ಬುಧವಾರ, ಜನವರಿ 22, 2020
16 °C

ತಾರ್ಕಿಕ ಅಂತ್ಯ ಕಾಣಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), 2011ರಲ್ಲಿ ನಡೆಸಿದ ಗೆಜೆಟೆಡ್ ಪ್ರೊಬೇಷನರ್‌ ಅಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದನ್ನು ಈಗ ಸರ್ಕಾರವೇ ಒಪ್ಪಿಕೊಂಡಿದೆ. ಮುಖ್ಯಮಂತ್ರಿ ಸಿದ್ದ­ರಾಮಯ್ಯ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಮರು ಮೌಲ್ಯ­ಮಾಪನ ಮತ್ತು ಮರು ಸಂದರ್ಶನ ಖಚಿತ ಎಂದಿದ್ದಾರೆ.ಅಷ್ಟಕ್ಕೇ ಈ ಹಗ­ರಣ ಒಂದು ತಾರ್ಕಿಕ ಅಂತ್ಯಕ್ಕೆ ತಲುಪಿದಂತಾಗುವುದಿಲ್ಲ. ನೇಮಕಾತಿ ಅಕ್ರಮ­ದಲ್ಲಿ ಪಾಲ್ಗೊಂಡಿರುವುದು ಆಯೋಗದ ಸದಸ್ಯರು, ಕೆಲವು ಸಿಬ್ಬಂದಿ ಮತ್ತು ಏಜೆಂಟರಷ್ಟೇ ಅಲ್ಲ. ಸಿಐಡಿ ತನಿಖೆಯ ವರದಿ ಹೇಳುತ್ತಿರುವಂತೆ ವಿಷಯ­ತಜ್ಞರೂ ಮೌಲ್ಯಮಾಪಕರೂ ಈ ಅಕ್ರಮದಲ್ಲಿ ಪಾಲುದಾರರು.ಇವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವ ಕುರಿತಂತೆ ಸರ್ಕಾರ ಈತನಕ ಒಂದು ಮಾತನ್ನೂ ಹೇಳಿಲ್ಲ. ಈ ಹಿಂದೆ 1998ರ ನೇಮಕಾತಿಯಲ್ಲಿ ಆದ ಅಕ್ರಮ­ವನ್ನು ಸರಿಪಡಿಸುವ ಉದ್ದೇಶದಿಂದ ನ್ಯಾಯಾಲಯದ ಆದೇಶದ ಮೇರೆಗೆ ಹೊಸ ಪಟ್ಟಿಯೊಂದನ್ನು ಆಯೋಗ ಸಿದ್ಧಪಡಿಸಿತ್ತು. ಇದರ ಅನ್ವಯ ನಡೆಸಿದ ಸಂದರ್ಶನ­ದಲ್ಲಿಯೂ ಅಕ್ರಮಗಳು ನಡೆದಿರುವುದು ಬಯಲಾಗಿ ಆಗಿನ ಅಧ್ಯಕ್ಷರು ಕೆಲಕಾಲ ಜೈಲುವಾಸವನ್ನೂ ಅನುಭವಿಸಿ ಈಗ ಜಾಮೀನಿನ ಮೇಲಿ­ದ್ದಾರೆ.ಈ ಅಕ್ರಮ ನೇಮಕಾತಿಯ ಫಲಾನುಭವಿಗಳಾದ ಮೂವರು ಅಧಿಕಾರಿ­ಗಳು ಈಗಿನ ಮುಖ್ಯಮಂತ್ರಿ, ಗೃಹ ಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರ ಕಚೇರಿಯ ಆಯಕಟ್ಟಿನ ಸ್ಥಾನಗಳಲ್ಲಿ ಇದ್ದಾರೆಂಬುದು ನಾಚಿಕೆ­ಗೇಡಿನ ವಿಚಾರ. ಇವೆಲ್ಲವನ್ನೂ ನೋಡುವ ಯಾರಿಗೇ ಆದರೂ ಸರ್ಕಾರ ನೀಡು­ತ್ತಿ­ರುವ ಭರವಸೆಗಳೆಲ್ಲವೂ ತೋರಿಕೆಯವೆಂಬ ಸಂಶಯ ಬರಬಹುದು. ಜೊತೆಗೆ ಕೆಪಿಎಸ್‌ಸಿ  ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಅದರಲ್ಲಿ ಸರ್ಕಾರ­ದ ಹಸ್ತಕ್ಷೇಪ ಸಾಧ್ಯವಿಲ್ಲ ಎಂಬ ಸಬೂಬನ್ನೂ ಸೇರಿಸಿಕೊಂಡರೆ ಸಮಸ್ಯೆ ಜಟಿಲವಾಗಿರುವಂತೆ ಕಾಣಿಸುತ್ತದೆ.ಅಕ್ರಮದಲ್ಲಿ ಪಾಲ್ಗೊಂಡಿರುವ ಎಲ್ಲರ ಮೇಲೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರಕ್ಕೆ ಯಾವುದೇ ಅಡ್ಡಿಗಳಿಲ್ಲ. ಸ್ವಾಯತ್ತ ಸಂಸ್ಥೆಯ ತಪ್ಪುಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಈಗಾಗಲೇ ಕಾನೂನಿ­ನಲ್ಲಿ ಇರುವ ಅವಕಾಶಗಳನ್ನು ಶೋಧಿಸಲೂ ಸಾಧ್ಯವಿದೆ. 1998, 1999 ಮತ್ತು 2004ರ ಅಕ್ರಮ ನೇಮಕಾತಿ ಪ್ರಕರಣಗಳ ರೂವಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೂ ಅಂದಿನ ಸರ್ಕಾರಗಳಿಗೆ ಯಾವುದೇ ಅಡ್ಡಿ­ಗಳಿರಲಿಲ್ಲ.ಆದರೆ ಹಿಂದಿನ ಐವರು ಮುಖ್ಯಮಂತ್ರಿಗಳು ತಟಸ್ಥರಾಗಿದ್ದರು. ಮೌಲ್ಯ­ಮಾಪಕರು ಮತ್ತು ವಿಷಯತಜ್ಞರ ವಿರುದ್ಧ ಕ್ರಮ ಜರುಗಿಸುವ ಪ್ರಯತ್ನ ಈತನಕವೂ ನಡೆದಿಲ್ಲ. 1998ರ ಹಗರಣದ ರೂವಾರಿಗಳಲ್ಲಿ  ಒಬ್ಬ­ರಾ­ಗಿದ್ದ ಮೈಸೂರು ವಿಶ್ವವಿದ್ಯಾಲಯದ ಅಂದಿನ ಇತಿಹಾಸ ಪ್ರಾಧ್ಯಾಪಕರ ವಿರುದ್ಧ ಯಾವ ಕೇಸೂ ದಾಖಲಾಗಿಲ್ಲ.ಇನ್ನು ಈ ಬಾರಿಯ ಮರು ಮೌಲ್ಯಮಾಪನ ಮತ್ತು ಮರು ಸಂದರ್ಶನ, ಅಕ್ರಮದಲ್ಲಿ ಭಾಗಿ­ಯಾದವರೇ ನಡೆಸಿದರೆ ಇದೂ 1998ರ ನೇಮಕಾತಿ ಹಗರಣದ ಹಾದಿ ಹಿಡಿಯುವುದಿಲ್ಲ ಎಂಬುದಕ್ಕೆ ಏನು ಖಾತರಿ? ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರಿಗೂ ಪಾಲಿರುವ ಈ ಅಕ್ರಮ ನೇಮಕಾತಿ ಪ್ರಕರಣದ ಬಗ್ಗೆ ಏನೂ ಮಾಡದಿದ್ದರೂ ಯಾವ ಪಕ್ಷವೂ ಪ್ರಶ್ನಿಸುವುದಿಲ್ಲ.ಆದರೆ ಜನ­ಸಾಮಾನ್ಯರು ಮಾತ್ರ ಸಿದ್ದರಾಮಯ್ಯನವರು ಉಳಿದವರಿಗಿಂತ ಭಿನ್ನವಾಗಿರು­ತ್ತಾರೆಂಬ ನಿರೀಕ್ಷೆಯಲ್ಲಿದ್ದಾರೆಂಬುದನ್ನು ಅವರು ಮರೆಯಬಾರದು. ಇದು ಕೇವಲ ಉದ್ಯೋಗಾಕಾಂಕ್ಷಿಗಳ ಹಿತ ಕಾಯುವ ಪ್ರಶ್ನೆಯಷ್ಟೇ ಅಲ್ಲ. ಇದು ಸರ್ಕಾರ ತನ್ನ  ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಕೈಗೊಳ್ಳಲೇ­ಬೇಕಾದ ಕ್ರಮ ಮತ್ತು ನೇಮಕಾತಿ ವ್ಯವಸ್ಥೆಯೊಂದನ್ನು ಶುದ್ಧೀಕರಿಸುವ ಹೆಜ್ಜೆ.

ಪ್ರತಿಕ್ರಿಯಿಸಿ (+)