ಶುಕ್ರವಾರ, ಫೆಬ್ರವರಿ 26, 2021
31 °C
ಬೆಳೆಗೆ ಲಘು ಪೋಷಕಾಂಶ ಬಳಸಲು ಕೃಷಿ ಇಲಾಖೆ ಸಲಹೆ

ತುಂತುರು ಮಳೆ: ಶೇಂಗಾ ಬಿತ್ತನೆ ಚುರುಕು

ಪ್ರಜಾವಾಣಿ ವಾರ್ತೆ / -ಜಡೇಕುಂಟೆ ಮಂಜುನಾಥ್ Updated:

ಅಕ್ಷರ ಗಾತ್ರ : | |

ತುಂತುರು ಮಳೆ: ಶೇಂಗಾ ಬಿತ್ತನೆ ಚುರುಕು

ಚಳ್ಳಕೆರೆ: ಬಯಲುಸೀಮೆ ಚಳ್ಳಕೆರೆ ತಾಲ್ಲೂಕಿನಾದ್ಯಂತ ಬೆಳೆಯುವ ವಾಣಿಜ್ಯ ಬೆಳೆ ಶೇಂಗಾ. ಇದೇ ಇಲ್ಲಿನ ರೈತರ ಮುಖ್ಯ ಬೆಳೆ. ಬಹುತೇಕ ಖುಷ್ಕಿ ಜಮೀನುಗಳಲ್ಲಿ ಬೆಳೆಯುತ್ತಿರುವ ಶೇಂಗಾ ಪ್ರಮುಖ ಆದಾಯ ತಂದುಕೊಡುವ ಬೆಳೆ ಆಗಿದೆ.ಪ್ರಸಕ್ತ ಮುಂಗಾರು ಬಿತ್ತನೆಗೆ ಕೃಷಿ ಇಲಾಖೆ ಸುಮಾರು 89,000 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯ ಗುರಿ ಹೊಂದಲಾಗಿದೆ. ಎರಡು ದಿನಗಳಿಂದ ತಾಲ್ಲೂಕಿನಾದ್ಯಂತ ತುಂತುರು ಮಳೆ ಬೀಳುತ್ತಿರುವ ಪರಿಣಾಮ ರೈತರು ಬಿತ್ತನೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.ಈಗಾಗಲೇ ತಾಲ್ಲೂಕಿನ ಪರಶುರಾಂಪುರ ಹೋಬಳಿ ಭಾಗದ ಕೆಲ ಹಳ್ಳಿಗಳಲ್ಲಿ ಬಿತ್ತನೆ ಕಾರ್ಯ ಆರಂಭವಾಗಿದೆ. ಕಸಬಾ, ತಳಕು, ನಾಯಕನಹಟ್ಟಿ ಭಾಗಗಳ್ಲ್ಲಲೂ ರೈತರು ಬಿತ್ತನೆಯಲ್ಲಿ ತೊಡಗಿದ್ದಾರೆ.ಬಿತ್ತನೆ ಮಾಡುವಾಗ ಲಘು ಪೋಷಕಾಂಶಗಳಾದ ಜಿಪ್ಸಂ, ಜಿಂಕ್ ಸಲ್ಫೇಟ್, ಬೋರಾಕ್ಸ್, ಜೈವಿಕ ಗೊಬ್ಬರಗಳು ಹಾಗೂ ಸಸ್ಯ ಸಂರಕ್ಷಣಾ ರಾಸಾಯನಿಕಗಳನ್ನು ಬಳಸಬೇಕು. ಇವುಗಳನ್ನು ಇಲಾಖೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿ ಡಾ.ಜಿ.ಎಸ್.ಸ್ಫೂರ್ತಿ.ಜಿಪ್ಸಂ: ಕಾಳು ಕಟ್ಟುವ ಸಮಯದಲ್ಲಿ ಇದರ ಬೇಡಿಕೆ ಅಧಿಕ ಆಗಿರುತ್ತದೆ. ಅದೇ ರೀತಿ ಗಂಧಕವು ಶೇಂಗಾ ಬೆಳೆಯ ಪ್ರೋಟೀನ್ ಮತ್ತು ಪತ್ರ ಹರಿತ್ತಿನ ಉತ್ಪತ್ತಿಯಲ್ಲಿ ಸಹಕಾರಿ ಆಗಿರುತ್ತದೆ.ನಿರ್ವಹಣೆ ಕ್ರಮವಾಗಿ ಮಣ್ಣು ಪರೀಕ್ಷೆಯ ಅನುಸಾರ ಕ್ಯಾಲ್ಸಿಯಂ ಮತ್ತು ಗಂಧಕ ಕೊರತೆ ಇರುವ ಪ್ರದೇಶಗಳಲ್ಲಿ ಪ್ರತಿ ಎಕರೆಗೆ 200 ಕೆ.ಜಿ. ಜಿಪ್ಸಂ ಅನ್ನು ಮಣ್ಣಿನಲ್ಲಿ ಬಿತ್ತನೆಗೆ ಮುಂಚೆ ಅಥವಾ ಬಿತ್ತನೆಯಾದ ಒಂದು ತಿಂಗಳ ನಂತರ ಸೇರಿಸುವುದರಿಂದ ಹೆಚ್ಚಿನ ಕಾಯಿಗಳ ಬೆಳವಣಿಗೆಗೆ ಸಹಕಾರಿ ಆಗುತ್ತದೆ.ಜಿಂಕ್: ಶೇಂಗಾ ಎಲೆಗಳಲ್ಲಿ ಪತ್ರ ಹರಿತ್ತಿನ ಅಂಶವನ್ನು ಹೆಚ್ಚು ಮಾಡಿ ಬೇರು ಗಂಟುಗಳ ಸಂಖ್ಯೆಯನ್ನು ಅಧಿಕಗೊಳಿಸಿ ಸಾರಜನಕ ಸ್ಥಿರೀಕರಣಗೊಳಿಸಲು ಸಹಾಯ ಮಾಡುತ್ತದೆ. ಸತುವಿನ ಕೊರತೆ ನಿವಾರಿಸಲು ಎಕರೆಗೆ 5ರಿಂದ10 ಕೆ.ಜಿ.ಯಂತೆ  ಜಿಂಕ್ ಸಲ್ಫೇಟ್, ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರದ ಜತೆ ಮಿಶ್ರಣ ಮಾಡಿ ಮಣ್ಣಿಗೆ ಸೇರಿಸಬೇಕು.ಬೋರಾಕ್ಸ್: ಪ್ರತಿ ಎಕರೆಗೆ 2 ಕೆ.ಜಿ. ಯಂತೆ ಬೋರಾಕ್ಸ್ ಅನ್ನು ಬಿತ್ತನೆಗೆ ಮುಂಚೆ ಭೂಮಿಗೆ ಸೇರಿಸುವುದರಿಂದ ಇಳುವರಿ ವೃದ್ಧಿಸುತ್ತದೆ.

-ಜಡೇಕುಂಟೆ ಮಂಜುನಾಥ್ .

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.