ಶನಿವಾರ, ಮೇ 21, 2022
27 °C

ತಳಸಮುದಾಯದ ನಿರುದ್ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎರಡು ದಶಕಗಳ ಹಿಂದೆ ದೇಶದಲ್ಲಿ ಮುಕ್ತ ಆರ್ಥಿಕ ನೀತಿ ಜಾರಿಗೆ ಬಂದ ಮೇಲೆ ಭಾರತದ ಆರ್ಥಿಕ ರಂಗದಲ್ಲಿ ಬದಲಾವಣೆಯ ಚಿತ್ರ ಕಾಣುತ್ತಿದೆ. ಆದರೆ, ಈ ಬದಲಾವಣೆ ಬಡ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವಲ್ಲಿ ಕಂಡು ಬಂದಿಲ್ಲ.ಅಷ್ಟೇ ಅಲ್ಲ, ನಿರಾಶಾದಾಯಕವೂ ಆಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಮರು ಮತ್ತು ಸಾಮಾಜಿಕವಾಗಿ ಹಿಂದುಳಿದ ಜಾತಿಗಳ ಯುವಜನರಲ್ಲಿ ನಿರುದ್ಯೋಗದ ಪ್ರಮಾಣ  ಹೆಚ್ಚುತ್ತಿರುವುದು ಈ ಅವಧಿಯಲ್ಲಿ ಕಂಡ ವಿದ್ಯಮಾನ.

 

ಪ್ರಸಕ್ತ ಸಾಲಿನ ಅಖಿಲ ಭಾರತ ಮಾನವ ಅಭಿವೃದ್ಧಿ ಕುರಿತ ವರದಿ ಈ ಬಗೆಗೆ ಹೆಚ್ಚು ಬೆಳಕು ಚೆಲ್ಲಿದ್ದು, ಅಭಿವೃದ್ಧಿ ಮತ್ತು ಆರ್ಥಿಕ ನೀತಿಯ ಫಲ ಸಮಾಜದ ಕಟ್ಟಕಡೆಯ ಜನರನ್ನು ಉದ್ಧರಿಸಲು ವಿಫಲವಾಗಿರುವ ಅಂಶ ಸ್ಪಷ್ಟವಾಗಿದೆ. ಇದನ್ನು ಗಮನಿಸಿದರೆ ಸರ್ಕಾರದ ಜನ ಕಲ್ಯಾಣದ ಯೋಜನೆಗಳು ನಿಷ್ಪ್ರಯೋಜಕ ಎಂದೇ ಭಾವಿಸಬೇಕಿದೆ.ಈ ವರದಿಯ ಬಗೆಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಪರಿಶಿಷ್ಟರಲ್ಲಿ ಮತ್ತಷ್ಟು ನಿರುದ್ಯೋಗ ಹೆಚ್ಚುವುದಾಗಿ ನುಡಿದಿರುವ ಭವಿಷ್ಯ ಆತಂಕಕಾರಿ ಸಂಗತಿ.ಯೋಜನಾ ಆಯೋಗದ ಮಾನವ ಅಭಿವೃದ್ಧಿಯ ವರದಿಯಂತೆ 2009-10ರಲ್ಲಿ ಪರಿಶಿಷ್ಟ ಜಾತಿಯ ಜನರಿಗೆ ನಗರ ಪ್ರದೇಶದಲ್ಲಿ ಶೇ 70 ರಷ್ಟು ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ 9.4 ನಿರುದ್ಯೋಗ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಪರಿಶಿಷ್ಟ ಪಂಗಡದಲ್ಲಿ ಕ್ರಮವಾಗಿ ಶೇ 6.3 ಮತ್ತು ಶೇ. 7.8 ನಿರುದ್ಯೋಗ ಕಾಣಿಸಿಕೊಂಡಿದೆ.ಈ ತಳಸಮುದಾಯಕ್ಕಿಂತ ಇತರೆ ಜಾತಿಗಳಲ್ಲಿನ ನಿರುದ್ಯೋಗ ಪ್ರಮಾಣ ಅಷ್ಟಾಗಿ ಕಳವಳಕಾರಿಯಾಗಿಲ್ಲ. ಈ ಸಾಮಾನ್ಯ ವರ್ಗದ ನಿರುದ್ಯೋಗ ಪ್ರಮಾಣ ನಗರಗಳಲ್ಲಿ ಶೇ 4.6 ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ 5.3 ಮಾತ್ರ ಇದೆ.ಆರ್ಥಿಕ ರಂಗದಲ್ಲಿ ಖಾಸಗೀಕರಣಕ್ಕೆ ಹೆಚ್ಚು ಒತ್ತು ಸಿಕ್ಕಿದಂತೆಲ್ಲ ಪರಿಶಿಷ್ಟ ವರ್ಗಕ್ಕೆ ಸೇರಿದ ವಿದ್ಯಾವಂತರಿಗೆ ಮೀಸಲಾಗಿರುವ ಸರ್ಕಾರಿ ಉದ್ಯೋಗಾವಕಾಶಗಳು ದಿನೇ ದಿನೇ ಕಡಿಮೆ ಆಗುತ್ತಾ ಬಂದಿವೆ. ಇದರಿಂದಾಗಿ ಪರಿಶಿಷ್ಟ ಜನರಿಗೂ ಸಮಾನ ಅವಕಾಶ ಸಿಗಬೇಕೆನ್ನುವ ಸಂವಿಧಾನದ ಆಶಯವೂ ವಿಫಲಗೊಳ್ಳುತ್ತಿದೆ.

 

ಇದು ದುರದೃಷ್ಟಕರ ಬೆಳವಣಿಗೆ. ಮುಕ್ತ ಆರ್ಥಿಕ ಕಾರ್ಯಕ್ರಮಗಳಿಂದ ಉಳ್ಳವರಿಗೇ ಹೆಚ್ಚು ಅವಕಾಶಗಳು ಲಭ್ಯವಾಗಿರುವುದು ಈ ವರದಿಯಿಂದ ಸಾಬೀತಾದಂತಾಗಿದೆ.ಇದೇ ಸ್ಥಿತಿ ಮುಂದುವರಿದರೆ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಮತ್ತಷ್ಟು ಹೆಚ್ಚಲು ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ.  ತಳಸಮುದಾಯವನ್ನು ಗಮನದಲ್ಲಿಟ್ಟುಕೊಂಡು ರೂಪಿಸುವ ಯೋಜನೆಗಳು ಪ್ರಾಮಾಣಿಕವಾಗಿ ಜಾರಿಯಾಗದಿರುವುದು, ಹೆಚ್ಚುತ್ತಿರುವ ಜನಸಂಖ್ಯೆ, ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳೇ ಎಲ್ಲ ಅವಕಾಶಗಳನ್ನು ದುರುಪಯೋಗಪಡಿಸಿಕೊಳ್ಳುವುದು ಈ ವರ್ಗಗಳಲ್ಲಿ ನಿರುದ್ಯೋಗ ಹೆಚ್ಚಳಕ್ಕೆ ಕಾರಣವಾಗಿರುವುದನ್ನು ತಳ್ಳಿಹಾಕಲಾಗದು.

 

ಆದ್ದರಿಂದ ಯೋಜನಾ ಆಯೋಗ, ತಳ ಸಮುದಾಯವನ್ನು ಒಳಗೊಳ್ಳುವ ಮತ್ತು ಅವರ ಆರ್ಥಿಕಾಭಿವೃದ್ಧಿಗೆ ಸಹಾಯಕವಾಗುವಂತೆ ಯೋಜನೆಗಳನ್ನು ರೂಪಿಸಲು ಹೆಚ್ಚು ಗಮನ ನೀಡುವ ಅವಶ್ಯಕತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.