ಸೋಮವಾರ, ಮಾರ್ಚ್ 8, 2021
22 °C

ತಾಯಿ -ಮಗು ಕೊಲೆ: ಅಪರಾಧಿಗೆ ಮರಣ ದಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಯಿ -ಮಗು ಕೊಲೆ: ಅಪರಾಧಿಗೆ ಮರಣ ದಂಡನೆ

ಪುತ್ತೂರು: ಎಂಟು ವರ್ಷದ ಹಿಂದೆ ತಾಲ್ಲೂಕಿನ ಶಿರಾಡಿಯಲ್ಲಿ ನಡೆದಿದ್ದ ತಾಯಿ, ಮಗುವಿನ ಕೊಲೆ ಪ್ರಕರಣದ ಆರೋಪಿ ಜಯೇಶ್‌ಗೆ ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಶುಕ್ರವಾರ ಮರಣ ದಂಡನೆ ವಿಧಿಸಿದೆ.ಈ ಪ್ರಕರಣದಲ್ಲಿ ಜಯೇಶ್‌ ತಪ್ಪಿತಸ್ಥ ಎಂದು ಮಂಗಳವಾರ ನ್ಯಾಯಾಧೀಶರಾದ ರಾಮಚಂದ್ರ ಅವರು ಪ್ರಕಟಿಸಿದ್ದರು. ಒಟ್ಟು 40 ಸಾಕ್ಷಿಗಳಿಂದ ದೊರೆತ ಸಾಕ್ಷ್ಯಗಳ ಆಧಾರದಲ್ಲಿ ನ್ಯಾಯಾಧೀಶರು ಈ ಪ್ರಕರಣವನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂಬುದಾಗಿ ಪರಿಗಣಿಸಿ ಮರಣ ದಂಡನೆ ವಿಧಿಸಿದರು.ಶಿರಾಡಿ ಗ್ರಾಮದ ಸಿರಿಬಾಗಿಲು ಪೊಲ್ಯೊಟ್ಟು ಎಂಬಲ್ಲಿ 2008ರ ಆಗಸ್ಟ್‌ 2ರಂದು ತನ್ನ ದೊಡ್ಡಪ್ಪನ ಮಗ ಲೋಹಿತ್ ಯಾನೆ ಲವ ಅವರ ಪತ್ನಿ ಸೌಮ್ಯ ಮತ್ತು ಆಕೆಯ 3 ವರ್ಷದ ಗಂಡು ಮಗು ಜಿಷ್ಣುವನ್ನು ಜಯೇಶ್‌ ಯಾನೆ ಶಾಹೀರ್‌ ಕೊಲೆ ಮಾಡಿದ್ದ.ಸೌಮ್ಯ ಅವರ ಕುತ್ತಿಗೆಗೆ ಬಟ್ಟೆ ಸುತ್ತಿ ಮಾರಕಾಯುಧದಿಂದ ಹೊಟ್ಟೆಗೆ ತಿವಿದು, ಕೊಲೆ ಮಾಡಿ, ಅವರ ಕತ್ತಿನಲ್ಲಿದ್ದ 10 ಗ್ರಾಂ ಚಿನ್ನದ ಮಾಂಗಲ್ಯ ಸರ ಮತ್ತು ಕಿವಿಯಲ್ಲಿದ್ದ ಬೆಂಡೋಲೆಯನ್ನು ದೋಚಿದ್ದ. 3 ವರ್ಷ ಪ್ರಾಯದ ಜಿಷ್ಣುವಿಗೂ ಚೂರಿಯಿಂದ ತಿವಿದು ಕೊಲೆ ಮಾಡಿ ಕೇರಳಕ್ಕೆ ಪರಾರಿಯಾಗಿದ್ದ. ಚಿನ್ನಾಭರಣಕ್ಕಾಗಿ ತನ್ನ ಪತ್ನಿ, ಮಗುವನ್ನು ಕೊಲೆ ಮಾಡಲಾಗಿದೆ ಎಂದು ಲೋಹಿತ್ ಅವರು ಪೊಲೀಸರಿಗೆ ದೂರು ನೀಡಿದ್ದರು.ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ: ಪ್ರಕರಣ ನಡೆದ ಸಂದರ್ಭ ಆಗಿನ್ನೂ 19ರ ಹರೆಯದವನಾಗಿದ್ದ ಆರೋಪಿ ಜಯೇಶ್ ಕೆಲವೊಂದು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಮನೆಯವರು ಆತನನ್ನು ಮನೆಯಿಂದ ಹೊರ ಹಾಕಿದ್ದರು. ತಾಯಿ ಮಗುವಿನ ಕೊಲೆ ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಕೇರಳದಲ್ಲಿ ನೆಲೆಸಿದ್ದ. ಮುಸ್ಲಿಂ ಯುವತಿಯೊಬ್ಬಳನ್ನು ಪ್ರೀತಿಸಿ ವಿವಾಹವಾಗಿದ್ದ ಜಯೇಶ್ ಬಳಿಕ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ.ತೆಂಗಿನ ಮರವೇರಿ ಬಂಧಿಯಾಗಿದ್ದ: ಮಲಪ್ಪುರಂ ಜಿಲ್ಲೆಯಲ್ಲಿ ನೆಲೆಸಿದ್ದ ಆತ ಅಲ್ಲಿ ಪತ್ನಿಯೊಂದಿಗೆ ಜಗಳವಾಡಿ ತೆಂಗಿನ ಮರ ಹತ್ತಿ ಕುಳಿತಿದ್ದ. ಈ ವಿಚಾರ ತಿಳಿದು ಸ್ಥಳಕ್ಕೆ ಬಂದಿದ್ದ ಅಲ್ಲಿನ ಪೊಲೀಸರು ಆತನನ್ನು ಮರದಿಂದ ಕೆಳಗಿಳಿಸಿ ಠಾಣೆಗೆ ಕರೆದೊಯ್ದಿದ್ದರು.ಅಲ್ಲಿ ಆತನನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆತ ಶಿರಾಡಿಯಲ್ಲಿ ನಡೆದಿದ್ದ ತಾಯಿ, ಮಗುವಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿರುವ ವಿಚಾರ ತಿಳಿದು ಬಂದಿತ್ತು.ತಪ್ಪಿಸಿಕೊಳ್ಳಲು ಯತ್ನಿಸಿ ಸಿಕ್ಕಿಬಿದ್ದಿದ್ದ: ಕಳೆದ ಏಪ್ರಿಲ್‌ 5ರಂದು ಪುತ್ತೂರು ನ್ಯಾಯಾಲಯಕ್ಕೆ ಸಾಕ್ಷಿ ವಿಚಾರಣೆಗಾಗಿ ಪೊಲೀಸರು ಕರೆತಂದಿದ್ದ ವೇಳೆ ಆರೋಪಿ ಜಯೇಶ್  ನ್ಯಾಯಾಲಯದ ಕಟಕಟೆಯಿಂದ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ರಸ್ತೆಯಲ್ಲಿ ಓಡಿ ಹೋಗುತ್ತಿದ್ದ ಆತನನ್ನು ವಕೀಲರು ಮತ್ತು ಸಾರ್ವಜನಿಕರು ಸೇರಿಕೊಂಡು ಪುತ್ತೂರು ಮಿನಿವಿಧಾನ ಸೌಧದ ಎದುರು  ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.