ಸೋಮವಾರ, ಏಪ್ರಿಲ್ 19, 2021
32 °C

ತುಂತುರು... ಮಳೆ ನೀರ ಹಾಡು

ವಿಷ್ಣು ಭಾರದ್ವಾಜ್ Updated:

ಅಕ್ಷರ ಗಾತ್ರ : | |

ತುಂತುರು... ಇಲ್ಲಿ ನೀರ ಹಾಡು! ಆದರೆ ಬರೀ ನೀರಲ್ಲ... ಮಳೆ ನೀರಿನದ್ದೇ ಹಾಡು, ಪಾಡು. ಮಳೆನೀರಿನ ಸಂಗ್ರಹ ಕುರಿತು ಜನಜಾಗೃತಿ, ಮಾಹಿತಿ ನೀಡುವುದಕ್ಕಾಗಿಯೇ ನಗರದಲ್ಲಿ ‘ತುಂತುರು’ ಮಳೆ ನೀರು ಮಾಹಿತಿ ಕೇಂದ್ರ ಆರಂಭವಾಗಿದೆ.ನಿಸರ್ಗದ ಕೊಡುಗೆಯಾದ ಮಳೆ ನೀರು ತಾಯಿಹಾಲಿನಷ್ಟೇ ಪವಿತ್ರ, ಎಳನೀರಿನಷ್ಟೇ ಪರಿಶುದ್ಧ, ಅಮೂಲ್ಯ. ಜೀವರಕ್ಷಣೆಗೆ ರಕ್ತದಷ್ಟೇ ಮಹತ್ವ ಇರುವ ನೀರನ್ನು ಮಳೆನೀರಿನ ರೂಪದಲ್ಲಿ ಸುಲಭವಾಗಿ ಸಂಗ್ರಹಿಸಿ ಇಡಬಹುದು ಎಂಬ ಕಿವಿಮಾತಿನೊಂದಿಗೆ ಭವಿಷ್ಯಕ್ಕಾಗಿ ನೀರನ್ನು ಕಾಪಿಡುವ ಕೈಂಕರ್ಯಕ್ಕೆ ಇಲ್ಲಿ ಬುನಾದಿ ಹಾಕಲಾಗಿದೆ. ‘ಹನಿ ಹನಿಯನ್ನೂ ಉಳಿಸಿ, ಮಳೆ ನೀರು ಬಳಸಿ’ ಇದು ಇಲ್ಲಿನ ಧ್ಯೇಯಮಂತ್ರ.ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಯ (ಬಿಡಬ್ಲ್ಯು ಎಸ್‌ಎಸ್‌ಬಿ) ಸಾರಥ್ಯದಲ್ಲಿ ‘ತುಂತುರು’ ಸಂಸ್ಥೆಯನ್ನು (ಸರ್. ಎಂ. ವಿಶ್ವೇಶ್ವರಯ್ಯ ಮಳೆ ನೀರು ಸುಗ್ಗಿ ಕೇಂದ್ರ) ಜಯನಗರದಲ್ಲಿ ಪ್ರಾರಂಭಿಸಲಾಗಿದೆ. ’ವಿಶ್ವಜಲ ದಿನ’ದಂದೇ ಇದು ಲೋಕಾರ್ಪಣೆಗೊಂಡಿರುವುದು ಅರ್ಥಪೂರ್ಣ.ವಿಶಾಲವಾದ ನಿವೇಶನದಲ್ಲಿ ಮಳೆನೀರು ಸಂಗ್ರಹದ ಬಗ್ಗೆಯೇ ಮಾಹಿತಿ, ಅರಿವನ್ನು ಇಂಗಿಸಿ ಇಡಲಾಗಿದೆ. ಸುಸಜ್ಜಿತ ಕಿರು ಥಿಯೆಟರ್‌ನಲ್ಲಿ ಕಿರುಚಿತ್ರ ಪ್ರದರ್ಶನ, ಬಯಲು ರಂಗಮಂದಿರದಲ್ಲಿ  ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ-ನಾಟಕಗಳನ್ನು ಕೇಳಲು-ನೋಡಲು ಅವಕಾಶ ಇಲ್ಲಿದೆ.ಮಳೆ ನೀರು ಸಂಗ್ರಹದ ಅನಿವಾರ್ಯತೆ ಏನು, ಎಷ್ಟು ಜಾಗದಿಂದ ಎಷ್ಟು ನೀರು ಸಂಗ್ರಹವಾಗುತ್ತದೆ, ವಿಧಾನ ಹೇಗೆ, ಖರ್ಚುವೆಚ್ಚ ಎಷ್ಟು, ಯಾರು ಸಹಕಾರ -ಮಾರ್ಗದರ್ಶನ ನೀಡುತ್ತಾರೆ, ಸಂಗ್ರಹಿಸಿದ ಮಳೆನೀರಿನ ಬಳಕೆಯ ವಿಧಾನ ಹೇಗೆ ಎಂಬಿತ್ಯಾದಿ ಮಾಹಿತಿಯನ್ನು ನೀಡಲಾಗುತ್ತಿದೆ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮರಳು ಹಾಸು, ಪಾಪ್‌ಅಪ್, ಆಡ್ರಿಟೆಕ್, ರೈನಿ, ಮರುಣ್... ಹೀಗೆ ಹಲವು ತ್ಯಾಜ್ಯ ನೀರು ಶೋಧಕ ವಿಧಾನಗಳು, ಮಳೆ ನೀರು ಸಂಗ್ರಹಕ್ಕಾಗಿ ನೆಲದ ಮೇಲಿನ ತೊಟ್ಟಿ, ಭಗತ ತೊಟ್ಟಿ (ಸಂಪು), ಪ್ಲಾಸ್ಟಿಕ್ ಟ್ಯಾಂಕ್, ಮಧ್ಯಂತರ ಛಾವಣಿ ಹೀಗೆ ಹತ್ತಾರು ಪದ್ಧತಿಗಳ ಮಾದರಿ ಇಲ್ಲಿದೆ.ಮಳೆ ನೀರು ಸಂಗ್ರಹ ಪ್ರಾತ್ಯಕ್ಷಿಕೆ, ವ್ಯವಸ್ಥೆ ಅಳವಡಿಸಲು ಬೇಕಾಗುವ ಉಪಕರಣ ಸಲಕರಣೆಗಳು, ಜಲಮಮಡಳಿಯ ತಜ್ಞರ ಮಾರ್ಗದರ್ಶನ, ಪೈಪ್ ಅಳವಡಿಕೆ ತಂತ್ರಜ್ಞರ ಮಾಹಿತಿ, ನೀರು ಸರಬರಾಜು ಮತ್ತು ತ್ಯಾಜ್ಯ ಸಂಸ್ಕರಣೆ ಇತ್ಯಾದಿ ಮಾಹಿತಿ, ಆಕರ ಪುಸ್ತಕಗಳು ಕೂಡ ಇಲ್ಲಿ ಲಭಿಸುತ್ತವೆ.

ಮಳೆ ನೀರ ಸಂಗ್ರಹ ಹೇಗೆ?

ನೀರಿನ ಅಭಾವ ಪರಿಹರಿಸಲು ಮಳೆ ನೀರು ಸಂಗ್ರಹ ಸುಲಭ ವಿಧಾನ. ನಿಮ್ಮ ಮನೆ-ಛಾವಣಿ ನಿವೇಶನದಲ್ಲಿ ಬೀಳುವ ಮಳೆ ಹಾಳಾಗದಂತೆ ಬಳಸಬಹುದು. 2400 ಚದರ ಅಡಿ ವಿಸ್ತೀರ್ಣದ ಮನೆಗೆ ಮಳೆನೀರು ಸಂಗ್ರಹ ವ್ಯವಸ್ಥೆ ಅಳವಡಿಸಿದರೆ ವಾರ್ಷಿಕ 2.23 ಲಕ್ಷ ಲೀಟರ್ ನೀರು ಸಂಗ್ರಹವಾಗುತ್ತದೆ. ಇದಕ್ಕೆ ತಗುಲುವ ವೆಚ್ಚ ಸುಮಾರು 5 ರಿಂದ 50 ಸಾವಿರ ರೂಪಾಯಿ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಜಯನಗರದ 9ನೇ ಮುಖ್ಯರಸ್ತೆ, 40ನೇ ಅಡ್ಡರಸ್ತೆಯಲ್ಲಿನ ತುಂತುರು’ ಮಳೆ ಸುಗ್ಗಿ ಕೇಂದ್ರದಿಂದ ಪಡೆಯಬಹುದು ಅಥವಾ  ಕಾವೇರಿ ಭವನದಲ್ಲಿರುವ  ಬಿಡಬ್ಲ್ಯು ಎಸ್‌ಎಸ್‌ಬಿ ಕಚೇರಿಯನ್ನು ಸಂಪರ್ಕಿಸಬಹುದು.


 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.