ಮಂಗಳವಾರ, ಏಪ್ರಿಲ್ 20, 2021
32 °C

ತಲೆಬುರುಡೆ: ಡೋಗಿ ಬರದ ಸಾವೇ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಜಿಲ್ಲೆಯ ಅಣ್ಣಿಗೇರಿಯಲ್ಲಿ ಪತ್ತೆಯಾಗಿದ್ದ ತಲೆ ಬುರುಡೆಗಳು 1792ರಿಂದ 1796ರವರೆಗೆ ಉಂಟಾದ `ಡೋಗಿ ಬರ~ದಿಂದ ಸಾಮೂಹಿಕವಾಗಿ ಅಸುನೀಗಿದ ಗ್ರಾಮಸ್ಥರದ್ದಾಗಿದೆ ಎನ್ನುವ ಅಂಶ ರಾಜ್ಯ ಪುರಾತತ್ವ ಇಲಾಖೆ ನಡೆಸಿದ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. 2010ರ ಆಗಸ್ಟ್ 28ರಂದು ಅಣ್ಣಿಗೇರಿಯಲ್ಲಿ ದೊರೆತ ತಲೆ ಬುರುಡೆಗಳು ದೇಶವ್ಯಾಪಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದ್ದವು. ಇಷ್ಟೊಂದು ತಲೆಬುರುಡೆಗಳು ಒಂದೆಡೆ ಇದ್ದಿದ್ದಾದರೂ ಹೇಗೆ ಎನ್ನುವ ಕುತೂಹಲ ಎಲ್ಲರನ್ನೂ ಕೆರಳಿಸಿತ್ತು. ಈ ವಿಷಯವಾಗಿ ಹಲವು ವಾದಗಳೂ ಮಂಡನೆಯಾಗಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಪುರಾತತ್ವ ಇಲಾಖೆ ನಡೆಸಿದ ಸಂಶೋಧನೆ ಮಹತ್ವ ಪಡೆದಿದೆ. ಬರುವ ಸೆಪ್ಟೆಂಬರ್ 15ರೊಳಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಂಶೋಧನಾ ವರದಿ ಸಲ್ಲಿಕೆ ಆಗಲಿದೆ.ಪುರಾತತ್ವ ಇಲಾಖೆಯ ನಿರ್ದೇಶಕ ಡಾ.ಆರ್.ಗೋಪಾಲ್, ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಎಸ್. ಕೃಷ್ಣಮೂರ್ತಿ ಹಾಗೂ ಇಲಾಖೆಯ ಹಂಪಿ ವಿಭಾಗದ ಉಪನಿರ್ದೇಶಕ ಗಂಗಾಧರ್ ಸಂಶೋಧನಾ ತಂಡದಲ್ಲಿದ್ದರು. ಆ ತಲೆಬುರುಡೆಗಳು 1792ರಿಂದ 1796ರವರೆಗೆ ಉಂಟಾದ `ಡೋಗಿ ಬರ~ದಿಂದ ಸತ್ತ ಜನರದ್ದಾಗಿವೆ  ಎಂಬ ಅಭಿಪ್ರಾಯಕ್ಕೆ ಅವರು ಬಂದಿದ್ದಾರೆ.`ಅಣ್ಣಿಗೇರಿ, ಗದಗ, ಬಾಗಲಕೋಟೆ ಭಾಗದಲ್ಲಿ ಡೋಗಿ ಬರ ಬಂದು ಸಾಕಷ್ಟು ಮಂದಿ ಜೀವತೆತ್ತಿದ್ದರು. ಕುಡಿಯಲು ನೀರಿಲ್ಲದೆ, ತಿನ್ನಲು ಅನ್ನವಿಲ್ಲದೆ ಹುಳುಗಳಂತೆ ಜನರು ಸಾವಿಗೀಡಾದರು. ಪ್ರಾಣಿಗಳು ಮೃತದೇಹಗಳನ್ನು ತಿಂದು ತಲೆಬುರುಡೆಗಳನ್ನಷ್ಟೇ ಬಿಟ್ಟಿವೆ. ಅವುಗಳನ್ನು ಅಳಿದುಳಿದ ಜನರು ಒಂದೆಡೆ ಕ್ರೋಡೀಕರಿಸಿ ಹೂಳಿದ್ದಾರೆ~ ಎಂದು ಡಾ.ಗೋಪಾಲ್ `ಪ್ರಜಾವಾಣಿ~ಗೆ ತಿಳಿಸಿದರು.`ಒಟ್ಟು 601 ತಲೆಬುರುಡೆಗಳು ಸಿಕ್ಕಿವೆ. ಅವುಗಳಲ್ಲಿ 6 ವರ್ಷದ ಮಕ್ಕಳಿಂದ 60 ವರ್ಷದ ಪುರುಷರ ಹಾಗೂ ಮಹಿಳೆಯರ ತಲೆಬುರುಡೆಗಳು ಸೇರಿವೆ. ಹಿರಿಯ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ ಅವರು, `ಇವು ಶಿರಚ್ಛೇದಗೊಂಡ ಉಗ್ರಪಂಥಕ್ಕೆ ಸೇರಿದ ವೀರ ಮಾಹೇಶ್ವರರ ತಲೆಬುರುಡೆಗಳಲ್ಲ. ಮಹಿಳೆಯರ ಬುರುಡೆಗಳೂ ಇರುವುದರಿಂದ ಉಗ್ರಪಂಥೀಯರ ಬುರುಡೆಗಳಲ್ಲ ಎಂಬುದಕ್ಕೆ ಪುಷ್ಟಿ ನೀಡಿದೆ~ ಎಂದು ವಿವರಿಸಿದರು.ಅಂದು ಬಾಂಬೆ ಪ್ರೆಸಿಡೆನ್ಸಿಗೆ ಸೇರಿದ ಈ ಪ್ರದೇಶದಲ್ಲಿ ವ್ಯಾಪಕ ಬರ ಬಿದ್ದುದರ ಬಗ್ಗೆಯೂ ಬಾಂಬೆ ಗೆಜೆಟ್‌ನಲ್ಲಿ ದಾಖಲಾಗಿದೆ. ಇವುಗಳನ್ನೆಲ್ಲ ತಾಳೆ ಹಾಕಿ ನೋಡಿದಾಗ ಬರದಿಂದ ಸತ್ತವರದ್ದು ಎಂಬುದು ಸಾಬೀತಾಗುತ್ತದೆ ಎಂದು ಹೇಳಿದರು.ತಲೆಬುರುಡೆ ರಹಸ್ಯಗಳನ್ನು ತಿಳಿಯುವುದಕ್ಕಾಗಿ ಭುವನೇಶ್ವರದ ಪ್ರಯೋಗಾಲಯದಲ್ಲಿ ಕಾರ್ಬನ್ ಡೇಟಿಂಗ್ ನಡೆಸಿದ ಬಳಿಕ ಇವು 638 ವರ್ಷಗಳಷ್ಟು ಹಳೆಯದಾಗಿವೆ ಎಂದು ತಿಳಿಸಲಾಗಿತ್ತು. ಆದರೆ ಪುರಾತತ್ವ ಇಲಾಖೆಯ ಈ ವರದಿ ಅದಕ್ಕೆ ತದ್ವಿರುದ್ಧವಾಗ್ದ್ದಿದು ಕುತೂಹಲ ಕೆರಳಿಸಿದೆ.ತಲೆಬುರುಡೆಯ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದ ಕರ್ನಾಟಕ ವಿ.ವಿ. ಕನ್ನಡ ಸಂಶೋಧನಾ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ. ಆರ್.ಎಂ.ಷಡಕ್ಷರಯ್ಯ, `ತಲೆಬುರುಡೆಗಳ ರಹಸ್ಯದ ಬಗ್ಗೆ ಆಮೇಲೆ ಚರ್ಚೆ ಮಾಡಿದರಾಯಿತು. ತಲೆಬುರುಡೆಗಳಿಗೆ ಯಾವುದೇ ರಾಸಾಯನಿಕ ಸಿಂಪಡಿಸದೆ ಮುಚ್ಚಲಾಗಿದ್ದು, ಆ ಪ್ರದೇಶವೀಗ ಶೌಚಾಲಯವಾಗಿದೆ. ಪಕ್ಕದಲ್ಲೇ ಕೊಳಚೆ ನೀರೂ ಹರಿಯುತ್ತಿದೆ. ತಲೆಬುರುಡೆ ಸಿಕ್ಕಿರುವ ಸ್ಥಳವನ್ನು ರಕ್ಷಿಸುವ ಕೆಲಸ ಜಿಲ್ಲಾಡಳಿತದಿಂದ ಶೀಘ್ರವೇ ಆಗಬೇಕು~ ಎಂದರು.ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಮಾತನಾಡಿ, `ಮಂಗಳವಾರ (ಆ. 21) ಈ ಬಗ್ಗೆ ಸಮಗ್ರ ವರದಿ ತರಿಸಿಕೊಂಡು ರಾಜ್ಯ ಪುರಾತತ್ವ ಇಲಾಖೆಗೆ ಮಾಹಿತಿ ನೀಡುತ್ತೇವೆ~ ಎಂದು ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.