ಶುಕ್ರವಾರ, ಮೇ 7, 2021
19 °C
ಬಸ್ ಕತೆ

ತಾತನ ಪರ್ಸ್

-ಶಶಿರೇಖಾ,ಕಗ್ಗಲೀಪುರ Updated:

ಅಕ್ಷರ ಗಾತ್ರ : | |

ಕನಕಪುರ ರಸ್ತೆಯ ಕಗ್ಗಲೀಪುರದಿಂದ   ಹೊರಟ ಆ ಬಸ್ಸಿನಲ್ಲಿ ಶಾಲಾ ಮಕ್ಕಳು ಮತ್ತು ಇತರ ಪ್ರಯಾಣಿಕರು ಸೇರಿದಂತೆ ವಿಪರೀತ ರಶ್ ಇತ್ತು. ಬೆಳಿಗ್ಗೆ ಎಂಟು ಗಂಟೆಯ ಸಮಯವೆಂದರೆ ಕೇಳಬೇಕೇ? ಎಂಟೂವರೆ, ಒಂಬತ್ತು ಗಂಟೆಯೊಳಗೆ ಶಾಲೆಗೆ, ಫ್ಯಾಕ್ಟರಿಗಳಿಗೆ ತಲುಪಬೇಕಾದ ಮಂದಿಯ ಧಾವಂತ. ಈ ಬಸ್ ಬಿಟ್ಟರೆ ಮತ್ತೆ ಎಷ್ಟು ಹೊತ್ತಿಗೆ ಇನ್ನೊಂದು ಬರುತ್ತದೋ, ಬಂದರೂ ಹತ್ತಲಾದೀತೋ ಇಲ್ಲವೋ ಎಂಬ ಆತಂಕದಲ್ಲೇ ಹಣ್ಣು ಹಣ್ಣು ಮುದುಕರೊಬ್ಬರು ದೊಡ್ಡಕಲ್ಲಸಂದ್ರದಲ್ಲಿ ಬಸ್ ಹತ್ತಿದರು.ಒಳಹೋಗಲೂ ಜಾಗವಿಲ್ಲದಿದ್ದುದರಿಂದ ಅವರು ಮೆಟ್ಟಿಲಲ್ಲೇ ನಿಲ್ಲಬೇಕಾಯಿತು. ಕೆ.ಆರ್. ಮಾರುಕಟ್ಟೆಯಲ್ಲಿ ಅವರ ಸಂಬಂಧಿಯನ್ನು ಭೇಟಿಯಾಗಿ ಅಲ್ಲಿಂದ ಯಾವುದೋ ಆಸ್ಪತ್ರೆಗೆ ಹೋಗಬೇಕಾಗಿತ್ತಂತೆ ಅವರಿಗೆ.

ಆ ಬಸ್‌ನಲ್ಲಿ ನಿತ್ಯ ಮಧ್ಯವಯಸ್ಕ ಕಂಡಕ್ಟರ್ ಇರುತ್ತಾರೆ. ಎಷ್ಟೇ ಒತ್ತಡವಿದ್ದರೂ ಪಾಸ್ ಚೆಕ್ ಮಾಡುವ, ಶ್ರದ್ಧೆಯಿಂದ ಟಿಕೆಟ್ ಕೊಡುವ, ಚಿಲ್ಲರೆ ಯಾರು ಯಾರಿಗೆ ಎಷ್ಟೆಷ್ಟು ಕೊಡಬೇಕು ಎಂಬುದನ್ನೂ ನೆನಪಿಟ್ಟುಕೊಂಡು ನಿಯತ್ತಿನಿಂದ ಕೊಡುವ ಪ್ರಾಮಾಣಿಕ ಅವರು.ಆದರೆ ಅಂದು ಕೋಣನಕುಂಟೆ ಕ್ರಾಸ್ ತಲುಪಿದರೂ ಅವರಿಗೆ ಎಲ್ಲರಿಗೂ ಟಿಕೆಟ್ ಇಶ್ಯೂ ಮಾಡಲು ಆಗಿರಲಿಲ್ಲ. `ದಯವಿಟ್ಟು ಚಿಲ್ಲರೆ ಕೊಡಿ, ಈ ರಶ್‌ನಲ್ಲಿ ಯಾರಿಗೆ ಅಂತ ಕೊಡೋಣ ಯಾರನ್ನೂಂತ ನೆನಪಿಟ್ಟುಕೊಳ್ಳೋಣ' ಎಂದು ವಿನಂತಿಸುತ್ತಲೇ ಇದ್ದರು. ಹೇಗೋ ನಿಭಾಯಿಸಿಕೊಂಡು ಮಧ್ಯದ ಬಾಗಿಲಿನ ಬಳಿ ತಲುಪುವ ಹೊತ್ತಿಗೆ ಮೆಟ್ರೊ ನಿಲ್ದಾಣವೂ ತಲುಪಿತ್ತು.ದೊಡ್ಡಕಲ್ಲಸಂದ್ರದಲ್ಲಿ ಹತ್ತಿದ ತಾತ ಟಿಕೆಟ್‌ಗೆ ದುಡ್ಡು ಕೊಡಲು ಪ್ಯಾಂಟ್ ಜೇಬಿಗೆ ಕೈ ಹಾಕಿದರು. ಪರ್ಸ್ ಇಲ್ಲ! ತಾತ ಅಕ್ಷರಶಃ ಅಳಲು ಶುರುಮಾಡಿದರು. ಮನೆಯಿಂದ ಹೊರಡುವಾಗ ಜೇಬಿಗೆ ಪರ್ಸ್ ಹಾಕಿದ್ದು ಬಸ್ ಹತ್ತುವಾಗಲೂ ಇತ್ತು ಎಂದೂ, ಆಸ್ಪತ್ರೆಗೆ ಕಾಸು ಕಟ್ಟಬೇಕಿದ್ದರಿಂದ ರೂ.1300 ತಂದಿದ್ದಾಗಿಯೂ ಅವರು ಹೇಳಿಕೊಂಡರು.ಹೆಚ್ಚಿನ ಜನಸಂದಣಿ ಇರುವ ಬಸ್‌ಗಳನ್ನೇ ಟಾರ್ಗೆಟ್ ಮಾಡಿಕೊಳ್ಳುವ ಜೇಬುಗಳ್ಳರು ತಾತನ ಪರ್ಸ್ ಎಗರಿಸಿದ್ದರು. ಎಲ್ಲರೂ ಅನುಕಂಪ ವ್ಯಕ್ತಪಡಿಸಿದರೇ ವಿನಾ ತಾತ ಟಿಕೆಟ್ ಕೊಳ್ಳುವುದು ಹೇಗೆ ಎಂದು ಯಾರೂ ವಿವೇಚಿಸಲಿಲ್ಲ.ಇಷ್ಟೆಲ್ಲ ಆಗುವ ಹೊತ್ತಿಗೆ ಎಲ್ಲರಿಗೂ ಟಿಕೆಟ್ ನೀಡಿ ಕಂಡಕ್ಟರ್ ಮಧ್ಯದ ಬಾಗಿಲಿಂದ ಬಂದವರೇ `ತಾತ ಇಷ್ಟು ವಯಸ್ಸಿನಲ್ಲಿ ಒಬ್ಬೊಬ್ಬರೇ ಹೀಗೆ ಓಡಾಡೋದು ಸರಿಯಲ್ಲ. ಬಂದರೂ ದುಡ್ಡುಕಾಸಿನ ಬಗ್ಗೆ ಹುಷಾರಾಗಿರಬೇಕು. ಈ ಟಿಕೆಟ್ ಇಟ್ಕೊಳ್ಳಿ' ಎಂದು ಕೆ.ಆರ್. ಮಾರುಕಟ್ಟೆವರೆಗಿನ ಟಿಕೆಟ್ ಹರಿದು ತಾತನ ಜೇಬಿಗೆ ಹಾಕಿದರು!ಬಸ್ಸು ಸಾರಕ್ಕಿ ಗೇಟ್ ಬಳಿ ತಲುಪುತ್ತಿದ್ದಂತೆ ಎರಡೂ ಬಾಗಿಲಿನಿಂದ ಬಿಎಂಟಿಸಿಯ ತಪಾಸಣಾ ತಂಡ ಹತ್ತಿತು. ತಾತನೂ ಸೇರಿದಂತೆ ಎಲ್ಲರ ಟಿಕೆಟ್, ಪಾಸ್ ತಪಾಸಣೆ ನಡೆಸಿದ ತಂಡದವರು ಬನಶಂಕರಿಯಲ್ಲಿ ಇಳಿದುಹೋದರು.ಸಿಕ್ಕಿದ ಸೀಟಿನಲ್ಲಿ ಕುಳಿತು ಸುಧಾರಿಸಿದ ತಾತ ಕಂಡಕ್ಟರ್‌ನ ಕೈಹಿಡಿದು `ನೀನು ಟಿಕೆಟ್ ಕೊಡದೇ ಹೋಗಿದ್ದರೆ ನಾನು ಅವರ ದೃಷ್ಟಿಯಲ್ಲಿ ತಪ್ಪಿತಸ್ಥನಾಗುತ್ತಿದ್ದೆ. ನನ್ನ ಮಾನ ಕಾಪಾಡಿದೆ' ಎಂದು ಅವರ ಕೈಗಳನ್ನು ತಮ್ಮ ಕಣ್ಣಿಗೊತ್ತಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.