ಭಾನುವಾರ, ಫೆಬ್ರವರಿ 28, 2021
23 °C

ತುತ್ತಿನ ಚೀಲ ತುಂಬಲು ಗುಳೇ ಹೊರಟರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುತ್ತಿನ ಚೀಲ ತುಂಬಲು ಗುಳೇ ಹೊರಟರು...

ಚಳ್ಳಕೆರೆ: ಬರಗಾಲ ಸಂಭವಿಸಿರುವ ತಾಲ್ಲೂಕಿನಲ್ಲಿ ದುಡಿಯುವ ಕೈಗಳಿಗೆ ಕೆಲಸ ಇಲ್ಲದೇ ಜನರು ಗುಳೇ ಹೋಗಲು ಪ್ರಾರಂಭಿಸಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ತಾಲ್ಲೂಕಿನ ಕಾಲುವೇಹಳ್ಳಿಯಲ್ಲಿ ಇರುವ ಪಿಂಜಾರ ಸಮುದಾಯದ ಐದಾರು ಕುಟುಂಬಗಳು ಭಾನುವಾರ ಜೀವನ ಅರಸಿ ಮತ್ತೊಂದು ಕಡೆಗೆ ಹೊರಟವು.ಮಂಡ್ಯ, ಮೈಸೂರು ಕಡೆಗೆ ಕೂಲಿ ಅರಸಿ ಹೊರಟಿರುವ ನಾವು ಎರಡು ತಿಂಗಳ ಕಾಲ ಅಲ್ಲಿಯೇ ಬದುಕು ಸಾಗಿಸುತ್ತೇವೆ. ಇಲ್ಲಿಂದ ನಮ್ಮನ್ನು ಕರೆದೊಯ್ಯಲು ಮಧ್ಯವರ್ತಿಗಳು ಇದ್ದಾರೆ ಎಂದು ಹೇಳಿದರು. ಮಧ್ಯವರ್ತಿಗಳು ತೋರಿಸಿದ ಕಡೆಗಳಲ್ಲಿ ಅವರು ಕೂಲಿ ಮಾಡಬೇಕಿದೆ.`ನಮ್ಗೆ ಊರಾಗೆ ಇರ‌್ಲಿಕ್ಕೆ ಮನೆನೂ ಇಲ್ಲಾ ಸಾಮೀ, ಇಷ್ಟು ದಿನಾ ಹೆಂಗೋ ಜೀವನಾ ಮಾಡೀವಿ. ಈಗ ಮಂಡ್ಯದ ಕಡೀಕೆ ಕಬ್ಬು ಕಡಿಯ್ಯಾಕೆ ಹೋಗಾಣಾ ಅಂತ ಹೊಂಟಿವಿ. ನಮ್ಮ ಗಂಡುಸ್ರು, ಟೆಂಪೋ ಮಾಡ್ಯಾವ್ರೆ. ನಮ್ ಮಕ್ಕಳೂ ನಮ್ ಜತೆ ಕರಕೊಂಟ್ ಹೊಂಟಿವಿ~ ಎಂದು ಚಮನ್‌ಬೀ ಎಂಬ ಮಹಿಳೆ ತಿಳಿಸಿದರು.ಕಾಲುವೇಹಳ್ಳಿ ಗ್ರಾಮದ ಈ ಕುಟುಂಬದವರು ಇದೇ ಮೊದಲಿಗೆ ಗುಳೇ ಹೊರಟವರಲ್ಲ. ಕಳೆದ ಮೂರ‌್ನಾಲ್ಕು ವರ್ಷಗಳಿಂದಲೂ ಕೂಲಿ ಅರಸಿ ಬೇರೆ ಕಡೆಗೆ ಹೋಗುವುದುಂಟು. ಪ್ರತಿ ವರ್ಷ ಪುರುಷರು ಮಾತ್ರ ಕೂಲಿ ಅರಿಸಿ ಹೋದರೆ ಒಂದೆರೆಡು ತಿಂಗಳ ನಂತರ ಹುಟ್ಟೂರಿಗೆ ವಾಪಸ್ ಆಗುತ್ತಿದ್ದರು. ಆದರೆ, ಈ ಬಾರಿ ಮಹಿಳೆಯರು ಮತ್ತು ಮಕ್ಕಳನ್ನೂ ಕರೆದುಕೊಂಡು ಹೋಗಿದ್ದಾರೆ.ಸರ್ಕಾರದಿಂದ ನಮಗೆ ಸಿಗುವ ಸೌಲಭ್ಯಗಳು ಮಾತ್ರ ಮರೀಚಿಕೆಯಾಗಿವೆ. ಚುನಾವಣೆ ಸಮಯದಲ್ಲಿ ನಮ್ಮನ್ನು ಮತ ಹಾಕುವಂತೆ ಒತ್ತಾಯಿಸುವ ರಾಜಕಾರಣಿಗಳು ಇದುವರೆಗೂ ನಮಗೆ ವಾಸಿಸಲಿಕ್ಕೆ ಒಂದು ಮನೆ ನೀಡಿಲ್ಲ. ಗುಡಿಸಲುಗಳಲ್ಲಿ ಹದಿನೈದು ಇಪ್ಪತ್ತು ಕುಟುಂಬದವರು ಜೀವಿಸುತ್ತಿದ್ದೇವೆ ಎಂದು ತಮ್ಮ ಗೋಳು ತೋಡಿಕೊಳ್ಳುತ್ತಾರೆ.`ಮಕ್ಕಳಾ ಸ್ಕೂಲು ಮುಗಿತಲ್ಲಾ ಅದಕ್ಕಾ ಮಕ್ಕಳನ್ನೂ ಕರಕೊಂಡು ಹೊಂಟೀವಿ. ಅಲ್ಲಿ ಒಂದು ದಿನಕ್ಕಾ ರೂ. 150 ಕೂಲಿ ಕೊಡ್ತಾರೆ. ಇಲ್ಲಾದ್ರೆ ಕೂಲಿ ಇಲ್ಲಾ ನೋಡ್ರಿ ಅದ್ಕೆ ನಾವು ಸಣ್ಣವರು ದೊಡ್ಡವರು ಸೇರಿ 15 ಜನ ಹೋಗ್ತಾ ಇದಿವೀ~ ಎನ್ನುತ್ತಾರೆ ಯುವಕ ದಾದು.ಊರಲ್ಲಿ ಒಂದಿಷ್ಟು ಜಮೀನು ಇದ್ದರೂ ಮಳೆ ಇಲ್ಲ. ಇದರಿಂದ ಕೂಲಿ ಮಾಡಿನೇ ನಾವು ಹೊಟ್ಟೆ ಹೊರೆಯಬೇಕಾಗಿದೆ. ಈ ಕುಟುಂಬಗಳಲ್ಲಿ ಯಾರೊಬ್ಬರೂ ಶಿಕ್ಷಣ ಪಡೆದಿಲ್ಲದಿರುವುದು ಇವರ ಮಾತುಗಳಿಂದಲೇ ವ್ಯಕ್ತವಾಗುತ್ತದೆ. ಈಗಿನ ಕೆಲ ಮಕ್ಕಳಿಗೆ ಗ್ರಾಮದಲ್ಲಿರುವ ಉರ್ದು ಶಾಲೆಯಲ್ಲಿ ಶಿಕ್ಷಣ ಕೊಡಿಸುತ್ತಿದ್ದಾರೆ.ಸರ್ಕಾರದ ಯೋಜನೆಗಳು ಜನಸಮಾನ್ಯರಿಗೆ ತಲುಪದಿದ್ದಾಗ ಬಡವರು ಗುಳೇ ಹೋಗುತ್ತಿರುವುದು ಅತ್ಯಂತ ನೋವಿನ ಸಂಗತಿ. ಇಂತಹ ಕುಟುಂಬಗಳನ್ನು ಸರ್ಕಾರ ಗುರುತಿಸಿ ಸೌಲಭ್ಯಗಳು ಸಿಗುವಂತೆ ನೋಡಿಕೊಳ್ಳಬೇಕು ಹಾಗೂ ಬಹುಮುಖ್ಯವಾಗಿ ದುಡಿಯುವ ಕೈಗಳಿಗೆ ಕೆಲಸ ಕೊಡಿಸಬೇಕು ಎಂಬುದು ಗ್ರಾಮದ ರೈತ ಮುಖಂಡ ಕೆ.ಪಿ. ಭೂತಯ್ಯ ಅವರ ಒತ್ತಾಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.