ಭಾನುವಾರ, ಮೇ 9, 2021
28 °C

ತಾಂತ್ರಿಕ ಬೋಧಕರಿಗೆ ತರಬೇತಿ ಕಾಲೇಜು

ಪ್ರಜಾವಾಣಿ ವಾರ್ತೆ/ ಎಂ. ಮಹೇಶ Updated:

ಅಕ್ಷರ ಗಾತ್ರ : | |

ದಾವಣಗೆರೆ: ತಾಂತ್ರಿಕ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶದ ಪ್ರಥಮ ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯ ದಾವಣಗೆರೆಯಲ್ಲಿ ಸ್ಥಾಪನೆಯಾಗಲಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಈ ಮಹತ್ವದ ನಿರ್ಣಯ ಕೈಗೊಂಡಿದ್ದು, ಸಿದ್ಧತೆ ನಡೆಸುತ್ತಿದೆ.ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜುಗಳಲ್ಲಿ ಬೋಧಕರಾಗಿ ಸೇರ್ಪಡೆಯಾಗುವ ಸಿಬ್ಬಂದಿ ವ್ಯಾಸಂಗದ ಅವಧಿಯಲ್ಲಿಯೇ ಬೋಧನೆಯ ಕುರಿತಂತೆ ಒಂದಷ್ಟು ಪ್ರಾಯೋಗಿಕ ತರಬೇತಿ ಪಡೆದವರಾಗಿರುತ್ತಾರೆ. ಆದರೆ, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪಾಠ ಹೇಳುವವರು, ವ್ಯಾಸಂಗ ಮುಗಿಸಿ ನೇರವಾಗಿ ತರಗತಿಗಳಿಗೆ ಬಂದವರಾಗಿರುತ್ತಾರೆ. ಆಗ ತಾನೆ ಎಂಜಿನಿಯರಿಂಗ್ ಮುಗಿಸಿದವರು, ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದಾರೆ.ಇದರಿಂದ ಗುಣಮಟ್ಟದ ಶಿಕ್ಷಣದ ಕೊರತೆ ಕಂಡುಬರುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ತಾಂತ್ರಿಕ ಶಿಕ್ಷಣದ ಈ `ಕೊರತೆ~ ನೀಗಿಸುವ ಉದ್ದೇಶದಿಂದ ವಿಟಿಯು ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯ ಸ್ಥಾಪಿಸುತ್ತಿದೆ.ನಗರದ ಕರ್ನಾಟಕ ಗೃಹ ಮಂಡಳಿ ಕಾಲೊನಿಯಲ್ಲಿ ಮಹಾವಿದ್ಯಾಲಯ ಸ್ಥಾಪಿಸಲು ನಿವೇಶನ ಖರೀದಿಸಲಾಗಿದೆ. ರೂ 15-20 ಕೋಟಿ ವೆಚ್ಚದಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳುವ ಉದ್ದೇಶ ವಿವಿಯದ್ದು. ಸುಸಜ್ಜಿತ ಸಭಾಂಗಣ, ದೃಶ್ಯ ಹಾಗೂ ಶ್ರವ್ಯ ಮಾಧ್ಯಮದಲ್ಲಿ ತರಬೇತಿ ಸ್ಟುಡಿಯೋ ಹಾಗೂ ಕೊಠಡಿಗಳನ್ನು ಸ್ಥಾಪಿಸಲಾಗುವುದು.`ತಾಂತ್ರಿಕ ಶಿಕ್ಷಣದಲ್ಲಿ ಗುಣಮಟ್ಟ ವೃದ್ಧಿಸುವ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಎಂಜಿನಿಯರಿಂಗ್ ಬೋಧಕರಿಗೆ ಅಗತ್ಯ ತರಬೇತಿ ದೊರೆಯುತ್ತಿಲ್ಲ. ಇಂದಿನ ಶಿಕ್ಷಕರಲ್ಲಿ ಪರಿಣಾಮಕಾರಿ ಬೋಧನೆಯ ಕೌಶಲವಿಲ್ಲ.ಅವರಿಗೆ ಸಮರ್ಪಕ ಮಾರ್ಗದರ್ಶನವಿಲ್ಲ. ಹಳೆಯ ನೋಟ್ಸ್ ಇಟ್ಟುಕೊಂಡು ಪಾಠ ಮಾಡುವುದು ಕಂಡುಬರುತ್ತಿದೆ. ಈ ಕೊರತೆ ನೀಗಿಸಲು ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯ ಕಾರ್ಯ ನಿರ್ವಹಿಸಲಿದೆ~ ಎಂದು ವಿಟಿಯು ಕುಲಪತಿ ಪ್ರೊ.ಎಚ್. ಮಹೇಶಪ್ಪ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು. ಯಾವುದೇ ಎಂಜಿನಿಯರಿಂಗ್ ಕಾಲೇಜುಗಳಿಗೆ ಬೋಧಕರಾಗಿ ನೇಮಕಗೊಳ್ಳುವವರು ಇಲ್ಲಿ ತರಬೇತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗುವುದು. ಇದು ಜೂನ್-ಜುಲೈನಿಂದಲೇ ಜಾರಿಯಾಗಲಿದೆ. ಸಿಬ್ಬಂದಿ ಶೈಕ್ಷಣಿಕ ಮಹಾವಿದ್ಯಾಲಯದ ಕಟ್ಟಡ ಸಿದ್ಧವಾಗುವವರೆಗೆ ವಿವಿಯದ್ದೇ ಆದ ಯುಬಿಡಿಟಿ ಕಾಲೇಜಿನಲ್ಲಿ ತರಬೇತಿ ಆರಂಭಿಸಲಾಗುವುದು. 8-10 ವಾರಗಳ ಕಾಲ ತರಬೇತಿ ನಡೆಯಲಿದೆ.

 

ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಅತ್ಯಾಧುನಿಕ ಸಲಕರಣೆಗಳನ್ನು ಬಳಸಿ ಪಾಠ ಮಾಡುವುದು, ವಿದ್ಯಾರ್ಥಿಗಳನ್ನು ತಮ್ಮತ್ತ ಸೆಳೆಯುವುದು, ಕೌಶಲ ವೃದ್ಧಿಸಿಕೊಳ್ಳುವುದು ಹೇಗೆ? ಮತ್ತಿತರ ವಿಷಯಗಳನ್ನು ತಜ್ಞರಿಂದ ತಿಳಿಸಿಕೊಡಲಾಗುವುದು. ತರಬೇತಿ ಪಡೆದವರಿಗೆ ಪ್ರಮಾಣಪತ್ರ ನೀಡಲಾಗುವುದು. ಪ್ರಮಾಣಪತ್ರ ಇರುವವರನ್ನು ಮಾತ್ರ ಬೋಧಕರಾಗಿ ನೇಮಿಸಿಕೊಳ್ಳುವಂತೆ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳಿಗೆ ಪತ್ರ ಬರೆಯಲಾಗುವುದು ಎಂದು ವಿವರಿಸಿದರು.ಶೀಘ್ರವೇ ಮಹಾವಿದ್ಯಾಲಯದ ಕಟ್ಟಡ ಕಾಮಗಾರಿ ಆರಂಭವಾಗಲಿದೆ. ಪಠ್ಯಕ್ರಮ ಸಿದ್ಧಪಡಿಸಲು ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ನಿರ್ದೇಶಕ ಜಿ.ಎಂ. ಧನಂಜಯ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗಿದೆ. ಮಾಸಾಂತ್ಯಕ್ಕೆ ಅಂತಿಮ ವರದಿ ಸಿಗಲಿದ್ದು ವಿವಿ ಸಿಂಡಿಕೇಟ್‌ನಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.