಿ ಸಚಿವ ಎಚ್.ಕೆ.ಪಾಟೀಲ್, ಬ್ರಿಟನ್‌ನ ಲ್ಯಾಂಬೆತ್ ನಗರದ ಮೇಯರ್ ಕನ್ನಡಿಗ ಡಾ.ನೀರಜ್ ಪಾಟೀಲ್, ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಅವರು ಮಾತನಾಡಿದರು. ಇದಕ್ಕೂ ಮುನ್ನ ನಗರದ ಕಲಾತೀರ ಒಡಿಸ್ಸಿ ನೃತ್ಯ ತಂಡದ ಕಲಾವಿದರು ನೃತ್ಯ ಪ್ರದರ್ಶನ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.