ಗುರುವಾರ , ಮಾರ್ಚ್ 4, 2021
18 °C
ಚಿತ್ರ: ತರ್‍ಲೆ ನನ್ಮಕ್ಳು

ತಲೆ–ಬುಡವಿಲ್ಲದ ಆಟ

ಡಿ.ಎಂ.ಕುರ್ಕೆ ಪ್ರಶಾಂತ್ Updated:

ಅಕ್ಷರ ಗಾತ್ರ : | |

ತಲೆ–ಬುಡವಿಲ್ಲದ ಆಟ

‘ಇಲ್ಲಿಯವರೆಗೂ ನೋಡಿದ್ದು ಟ್ರೇಲರ್, ಇನ್ಮುಂದೆ ನೋಡೋದು ಸಿನಿಮಾ’ ಇದು ‘ತರ್‍ಲೆ ನನ್ಮಕ್ಳು’ ಚಿತ್ರದ ವಿರಾಮ ಕಾಲದಲ್ಲಿ ಕಾಣುವ ವಾಕ್ಯ. ಆರಂಭದಿಂದ ಮಧ್ಯಂತರದವರೆಗೆ ತೆರೆಯಲ್ಲಿ ಕಂಡಿರುವ ತರ್ಲೆ ಕಥೆ ಮತ್ತು ಆಟಗಳನ್ನು ನೋಡಿ ರೋಸಿರುವ ಪ್ರೇಕ್ಷಕನಿಗೆ, ಮುಂದೇನೋ ಇದೆ ಎನ್ನುವ ಭರವಸೆ ನೀಡುತ್ತಾರೆ ನಿರ್ದೇಶಕರು. ಆದರೆ ಮಧ್ಯಂತರದ ನಂತರವೂ ಅದೇ ರಾಗ ಅದೇ ಹಾಡು.ಚಿತ್ರದಲ್ಲಿರುವ ಹುಡುಗರದು (ಪಾತ್ರಗಳದು) ತಲಹರಟೆ ಸ್ವಭಾವ, ಅವರದ್ದು ತರ್ಲೆ ಕೆಲಸಗಳು ಎನ್ನುವುದನ್ನು ‘ತರ್‍ಲೆ ನನ್ಮಕ್ಳು’ ಶೀರ್ಷಿಕೆಯೇ ದ್ವನಿಸುತ್ತದೆ. ಈ ಹಿಂದೆ ಜಗ್ಗೇಶ್ ಅವರ ‘ತರ್‍ಲೆ ನನ್ಮಗ’, ‘ಬಲ್ ನನ್ಮಗ’ ಚಿತ್ರಗಳಲ್ಲಿ ನಗು ಇತ್ತು, ಜತೆಗೆ ಕಥೆ ಕೂಡ ಇತ್ತು. ಆದರೆ ಈ ಹೊಸ ತರ್ಲೆ ಆಟಗಳಲ್ಲಿ ನವಿರುತನವಿದೆಯೇ? ಕಚಗುಳಿ ಗುಣವಿದೆಯೇ? ದೃಶ್ಯಗಳಲ್ಲಾದರೂ ನಗಿಸುವ ಶಕ್ತಿ ಇದೆಯೇ? ಎಂದುಕೊಂಡರೆ ರಸಭಂಗ. ಡಬ್ಬಲ್ ಮೀನಿಂಗ್ ಸಂಭಾಷಣೆ, ಪುಕ್ಕಲು–ತಿಕ್ಕಲಿನ ಪ್ರೇಮ–ಕಾಮದ ಕಥೆಯ ಚಿತ್ರವಿದು. ‘ಭಗ್ನ ಪ್ರೇಮಿ ದಡ್ಡನಾದರೆ ಕವಿಯಾಗುತ್ತಾನೆ, ಅದೇ ಪ್ರೇಮಿ ಬುದ್ಧಿವಂತನಾಗಿದ್ದರೆ ವೇದಾಂತಿಯಾಗುತ್ತಾನೆ’ ಎನ್ನುವ ಚಿತ್ರದ ಸಂಭಾಷಣೆಯ ಹಿನ್ನೆಲೆಯಲ್ಲಿ ಕಥೆ–ಆಶಯ ಹುಡುಕಲು ಹೋದರೆ ಅದು ಮತ್ತೊಂದು ಕಾಮಿಡಿ!ಕೆಲಸವಿಲ್ಲದ ಇಬ್ಬರು ಗೆಳೆಯರು ಚಿತ್ರದಲ್ಲಿದ್ದಾರೆ. ಗಾಂಧಿನಗರದಲ್ಲಿ ಬೇರೂರುವ ಆಸೆ ಅವರದು. ಅವರಲ್ಲೊಬ್ಬ ಟೀವಿ ನಿರೂಪಕಿಯನ್ನು ಪ್ರೀತಿಸಿದರೆ, ಮತ್ತೊಬ್ಬ ಸಿನಿಮಾ ನಾಯಕಿಯನ್ನು ಪ್ರೇಮಿಸುವನು. ಮಧ್ಯಂತರದ ನಂತರ ಇವರ ಜತೆ ಮತ್ತೊಂದಿಷ್ಟು ಪಾತ್ರಗಳು ಒಂದು ರಿಯಾಲಿಟಿ ಷೋನಲ್ಲಿ ಸೇರುತ್ತವೆ. ಆ ಷೋ ನಿರೂಪಕ ಶ್ರೀನಗರ ಕಿಟ್ಟಿ. ಅಲ್ಲಿಂದ ಮತ್ತೊಂದಿಷ್ಟು ಆಟ–ಹುಡುಗಾಟ. ಗಾಂಧಿನಗರ–ಪ್ರೀತಿ–ಪ್ರೇಮ–ಹುಡುಗಾಟ ಇತ್ಯಾದಿ ಸೂತ್ರಗಳ ‘ತರ್‍ಲೆ ನನ್ಮಕ್ಳು’ ಹಳತನ್ನೇ ಉಜ್ಜಿ ನೋಡು ಎನ್ನುವಂತಿದೆ. ನಗಿಸುವಾಗ ದ್ವಂದ್ವಾರ್ಥದ ಸಂಭಾಷಣೆಗಳು ಅಗತ್ಯ ಎನ್ನುವ ಮನಸ್ಥಿತಿಯನ್ನೂ ನಿರ್ದೇಶಕರು ನೆಚ್ಚಿಕೊಂಡಿದ್ದಾರೆ. ಕೆಲವು ಕಡೆಗಳಲ್ಲಿ ದ್ವಂದ್ವಾರ್ಥ ಕೊಂಚ ನೇರವಾಗಿಯೇ ಇದೆ. ಹಳ್ಳಿಗಳಲ್ಲಿ ಸಾಮಾಜಿಕ ನಾಟಕಗಳ ಹಾಸ್ಯ ಸನ್ನಿವೇಶಗಳಲ್ಲಿ ಡಬ್ಬಲ್ ಮೀನಿಂಗ್‌ ಹೆಚ್ಚೇ ಇರುತ್ತದೆ. ಇಂಥದ್ದೇ ಪಾತ್ರದಲ್ಲಿ ಕಾಣುತ್ತಾರೆ ನಾಗಶೇಖರ್‌. ಯತಿರಾಜ್ ಸಹ ಪಾತ್ರದ ತಯಾರಿಗೆ ಮತ್ತಷ್ಟು ತಯಾರಾಗಬೇಕಿತ್ತು. ಕಾಮಿಡಿ ಚಿತ್ರವಾದರೂ ಅಂಜನಾ ದೇಶಪಾಂಡೆ, ಶುಭಾ ಪೂಂಜಾ ಸೇರಿದಂತೆ ಯಾವ ಪಾತ್ರಗಳೂ ಚಿತ್ರಮಂದಿರದಿಂದ ಹೊರ ಬರುವ ಪ್ರೇಕ್ಷಕನಲ್ಲಿ ಉಳಿಯುವುದಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.