ಸೋಮವಾರ, ಆಗಸ್ಟ್ 3, 2020
27 °C

ತುಂಗಭದ್ರಾ ಸೇತುವೆ ನಿರ್ಮಾಣ ಪೂರ್ಣ

ರಾಮರಡ್ಡಿ ಅಳವಂಡಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಂಗಭದ್ರಾ ಸೇತುವೆ ನಿರ್ಮಾಣ ಪೂರ್ಣ

ರಾಯಚೂರು:  ಪ್ರವಾಹದಿಂದ 2009 ಅಕ್ಟೋಬರ್ ತಿಂಗಳಲ್ಲಿ ಕೊಚ್ಚಿ ಹೋಗಿದ್ದ ರಾಯಚೂರು-ಮಂತ್ರಾಲಯ ಸಂಪರ್ಕ ಕಲ್ಪಿಸುವ `ತುಂಗಭದ್ರಾ ಸೇತುವೆ~ ಮರು ನಿರ್ಮಾಣ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಆ.3ರಿಂದ ಲಘು ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ನಿರ್ಧರಿಸಿದೆ.ಆಗಸ್ಟ್ ಮೊದಲ ವಾರದಲ್ಲಿ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ನಡೆಯಲಿದೆ. ಮಹೋತ್ಸವಕ್ಕೆ ಭಕ್ತರು ತೆರಳಲು ಅನುಕೂಲವಾಗುವ ನಿಟ್ಟಿನಲ್ಲಿ ಆಗಸ್ಟ್ 3ರಂದು ಲಘು ವಾಹನ ಸಂಚಾರಕ್ಕೆ ಸೇತುವೆ ಮುಕ್ತಗೊಳಿಸಲಾಗುತ್ತಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.ಈಗ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಆ.3ರಂದು ಲಘು ವಾಹನ ಸಂಚಾರಕ್ಕೆ ಸೇತುವೆ ಮುಕ್ತಗೊಳ್ಳಲಿದೆ. ಆಗಸ್ಟ್ 15ರಂದು ಭಾರಿ ವಾಹನ ಸೇರಿದಂತೆ ಎಲ್ಲ ರೀತಿಯ ವಾಹನ ಸಂಚಾರಕ್ಕೆ ಸೇತುವೆ ಮುಕ್ತಗೊಳಿಸಲಾಗುವುದು. ಜರ್ಮನ್ ತಂತ್ರಜ್ಞಾನ ಅಳವಡಿಸಿಕೊಂಡು ಅತ್ಯಾಧುನಿಕ ಸೂಪರ್ ಸ್ಟ್ರಕ್ಚರ್ ವಿನ್ಯಾಸದ ` ಉಕ್ಕಿನ (ಸ್ಟೀಲ್) ಸೇತುವೆ~ ಇದಾಗಿದೆ. ರಾಜ್ಯದಲ್ಲಿ ನಿರ್ಮಾಣಗೊಂಡ ಪ್ರಪ್ರಥಮ ಕಬ್ಬಿಣದ ಸೇತುವೆ   ಎಂಬ ಹೆಗ್ಗಳಿಕೆ ಹೊಂದಿರುವುದಾಗಿ ನಿಗಮದ ಅಧಿಕಾರಿಗಳು ಹೇಳುತ್ತಾರೆ.ಸೇತುವೆ ಉದ್ದ ಒಟ್ಟು 600 ಮೀಟರ್. ಅಗಲ 12 ಮೀಟರ್ ಇದೆ. (ಇದರಲ್ಲಿ 8.6 ಮೀಟರ್ ವಾಹನ ಸಂಚಾರಕ್ಕೆ, ಪಾದಚಾರಿ ಸಂಚಾರಕ್ಕೆ ಎಡಕ್ಕೆ 5 ಅಡಿ, ಬಲಕ್ಕೆ 5 ಅಡಿ) ಈಗಾಗಲೇ ಕಬ್ಬಿಣದ ಸ್ಟ್ರಕ್ಚರ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. 15 ಸಿಮೆಂಟ್ ಕಾಂಕ್ರೀಟ್ ಹಾಸು (ಸ್ಲ್ಯಾಬ್) ಹಾಕಬೇಕು. ಇದರಲ್ಲಿ 6 ಪೂರ್ಣಗೊಂಡಿದ್ದು, 7ನೇಯದ್ದು ನಿರ್ಮಾಣ ಆಗುತ್ತಿದೆ.

 

ಇನ್ನುಳಿದ 8 ಕಾಂಕ್ರೀಟ್ ಸ್ಲ್ಯಾಬ್ ಹಾಕುವ ಕಾರ್ಯ ಐದಾರು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಬಳಿಕ 15 ದಿನ ಸಂಸ್ಕರಣೆ ಮಾಡಲಾಗುತ್ತದೆ. ಇವೆಲ್ಲ ಕೆಲಸಗಳು  ಜುಲೈ 31ರಷ್ಟೊತ್ತಿಗೆ ಪೂರ್ಣಗೊಳ್ಳುವುದು. ಈಚೆಗೆ, ರಾಯಚೂರು ಜಿಲ್ಲಾಧಿಕಾರಿ ಹಾಗೂ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಸೇತುವೆ ವೀಕ್ಷಿಸಿದ್ದಾರೆ ಎಂದು ನಿಗಮದ ಸಹಾಯಕ ಎಕ್ಸಿಕ್ಯೂಟಿವ್ ಎಂಜಿನಿಯರ್ ಗಿರೀಶ್ `ಪ್ರಜಾವಾಣಿ~ಗೆ ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.