ಮಂಗಳವಾರ, ಏಪ್ರಿಲ್ 20, 2021
32 °C

ತಿಂಗಳೊಳಗೆ ಕೆಎಸ್‌ಆರ್‌ಟಿಸಿ ನಗರ ಸಾರಿಗೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ಹಾಸನದಲ್ಲಿ ‘ನಗರ ಸಾರಿಗೆ’ ವ್ಯವಸ್ಥೆ ಆರಂಭಿಸಲು ಮುಂದಾಗಿದ್ದು, ಒಂದು ತಿಂಗಳೊಳಗೆ ಮೂರು ಹೊಸ ಮಾರ್ಗಗಳಲ್ಲಿ 18 ಬಸ್ಸುಗಳನ್ನು ಆರಂಭಿಸಲಾಗುವುದು’ ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ್ ತಿಳಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.ಮೊದಲ ಹಂತವಾಗಿ ಇದೇ ಶುಕ್ರವಾರ (ಮಾ.25)ದಿಂದ ಚನ್ನಟ್ಟಣ ಬೈಪಾಸ್‌ನಿಂದ ದಾಸರಕೊಪ್ಪಲು ವರೆಗಿನ 7 ಕಿ.ಮೀ. ಮಾರ್ಗದಲ್ಲಿ ಆರು ಬಸ್ಸುಗಳನ್ನು ಆರಂಭಿಸಲಾಗುವುದು. ಈ ಆರು ಬಸ್ಸುಗಳು ದಿನದಲ್ಲಿ 96 ಟ್ರಿಪ್ ನಡೆಸಲಿವೆ. ಎರಡೂ ಕಡೆಯಿಂದ ಮೂರು ಮೂರು ಬಸ್ಸುಗಳು ಓಡುವುದರಿಂದ ಪ್ರತಿ ಹತ್ತು ನಿಮಿಷಕ್ಕೊಂದು ಬಸ್ಸು ಓಡಾಟ ನಡೆಸಿದಂತಾಗುತ್ತದೆ. ಈ ಭಾಗದ ಜನರಿಗೆ ಹೊಸ ಬಸ್ ನಿಲ್ದಾಣಕ್ಕೆ ಹೋಗಲು ಒಳ್ಳೆಯ ಸೌಕರ್ಯ ಒದಗಿಸಿದಂತಾಗುತ್ತದೆ ಎಂದರು.ಇದೇ ಮೊದಲಬಾರಿ ಜಿಪಿಆರ್‌ಎಸ್ ಸೌಲಭ್ಯ ಹಾಗೂ ಚಾಲಕನ ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿರುವ ಬಸ್ಸುಗಳನ್ನು ಹಾಸನದಲ್ಲಿ ಪರಿಚಯಿಸಲಾಗುತ್ತಿದೆ. ಈ ಬಸ್ಸುಗಳಲ್ಲಿ ಮೂರು ಕಡೆ ಎಲೆಕ್ಟ್ರಾನಿಕ್ ಫಲಕಗಳಿದ್ದು, ಬಸ್ಸು ಯಾವ  ಮಾರ್ಗದಲ್ಲಿ ಸಂಚರಿಸುತ್ತದೆ ಎಂಬುದನ್ನು ಸೂಚಿಸುತ್ತವೆ. ಮಾತ್ರವಲ್ಲದೆ ಬಸ್ಸು ನಿಂತಾಗ ಯಾವ ನಿಲ್ದಾಣದಲ್ಲಿದೆ ಮತ್ತು ಮುಂದಿನ ನಿಲ್ದಾಣ ಯಾವುದು ಎಂಬುದನ್ನೂ ತಿಳಿಸುತ್ತದೆ. ಪ್ರಯಾಣಿಕರ ಸುರಕ್ಷತೆಗಾಗಿ ಬಸ್ಸಿನ ಮಧ್ಯ ಹಾಗೂ ಮುಂಭಾಗದಲ್ಲಿ ಬಾಗಿಲಿಗೆ ಸ್ವಯಂಚಾಲಿತ ಬಾಗಿಲುಗಳಿರುತ್ತವೆ. ಬೆಂಗಳೂರು, ಮೈಸೂರು ಹಾಗೂ ತುಮಕೂರಿನಲ್ಲಿ ಈಗಾಗಲೇ ಇಂಥ ಬಸ್ಸುಗಳು ಓಡಾಡುತ್ತಿದ್ದು ಹಾಸನದಲ್ಲಿ ಇದೇ ಮೊದಲಬಾರಿ ಪರಿಚಯಿಸಲಾಗಿದೆ ಎಂದರು.‘ಶುಕ್ರವಾರ ಆರಂಭವಾಗುವ ಬಸ್ಸುಗಳು ಚನ್ನಪಟ್ಟಣ ಬೈಪಾಸ್, ಚನ್ನಪಟ್ಟಣ, ಹೊಸ ಬಸ್ ನಿಲ್ದಾಣ, ಎನ್.ಆರ್.ಸರ್ಕಲ್, ಹಳೇ ಬಸ್ ನಿಲ್ದಾಣ, ಕಲಾಭವನ, ಸಾಲಗಾಮೆ, ಎಂಸಿಇ ಮಾರ್ಗವಾಗಿ ದಾಸರಕೊಪ್ಪಲಿಗೆ ಬರಲಿದೆ. ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಈ ಬಸ್ಸುಗಳ ಓಡಾಟವಿರುತ್ತದೆ ಎಂದು ಬಸವರಾಜ್ ತಿಳಿಸಿದರು.ಈ ಮಾರ್ಗವಲ್ಲದೆ ಮುಂದಿನ ಹಂತದಲ್ಲಿ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಯಿಂದ ಕಂದಲಿ ವರೆಗೆ ಆರು ಬಸ್ಸುಗಳು ಹಾಗೂ ಡೈರಿ ವೃತ್ತದಿಂದ ವಿದ್ಯಾನಗರ, ಬೈಪಾಸ್ ರಸ್ತೆ ಮಾರ್ಗವಾಗಿ ವರ್ತುಲಾಕಾರದಲ್ಲಿ ಆರು ಬಸ್ಸುಗಳನ್ನು ಆರಂಭಿಸಲಾಗುವುದು. ಒಂದು ತಿಂಗಳೊಳಗೆ ಎಲ್ಲ 18 ಬಸ್ಸುಗಳು ಓಡಾಡಲಿವೆ ಎಂದು ಬಸವರಾಜ್ ತಿಳಿಸಿದರು.‘ಡಿಪೊ ಮಾಡಲ್ಲ’

ಹಾಸನ: ಹಾಸನದಲ್ಲಿ ನಗರ ಸಾರಿಗೆ ವ್ಯವಸ್ಥೆ ಆರಂಭಿಸಿರುವುದರಿಂದ ಅದಕ್ಕೆ ಪ್ರತ್ಯೇಕ ಬಸ್ ನಿಲ್ದಾಣ ಬೇಕಾಗುತ್ತದೆ. ಈ ಕಾರಣದಿಂದ ಹಳೆಯ ಬಸ್ ನಿಲ್ದಾಣದ ಒಂದು ಭಾಗವನ್ನಾದರೂ ಯಥಾ ಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗುವುದು. ಇಲ್ಲಿ ಡಿಪೋ ಮಾಡಬೇಕು ಎಂಬ ಪ್ರಸ್ತಾವನೆ ಇತ್ತು. ಆದರೆ ಈಗ ಡಿಪೋಗೆ ಬೇರೆ ಜಾಗ ನೋಡಿದ್ದೇವೆ. ಹಳೆಯ ಬಸ್ ನಿಲ್ದಾಣದ ಜಾಗದಲ್ಲಿ ಡಿಪೊ ಮಾಡುವುದಿಲ್ಲ ಎಂದು ಬಸವರಾಜ್ ಸ್ಪಷ್ಟಪಡಿಸಿದರು.ಹೊಸ ಬಸ್ ನಿಲ್ದಾಣದಲ್ಲಿ ದುಬಾರಿ ಪಾರ್ಕಿಂಗ್ ಶುಲ್ಕ ಪಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈವರೆಗೆ ಇಲ್ಲಿ ಯಾರಿಗೂ ಪಾರ್ಕಿಂಗ್ ಶುಲ್ಕ ನಿಗದಿ ಮಾಡಿಲ್ಲ. ಯಾರಾದರೂ ಶುಲ್ಕ ಕೇಳಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.ನಗರಸಾರಿಗೆ ಆರಂಭಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್, ‘ಸಾರಿಗೆ ಸಂಸ್ಥೆಯವರು ಬಸ್ ನಿಲ್ದಾಣಕ್ಕೆ ಸೂಕ್ತ ಜಾಗವನ್ನು ಗೊತ್ತುಮಾಡಿದರೆ ಅದನ್ನು ನಿರ್ಮಿಸಿಕೊಡುವ ಬಗ್ಗೆ ಚಿಂತಿಸಲಾಗುವುದು’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.