ಭಾನುವಾರ, ಜೂಲೈ 5, 2020
25 °C

ತೀವ್ರಗೊಂಡ ಕಾಳಗ: ಗಡಾಫಿಯಿಂದ ಸಂಧಾನ ಸೂತ್ರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀವ್ರಗೊಂಡ ಕಾಳಗ: ಗಡಾಫಿಯಿಂದ ಸಂಧಾನ ಸೂತ್ರ?

 ಟ್ರಿಪೋಲಿ/ ಕೈರೊ (ಪಿಟಿಐ, ಐಎಎನ್‌ಎಸ್, ಎಕೆಐ): ಲಿಬಿಯಾದಲ್ಲಿ ಅಧ್ಯಕ್ಷ ಮುಅಮ್ಮರ್ ಗಡಾಫಿ ಅವರ ಪರ ಮತ್ತು ವಿರೋಧಿ ಗುಂಪುಗಳ ನಡುವಿನ ಕಾಳಗ ತೀವ್ರಗೊಂಡಿದೆ. ಈ ನಡುವೆ 22 ದಿನಗಳ ಭಾರಿ ಪ್ರತಿಭಟನೆಗಳಿಗೆ ಮಣಿದಂತಿರುವ ಗಡಾಫಿ ಸ್ವರಕ್ಷಣೆಗಾಗಿ ಸಂಧಾನ ಸೂತ್ರವೊಂದನ್ನು ಸಿದ್ಧಪಡಿಸಿದ್ದು, ಮಾಜಿ ಪ್ರಧಾನಿ ಜಡಲ್ಲಾ ಅಜೌಜ್ ತಲ್ಹಿ ಅವರನ್ನು ತಮ್ಮ ಪ್ರತಿನಿಧಿಯಾಗಿ ಬಂಡುಕೋರರ ಬಳಿ ಮಾತುಕತೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.ಬಂಡುಕೋರರು ರಚಿಸಿಕೊಂಡಿರುವ ರಾಷ್ಟ್ರೀಯ ಮಂಡಳಿಯು ಭಾರಿ ಮೊತ್ತದ ಹಣ ಹಾಗೂ ಅಪರಾಧ ವಿಚಾರಣೆಯಿಂದ ವಿನಾಯಿತಿ ನೀಡುವ ಭರವಸೆಯನ್ನು ತಮಗೆ ನೀಡಿದರೆ ಅಧಿಕಾರ ತ್ಯಜಿಸಿ ದೇಶದಿಂದ ಹೊರ ಹೋಗಲು ಸಿದ್ಧ ಎಂದು ಅವರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಹೇಳಿಕೆಯನ್ನು ಸರ್ಕಾರಿ ಟಿ.ವಿ ತಳ್ಳಿಹಾಕಿದೆ. ಇದರ ಬೆನ್ನಲ್ಲೇ, ಗಡಾಫಿ ಅಧಿಕಾರ ತ್ಯಜಿಸುವವರೆಗೂ ಸಂಧಾನದ ಪ್ರಶ್ನೆಯೇ ಇಲ್ಲ ಎಂದು ರಾಷ್ಟ್ರೀಯ ಮಂಡಳಿ ಘೋಷಿಸಿದೆ.‘ಯಾವುದೇ ಸಂಧಾನ ಮಾತುಕತೆಗೆ ಮುನ್ನ ಗಡಾಫಿ ಅಧಿಕಾರದಿಂದ ಕೆಳಗಿಳಿಯಬೇಕು. ಆಗಷ್ಟೇ ನಾವು ಅವರಿಗೆ ಅಂತರರಾಷ್ಟ್ರೀಯ ಕೋರ್ಟ್‌ನ ವಿಚಾರಣೆ ಆಗದಂತೆ ನೋಡಿಕೊಳ್ಳುವ ಬಗ್ಗೆ ಪರಿಶೀಲಿಸಬಹುದು’ ಎಂದು ಮಂಡಳಿಯ ಅಧ್ಯಕ್ಷ ಮುಸ್ತಫಾ ಅಬ್ದುಲ್ ಜಲೀಲ್ ‘ಅಲ್ ಜಜೀರಾ’ ಟಿ.ವಿ ವಾಹಿನಿಗೆ ತಿಳಿಸಿದ್ದಾರೆ.ವಾಯು ದಾಳಿ: ಬಂಡುಕೋರರು ರಾಜಧಾನಿ ಟ್ರಿಪೋಲಿಯತ್ತ ಮುನ್ನುಗುವುದನ್ನು ತಡೆಯಲು ಅವರ ವಶದಲ್ಲಿರುವ ತೈಲ ಬಂದರು ಪಟ್ಟಣ ರಾಸ್ ಲಾನುಫ್‌ನ ಹೊರವಲಯದ ಮೇಲೆ ಗಡಾಫಿ ಬೆಂಬಲಿತ ಪಡೆಗಳು ಮಂಗಳವಾರ ಕ್ಷಿಪಣಿ ದಾಳಿ ನಡೆಸಿವೆ.ಜನರಹಿತ ಪ್ರದೇಶಗಳ ಮೇಲೆ ಈ ದಾಳಿ ನಡೆದಿದ್ದು, ಯಾವುದೇ ಪ್ರಾಣ ಅಥವಾ ಇತರ ಹಾನಿ ಸಂಭವಿಸಿಲ್ಲ. ಈ ಮಧ್ಯೆ, ದೇಶವನ್ನು ‘ಹಾರಾಟ ರಹಿತ ವಲಯ’ವನ್ನಾಗಿ ಘೋಷಿಸಬೇಕೆಂಬ ಜಾಗತಿಕ ಕರೆ ತೀವ್ರಗೊಂಡಿದೆ. ಬಂಡುಕೋರರ ವಶದಲ್ಲಿರುವ ಇತರ ಪಟ್ಟಣಗಳನ್ನು ಮರುವಶಕ್ಕೆ ಪಡೆಯುವ ಪ್ರಯತ್ನವನ್ನು ಪಡೆಗಳು ಮುಂದುವರಿಸಿವೆ. ಈಗಾಗಲೇ ಬಿನ್ ಜವದ್ ಪಟ್ಟಣ ಅವರ ಕೈಸೇರಿದೆ. ಗಡಾಫಿ ಅವರ ತವರು ಪಟ್ಟಣ ಸಿರ್ಟ್ ಹಾಗೂ ಟ್ರಿಪೋಲಿ ನಡುವೆ ಇರುವ ಮಿಸುರಟ ಪಟ್ಟಣದಲ್ಲಿ ಉಭಯ ಗುಂಪುಗಳ ನಡುವೆ ಬಿರುಸಿನ ಕಾಳಗ ನಡೆದಿದೆ.ಅಮೆರಿಕ ಎಚ್ಚರಿಕೆ: ಗಡಾಫಿ ಅವರ ನಿಕಟ ಸಹಚರರು ಕೂಡಲೇ ಅವರನ್ನು ತೊರೆಯಬೇಕು. ಇಲ್ಲದಿದ್ದರೆ ತಮ್ಮದೇ ಜನರ ವಿರುದ್ಧ ಮಾನವ ಹಕ್ಕು ಉಲ್ಲಂಘನೆ ಮಾಡಿದ ಆರೋಪಕ್ಕೆ ಅವರು ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಸಿದೆ.ತಾವು ಲಿಬಿಯಾ ಜನರ ಪರವೋ ಅಥವಾ ಹೆಚ್ಚು ಕಾಲ ಉಳಿಯದ ತರ್ಕಹೀನ ಆಡಳಿತದ ನಾಯಕನ ಪರವೋ ಎಂಬುದನ್ನು ಸಹಚರರು ನಿರ್ಧರಿಸಬೇಕು. ತಮ್ಮ ಪ್ರತಿ ನಡವಳಿಕೆಯನ್ನೂ ಇಡೀ ವಿಶ್ವ ಗಮನಿಸುತ್ತಿದೆ ಮತ್ತು ಅಂತಹ ಕಾರ್ಯಗಳಿಗೆಲ್ಲಾ ತಾವೇ ಹೊಣೆಗಾರರು ಎಂಬ ಅರಿವೂ ಅವರಿಗಿರಬೇಕು  ಎಂದಿರುವ ಶ್ವೇತಭವನದ ವಕ್ತಾರ ಜೇ ಕಾರ್ನಿ,  ಆಡಳಿತ  ಜನರ ವಿರುದ್ಧ ಕೈಗೊಳ್ಳುತ್ತಿರುವ ಕೃತ್ಯಗಳಿಗೆ ಕೈಜೋಡಿಸಿರುವವರ ಪಟ್ಟಿಯೇ ಒಬಾಮ ಆಡಳಿತದ ಬಳಿ ಇದೆ ಎಂದಿದ್ದಾರೆ.‘ಸೇನಾ ಕಾರ್ಯಾಚರಣೆ ಸೇರಿದಂತೆ ಪರ್ಯಾಯ ಅವಕಾಶಗಳು ನಮ್ಮ ಮುಂದೆ ಇವೆ’ ಎಂದು ಹೇಳುವ ಮೂಲಕ ಒಬಾಮ ಸಹ ಗಡಾಫಿ ಅವರ ಮೇಲೆ ಇನ್ನಷ್ಟು ಒತ್ತಡ ಹೇರಲು ಮುಂದಾಗಿದ್ದಾರೆ. ನಾಗರಿಕರ ಮೇಲಿನ ಬಾಂಬ್ ದಾಳಿ ತಡೆಗೆ ಲಿಬಿಯಾವನ್ನು ‘ಹಾರಾಟರಹಿತ ವಲಯ’ವಾಗಿ ಘೋಷಿಸುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಮೇಲೆ ಒತ್ತಡ ಹೇರಲು ಬ್ರಿಟನ್ ಮತ್ತು ಫ್ರಾನ್ಸ್ ನಿರ್ಣಯವೊಂದನ್ನು ರೂಪಿಸಿವೆ.

 ಗಡಾಫಿ ಪುತ್ರನ ಎಚ್ಚರಿಕೆ

ಕೈರೊ/ ಟ್ರಿಪೋಲಿ (ಡಿಪಿಎ): ತಮ್ಮ ತಂದೆ ಪದಚ್ಯುತಗೊಂಡರೆ ಅಂತಃಕಲಹ ಭುಗಿಲೇಳುತ್ತದೆ ಎಂದು ಗಡಾಫಿ ಅವರ ಪುತ್ರ ಅಲ್ ಸಾದಿ ಗಡಾಫಿ ಎಚ್ಚರಿಸಿದ್ದಾರೆ.‘ನಾಯಕನಿಗೆ ಏನಾದರೂ ಆದರೆ ಉಳಿದವರು ಯಾರು ತಾನೇ ನಿಯಂತ್ರಣದಲ್ಲಿ ಇರುತ್ತಾರೆ’ ಎಂದು ಗಡಾಫಿ ಅವರ 7 ಗಂಡು ಮಕ್ಕಳಲ್ಲಿ ಮೂರನೆಯವರಾದ ಸಾದಿ ‘ಅಲ್ ಅರೇಬಿಯಾ’ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.

‘ಆಕ್ರಮಣಕ್ಕೆ ಅವಕಾಶವಿಲ್ಲ’

ಬ್ರಸೆಲ್ಸ್ (ಡಿಪಿಎ): ಸರ್ಕಾರಿ ವಿರೋಧಿ ಶಕ್ತಿಗಳ ಮೇಲೆ ಗಡಾಫಿ ಆಡಳಿತವು ಆಕ್ರಮಣವನ್ನು ಮುಂದುವರಿಸಲು ಜಗತ್ತು ಅವಕಾಶ ನೀಡುವುದಿಲ್ಲ ಎಂದು ನ್ಯಾಟೊ ಪ್ರಧಾನ ಕಾರ್ಯದರ್ಶಿ ಆ್ಯಂಡರ್ಸ್ ಫಾಗ್ ರಾಸ್‌ಮುಸೆನ್ ಹೇಳಿದ್ದಾರೆ.

ಲಿಬಿಯಾದಲ್ಲಿನ ಬೆಳವಣಿಗೆ, ಸೇನಾ ದಾಳಿ ಸಾಧ್ಯತೆ ಎಲ್ಲವನ್ನೂ ನ್ಯಾಟೊ ಅತ್ಯಂತ ಎಚ್ಚರಿಕೆಯಿಂದ ಗಮನಿಸುತ್ತಿದೆ. ಆದರೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಬೆಂಬಲದ ಹೊರತು ಯಾವುದೇ ಕ್ರಮಕ್ಕೆ ಅದು ಮುಂದಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಮಹಿಳೆಯರೂ ಇರಲಿ’

ವಿಶ್ವಸಂಸ್ಥೆ (ಪಿಟಿಐ): ಸುದೀರ್ಘಾವಧಿಯ ಆಡಳಿತಕ್ಕೆ ಅಂತ್ಯ ಹಾಡಿದ ಈಜಿಪ್ಟ್ ಮತ್ತು ಟ್ಯುನೀಷಿಯಾ ದೇಶಗಳ ಸುಧಾರಣಾ ಪ್ರಕ್ರಿಯೆಯು ಮಹಿಳೆಯರನ್ನೂ ಒಳಗೊಳ್ಳಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥೆ ನವಿ ಪಿಳ್ಳೈ ಆಗ್ರಹಿಸಿದ್ದಾರೆ.ಉಭಯ ದೇಶಗಳ ಅಭಿವೃದ್ಧಿ ಪ್ರಕ್ರಿಯೆ ಮಹಿಳೆಯರನ್ನು ಒಳಗೊಳ್ಳದ ಬಗ್ಗೆ ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ,  ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಅವರು ಈ ಪ್ರಸ್ತಾಪ ಮಾಡಿದ್ದಾರೆ.


 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.