ಶುಕ್ರವಾರ, ಏಪ್ರಿಲ್ 16, 2021
31 °C

ತಲೆ ತಗ್ಗಿಸುವ ಸಂಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಶು ಮತ್ತು ಬಾಣಂತಿಯರ ಸಾವಿನ ಪ್ರಮಾಣ ದಕ್ಷಿಣ ಭಾರತದಲ್ಲಿ, ಅದರಲ್ಲಿಯೂ ವಿಶೇಷವಾಗಿ ಕರ್ನಾಟಕದಲ್ಲಿ ಹೆಚ್ಚುತ್ತಿದೆ ಎನ್ನುವುದು ನಿಜವಾಗಿಯೂ ತಲೆತಗ್ಗಿಸಬೇಕಾದ ಸಂಗತಿ.

 

`ಕರ್ನಾಟಕ ಆರೋಗ್ಯ ಪದ್ಧತಿಗಳ ಸುಧಾರಣಾ ಯೋಜನೆ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್, ಗರ್ಭಿಣಿಯರು, ಬಾಣಂತಿಯರು ಮತ್ತು ನವಜಾತ ಶಿಶುಗಳ ಆರೈಕೆ, ಆಸ್ಪತ್ರೆಗಳಲ್ಲಿ ಹೆರಿಗೆಗೆ ಉತ್ತೇಜನ, ಗ್ರಾಮೀಣ ಭಾಗದಲ್ಲಿ ಪಾರಂಪರಿಕ ಸೂಲಗಿತ್ತಿಯರಿಗೆ ತರಬೇತಿ~ ಹೀಗೆ ನಾನಾ ಯೋಜನೆಗಳು ಅನೇಕ ವರ್ಷಗಳಿಂದ ರಾಜ್ಯದಲ್ಲಿ ಅಸ್ತಿತ್ವದಲ್ಲಿವೆ.ಗ್ರಾಮೀಣ ಪ್ರದೇಶಗಳಲ್ಲೂ ಆರೋಗ್ಯ ಸಹಾಯಕಿಯರ ಸೇವೆ ಒದಗಿಸಲಾಗುತ್ತಿದೆ. ಆದರೂ ಶಿಶು ಸಾವು ಸಂಖ್ಯೆ ಏರುತ್ತಲೇ ಇರುವುದು ಆಘಾತಕಾರಿ. ಜನಿಸಿದ ಒಂದು ವರ್ಷಗಳ ಒಳಗೆ ಸಾವನ್ನಪ್ಪುವ ಶಿಶುಗಳ ಸಂಖ್ಯೆಯನ್ನು ಇದಕ್ಕಾಗಿ ಪರಿಗಣಿಸಲಾಗುತ್ತದೆ.ಅಂಕಿಸಂಖ್ಯೆಗಳ ಪ್ರಕಾರ ನಮ್ಮಲ್ಲಿ ಜನಿಸುವ ಪ್ರತೀ ಸಾವಿರ ಮಕ್ಕಳಲ್ಲಿ 35 ಮಕ್ಕಳು ಒಂದು ವರ್ಷದ ಒಳಗೆ ಮರಣ ಹೊಂದುತ್ತಿವೆ. ನಮ್ಮ ಪಕ್ಕದ ಕೇರಳದಲ್ಲಿ ಈ ಪ್ರಮಾಣ 1 ಸಾವಿರ ಜನನಕ್ಕೆ 12. ಆದ್ದರಿಂದ, ದೇಶದಲ್ಲಿಯೇ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳಿರುವ, ಸ್ವಾತಂತ್ರ್ಯ ಪೂರ್ವದಲ್ಲಿ ಮಹಾರಾಜರ ಆಡಳಿತ ಕಾಲದಲ್ಲಿಯೇ ತಕ್ಕಮಟ್ಟಿಗೆ ಉತ್ತಮ ಆರೋಗ್ಯ ಸೇವೆಗೆ ಹೆಸರಾಗಿದ್ದ ಕರ್ನಾಟಕದಲ್ಲಿ ಇನ್ನೂ ಏಕೆ ಈ ಸ್ಥಿತಿಯಿದೆ ಎಂಬ ಬಗ್ಗೆ ಗಂಭೀರವಾಗಿ ಆಲೋಚಿಸುವ ಅಗತ್ಯವಿದೆ.ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯ ನಿರ್ದೇಶಕರ ಪ್ರಕಾರ ಮೂಢ ನಂಬಿಕೆ ಮತ್ತು ತಾಯಿ ಮಗುವಿನ ಆರೋಗ್ಯದ ಬಗ್ಗೆ ಸಮಾಜದ ತಾತ್ಸಾರ ಇದಕ್ಕೆ ಕಾರಣ. ಹೈಟೆಕ್ ಆಸ್ಪತ್ರೆಗಳಿಂದ ಹಿಡಿದು ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ವಿವಿಧ ಹಂತಗಳಲ್ಲಿ ಆರೋಗ್ಯ ಸೇವೆ ನೀಡುವ ಕೇಂದ್ರಗಳು ನಮ್ಮಲ್ಲಿವೆ. ಇದನ್ನೆಲ್ಲ ನೋಡಿದಾಗ `ಎಲ್ಲ ವರ್ಗದವರಿಗೂ ಕೈಗೆಟಕುವ ಸಾರ್ವತ್ರಿಕ ಆರೋಗ್ಯ ಸೇವೆ ನೀಡುತ್ತಿದ್ದೇವೆ~ ಎಂದು ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ.ಇದೇ ರೀತಿ ರಕ್ತಹೀನತೆಯಿಂದಾಗಿ ಹೆರಿಗೆ ಕಾಲಕ್ಕೆ ಮತ್ತು ನಂತರ ಸಾವಿಗಿಡಾಗುವ ಬಾಣಂತಿಯರ ಪ್ರಮಾಣ ಕೂಡ ನಮ್ಮ ರಾಜ್ಯದಲ್ಲಿ ಕಳವಳಕಾರಿಯಾಗಿದೆ. ಬಾಣಂತಿಯರಿಗೆ ಕಬ್ಬಿಣಾಂಶದ ಮಾತ್ರೆಗಳನ್ನು ನೀಡುವ ಮೂಲಕ ಇದನ್ನು ತಡೆಗಟ್ಟಬಹುದು.ರಾಷ್ಟ್ರೀಯ ಮಟ್ಟದಲ್ಲಿ 1960ರಲ್ಲಿ ಸಾವಿರ ಶಿಶು ಜನನಕ್ಕೆ 159.3 ರಷ್ಟಿದ್ದ ಸಾವಿನ ಪ್ರಮಾಣ 2011ಕ್ಕೆ 46.07ಕ್ಕೆ ಇಳಿದಿತ್ತು. ಬಾಣಂತಿಯರ ಸಾವಿನ ಪ್ರಮಾಣ 2010ರಲ್ಲಿ ಸಾವಿರಕ್ಕೆ 200 ಇತ್ತು.ಕರ್ನಾಟಕದಲ್ಲಿ ಇದು 125ಕ್ಕೆ ಇಳಿದಿದೆ. ಆದ್ದರಿಂದ ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಶಿಶು ಮತ್ತು ಬಾಣಂತಿ ಸಾವಿನ ಪ್ರಮಾಣ ನಮ್ಮಲ್ಲಿ ಕಡಿಮೆ ಎಂದು ಕೂಡ ನಾವು ಬೆನ್ನು ಚಪ್ಪರಿಸಿಕೊಳ್ಳುವ ಅಗತ್ಯವಿಲ್ಲ.ಏಕೆಂದರೆ ನಮ್ಮದೇ ನೆರೆಯ ನೇಪಾಳ, ಭೂತಾನ್, ಶ್ರೀಲಂಕಾ, ಥೈಲ್ಯಾಂಡ್, ಇಂಡೋನೇಷ್ಯ ಮಾತ್ರವಲ್ಲದೆ, ಇರಾನ್, ಇರಾಕ್, ಈಜಿಪ್ಟ್, ತೀರಾ ಹಿಂದುಳಿದ ನಮೀಬಿಯ, ಕೆನ್ಯಾದಂಥ ದೇಶಗಳಲ್ಲಿ ನವಜಾತ ಶಿಶು ಸಾವಿನ ಪ್ರಮಾಣ ನಮಗಿಂತ ಕಡಿಮೆ.ಆದ್ದರಿಂದ ಈ ವಿಷಯದಲ್ಲಿ ಬೇಕಿರುವುದು ಉತ್ತಮ ಆರೋಗ್ಯ ಸೇವೆ ಒದಗಿಸುವ ಪ್ರಾಮಾಣಿಕ ಕಾಳಜಿ ಮತ್ತು ಬದ್ಧತೆ. ಇಲ್ಲಿ ಹಣಕಾಸಿನ ಕೊರತೆ, ರಾಜಕೀಯ ಇಚ್ಛಾಶಕ್ತಿ, ಸಮಾಜದ ಧೋರಣೆ ಅಡ್ಡಿಯಾಗಬಾರದು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.